ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು, ಇಂದು ಮತ್ತು ನಾಳೆ ಕೂಡ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ವಿಧರ್ಭದಿಂದ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಟರ್ಫ್ ಕಂಡು ಬಂದಿದೆ. ಇದರಿಂದ ಆ ಭಾಗಗಳಲ್ಲಿ ವಾಯುಭಾರತ ಕುಸಿತದಿಂದ ಅತ್ತ ಕಡೆ ಮೋಡದ ಚಲನೆಯಿರಲಿದೆ. ಅಲ್ಲದೆ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಕಾರಣ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಶುಕ್ರವಾರ ಮತ್ತು ಶನಿವಾರ ಚದುರಿದ ಮತ್ತೆ ಕೆಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(KSNDMC)ದ ಮಾಜಿ ನಿರ್ದೇಶಕ ಹಾಗೂ ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಮುಂಗಾರು ಪೂರ್ವ ಮಳೆಯು ಭಾರೀ ಗಾಳಿ, ಗುಡುಗು- ಮಿಂಚು ಹಾಗೂ ಅಬ್ಬರಿಸಿ ಮಳೆಯಾಗುವ ಕಾರಣ ಆ ಸಂದರ್ಭದಲ್ಲಿ ರಸ್ತೆಯಲ್ಲಿ ಹಾಗೂ ಹೊರಗಡೆ ಸಂಚರಿಸದಿರುವುದೇ ಉತ್ತಮ ಎಂದು ಅವರು ನಗರದ ಜನತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿವರ್ಷವೂ ಮುಂಗಾರು ಪೂರ್ವ ಮಳೆಗೂ ಮುನ್ನವೇ ಮರದ ಹಳೆಯ ರೆಂಬೆಕೊಂಬೆ, ದುರ್ಬಲ ಮರಗಳನ್ನು ಕಡಿದು ಹಾಕುವುದು, ರಾಜಕಾಲುವೆ, ವಾರ್ಡ್ ನಲ್ಲಿನ ಮಳೆ ನೀರು ಮೋರಿಗಳಲ್ಲಿನ ಹೂಳುಗಳನ್ನು ತೆರವುಗೊಳಿಸುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೆ ಪಾದಚಾರಿ ಮಾರ್ಗಗಳಲ್ಲಿ ಹಾಳಾದ ಸಿಮೆಂಟ್ ಸ್ಲಾಬ್ ಗಳನ್ನು ಬದಲಾಯಿಸಬೇಕು. ಆದರೆ ಈ ವಿಚಾರದಲ್ಲಿ ಬಿಬಿಎಂಪಿಯೂ ಪ್ರತಿಬಾರಿಯೂ ಎಡುವುತ್ತಲೇ ಇದೆ. ಹಾಗಾಗಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಸಮಸ್ಯೆ ಮಾತ್ರ ಇತ್ಯರ್ಥವಾಗಿಲ್ಲ. ರಾಜಕಾಲುವೆ ಸಂಪರ್ಕಿಸುವ ಮೋರಿಗಳಿಗೆ ರಸ್ತೆಯಲ್ಲಿ ಹರಿಯುವ ನೀರು ಹೋಗದ ಕಾರಣ ಮೇಲ್ಬಾಗದಲ್ಲಿ ನೀರು ನಿಂತು ಅವಘಡಗಳು ಸಂಭವಿಸುತ್ತಿರುತ್ತೆ.
ನಗರದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯಾಗುವ ಹಿನ್ನಲೆಯಲ್ಲಿ ಬಿಬಿಎಂಪಿಯು ಕೈಗೊಳ್ಳಲಿರುವ ಕ್ರಮಗಳ ಕುರಿತಂತೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ನಗರದ ರಾಜಕಾಲುವೆಗಳಲ್ಲಿದೆ 127 ಮಳೆನೀರು ಮಟ್ಟ ಮಾಪನ ಸೆನ್ಸರ್ ಗಳು :
ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 105 ಮಳೆ ಮಾಪನ ಕೇಂದ್ರವನ್ನು ಅಳವಡಿಸಿದೆ. ಅಲ್ಲದೆ ನಗರ ವಿವಿಧ ಕಡೆಗಳಲ್ಲಿ 12 ಹವಾಮಾನ ಮಾಪನ ಕೇಂದ್ರಗಳನ್ನು ನಿರ್ಮಿಸಿದೆ. ಇದು ಸಾಲದು ಎಂಬಂತೆ ಈ ಹಿಂದೆ ನಗರದಲ್ಲಿ ಪ್ರಮುಖ 27 ಸ್ಥಳಗಳ ರಾಜಕಾಲುವೆಯಲ್ಲಿ ಮಳೆನೀರು ಮಟ್ಟದ ಮಾಪನ ಮಾಡುವ ಸೆನ್ಸರ್ ಗಳನ್ನು ಹಾಕಿ ಅವುಗಳನ್ನು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ ಮೂರು ತಿಂಗಳ ಹಿಂದೆ ಮತ್ತೆ 100 ಕಡೆಗಳಲ್ಲಿ ಈ ರೀತಿಯ ಸೆನ್ಸರ್ ಅಳವಡಿಸಲಾಗಿದೆ. 804 ಕಿ.ಮೀ ಉದ್ದದ ಈ ರಾಜಕಾಲುವೆಗಳಲ್ಲಿ ಮಳೆ ನೀರಿನ ಮಟ್ಟ ಅಪಾಯಕಾರಿ ಮಟ್ಟದ ದಾಟಿದಲ್ಲಿ ಈ ಸೆನ್ಸಾರ್ ಗಳು ಕೆಎಸ್ಎನ್ಎಂಡಿಸಿ ಕೇಂದ್ರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲಿದೆ. ವಾಸ್ತವ ಸಮಯದ ಆಧಾರದಲ್ಲಿ (Real Time Basis) ಸೌರವಿದ್ಯುತ್ ಆಧಾರಿತ ಈ ಸೆನ್ಸರ್ ಗಳು ಸಂದೇಶವನ್ನು ಕಳುಹಿಸಲಿದೆ. ಇವುಗಳನ್ನು ಆಧರಿಸಿ ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಗುರುವಾರ ರಾತ್ರಿ ಸರಾಸರಿ ಎಷ್ಟೆಷ್ಟು ಮಳೆಯಾಗಿದೆ ?
ಬುಧವಾರ ನಗರದಲ್ಲಿ ಸರಾಸರಿ 15 ಮಿಲಿ ಮೀಟರ್ ಮಳೆಯಾಗಿದ್ದರೆ, ನಿನ್ನೆ ರಾತ್ರಿಯಿಡೀ ನಗರದ ಹಲವೆಡೆ ಸರಾಸರಿಯಾಗಿ 25 ರಿಂದ 26 ಮಿಲಿ ಮೀಟರ್ ಮಳೆಯಾಗಿದೆ. ಆ ಪೈಕಿ ನಗರದ 14 ಕಡೆಗಳಲ್ಲಿ 40 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯ ನೈರುತ್ಯ ಭಾಗದಲ್ಲಿ ನಿನ್ನೆ ಹೆಚ್ಚು ಮಳೆಯಾಗಿದೆ. ವಿದ್ಯಾಪೀಠದಲ್ಲಿ ಅತಿಹೆಚ್ಚು ಅಂದರೆ 89.5 ಮಿ.ಮೀ, ಸಂಪಂಗಿರಾಮನಗರ 53.5 ಮಿ.ಮೀ, ಸಾರಕ್ಕಿ 62 ಮಿ.ಮೀ, ಬೊಮ್ಮನಹಳ್ಳಿಯ ಹಗದೂರಿನಲ್ಲಿ 45.5 ಮಿ.ಮೀ, ಬಿಳೆಕಳ್ಳಿ 45 ಮಿ.ಮೀ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ 45 ಮಿ.ಮೀ, ರಾಜರಾಜೇಶ್ವರ ನಗರದ ಪ್ರದೇಶದಲ್ಲಿ 43 ಮಿ.ಮೀ ಸೇರಿದಂತೆ ನಗರದ ಹಲವು ಕಡೆಗಳಲ್ಲಿ 30 ಮಿ.ಮೀಗಿಂತ ಹೆಚ್ಚು ಮಳೆಯಾಗಿದೆ.
ಕಾಮಾಕ್ಯ ಚಿತ್ರಮಂದಿರದ ಬಳಿ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ :
ಆದ್ದರಿಂದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 62ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿಟ್ಟಿದ್ದ ದವಸ ಧಾನ್ಯಗಳು ಸೇರಿದಂತೆ ದಿನಬಳಕೆಯ ವಸ್ತುಗಳು ಹಾಳಾಗಿದೆ. ರಾತ್ರಿ ಸುರಿದ ಮಳೆಗೆ ಕಾಮಾಕ್ಯ ಬಳಿಯ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಕುಸಿದು ದ್ವಿತೀಯ ಹಂತದ ಮಳೆನೀರು ಕಾಲುವೆ ಮೇಲೆ ಬಿದ್ದು ನೀರು ಹರಿಯುವಿಕೆಗೆ ತೊಂದೆರೆಯಾಗಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
“ಬಿಬಿಎಂಪಿ ಬೃಹತ್ ನೀರುಗಾಲುವೆ ಅಧಿಕಾರಿಗಳು ವಿಷಯ ತಿಳಿದು ಇಂದು ಬೆಳಗ್ಗೆಯಿಂದಲೇ ಮಳೆ ನೀರುಗಾಲುವೆಗೆ ಅಡ್ಡಲಾಗಿದ್ದ ಕುಸಿದ ಗೋಡೆ ಹಾಗೂ ಬಿಡಿಎ ಅಳವಡಿಸಿದ್ದ ನೀರಿನ ಪೈಪ್ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ, ನೀರು ಹರಿಯುವಿಕೆಗೆ ಅನುವು ಮಾಡಿಕೊಡಲಾಗಿದೆ. ಈ ಹಿಂದೆ ನಗರದಲ್ಲಿ ಸುರಿದ ಮಹಾಮಳೆಯಾದಗಲೂ ಈ ಭಾಗದಲ್ಲಿ ತೊಂದರೆಯಾಗಿರಲಿಲ್ಲ. ಬಿಎಂಟಿಸಿ ಗೋಡೆ ಕುಸಿದಿದ್ದೆ ನಿನ್ನೆ ಹಲವು ಮನೆಗಳಿಗೆ ನೀರು ನುಗ್ಗಲು ಕಾರಣ” ಎಂದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಪ್ರಧಾನ ಎಂಜಿನಿಯರ್ ಸುಗುಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಗರದಲ್ಲಿ 96 ಮಳೆಹಾನಿ ಸ್ಥಳಗಳಿವೆ ಎಚ್ಚರ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಮಳೆಹಾನಿ ಸಂಭವಿಸಬಹುದಾದ 209 ಪ್ರದೇಶಗಳಿದ್ದವು. ಅಂತಹ ಸ್ಥಳಗಳಲ್ಲಿ ಹಂತ ಹಂತವಾಗಿ ಮಳೆಹಾನಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಈ ಸಂಖ್ಯೆಯನ್ನು 96ಕ್ಕೆ ಇಳಿಸಲಾಗಿದೆ. ಸದ್ಯ ನಗರದಲ್ಲಿ 28 ಸ್ಥಳಗಳಲ್ಲಿ ಮಳೆಹಾನಿ ಸಂಭವಿಸುವ ಅಪಾಯಕಾರಿ ಸ್ಥಳಗಳಿದ್ದರೆ, ಮಳೆಯಾದರೆ ಸಾಮಾನ್ಯವಾಗಿ ಮಳೆಯಿಂದ ತೊಂದರೆಗೊಳಗಾಗಬಹುದಾದ 68 ಸ್ಥಗಳಿವೆ ಎಂದು ಬಿಬಿಎಂಪಿ ಅಧಿಕಾರಿ ಸುಗುಣ ಹೇಳಿದ್ದಾರೆ.
ಗುರುವಾರ ಸುರಿದ ಮಳೆಯಿಂದ ಓಕಳಿಪುರ ಕೆಳ ಸೇತುವೆ, ಶಿವಾನಂದ ವೃತ್ತ, ಮೆಜಿಸ್ಟಿಕ್ ಕೆಳಸೇತುವೆ, ಮಲ್ಲೇಶ್ವರ ಸಂಪಿಗೆ ರಸ್ತೆ, ಪೀಣ್ಯ, ಯಶವಂತಪುರ, ಜಾಲಹಳ್ಳಿ, ಹೆಬ್ಬಾಳ, ಆರ್.ಟಿ.ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕ್ ನಗರ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಉತ್ತಮ ಮಳೆಯಾದ ಕಾರಣ ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಂತು ವಾಹನ ಸವಾರರು ರಸ್ತೆಗುಂಡಿ ತಿಳಿಯದೇ ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದರು.