ಬೆಂಗಳೂರು, (www.bengaluruwire.com) : ನಗರದ ಸೈಬರ್ ಕ್ರೈಂ ಪೊಲೀಸರು ಕ್ರಿಪ್ಟೋ ಕರೆನ್ಸಿ ಮೂಲಕ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಸಾವಿರಾರು ಜನರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದ ಜಾಲವನ್ನು ಬೇಧಿಸಿ, ನಾಲ್ವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಆರೋಪಿಗಳಿಂದ ವಿವಿಧ ಬ್ಯಾಂಕ್ ಖಾತೆಗಳಲ್ಲಿಟ್ಟಿದ್ದ 15 ಕೋಟಿ ರೂ. ಹಣ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
2021ರ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ವಾಟ್ಸ್ ಗ್ರೂಪ್ ಹಾಗೂ ವೈಯುಕ್ತಿಕವಾಗಿ ಎಸ್ ಎಸ್ ಎಂಎಸ್ ಸಂದೇಶ ರವಾನಿಸಿ, ಶೇರ್ ಹ್ಯಾಷ್ (SHAREHASH) ಅಪ್ಲಿಕೇಷನ್ ಮೂಲಕ ಎಚ್ ಎನ್ ಟಿ (Helium Crypto Token) ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶವನ್ನು ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಕೊಂಡಿದ್ದರು.
ಆಂಡ್ರಾಯ್ಡ್ ಅಪ್ಲಿಕೇಶನ್ ಅಪ್ ಗ್ರೇಡ್ ಹೆಸರಲ್ಲಿ ಮೋಸಕ್ಕೆ ತಯಾರಿ :
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೈಬರ್ ಕ್ರೈಮ್ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ಹಣ, ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಮೊಬೈಲ್, ಲ್ಯಾಪ್ ಟ್ಯಾಪ್ ಮತ್ತಿತರ ವಸ್ತುಗಳನ್ನು ಪರಿಶೀಲಿಸುತ್ತಿರುವುದು.
ಬೆಂಗಳೂರು ಹಾಗೂ ಹೊರ ರಾಜ್ಯದಲ್ಲಿ ನೋಂದಣಿಯಾಗಿರುವ ಕಂಪನಿಗಳಾದ ಕೊಟಾಟ ಟೆಕ್ನಾಲಜಿ ಪ್ರೈ. ಲಿ, ಸಿರಾಲಿನ್ ಟೆಕ್ ಸಲ್ಯೂಷನ್ಸ್ ಪ್ರೈ.ಲಿ, ನಿಲೀನ್ ಇನ್ ಫೊಟೆಕ್ ಪ್ರೈ. ಲಿ., ಮಾಲ್ಟ್ರೆಸ್ ಎಕ್ಸಿಮ್ ಪ್ರೈ. ಲಿ., ಕ್ರಾಂಪಿಂಗ್ಟನ್ ಪ್ರೈ. ಲಿ. ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿದ್ದರು. ಆನಂತರ ಈ ವರ್ಷದ ಜನವರಿ 11ರಂದು ಶೇರ್ ಹ್ಯಾಷ್ ಅಪ್ಲಿಕೇಶನ್ ದೋಷ ಕಂಡುಬಂದಿದ್ದು, ಹೊಸ ವೈಶಿಷ್ಟ್ಯತೆಯೊಂದಿಗೆ ತಮ್ಮ ಆಪ್ ಅಪ್ ಗ್ರೇಡ್ ಮಾಡಿ ಅದೇ ತಿಂಗಳ 18 ಅಥವಾ 19ರಂದು ಶೇರ್ ಹ್ಯಾಷ್ 2.0 ವರ್ಷನ್ ಬಿಡುಗಡೆ ಮಾಡುತ್ತೇವೆ. ಆ ಆಪ್ ನ ಮೂಲಕ ಹೂಡಿಕೆ ಮಾಡಿದ ಹಣವನ್ನು ಮತ್ತು ತಮ್ಮ ಹೂಡಿಕೆಯ ಲಾಭವನ್ನು ಹಿಂಪಡೆಯಲು ಅವಕಾಶ ಕಲ್ಪಿಸುವುದಾಗಿ ಘೋಷಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಜನವರಿ 19ರಂದು ಶೇರ್ ಹ್ಯಾಷ್ ಅಪ್ಲಿಕೇಶನ್ ನಲ್ಲಿ ಯಾವಾಗ ಹೂಡಿಕೆದಾರರು ಲಾಗಿನ್ ಮಾಡಲು ಸಾಧ್ಯವಾಗಲಿಲ್ಲ ಮತ್ತು ಆ ಶೇರ್ ಹ್ಯಾಷ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಿಂದಲೇ ತೆಗೆದು ಹಾಕಿದ್ದನ್ನು ಕಂಡು ತಾವು ಮೋಸ ಹೋಗಿದ್ದವೆಂದು ಹಣ ಕಳೆದು ಕೊಂಡವರು ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಸಾರ್ವಜನಿಕರಿಂದ ವಂಚಿಸಿ 44 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದ್ದ 15 ಕೋಟಿ ಹಣವನ್ನು ತಾತ್ಕಾಲಿಕವಾಗಿ ತಡೆಹಿಡಿದರು. ಅಲ್ಲದೆ 1.65 ಕೆಜಿ ಚಿನ್ನ, 78 ಲಕ್ಷ ರೂ. ನಗದು ಹಣ, 44 ಡಿಎಸ್ ಸಿ (Digital Signature Certificate) ಇರುವ ಟೋಕನ್, ಕಂಪನಿಗಳಿಗೆ ಸಂಬಂಧಿಸಿದ 5 ಸೀಲುಗಳು, ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ರಿಪ್ಟೋ ಕರೆನ್ಸಿ ಮೋಸದ ಜಾಲ ಬೇಧಿಸಿದ ಪೊಲೀಸ್ ತಂಡಕ್ಕೆ ಬಹುಮಾನ :
ಸೈಬರ್ ಕ್ರೈಮ್ ಜಂಟಿ ಆಯುಕ್ತರಾದ ರಮಣ್ ಗುಪ್ತಾ ಮಾರ್ಗದರ್ಶನದಲ್ಲಿ ಅಪರಾಧ-1ರ ಉಪ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ಪೊಲೀಸರು ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ. ಈ ಅಧಿಕಾರಿ ಮತ್ತು ಸಿಬ್ಬಂದಿ ತನಿಖಾ ತಂಡದ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘನೆ ವ್ಯಕ್ತಪಡಿಸಿ 70 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.