ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನ ಸ್ವತ್ತಿನ ಮಾಲೀಕರು ಇನ್ನು ಮುಂದೆ ತಪ್ಪು ತಪ್ಪಾಗಿ ವಲಯ ವರ್ಗೀಕರಣ ನಮೂದಿಸಿ ಸ್ವಯಂ ಘೋಷಿತ ಆಸ್ತಿತೆರಿಗೆ ಪದ್ಧತಿಯಡಿ ವಾಸ್ತವಕ್ಕಿಂತ ಕಡಿಮೆ ಆಸ್ತಿತೆರಿಗೆ ಕಟ್ಟೋಕೆ ಆಗಲ್ಲ.
ಯಾಕೆಂದರೆ ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಂದಾಯ ಇಲಾಖೆಯು ಯಾವುದೋ ವಲಯ ದಾಖಲಿಸಲು, ಇನ್ಯಾವುದೋ ವಲಯ ವರ್ಗೀಕರಣವನ್ನು ದಾಖಲಿಸಿ ಆಸ್ತಿತರಿಗೆ ಘೋಷಣೆ ಮಾಡುತ್ತಿದ್ದ ದುರುಪಯೋಗ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನಲೆಯಲ್ಲಿ ಆಸ್ತಿ ಮಾಲೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಕಟ್ಟುವ ಸಂದರ್ಭದಲ್ಲಿ ಸ್ವತ್ತಿನ ಮಾಹಿತಿ ಹಾಗೂ ಆ ಆಸ್ತಿ ಇರುವ ಬೀದಿ, ಪ್ರದೇಶ ಅಥವಾ ರಸ್ತೆಗಳನ್ನು ಆಯ್ಕೆ ಮಾಡುತ್ತಿದ್ದಂತೆ ಪಾಲಿಕೆಯ ಆಸ್ತಿತೆರಿಗೆ ಸಾಫ್ಟ್ ವೇರ್ ನಲ್ಲಿ ಪೂರ್ವ ನಿಗಧಿ ಮಾಡಿರುವ ವರ್ಗೀಕರಣ ಮಾಡಲಾದ ವಲಯಗಳು ತನ್ನಿಂದತಾನೆ ಆಯ್ಕೆಯಾಗುವಂತೆ ಬದಲಾವಣೆ ಮಾಡಿದೆ.
ಹೀಗಾಗಿ 2022-23ನೇ ಸಾಲಿನಿಂದ ಆಸ್ತಿ ತೆರಿಗೆ ಕಟ್ಟುವ ಆಸ್ತಿ ಮಾಲೀಕರು ಪಾಲಿಕೆ ಆಸ್ತಿ ತೆರಿಗೆ ಸಾಫ್ಟ್ ವೇರ್ ನಲ್ಲಿ ಆನ್ ಲೈನ್ ಮೂಲಕ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುತ್ತಿದ್ದರೆ, ಸ್ವಯಂಚಾಲಿತವಾಗಿ ವಲಯ ವರ್ಗೀಕರಣ ಆಯ್ಕೆಯಾಗಲಿದೆ. ಇಷ್ಟು ವರ್ಷಗಳ ಕಾಲ ತಪ್ಪಾಗಿ ವಲಯ ವರ್ಗೀಕರಣ ನಮೂದಿಸಿ ವಾಸ್ತವ ಆಸ್ತಿ ತೆರಿಗೆ ತಪ್ಪಿಸುತ್ತಿದ್ದವರಿಗೆ ಬಿಬಿಎಂಪಿಯ ಈ ಬಿಗಿಕ್ರಮ ಬಿಸಿತುಪ್ಪವಾಗಿ ಪರಿಣಮಿಸಲಿದೆ. ಅದೇ ರೀತಿ ಬಿಬಿಎಂಪಿಯ ತೆರಿಗೆ ಸೋರಿಕೆಗೆ ತಡೆ ಬಿದ್ದು, ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ.
ಬಿಬಿಎಂಪಿಯಲ್ಲಿ 6 ಬಗೆಯ ವಲಯ ವರ್ಗೀಕರಣ :
ಆಸ್ತಿ ತೆರಿಗೆ ಲೆಕ್ಕಾಚಾರ ಮಾಡುವಲ್ಲಿ ವಲಯ ವರ್ಗೀಕರಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿಗಳು/ ಪ್ರದೇಶಗಳು/ ರಸ್ತೆಗಳನ್ನು 6 ವಿವಿಧ (ವಲಯ ಎ ಯಿಂದ ಎಫ್ ರವರೆಗೆ) ವಲಯಗಳಾಗಿ ವಿಂಗಡಿಲಾಗಿದೆ. ಸ್ವತ್ತಿನ ಉಪಯೋಗ (ಸ್ವಂತ / ಬಾಡಿಗೆ) ಮತ್ತು ವಿವಿಧ ವರ್ಗಗಳ ಬಳಕೆಯ ಆಧಾರದ ಮೇಲೆ “ವಲಯ ಎ” ಯಿಂದ “ವಲಯ ಎಫ್” ರವರೆಗೆ ವಿವಿಧ ದರಗಳನ್ನು ನಿಗಧಿಪಡಿಸಲಾಗಿದೆ. ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳು ನಗರದಲ್ಲಿ 23 ಸಾವಿರ ರಸ್ತೆಗಳಿದ್ದು, ಪ್ರತಿ ರಸ್ತೆಗೂ ಕೋಡ್ ನೀಡಿದ್ದು, ಆ ಕೋಡ್ ಆಧರಿಸಿ ಆಸ್ತಿತೆರಿಗೆ ವಲಯ ವರ್ಗೀಕರಣವನ್ನು ಪರಿಶೀಲಿಸಿ ನಿಗಧಿ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ತಪ್ಪಾಗಿ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಲು ಅವಕಾಶವಿಲ್ಲ.
ಈ ಕೆಳಗಿನ ಅಂಶಗಳನ್ನು ಕಾರ್ಯಗತಗೊಳಿಸಲು ಪ್ರಸ್ತಾಪಿಸಲಾಗಿದೆ :
- ವಲಯ ವರ್ಗೀಕರಣದ ವಿವರಗಳನ್ನು 2008 ಮತ್ತು 2009 ನೇ ಸಾಲಿನಲ್ಲಿ ಪ್ರಕಟವಾದ ಅಧಿಸೂಚನೆಯಂತೆ ಸೇರ್ಪಡೆಗೊಳಿಸಲಾಗಿದೆ.
- ವಲಯಗಳ ಕ್ಯಾಪ್ಪಿಂಗ್ ಅನ್ನು ಅಧಿಸೂಚನೆಯ ಪ್ರಕಾರ ಹಾಗೂ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ನಮೂದಿಸಿರುವಂತೆ ಕಂಪ್ಯೂಟರ್ ನಲ್ಲಿ ದಾಖಲಿಸಲಾಗಿದೆ.
- ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿಗಳು/ ಪ್ರದೇಶಗಳು/ ರಸ್ತೆಗಳನ್ನು ಆಯ್ಕೆ ಮಾಡಿದ ನಂತರ ಆ ಬೀದಿ / ಪ್ರದೇಶ / ರಸ್ತೆಯ ವಲಯ ವರ್ಗೀಕರಣವು ತನ್ನಿಂತಾನೆ ಪಾಲಿಕೆಯ ಸಾಫ್ಟ್ ವೇರ್ ನಲ್ಲಿ ಆಯ್ಕೆ ಆಗುತ್ತದೆ. ಇನ್ನು ಮುಂದೆ ತೆರಿಗೆದಾರರು ಅಥವಾ ಇಲಾಖೆ ಅಧಿಕಾರಿಗಳಿಗೆ ವಲಯಗಳ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
- ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿ ತೆರಿಗೆ ಘೋಷಿಸಿಕೊಂಡ ಆಸ್ತಿಗಳನ್ನು ಸರಿಯಾದ ವಲಯಗಳಿಗೆ ಸ್ಥಳಾಂತರಿಸಲಾಗುವುದು.
- ಈ ರೀತಿ ತಪ್ಪಾಗಿ ವಲಯ ವರ್ಗೀಕರಣವನ್ನು ನಮೂದಿಸಿರುವ ಆಸ್ತಿಗಳು ಮಾತ್ರ ಸ್ವಯಂ ಚಾಲಿತವಾಗಿ ನಮೂನೆ-5 ರ ತೆರಿಗೆ ಲೆಕ್ಕಾಚಾರಕ್ಕೆ ಮರು ನಿರ್ದೇಶಿಸಲಾಗುತ್ತದೆ.
- ಸ್ವತ್ತಿನ ಉಪಯೋಗ, ಬಳಕೆ ಮತ್ತು ವಿಸ್ತೀರ್ಣದಲ್ಲಿ ಬದಲಾವಣೆಗಳಿಲ್ಲಿದ್ದಲ್ಲಿ ನಮೂನೆ – 5 ರಲ್ಲಿ ಘೋಷಣೆಯನ್ನು ಈ ಹಿಂದಿನಂತೆಯೇ ಸಲ್ಲಿಸಬೇಕಾಗಿದೆ.
- ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಹೊಸದಾಗಿ ಸೃಜಿಸಲಾದ ಆಸ್ತಿಗಳಿಗೆ ರಸ್ತೆ / ಪ್ರದೇಶ / ಬೀದಿಗಳಿಗೆ ವಲಯ ವರ್ಗೀಕರಣದ ವಿವರಗಳು ತಂತ್ರಾಂಶದಲ್ಲಿ ತನ್ನಿಂತಾನೆ ಸೇರ್ಪಡೆಯಾಗಲಿದೆ.
- ಒಂದು ವೇಳೆ ಸ್ವತ್ತಿನ ಉಪಯೋಗ, ಬಳಕೆ, ವಲಯ ಹಾಗೂ ಇತ್ಯಾದಿಗಳಲ್ಲಿ ಯಾವುದೇ ಬದಲಾವಣೆಗಳು ಇಲ್ಲದೇ ಇದ್ದಲ್ಲಿ ಆಸ್ತಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಇಂತಹ ಆಸ್ತಿಗಳಿಗೆ ನಮೂನೆ-4 ರ ಮೂಲಕ ತೆರಿಗೆಯನ್ನು ಘೋಷಿಸಿಕೊಳ್ಳತಕ್ಕದ್ದು.
ಪಾಲಿಕೆ ವ್ಯಾಪ್ತಿಯಲ್ಲಿ 78 ಸಾವಿರ ತೆರಿಗೆ ವಂಚಕರು ಪತ್ತೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಡಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡ 78,520 ಮಾಲಿಕರನ್ನು ಪತ್ತೆ ಮಾಡಲಾಗಿದೆ. ಸ್ವಯಂ ಚಾಲಿತ ವಲಯ ನಮೂದಿಸುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಮತ್ತಷ್ಟು ತೆರಿಗೆ ವಂಚನೆ ಮಾಡಿರುವವರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
116 ಕೋಟಿ ರೂ. ವ್ಯತ್ಯಾಸದ ಆಸ್ತಿತೆರಿಗೆ ಸಂಗ್ರಹ ನಿರೀಕ್ಷೆ:
ಬಿಬಿಎಂಪಿ ಪತ್ತೆ ಮಾಡಿರುವ 78 ಸಾವಿರ ತೆರಿಗೆ ವಂಚನೆ ಮಾಡಿರುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಅವರಿಂದ ದುಪ್ಪಟ್ಟು ದಂಡದ ಬದಲು ಕೇವಲ ವ್ಯತ್ಯಾಸದ ಆಸ್ತಿತೆರಿಗೆ ಮೊತ್ತ 116 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಒಪ್ಪಿಗೆ ನೀಡಿದರೆ 78 ಸಾವಿರ ಆಸ್ತಿ ಮಾಲೀಕರು 116 ಕೋಟಿ ರೂ. ಹಣವನ್ನು ನೋಟಿಸ್ ಪಡೆದ ಸ್ವತ್ತಿನ ಮಾಲೀಕರು ಕಟ್ಟಬೇಕಾಗುತ್ತದೆ. ಇದರಿಂದ ಪಾಲಿಕೆಗೂ ಅಷ್ಟು ಆದಾಯ ಹರಿದು ಬಂದಂತಾಗುತ್ತದೆ. ಇಂತಹ ವಲಯ ವರ್ಗೀಕರಣ ದುರುಪಯೋಗ ತಪ್ಪಿಸಲೆಂದೇ ಪಾಲಿಕೆ ತೆರಿಗೆ ವಂಚನೆಗೆ ಬ್ರೇಕ್ ಹಾಕಲು ಸ್ವಯಂಚಾಲಿತ ವಲಯ ನಮೂದಿಸುವ ವ್ಯವಸ್ಥೆಯನ್ನು ತನ್ನ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಜಾರಿ ಮಾಡಿದೆ.
ಏಪ್ರಿಲ್ ನಲ್ಲಿ 2022-23ನೇ ಸಾಲಿನ ಆಸ್ತಿತೆರಿಗೆ ಕಟ್ಟಿದರೆ ಶೇ.5 ರಿಯಾಯ್ತಿ :
ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 19 ಲಕ್ಷ ಸ್ವತ್ತುಗಳಿವೆ. ಈ ಆಸ್ತಿ ಮಾಲೀಕರು 2022-23ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಒಳಗೆ ಕಟ್ಟಿದ್ದಲ್ಲಿ ಶೇ.5ರಷ್ಟು ರಿಯಾಯ್ತಿ ಪಡೆಯಬಹುದಾಗಿದೆ. ದಂಡವಿಲ್ಲದೆ ಸ್ವತ್ತಿನ ಮಾಲೀಕರು ಮೇ 31ರ ಒಳಗೆ ತಮ್ಮ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಬಹುದು. ಜೂನ್ 1ರಿಂದ ಶೇ.9ರ ದಂಡದೊಂದಿಗೆ ಆಸ್ತಿತೆರಿಗೆ ಕಟ್ಟಬೇಕಾಗುತ್ತದೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಇವತ್ತಿನ ತನಕ ಪಾಲಿಕೆಗೆ 375 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.