ಬೆಂಗಳೂರು, (www.bengaluruwire.com) : ನಗರದ ನಾನಾ ಭಾಗಗಳಲ್ಲಿ ಸಂಜೆಯಿಂದ ವ್ಯಾಪಕವಾಗಿ ಆರಂಭವಾದ ಧಾರಾಕಾರ ಮಳೆ ಒಂದೇ ಸಮನೆ ಬಿಡದೆ ಸುರಿಯುತ್ತಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದಲೂ ಕಳೆಗುಂದಿದ್ದ ಕರಗ ಮಹೋತ್ಸವ ಈ ಬಾರಿ ಅದ್ಧೂರಿ ಆಚರಣೆಗೆ ಅಂತಿಮ ಸಿದ್ಧತೆ ಮಾಡಿಕೊಂಡಿರುವಾಗಲೇ ವರುಣನ ಆರ್ಭಟ ಕರಗದ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದೆ.
ಸಿಲಿಕಾನ್ ಸಿಟಿಯಲ್ಲಿ ಸತತ ನಾಲ್ಕನೇ ದಿನವೂ ಮಳೆಯಾದ ಕಾರಣ ಜನರ ವೀಕೆಂಡ್ ಸುತ್ತಾಟಕ್ಕೆ ಬ್ರೇಕ್ ಬಿದ್ದಂತಾಯಿತು. ಮಳೆಯಿಂದಾಗಿ ಟ್ರಾಫಿಕ್ ನಲ್ಲಿ ಸಿಲುಕಿ ವಾಹನ ಸವಾರರು ಪೇಚಾಡಿದರು. ಹಲವು ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದರು.
ನಗರದ ಟ್ರಿನಿಟಿ ಸರ್ಕಲ್, ಎಮ್.ಜಿ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಸಂಪಂಗಿರಾಮನಗರ, ಲಾಲ್ ಭಾಗ್, ಜಯನಗರ, ಬಸವೇಶ್ವರ ವೃತ್ತ, ಶಿವಾನಂದ ಸರ್ಕಲ್, ವಸಂತ ನಗರ, ರಾಜರಾಜೇಶ್ವರಿ ನಗರ, ನಾಗರಬಾವಿ, ಚಂದ್ರಲೇಔಟ್, ಕೆಂಗೇರಿ, ಉಲ್ಲಾಳ, ಸುತ್ತಮುತ್ತ ಧಾರಾಕಾರ ಗಾಳಿ ಮಳೆ ಸುರಿಯುತ್ತಿತ್ತು.
ರಾಜ್ಯದಲ್ಲಿ ಮುಂದಿನ ಎರಡು ದಿನವೂ ಗುಡುಗು ಹಾಗೂ ಸಿಡಿಲು ಸಹಿತ ಮೂಗಾಂರು ಪೂರ್ವ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಐತಿಹಾಸಿಕ ಕರಗ ಮಹೋತ್ಸವದ ಸಂಭ್ರಮಕ್ಕೆ ಮಳೆ ಕಾಟ :
ಇಂದು ರಾತ್ರಿ 12.30ಕ್ಕೆ ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಹಾಗೂ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8 ಗಂಟೆಯಿಂದ ಮಳೆಯು ಕೊಂಚ ಕಡಿಮೆಯಾದ ಮಧ್ಯೆಯೇ ವಿವಿಧ ಪೂಜೆ ಕಾರ್ಯಕ್ರಮ ಆರಂಭವಾಯಿತು. ಆದರೂ ಮಳೆ ಸಂಪೂರ್ಣವಾಗಿ ನಿಂತಿರಲಿಲ್ಲ.
ಶನಿವಾರ ರಾತ್ರಿ 12 ರಿಂದ 1.30 ರ ಒಳಗೆ ಕರಗ ದೇವಾಲಯದಿಂದ ಹೂವಿನ ಕರಗ ಹೊರಗೆ ಬರಲಿದೆ. ಕರಗ ಸಾಗುವ ದಾರಿಯುದ್ದಕ್ಕೂ ಬಿಬಿಎಂಪಿ ಈಗಾಗಲೇ ರಸ್ತೆಯನ್ನು ಸ್ವಚ್ಚಗೊಳಿಸಿ, ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿತ್ತು. ಮಳೆಯಿಂದಾಗಿ ಕರಗ ಸಾಗುವ ಮಾರ್ಗ ಸ್ವಚ್ಛವಾಗಿದ್ದರೂ ಅಲ್ಲಲ್ಲಿ ರಸ್ತೆ ಮೇಲೆ ಮಳೆನೀರಿನಿಂದ ಹಲವು ವಸ್ತುಗಳು ತೇಲಿ ಬಂದಿದ್ದವು.
ಹತ್ತು ಬಾರಿ ಕರಗ ಹೊತ್ತಿದ್ದ ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದು, ಈ ಬಾರಿಯದು ಸೇರಿದರೆ 11ನೆಯ ಸಲವಾಗುತ್ತದೆ. ನಾಳೆ ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ಕರಗ ಧರ್ಮರಾಯಸ್ವಾಮಿ ದೇವಸ್ಥಾನ ತಲುಪಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಸುತ್ತ ಮುತ್ತ ಹಾಗೂ ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈಗಾಗಲೇ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಇಂದು ನಡೆಯಲಿರುವ ಕರಗ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಭಾರೀ
ಮಳೆಯಿಂದ ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕಳೆದ ಎರಡು ವರ್ಷದಿಂದ ಕರೋನಾ ಕಾರಣಕ್ಕೆ ಕಳೆಗುಂದಿದ್ದ ಕರಗ ಶಕ್ತ್ಯೋತ್ಸವವನ್ನು ಈ ಬಾರಿ ಅದ್ದೂರಿ ಕರಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವರುಣನ ಆರ್ಭಟದಿಂದ ಕರಗದ ಸಂಭ್ರಮಕ್ಕೆ ಅಡ್ಡಿಯಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಿಂದ ರಾಜಕಾಲುವೆ ಪರಿಶೀಲನೆ :
ಬೆಂಗಳೂರು ದಕ್ಷಿಣ ಕ್ಷೇತ್ರದ ಉತ್ತರಹಳ್ಳಿ ಮತ್ತು ದೊರೆಕೆರೆಯಲ್ಲಿ ಮಳೆ ಪೀಡಿತ ಪ್ರದೇಶಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರಹಳ್ಳಿ ಹೇಮಾವತಿ ರಸ್ತೆ, ಲಕ್ಷಯ್ಯ ಲೇಔಟ್ ಗೆ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಸುಮಾರು 150 ಮನೆಗಳಿಗೆ ನೀರು ನುಗ್ಗಿತ್ತು. ಈ ಸಂಬಂಧ ರಾಜಕಾಲುವೆಯನ್ನು ಪರಿಶೀಲನೆ ನಡೆಸಿ ಕೂಡಲೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳನ್ನು ತೆರವುಗೊಳಿಸಬೇಕು. ಜೊತೆಗೆ ರಾಜಕಾಲುವೆಯ ಕಲ್ವರ್ಟ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಾವ್ಯಾವ ಮನೆಗೆ ನೀರು ನುಗ್ಗಿದೆ ಎಂಬುದನ್ನು ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ರಾಮಕೃಷ್ಣ, ವಲಯ ಮುಖ್ಯ ಇಂಜಿನಿಯರ್ ಶಶಿಕುಮಾರ್, ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಸುಗುಣಾ, ಕೆರೆಗಳ ವಿಭಾಗದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.