ದೊಡ್ಡಬಳ್ಳಾಪುರ, (www.bengaluruwire.com) : ಸ್ಥಳೀಯ ರೈತರ ಬೆಳೆಗಳಿಗೆ ನೀರುಣಿಸಲು ಪಂಪ್ ಸೆಟ್ ಗಳಿಗೆ ಬೆಳಗ್ಗೆ ಹೊತ್ತು ಸತತ 7 ಗಂಟೆಗಳ ತ್ರೀಫೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ರಾಜ್ಯ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಲ್ಲಿ ದೊಡ್ಡಬಳ್ಳಾಪುರ ರೈತರು ಬೆಸ್ಕಾಂ ಕಚೇರಿ ಮುಂದೆ ನಡೆಸುತ್ತಿರುವ ಎರಡನೇ ಧರಣಿ ಇದಾಗಿದೆ. ಹೋದವಾರವಷ್ಟೆ ಬೆಸ್ಕಾಂ ಎಇಇ ರೋಹಿತ್ ವಿರುದ್ಧ, ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತ್ರಿಫೇಸ್ ನಿರಂತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಇನ್ನು ಮುಂದೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೂ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರಲಿಲ್ಲ.
“ಬೇಸಿಗೆ ಸಂದರ್ಭದಲ್ಲಿ ತಮ್ಮ ಬೆಳೆಗಳಿಗೆ ನೀರು ಹರಿಸಲು ಪಂಪ್ ಸೆಂಟ್ ಬಳಕೆಗಾಗಿ ಬೆಸ್ಕಾಂ ಬೆಳಗ್ಗೆ ಹೊತ್ತು ಕಳೆದ ಒಂದೂವರೆ ವಾರದಿಂದ ಸೂಕ್ತ ರೀತಿ ವಿದ್ಯುತ್ ಪೂರೈಕೆ ಮಾಡಿದ್ದರಿಂದ ಬೆಳೆಗಳೆಲ್ಲ ಒಣಗಿ ಹೋಗಿವೆ. ಕಳೆದ ವಾರವಷ್ಟೆ ಈ ಬಗ್ಗೆ ಪ್ರತಿಭಟನೆ ನಡೆಸಿದಾಗ ತ್ರಿಫೇಸ್ ವಿದ್ಯುತ್ ನೀಡುತ್ತೇವೆಂದರು. ಆದರೆ ಅದೇ ಎಇಇ ಮರುದಿನದಿಂದಲೇ ವಿದ್ಯುತ್ ನಿಲುಗಡೆ ಮಾಡುತ್ತಿದ್ದಾರೆ. ಹೀಗಾಗಿ ಬೆಸ್ಕಾಂ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದ್ದೇವೆ” ಎಂದು ದೊಡ್ಡಬಳ್ಳಾಪುರ ತಾಲ್ಲೂಕು ರೈತ ಸಂಘದ ಅರಳುಮಲ್ಲಿಗೆ ನಾಗರಾಜ ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಹಾಗೂ ಹೈಕೋರ್ಟ್ ವಕೀಲ ಮಥಾಯ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, “ರೈತರಿಗೆ ಹಗಲಿನ ಹೊತ್ತು 7 ಗಂಟೆ ಸತತವಾಗಿ ಪಂಪ್ ಸೆಟ್ ಬಳಸಲು ಅನುವಾಗುವಂತೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಬೆಸ್ಕಾಂ ಎಇಇ ರೋಹಿತ್ ಕಳೆದ ವಾರ ಭರವಸೆ ನೀಡಿದರೂ, ಅದನ್ನು ಈಡೇರಿಸಲಿಲ್ಲ. ಈ ಬಗ್ಗೆ ಕೇಳಿದರೆ ಬೆಳಗಿನ ಜಾವ 3 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳುತ್ತಾರೆ. ರೈತರು ಬೆಳಗಿನ ಹೊತ್ತು ಹೊಲದ ಕೆಲಸ ಮಾಡುವಾಗ ವಿದ್ಯುತ್ ಪೂರೈಕೆ ಮಾಡಬೇಕು. ರಾಜ್ಯ ಸರ್ಕಾರವೇ ಈ ಬಗ್ಗೆ ಕಾನೂನು ಮಾಡಿದೆ. ಈ ಎಇಇ ರೋಹಿತ್ ರೈತರಿಗೆ ಸುಖಾ ಸುಮ್ಮನೆ ಕಿರುಕುಳ ನೀಡುತ್ತಿರುವುದಲ್ಲದೆ, ಹಾಳಾದ ಟ್ರಾನ್ಸ್ ಫಾರ್ಮರ್ ಬದಲಾವಣೆಗೆ 5 ಸಾವಿರ ರೂಪಾಯಿ ಲಂಚ ಕೇಳುತ್ತಾರೆ” ಎಂದು ಆರೋಪಿಸಿದರು. ಅಲ್ಲದೆ “ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಗುಡುಗಿದರು.
“ದೊಡ್ಡಬಳ್ಳಾಪುರದಲ್ಲಿನ ಕೈಗಾರಿಕೆಗಳಿಗೆ ಹಗಲಿನ ಹೊತ್ತು ಗುಣಮಟ್ಟದ ವಿದ್ಯುತ್ ಪೂರೈಸುವ ಬೆಸ್ಕಾಂ ಅಧಿಕಾರಿಗಳು ರೈತರಿಗೆ ಮಧ್ಯರಾತ್ರಿ ವಿದ್ಯುತ್ ಪೂರೈಕೆ ಮಾಡಿದರೆ ರೈತರು ರಾತ್ರಿಹೊತ್ತು ಹೊಲದಲ್ಲಿ ಓಡಾಡುವ ಹಾವು ಮತ್ತಿತರ ಸರೀಸೃಪಗಳಿಂದ ಕಚ್ಚಿಸಿಕೊಂಡು ಪಂಪ್ ಸೆಟ್ ಮೂಲಕ ನೀರು ಹರಿಸಬೇಕಾ?. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಿದ್ದೇವೆ” ಎಂದು ಮಥಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.