ಬೆಂಗಳೂರು, (www.bengaluruwire.com) : ಕೋವಿಡ್ 4ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳುವುದನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಸೋಮವಾರ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಜನಸಂದಣಿ ಹೆಚ್ಚಿರುವ ಕಡೆ ಹಾಗೂ ಒಳಾಂಗಣ ಸ್ಥಳಗಳಲ್ಲಿ ನಾಗರೀಕರು ಮಾಸ್ಕ್ ಧರಿಸುವುದನ್ನು ಖಡ್ಡಾಯಗೊಳಿಸಲಾಗಿದೆ. ಅದೇ ರೀತಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ ಎಂದು ಹೇಳಿದರು.
ನಂತರ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಾರ್ವಜನಿಕರು ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗೃತೆವಹಿಸಬೇಕಿದೆ. ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇಡಕಾ 1.9 ರಷ್ಟು ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಹೆಚ್ಚು ನಿಗಾ ಇಡಲಾಗಿದೆ. ಅವಶ್ಯಕತೆ ಇದ್ದರೆ ಸೋಂಕಿತರಿಗೆ ವಿಶೇಷ ಮೇಲ್ವಿಚಾರಣೆಯ ಜೊತೆಗೆ ಚಿಕಿತ್ಸೆ ಕೂಡ ನೀಡಲಾಗುವುದು ಎಂದು ಹೇಳಿದರು.
3ನೇ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಸಚಿವರ ಸಲಹೆ :
ವಿಶ್ವ ಆರೊಗ್ಯ ಸಂಸ್ಥೆ ಲಸಿಕೆ ತೆಗೆದುಕೊಳ್ಳದೇ ಇರುವುದು ಸೋಂಕು ಉಲ್ಬಣಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಬೇಕು. 3ನೇ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹರಾದವರು ಅದನ್ನು ಪಡೆದುಕೊಳ್ಳಬೇಕು. ಹೆಚ್ಚಿನ ರಕ್ಷಣೆ ಪಡೆದುಕೊಳ್ಳಬೇಕು. ಮಾಧ್ಯಮಗಳು ಕೂಡ ಲಸಿಕಾಕರಣ, ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿದೇಶಗಳಿಂದ ಬರುವವರ ಮೇಲೆ ಏರ್ ಪೋರ್ಟ್ ನಲ್ಲಿ ನಿಗಾ :
ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ ದೇಶಗಳಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಆ ದೇಶಗಳಿಂದ ಬರುವವರ ಬಗ್ಗೆ ವಿಮಾನ ನಿಲ್ದಾಣಗಳಲ್ಲಿ ನಿಗಾ ಇರಿಸಲಾಗಿದೆ. ಅವರ ಸಂಪರ್ಕಿತರ ಬಗ್ಗೆ ಹಾಗೂ ಪ್ರಯಾಣ ಮಾಡಿದವರ ಬಗ್ಗೆ ಟ್ರ್ಯಾಕ್ ಮಾಡಲಾಗುತ್ತಿದೆ. ಟೆಲಿ ಮಾನಿಟರಿಂಗ್ ಕೂಡ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆಯ ಬಳಿಕ ಮುಂದಿನ ಕ್ರಮ :
ರಾಜ್ಯದಲ್ಲಿ ಪ್ರತಿದಿನ 10,000 ಕೊರೊನಾ ಟೆಸ್ಟಿಂಗ್ ನಡೆಯುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೋಗ ಲಕ್ಷಣ ಇರುವವರಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆ. ಏಪ್ರಿಲ್ 27 ರಂದು ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೊಗ್ಯ ಸಚಿವರ ಸಭೆ ಕರೆದಿದ್ದಾರೆ. ಆ ಸಭೆಯ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕರೋನಾ ಸೋಂಕು ನಿಯಂತ್ರಣ ಕ್ರಮ ಮರುಜಾರಿ :
ದೇಶದಲ್ಲಿ ದೆಹಲಿ, ಹರ್ಯಾಣ ಹಾಗೂ ತಮಿಳುನಾಡಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳು ಸ್ವಲ್ಪ ಏರಿಕೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ
ರಾಜ್ಯದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಾದ್ಯಂತ ವಿಧಿಸಲಾಗಿದ್ದ ನಿಯಂತ್ರಣ ಕ್ರಮಗಳನ್ನು ಮರು ಜಾರಿ ಮಾಡಲು ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಅದರಂತೆ ಸಾರ್ವಜನಿಕ ಪ್ರದೇಶಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಪ್ರಯಾಣಿಸುವಾಗ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದ್ದಾರೆ. ಒಂದೊಮ್ಮೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಕನಿಷ್ಠ 2 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಥಳೀಯ ಆಡಳಿತ ಕಾನೂನಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸುವುದರ ಬಗ್ಗೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.