ನವದೆಹಲಿ, (www.bengaluruwire.com) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY) ಯಡಿ ಕಳೆದ 7 ವರ್ಷಗಳಲ್ಲಿ 34.42 ಕೋಟಿಗಿಂತ ಹೆಚ್ಚಿನ ಸಾಲ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಯೋಜನೆಯ 7ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಶುಕ್ರವಾರ ಇಲ್ಲಿ ಮಾತನಾಡಿದ ಅವರು, ಆದಾಯ ಸೃಜಿಸುವ ಉದ್ಯಮ ಚಟುವಟಿಕೆಗಳ ಸೃಷ್ಟಿಗಾಗಿ ಈ ಯೋಜನೆ ಕೋಟ್ಯಾಂತರ ಭಾರತೀಯರಿಗೆ ಸಹಾಯಕವಾಗಿದೆ.
ಮುದ್ರಾ ಯೋಜನೆಯು ವಿಶೇಷವಾಗಿ ಸಣ್ಣ ಉದ್ಯಮಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ತಳಮಟ್ಟದಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ. ಶೇ.68 ಕ್ಕಿಂತ ಹೆಚ್ಚಿನ ಸಾಲ ಖಾತೆಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. ಯೋಜನೆಯ ಪ್ರಾರಂಭದಿಂದಲೂ ಯಾವುದೇ ಸಾಲ ಪಡೆಯದ ಹೊಸ ಉದ್ಯಮಿಗಳಿಗೆ ಶೇ.22 ಸಾಲ ನೀಡಲಾಗಿದೆ ಎಂದರು.
ಮುದ್ರಾ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ಅಭಿನಂದಿಸಿದ ಅವರು, ಇದುವರೆಗೆ ಮಂಜೂರಾಗಿರುವ ಒಟ್ಟು ಸಾಲಗಳಲ್ಲಿ ಎಸ್.ಸಿ, ಎಸ್.ಟಿ ಮತ್ತು ಒಬಿಸಿ ವರ್ಗಕ್ಕೆ ಶೇ.51 ರಷ್ಟು ಸಾಲ ವಿತರಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್ ಕಿಸನ್ ರಾವ್ ಕರಾಡ್ ಮಾತನಾಡಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಯಾವುದೇ ತೊಂದರೆ ಆಗದಂತೆ, ಅಡಚಣೆ ಮುಕ್ತ ರೀತಿಯಲ್ಲಿ ಸಾಂಸ್ಥಿಕ ಸಾಲ ಒದಗಿಸುವುದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭದ ಹಿಂದಿನ ಪ್ರೇರಕ ಶಕ್ತಿಯಾಗಿದೆ ಎಂದರು.
ಸಾಲ ವಿತರಣೆ ಕುರಿತು ಮಾತನಾಡಿದ ಅವರು, ನೀತಿ ಆಯೋಗ ಗುರುತಿಸಿರುವಂತೆ ಪಿಎಂಎಂವೈ ಯೋಜನೆಯಡಿ ಸಾಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಆಕಾಂಕ್ಷಿತ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಫಲಾನುಭವಿಗಳ ಸಾಲ ಬೇಡಿಕೆಯನ್ನು ಪೂರೈಸಲು ಮತ್ತು ವಿಸ್ತರಿಸಲು ಸಾಧ್ಯವಾಗಿದೆ. ಈ ಯೋಜನೆಯು ಸಾಲದ ಒಳಹರಿವು ಸಕ್ರಿಯಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಪಿಎಂಎಂವೈ ಯೋಜನೆ ಯಾರಿಗಾಗಿ?
ಪಿಎಂಎಂವೈ ಯೋಜನೆಯ ವಿವಿಧ ಉಪಕ್ರಮಗಳ ಮೂಲಕ ಉದಯೋನ್ಮುಖ ಉದ್ಯಮಶೀಲರಿಂದ ಹಿಡಿದು ಶ್ರಮಿಕ ರೈತಾಪಿ ಜನರ ತನಕ ಎಲ್ಲಾ ಪಾಲುದಾರರ ಹಣಕಾಸಿನ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ. ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದ ಮತ್ತು ಇಲ್ಲಿಯವರೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗಗಳಿಗೆ ಹಣಕಾಸು ನೆರವು ನೀಡುವ ಪ್ರಮುಖ ಉಪಕ್ರಮ ಇದಾಗಿದೆ.
ಈ ಯೋಜನೆ ಪ್ರಾರಂಭವಾಗಿದ್ದು ಯಾವಾಗ?
ಪಿಎಂಎಂವೈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ಏಪ್ರಿಲ್ 8ರಂದು ವಿದ್ಯುಕ್ತವಾಗಿ ಆರಂಭಿಸಿದರು. 10 ಲಕ್ಷ ರೂ.ವರೆಗಿನ ಸಾಲವನ್ನು ಒದಗಿಸಲು ಪ್ರಾರಂಭಿಸಿದರು. ಕಾರ್ಪೊರೇಟ್ ಯೇತರ ಮತ್ತು ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಈ ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲ ವಿತರಿಸಲಾಗುತ್ತಿದೆ.
ಪಿಎಂಎಂವೈ ಯೋಜನೆಯ ಪ್ರಮುಖಾಂಶಗಳು:
ಪಿಎಂಎಂವೈ ಅಡಿ 10 ಲಕ್ಷ ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸಾಲ ನೀಡುವ ಸದಸ್ಯ ಸಂಸ್ಥೆಗಳು ಅಂದರೆ; ಬ್ಯಾಂಕ್‌ಗಳು, ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು), ಸಣ್ಣ ಹಣಕಾಸು ಸಂಸ್ಥೆಗಳು(ಎಂಎಫ್‌ಐಗಳು), ಇತರೆ ಹಣಕಾಸು ಮಧ್ಯವರ್ತಿ ಸಂಸ್ಥೆಗಳ ಮೂಲಕ 3 ವರ್ಗಗಳಲ್ಲಿ ಅಂದರೆ ಶಿಶು, ಕಿಶೋರ್ ಮತ್ತು ತರುಣ್ ಅಡಿ, ಉದ್ದಿಮೆಗಳ ಬೆಳವಣಿಗೆಯ ಹಂತ, ಅಭಿವೃದ್ಧಿ ಮತ್ತು ಹಣಕಾಸಿನ ಅಗತ್ಯಗಳನ್ನು ಆಧರಿಸಿ, ಸಾಲ ಒದಗಿಸಲಾಗುತ್ತಿದೆ.
ಯಾವ ವರ್ಗಕ್ಕೆ ಎಷ್ಟು ಸಾಲ ಸೌಲಭ್ಯ?
ಶಿಶು: ಈ ವರ್ಗದಲ್ಲಿ 50,000 ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
ಕಿಶೋರ್: 50,000 ರೂ.ನಿಂದ 5 ಲಕ್ಷ ರೂ. ತನಕ ಸಾಲ ಒದಗಿಸಲಾಗುತ್ತಿದೆ.
ತರುಣ್: 5 ಲಕ್ಷ ರೂ.ನಿಂದ 10 ಲಕ್ಷ ರೂ. ತನಕ ಸಾಲ ನೀಡಲಾಗುತ್ತಿದೆ.
ಮುದ್ರಾ ಸಾಲ (Mudra Loan)ವನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ?
ಹೊಸ ಪೀಳಿಗೆಯ ಆಕಾಂಕ್ಷಿತ ಯುವ ಸಮುದಾಯಕ್ಕೆ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದೊಂದಿಗೆ, ಶಿಶು ವರ್ಗದ ಸಾಲಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ನಂತರ ಕಿಶೋರ್ ಮತ್ತು ತರುಣ್ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದೆ. ಶಿಶು, ಕಿಶೋರ್ ಮತ್ತು ತರುಣ್ ವರ್ಗಗಳ ಅಡಿ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆಯ ಚೌಕಟ್ಟಿನೊಳಗೆ ಮತ್ತು ಒಟ್ಟಾರೆ ಉದ್ದೇಶಗಳೊಂದಿಗೆ, ಉತ್ಪನ್ನಗಳನ್ನು ವಿವಿಧ ವಲಯಗಳು, ವ್ಯಾಪಾರ ಚಟುವಟಿಕೆಗಳ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವಂತೆ ಮುದ್ರಾ ಸಾಲವನ್ನು ಸಂಪೂರ್ಣ ವಿನ್ಯಾಸಗೊಳಿಸಲಾಗಿದೆ.
ಕೋಳಿ ಸಾಕಣೆ, ಡೈರಿ, ಜೇನು ಸಾಕಣೆ ಇತ್ಯಾದಿ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಒಳಗೊಂಡಂತೆ ಉತ್ಪಾದನೆ(ತಯಾರಿಕೆ), ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಸೃಜಿಸುವ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಅವಧಿ ಸಾಲ ಮತ್ತು ದುಡಿಮೆ ಬಂಡವಾಳದ ಅಂಶಗಳನ್ನು ಪೂರೈಸಲು ಪಿಎಂಎಂವೈ ಯೋಜನೆ ಅಡಿ ಸಾಲಗಳನ್ನು ಒದಗಿಸಲಾಗುತ್ತಿದೆ.
ಸಾಲ ನೀಡುವ ಸಂಸ್ಥೆಗಳಿಂದ ಬಡ್ಡಿ ನಿರ್ಧಾರ :
ಆರ್ ಬಿ ಐ ಮಾರ್ಗಸೂಚಿಗಳ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ಬಡ್ಡಿ ದರ ನಿರ್ಧರಿಸುತ್ತವೆ. ದುಡಿಮೆ ಬಂಡವಾಳಕ್ಕಾಗಿ ಸಾಲ ಪಡೆದ ಉದ್ಯಮಶೀಲರಿಗೆ ಅವಧಿ ನಿರ್ಧರಿಸಿ, ಇಡೀ ಸಾಲ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮಾ.25 ವರೆಗೆ ಅನ್ವಯವಾಗುವಂತೆ, ಪಿಎಂಎಂವೈ ಯೋಜನೆ ಅಡಿ 4.86 ಕೋಟಿ ಸಾಲ ಖಾತೆಗಳಿಗೆ 3.07 ಲಕ್ಷ ಕೋಟಿ ರೂ. ಸಾಲ ಮಂಜೂರಾತಿ ವಿಸ್ತರಿಸಲಾಗಿದೆ.
ಮುದ್ರಾ ಸಾಲ ಯೋಜನೆಯಲ್ಲಿ ಸಾಲ ವಿತರಣೆ ಹೇಗಾಗಿದೆ?
• ಒಟ್ಟು ಮಂಜೂರಾದ ಸಾಲಗಳ ಪೈಕಿ ಅಂದಾಜು 68% ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.
ಪ್ರತಿ ಉದ್ಯಮಶೀಲರಿಗೆ ಮಂಜುರಾಗಿರುವ ಸರಾಸರಿ ಸಾಲ ಮೊತ್ತ 54,000 ರೂ.
• ಶಿಶು ವರ್ಗಕ್ಕೆ ಮಂಜೂರಾಗಿರುವ ಸಾಲ ಪ್ರಮಾಣ 86%.
• ನವ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 22%.
• ಎಸ್.ಸಿ, ಎಸ್.ಟಿ ಉದ್ಯಮಶೀಲರಿಗೆ ನೀಡಿರುವ ಸಾಲ 23%.
• ಒಬಿಸಿ ವರ್ಗಕ್ಕೆ ನೀಡಿರುವ ಸಾಲ 28%(ಎಸ್.ಸಿ, ಎಸ್.ಟಿ ಮತ್ತು ಒಬಿಸಿ ವರ್ಗಕ್ಕೆ ವಿತರಣೆ ಆಗಿರುವ ಒಟ್ಟು ಸಾಲ ಪ್ರಮಾಣ 51%).
• ಅಲ್ಪಸಂಖ್ಯಾತ ವರ್ಗಗಳ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 11%.