ರಾಮನಗರ, (www.bengaluruwire.com) : ವಿಕಾಸ ಸಮಾನ ಮನಸ್ಕ ಸಂಘಟನೆಯ ‘ವಾರ್ಷಿಕ ಕುಟುಂಬ ಮಿಲನ-2022’ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು. ವಿಪ್ರ ಮಾಧ್ಯಮ ಸದಸ್ಯರು ಕುಟುಂಬದೊಂದಿಗೆ ಆಗಮಿಸಿ ಈ ಸಮಾರಂಭದಲ್ಲಿ ಪಾಲ್ಗೊಂಡರು.
ಭಾನುವಾರ ಚೆನ್ನಪಟ್ಟಣದಲ್ಲಿನ ಸರ್ಕಾರಿ ಹೈಸ್ಕೂಲಿನ ಶತಮಾನೋತ್ಸವ ಭವನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್,
ಬ್ರಾಹ್ಮಣ ಸಮಾಜದ ಸಂಖ್ಯೆ ಕಡಿಮೆಯಿದ್ದರೂ, ಅವರಿಗೂ ಹೆಚ್ಚಿನ ಶಕ್ತಿ, ಸಾಮರ್ಥ್ಯವಿದೆ. ಅತ್ಯುನ್ನತ ತೀರ್ಮಾನ ಕೈಗೊಳ್ಳುವ ಸ್ಥಾನದಲ್ಲಿ ನಮ್ಮ ಸಮಾಜದವರಿದ್ದಾರೆ.
ಸಮಾಜದ ಮಾಧ್ಯಮ ಕ್ಷೇತ್ರ ಬಹಳ ಪ್ರಮುಖವಾದದು. ಯಾವುದೇ ದೇಶ ಅದರಲ್ಲು ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮ ಕಾವಲು ನಾಯಿಯಾಗಿದೆ. ಯಾರು ತಪ್ಪು ಮಾಡುತ್ತಿದ್ದಾರೆ, ಸಮಾಜ ಎಲ್ಲಿ ದಾರಿ ತಪ್ಪುತ್ತಿದೆ? ಜನಾಭಿಪ್ರಾಯ ಏನಿದೆ? ಇವೆಲ್ಲದರ ಪ್ರತಿಬಿಂಬಿಸುವ ಕೆಲಸ ಮಾಧ್ಯಮಗಳು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ವಾಣಿಜ್ಯೀಕರಣ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕಷ್ಟದ ಪರಿಸ್ಥಿಯಿದೆ. ಈ ಸಂದರ್ಭದಲ್ಲಿ ಮಾಧ್ಯಮ ಜವಾಬ್ದಾರಿ ನಿರ್ವಹಣೆಯಲ್ಲಿ ಎಡುವುತ್ತಿದೆ. ಸೋಶಿಯಲ್ ಮೀಡಿಯಾ ದುರ್ಬಳಕೆಯಾಗುತ್ತಿದ್ದು, ಮಾಹಿತಿ ಯುಗದಲ್ಲಿ ಸುಳ್ಳು ಸುದ್ದಿ ವ್ಯಾಪಕವಾಗಿದೆ. ಇದನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಸಮಾಜದಲ್ಲಿ ಜನರ ಮಧ್ಯೆ ದ್ವೇಷ, ಅಸೂಯೆ ಹೆಚ್ಚುವುದು.
ಈ ಮಧ್ಯೆ ಮಾಧ್ಯಮಗಳು ಮೌಲ್ಯ ಕಾಯ್ದುಕೊಂಡು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಕಾಸ ಸಮಾನ ಮಾನಸ್ಕ ಮಾಧ್ಯಮ ಸಂಘಟನೆ ಕೆಲಸ ಮಾಡಲಿ. ಈ ನಿಟ್ಟಿನಲ್ಲಿ ವಿಕಾಸ ಕಾರ್ಯನಿರ್ವಹಿಸುತ್ತಾ ಮುಂದುವರೆಯಲಿ. ವಿಕಾಸ ಸಂಘಟನರ ಮತ್ತು ಬೆಳವಣಿಗೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಆಗಬೇಕಾದ ಕೆಲಸಗಳನ್ನು ತಾವು ಮಾಡಿಕೊಡುತ್ತೇವೆ. ಸದಾ ಕಾಲ ನಮ್ಮ ಬೆಂಬಲ ವಿಕಾಸದ ಮೇಲೆ ಇರಲಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾನ ನೀಡಿದರು.
ವಿವಿಧ ಬ್ರಾಹ್ಮಣ ಮಠಗಳಲ್ಲಿ ತ್ರಿಮತಸ್ಥ ಆಚಾರ್ಯರ ಜಯಂತಿ ಆಚರಿಸಬೇಕು :
ನಾಡಿನ ಖ್ಯಾತ ವಾಗ್ಮಿ ಹಾಗೂ ಹಿರಿಯ ವೈದ್ಯ ಡಾ.ಕೆ.ಪಿ.ಪುತ್ತಾರಾಯ ಮಾತನಾಡಿ, ಮಾಧ್ಯಮ- ಹಾಸ್ಯ ವಿಷಯ ಕುರಿತಾಗಿ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಾಹ್ಮಣರಲ್ಲಿ ಒಳಪಂಗಡ ನಿವಾರಣೆಯಾಗಿ ಒಗ್ಗೂಡಬೇಕು. ಶಂಕರಮಠದಲ್ಲಿ ಮಾಧ್ವ ಜಯಂತಿಯಾಗಬೇಕು. ಮಾಧ್ವ ಮಠದಲ್ಲಿ ರಾಮಾನುಜಚಾರ್ಯ ಜಯಂತಿ, ರಮಾನುಜಚಾರ್ಯ ಮಠದಲ್ಲಿ ಶಂಕರ ಜಯಂತಿ ಆಗಬೇಕು. ತ್ರಿಮಸ್ಥ ಬ್ರಾಹ್ಮಣ ಸ್ವಾಮಿಗಳನ್ನು ಒಂದುಗೂಡಿಸಿ ಜಾತ್ಯಾತೀತ ಬ್ರಾಹ್ಮಣ ಸಮಾಜ ನಿರ್ಮಾಣವಾಗಬೇಕು ಎಂದು ಒತ್ತಿ ಹೇಳಿದರು.
ಬ್ರಾಹ್ಮಣರಿಗೆ ಅಷ್ಟಾಂಗ ನೀತಿಗಳಲ್ಲಿ ಸ್ವಾಭಿಮಾನ ಮುಖ್ಯ. ಬ್ರಾಹ್ಮಣರಲ್ಲಿ ಸ್ವಾಭಿಮಾನ, ಸಂಸ್ಕಾರವಿರಲಿ, ಸ್ವಾವಲಂಬನೆಯಿರಲಿ, ಸಹಕಾರವಿರಲಿ ಎಂದು ಕಿವಿಮಾತು ಹೇಳಿದರು. ದೇಶದಲ್ಲಿ ಸಂಖ್ಯೆಯಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದರೂ, ಪ್ರತಿಭೆಯಲ್ಲಿ ಬಹುಸಂಖ್ಯಾತರು ಎಂದರು.
ಪತ್ರಕರ್ತನಿಗೆ ಕೇಳುವ ಕಿವಿ ಚುರುಕಿರಬೇಕು. ಇದ್ದಿದ್ದನ್ನು ಇದ್ದ ಹಾಗೆಯೇ ಬರಿಯಬೇಕು. ನಿಮ್ಮ ಬರವಣಿಗೆ ಉತ್ರೇಕ್ಷತೆ ಇರಬಾರದು. ಭಾಷಾ ಶುದ್ಧತೆ ಹಾಗೆಯೇ ಭಾಷಾ ಜ್ಞಾನವಿರಬೇಕು. ಸಾಮಾಜಿಕ ಕಳಕಳಿ ಇರಬೇಕು ಎಂದು ಕಿವಿಮಾತು ಹೇಳಿದರು.
ತುಂಬಿನ ಕೊಡ ತುಳುಕದು….ಬೊಜ್ಜಿನ ದೇಹ ಬಳಕದು :
ಆನಂತರ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಮಾತನಾಡುತ್ತಾ, ತುಂಬಿನ ಕೊಡ ತುಳುಕದು, ಬೊಜ್ಜಿನ ದೇಹ ಬಳಕದು…..ಪಾಶ್ಚಾತ್ಯ ಸಂಗೀತ ಎಂದರೆ ಕೆಲಸದವಳು ಕುಟ್ಟಿ ಕುಟ್ಟಿ ಮಲಗಿಸಿದಂತೆ, ತಟ್ಟಿ ತಟ್ಟಿ ಮಲಗಿಸುವುದು ಭಾರತದ ಸಂಗೀತ….ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ವಿಕಾಸ ಸಂಘಟನೆ ಅಧ್ಯಕ್ಷ ಶ್ರೀನಾಥ್ ಜೋಶಿ, ವಿಕಾಸ ಸಂಘಟನೆ ಸಮಾನ ಮನಸ್ಕ ಮಾಧ್ಯಮ ಸಂಘಟನೆ ಬೆಳೆದು ಬಂದ ಹಾದಿಯನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು.
ವಿಕಾಸ ಸಂಘಟನೆಯ ಕಾರ್ಯದರ್ಶಿ ವಿಕಾಸ ಯಾವಗಲ್ ದಿವಂಗತ ಮುಖ್ಯಮಂತ್ರಿ ಆರ್.ಗುಂಡೂರಾವ್ ರಾಜ್ಯದಲ್ಲಿ ಬಹಿರಂಗವಾಗಿ ತಾವೊಬ್ಬ ಬ್ರಾಹ್ಮಣ ಮುಖ್ಯಮಂತ್ರಿ ಎಂದು ಗಟ್ಟಿಧ್ವನಿಯಿಂದ ಘೋಷಿಸಿಕೊಂಡಿದ್ದರು. ಬ್ರಾಹ್ಮಣ ಸಮಾಜದ ಏಳ್ಗೆಗೆ ಗುಂಡೂರಾಯರು ನೀಡಿರುವ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಿದರು.
ಹಿರಿಯ ಕಲಾವಿದ ಶಂಕರ್ ಭಟ್ ಮಾತನಾಡಿ, ಮಾಧ್ಯಮದಲ್ಲಿ ಪ್ರಸ್ತುತ ಅಭದ್ರತೆ ಕಾಡುತ್ತಿದೆ. ಅವರಿಗೆ ಕೆಲಸದ ಭದ್ರತೆ ಒದಗಿಸುವ ಕೆಲಸ ಆಗಬೇಕಿದೆ. ವಿಕಾಸ ವಿಪ್ರ ಸಂಘಟನೆಯು ಈ ನಿಟ್ಟಿನಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಸಂಘಟನೆ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬ್ರಾಹ್ಮಣ ಸಂಘಟನೆಗೆ ಒತ್ತು ನೀಡಿ, ಸಮಾಜದ ಬೆಳವಣಿಗೆಗೆ ಸಹಕಾರಿಯಾಗಬೇಕು. ಆದರೆ ನಮ್ಮಲ್ಲಿ ಕಾಲೆಳೆಯುವವರೇ ಹೆಚ್ಚು. ಹಾಗಾಗಬಾರದು, ನಾವು ಸಂಘಟಿತರಾಗಬೇಕು ಎಂದು ಅಭಿಪ್ರಾಯಪಟ್ಟರು.
ಖ್ಯಾತ ಆಯುರ್ವೇದ ವೈದ್ಯ ಹಾಗೂ ಅಂಕಣಕಾರ ಡಾ.ಕಿಶೋರ್ ಮಾಧ್ಯಮದಲ್ಲಿನ ಪ್ರಸ್ತುತ ಪರಿಸ್ಥಿತಿ, ಸವಾಲುಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 25 ವರ್ಷ ವಿವಾಹ ವಾರ್ಷಿಕೋತ್ಸವ ಪೂರೈಸಿದ ವಿಕಾಸ ಸದಸ್ಯ ದಂಪತಿಗಳಿಗೆ ಹಾಗೂ 51 ವಸಂತಗಳನ್ನು ಪೂರ್ಣಗೊಳಿಸಿದ ಖ್ಯಾತ ವಾಗ್ಮಿ ಡಾ.ಪಿಕೆ.ಪುತ್ತೂರಾಯ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಧುಷಿ ಶೋಭಾ ಲೋಲನಾತ್ ಅವರು ಭರತನಾಟ್ಯ ಪ್ರಸ್ತುತಪಡಿಸಿದರು. ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸತ್ಯನಾರಾಯಣ, ಹಿರಿಯ ಪತ್ರಕರ್ತೆ ಲೀಲಾವತಿ, ಸೇವ್ ಶಾರದಾ ಪೀಠ ಹೋರಾಟಗಾರ ಹಾಗೂ ಪತ್ರಕರ್ತ ಮಂಜುನಾಥ ಶರ್ಮ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಕರ್ನಾಟಕ ದ್ರಾಕ್ಷಾರಸ ಮಂಡಳಿ ನಿರ್ದೇಶಕ ಅಭಿಲಾಶ್ ಕಾರ್ತಿಕ್ ಉಪಸ್ಥಿತರಿದ್ದರು.