ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನ ಬ್ಯಾಟರಾಯನಪುರದ ಬಿಬಿಎಂಪಿ ಕಚೇರಿಯಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಹವಾನಿಯಂತ್ರಣ ಯಂತ್ರ (ಎಸಿ)ಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಈ ಅಗ್ನಿ ಅವಘಡದಲ್ಲಿ ಕಚೇರಿಯ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಬೆಂಕಿ ಅವಘಡದ ವೇಳೆ ಆ ಕೊಠಡಿಯಲ್ಲಿ ಯಾವ ಸಿಬ್ಬಂದಿ ಇರಲಿಲ್ಲ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ರಂಗನಾಥ್ ಅವರ 2ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿದವು. ಇದಕ್ಕೂ ಮುನ್ನ ಬೆಂಗಳೂರು ಜಲಮಂಡಳಿ ಟ್ಯಾಂಕರ್ ನಿಂದ ಪೈಪ್ ಮೂಲಕ ನೀರು ಹರಿಸಿ ಬೆಂಕಿ ನಂದಿಸಲು ಅಲ್ಲಿದ್ದ ಸಿಬ್ಬಂದಿ ಪ್ರಯತ್ನಿಸಿದರು.
ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಚೇರಿಯಲ್ಲಿ ಈ ಅವಘಡ ಸಂಭವಿಸಿದ್ದು, ಅಗ್ನಿ ಅವಘಡದಲ್ಲಿ ಕೆಲ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಅಲ್ಲದೆ ಒಂದು ಟಿವಿ, 15 ಚೇರ್, ಕಬೋರ್ಡ್, ಟೈಬಲ್ ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿದೆ. ಈ ಪ್ರಕರಣದಲ್ಲಿ ಹಲವು ದಾಖಲೆಗಳು ಸುಟ್ಟು ಹೋಗಿವೆ ಎಂದು ಹೇಳಲಾಗುತ್ತಿದ್ದರೂ ಅಧಿಕಾರಿಗಳು ಅದನ್ನು ಅಲ್ಲಗಳೆಯುತ್ತಿದ್ದಾರೆ. ಇದು ಅನುಮಾನಗಳಿಗೂ ಕಾರಣವಾಗಿದೆ.
ಅಗ್ನಿ ಆಕಸ್ಮಿಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀಫ್ ಎಂಜಿನಿಯರ್ ರಂಗನಾಥ್, ಘಟನೆ ಸಂಭವಿಸಿದಾಗ ಅದೃಷ್ಟಕ್ಕೆ ತಾವು ಊರಲಿಲ್ಲರಲಿಲ್ಲ. ಕಚೇರಿಯಲ್ಲಿ ಮಹತ್ವದ ಫೈಲ್ ಗಳಿರಲಿಲ್ಲ. ಕೇವಲ ಪ್ರಗತಿ ಪರಿಶೀಲನಾ ಕಡತಗಳಷ್ಟೆ ಸುಟ್ಟು ಹೊಗಿವೆ. ಸಿಬ್ಬಂದಿ ಯಾರೂ ಇರಲಿಲ್ಲ. ವಿದ್ಯುತ್ ಸಾಕಷ್ಟು ಬಾರಿ ಹೋಗಿಬರುತ್ತಿತ್ತು. ಹೀಗಾಗಿ ಎಸಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ” ಎಂದಿದ್ದಾರೆ.