ಬೆಂಗಳೂರು, (www.bengaluruwire.com) : ಕೇಂದ್ರ ಸರ್ಕಾರದ ಸೂಚನೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಮಲದ ಗುಂಡಿಗಳನ್ನು ಸ್ವಚ್ಛತೆ ಮಾಡುತ್ತಿದ್ದ ಸ್ವಚ್ಛತಾ ಕಾರ್ಮಿಕರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಅವರು ಸಾಂಕೇತಿಕವಾಗಿ 8 ಮಂದಿಗೆ ಗುರುತಿನ ಚೀಟಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2013ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಬರಿಗೈನಿಂದ ಮಲದ ಗುಂಡಿ ಸ್ವಚ್ಛಗೊಳಿಸುತ್ತಿದ್ದ 201 ಜನರನ್ನು ಸಮೀಕ್ಷೆಯ ಮುಖಾಂತರ ಗುರುತಿಸಿತ್ತು. ಅಂತಹ ಸ್ವಚ್ಛತಾ ಕಾರ್ಮಿಕರನ್ನು ಗುರ್ತಿಸಿದ 10 ವರ್ಷಗಳ ನಂತರ ಇದೀಗ ಅವರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಈ ಹಿಂದೆ ಮಲಹೊರುವ ಪದ್ಧತಿ ರೂಢಿಯಲ್ಲಿದ್ದು, ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಲಹೊರುವ ಕಾರ್ಮಿಕರ (Manual Scavengers) ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ನು ಜಾರಿಗೆ ತಂದಿತ್ತು.
ಹೀಗೆ ಗುರ್ತಿಸಿದ ಸಫಾಯಿ ಕರ್ಮಚಾರಿಗಳಿಗೆ ಕೇಂದ್ರ ಸರ್ಕಾರದಿಂದ ಒಂದು ಬಾರಿ ಧನ ಸಹಾಯ (One time Cash Assistance – OTCA) ವಾದ ರೂ. 40,000 ರೂ. ಗಳನ್ನು 201 ಜನರ ಪೈಕಿ ಕೇವಲ 185 ಮಂದಿಗೆ ಮಾತ್ರ ಪಾವತಿಸಲಾಗಿದೆ. ಆದರೆ ಸಂಪೂರ್ಣವಾಗಿ ಎಲ್ಲರಿಗೂ ಈತನಕ ಪಾವತಿಯಾಗಿಲ್ಲ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆಯ ಮೇರೆಗೆ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಪಾಲಿಕೆಯ ಕಲ್ಯಾಣ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕೇಂದ್ರ, ರಾಜ್ಯ ಸರ್ಕಾರ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ವಿವಿಧ ಪುನರ್ವಸತಿ ಯೋಜನೆಯಡಿ ಸೌಲಭ್ಯ ಪಡೆಯಲು ಹಾಗೂ ಪಾಲಿಕೆಯ ಕಲ್ಯಾಣ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಪಡೆಯಲು ಈ ಗುರುತಿನ ಚೀಟಿ ಅವಶ್ಯವಾಗಿದೆ. ಆದಷ್ಟು ಶೀಘ್ರವಾಗಿ ಪಾಲಿಕೆಯ 8 ವಲಯಗಳಲ್ಲಿರ ಈ ಹಿಂದೆ ಕೈಯಿಂದ ಮಲದ ಗುಂಡಿ ಸ್ವಚ್ಛ ಮಾಡುತ್ತಿದ್ದ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಗುರುತಿನ ಚೀಟಿಯಿಂದಾಗುವ ಅನುಕೂಲಗಳೇನು ?
ಗುರುತಿನಚೀಟಿ ಪಡೆದ ಕಾಯ್ದೆ ಪೂರ್ವ ನೈರ್ಮಲ್ಯ ಕಾರ್ಮಿಕರಾಗಿದ್ದವರಿಗೆ ಪಾಲಿಕೆಯ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ವಿದ್ಯಾರ್ಥಿ ಶುಲ್ಕ ಮರುಪಾವತಿ, ಒಂಟಿ ಮನೆ ಸೌಲಭ್ಯ, ಕೌಶಲ್ಯತರಬೇತಿ, ಸ್ವಯಂ ಉದ್ಯೋಗ ಸೇರಿದಂತೆ ಇನ್ನಿತರೆ ಕಲ್ಯಾಣ ಕಾರ್ಯಕ್ರಮದ ಸೌಲಭ್ಯಗಳನ್ನು ಆದ್ಯತೆ ಮೇಲೆ ಪಡೆಯಲು ಅರ್ಹರಾಗಿರುತ್ತಾರೆ. ಸೌಲಭ್ಯಗಳನ್ನು ಪಡೆಯುವುದರ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಸಮಾಜದಲ್ಲಿ ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳಬೇಕೆಂಬುದು ಪಾಲಿಕೆಯ ಆಶಯವಾಗಿದೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಪಾಲಿಕೆಯು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
2018-19 ಮರು ಸಮೀಕ್ಷೆಯಲ್ಲಿನ ಫಲಾನುಭವಿಗಳಿಗೆ ಪರಿಶೀಲನೆ ಬಳಿಕ ಸೌಲಭ್ಯ :
2018-19ನೇ ಸಾಲಿನಲ್ಲಿ ಸಂಘ ಸಂಸ್ಥೆಗಳು ಅಥವಾ ಇನ್ನಿತರೆ ಸಂಘಗಳಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳು ಗುರುತಿಸದೇ ಬಿಟ್ಟು ಹೋಗಿರುವುದು ತಿಳಿದು ಬಂದಿರುತ್ತದೆ. ಆಗ ಪುನಃ ಸಮೀಕ್ಷೆ ನಡೆಸಿದಾಗ 1,424 ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ಗುರುತಿಸಿ ಸ್ವಚ್ಛತಾ ಅಭಿಯಾನ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಆದರೆ ಆ ಸಮೀಕ್ಷೆಯಲ್ಲಿ ಮಲ ಹೊರುವ ಪದ್ಧತಿಯಲ್ಲಿಲ್ಲದ, ಒಳಚರಂಡಿ ಸ್ವಚ್ಛತೆ ಮಾಡುವವರನ್ನೂ ಸೇರಿಸಲಾಗಿತ್ತು. ಹೀಗಾಗಿ ಈ ಕುರಿತಂತೆ ಪುನಃ ಪರಿಶೀಲಿಸಿ ಮನೆಗಳಲ್ಲಿನ ಶೌಚಗುಂಡಿಗಳನ್ನು ಕೈಯಿಂದ ಸ್ವಚ್ಛ ಮಾಡುತ್ತಿದ್ದ ನೈಜ ಕಾರ್ಮಿಕರನ್ನು ಗುರುತಿಸಿ ಅಂತಹವರ ಪಟ್ಟಿಯನ್ನು ಮರು ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಆ ಹಿನ್ನಲೆಯಲ್ಲಿ ಬಿಬಿಎಂಪಿ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು 8 ವಲಯಗಳ ಜಂಟಿ ಆಯುಕ್ತರಿಗೆ ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಸೂಚನೆ ನೀಡಿದ್ದಾರೆ.
ಇಂತಹ ಪಟ್ಟಿಯನ್ನು ಮರು ಸಲ್ಲಿಕೆ ಮಾಡಿದ ಬಳಿಕ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಿದ ನಂತರ ನಿಯಮಾನುಸಾರ ಅಂತಹ ಸ್ವಚ್ಛತಾ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಸಾಂಕೇತಿಕವಾಗಿ ಈ ಹಿಂದೆ ಸ್ವಚ್ಛತಾ ಕಾರ್ಮಿಕರಾಗಿದ್ದ ಮುನಿಕೆಂಚಪ್ಪ, ಕೃಷ್ಣಪ್ಪ, ಮುನಿಸ್ವಾಮಪ್ಪ, ಮಹಾಲಕ್ಷ್ಮಯ್ಯ, ಅಯ್ಯಣ್ಣ, ಹನುಮಂತಪ್ಪ, ವೆಂಕಟರಮಣ ಮತ್ತು ನರಸಿಂಹ ರವರುಗಳಿಗೆ ಗುರುತಿನಚೀಟಿ ವಿತರಿಸಲಾಯಿತು. ಈ ವೇಳೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಬಿ.ಶರತ್, ಉಪ ಆಯುಕ್ತರಾದ ಮುರಳೀಧರ್, ಸಹಾಯಕ ಆಯುಕ್ತರಾದ ರಾಜೇಶ್ವರಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.