ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಯಲ್ಲಿ ಹೆಜ್ಜೆ ಹೆಜ್ಜೆಗೂ ಅಧಿಕಾರಿ- ಸಿಬ್ಬಂದಿ ತಪ್ಪು ಮಾಡಿದ್ದರೂ, ಭ್ರಷ್ಟತೆಯ ಕೊಂಪೆಯಲ್ಲಿ ಮುಳಗಿರುವ ಪಾಲಿಕೆಗೆ ಇದ್ಯಾವುದು ಲೆಕ್ಕಕ್ಕೇ ಇಲ್ಲ. ಸ್ಥಳೀಯಾಡಳಿತದ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಬೇಲಿಯೇ ಎದ್ದು ಹೊಲವನ್ನು ಮೇಯುಂತಿದೆ…!
ಯಾಕೆ ಹೀಗೆ ಹೇಳ್ತಿದ್ದಾರೆ ಅಂತ ಯೋಚಿಸ್ತಿದ್ದೀರಾ? ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಕರಣವೊಂದರಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಅವರನ್ನು ಕೂಡಲೇ ಅಮಾನತುಪಡಿಸಿ, ಅವರ ವಿರುದ್ಧ ಎಸಿಬಿ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಗೆ ಆದೇಶ ನೀಡಿದ್ದರೂ ಈತನಕ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಅದನ್ನು ಜಾರಿ ಮಾಡಿಲ್ಲ. ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ, ಎಸಿಬಿ ವಿಚಾರಣೆಗೆ ಅನುವು ಮಾಡಿಕೊಡಲು ಆಗದ ಮಟ್ಟಿಗೆ ವ್ಯವಸ್ಥಿತ ಹುನ್ನಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪರವಾಗಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಮಾ.10ರಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ವಿರುದ್ಧ ಕಾನೂನು ಉಲ್ಲಂಘಿಸಿ ಖಾಸಗಿಯವರ ಸ್ವತ್ತುಗಳಿಗೆ ಖಾತಾ ವಿಭಜನೆ ಮಾಡಿಕೊಟ್ಟಿರುವ ಪ್ರಕರಣದ ಹಿನ್ನಲೆಯಲ್ಲಿ ಅವರನ್ನು ಬಿಬಿಎಂಪಿಯಿಂದ ಅವರನ್ನು ವರ್ಗಾವಣೆ ಮಾಡುವಂತೆ ಪತ್ರ ಬರೆದಿದ್ದರು.
ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಬಿಎಂಪಿ ಸಲ್ಲಿಸಿದ ದಾಖಲೆಯೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಮಕೃಷ್ಣ ವಿರುದ್ಧ ಗಂಭೀರ ಆರೋಪದ ಹಿನ್ನಲೆಯಲ್ಲಿ ಕೂಡಲೇ ಅವರನ್ನು ಅಮಾನತುಪಡಿಸುವಂತೆ ಆದೇಶಿಸಿದ್ದರು. ಅಲ್ಲದೆ ಬಿಬಿಎಂಪಿ ಮುಖ್ಯ ಆಯುಕ್ತರು ಮಾ.10ರಂದು ಉಲ್ಲೇಖಿಸಿದ ಪ್ರಕರಣಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಂದ ತನಿಖೆ ನಡೆಸುವಂತೆ ಫರ್ಮಾನು ಹೊರಡಿಸಿದ್ದರು.
ಈ ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪತ್ರ ಸಂಖ್ಯೆ ಯುಡಿಡಿ/133/ಎಂಎನ್ ಯು/2022-ಬಿಬಿಎಂಪಿ-ನಗರಾಭಿವೃದ್ಧಿ ಇಲಾಖೆ (ಕಂಪ್ಯೂಟರ್ ಸಂಖ್ಯೆ : 723287) ರಲ್ಲಿ ಈ ಆದೇಶ ಮಾಡಿದ್ದರು. ಮಾ.28 ರಂದೇ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಈ ಕುರಿತ ಇ-ಫೈಲನ್ನು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಮಾ.28ರಂದು ಮಧ್ಯಾಹ್ನ 12.18ಕ್ಕೆ ಸಲ್ಲಿಕೆ ಮಾಡಿದ್ದಾರೆ. ಆದರೆ ಈ ಪ್ರಕರಣದ ಕುರಿತಂತೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಕೇಶ್ ಸಿಂಗ್ ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ, ‘ಬಿಬಿಎಂಪಿ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಮೇಲೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದಷ್ಟೇ ಹೇಳಿದ್ದಾರೆ.
ಶಾಸಕ ಎಂ.ಸತೀಸ್ ರೆಡ್ಡಿ ಗಂಭೀರ ಆರೋಪ ಹೊತ್ತವರ ಪರವಹಿಸಿದ್ದರೇ?
ದುರಂತ ಅಂದರೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಗಂಭೀರ ಆರೋಪ ಎದುರಿಸುತ್ತಿರುವ ಜೆಸಿ ರಾಮಕೃಷ್ಣ ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲು ಆದೇಶ ಹೊರಡಿಸಿದ್ದರು. ಆದರೆ ಮಾ.28ರಂದು ಸಿಎಂ ಕಚೇರಿಯಿಂದ ನಗರಾಭಿವೃದ್ಧಿ ಇಲಾಖೆಗೆ ಸಿಎಂ ಆದೇಶದ ಕಡತ ಹೋದ ದಿನವೇ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ, ಬೊಮ್ಮನಹಳ್ಳಿ ಜಂಟಿ ಆಯುಕ್ತ ಎಂ.ರಾಮಕೃಷ್ಣ ಪರವಹಿಸಿ ಪತ್ರ ಬರೆದಿದ್ದಾರೆ ಎನ್ನಲಾದ ಪತ್ರದ ಪ್ರತಿ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ತಮ್ಮ ಮತಕ್ಷೇತ್ರದಲ್ಲಿ ಸಾರ್ವಜನಿಕ ಕೆಲಸ ಹಾಗೂ ಕೋವಿಡ್ 19 ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೆಲವು ಆರ್ ಟಿಐ ಕಾರ್ಯಕರ್ತರು ಹಾಗೂ ಕೆಲ ವ್ಯಕ್ತಿಗಳ ಇಲ್ಲ-ಸಲ್ಲದ ಸುಳ್ಳು ಆರೋಪ ಮಾಡಿರುವುದರಿಂದ ಇವರನ್ನು ಸೇವೆಯಿಂದ ಅಮಾನತುಗೊಳಿಸಿರುತ್ತಾರೆ. ಅದಕ್ಕೆ ಸಂಬಂಧಪಟ್ಟಂತೆ ಕಡತ ಸಂಖ್ಯೆ : ಯುಡಿಡಿ: 133:ಎಂಎನ್ ಯು:2022, ಇ-3811939 ಇದ್ದು, ರಾಮಕೃಷ್ಣ ಇದೇ ಏಪ್ರಿಲ್ ತಿಂಗಳಿನಲ್ಲಿ ನಿವೃತ್ತಿ ಆಗುತ್ತಿರುವ ಕಾರಣ ಅವರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರೇ ಖುದ್ದಾಗಿ ತಮ್ಮ ಕೈಕೆಳಗಿನ ಕಂದಾಯ ಇಲಾಖೆ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ನೀಡಿದ ವರದಿ ಆಧಾರದ ಮೇಲೆ ನಾಲ್ಕು ಪ್ರಕರಣಗಳಲ್ಲಿ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಕಾನೂನು ಉಲ್ಲಂಘಿಸಿ ಸ್ವತ್ತುಗಳಿಗೆ ಖಾತಾ ವಿಭಜಿಸಿದ್ದಾರೆಂದು ಖುದ್ದು ನಗರಾಭಿವೃದ್ಧಿ ಇಲಾಖೆಗೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ಮುಖ್ಯ ಆಯುಕ್ತರ ಪತ್ರ ಆಧರಿಸಿ ಬರೆದು ಕಳುಹಿಸಿದ ಕಡತಕ್ಕೆ ಸ್ವತ: ಮುಖ್ಯಮಂತ್ರಿಗಳೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದಿರುವಾಗ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ, ಗಂಭೀರ ಆರೋಪ ಹೊತ್ತ ಜಂಟಿ ಆಯುಕ್ತರ ರಕ್ಷಣೆಗೇಕೆ ನಿಂತರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ…?
ಈ ಬಗ್ಗೆ ಬೆಂಗಳೂರು ವೈರ್ ಶಾಸಕ ಎಂ.ಸತೀಶ್ ರೆಡ್ಡಿಯವರಿಂದ ಪ್ರತಿಕ್ರಿಯೆ ಕೇಳಿದಾಗ ಅವರು ಹೇಳಿದ್ದು ಹೀಗೆ : “ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಅವರ ಮೇಲಿನ ಆರೋಪ ಏನಂತ ಗೊತ್ತಿಲ್ಲ. ನಾನು ಮೂರು ದಿನದಿಂದ ಬೆಂಗಳೂರಿನಲ್ಲಿ ಇರಲಿಲ್ಲ. ನಾನು ಲೆಟರ್ ಬರೆದ ಬಗ್ಗೆ ಮಾಹಿತಿಯಿಲ್ಲ.” ಎಂದಷ್ಟೇ ಹೇಳಿದ್ದಾರೆ.
ಮಾ.10ರಂದು ಮುಖ್ಯ ಆಯುಕ್ತರ ಪತ್ರದಲ್ಲೇನಿದೆ? :
ಅಸಲಿಗೆ ಮಾ.10ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಯವರು ಕಂದಾಯ ಇಲಾಖೆ ವಿಶೇಷ ಆಯುಕ್ತ ಹಾಗೂ ಜಂಟಿ ಆಯುಕ್ತರು ನೀಡಿದ ವರದಿಯನ್ವಯ ಈ ಕೆಳಕಂಡಂತೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಪ್ರಕರಣ -1 : ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಎಳ್ಳಕುಂಟೆ ಗ್ರಾಮದ ಸರ್ವೆ ನಂ.20/4ರಲ್ಲಿ ನೌಷದ್ ಎಂಬುವರ ಜಮೀನಿಗೆ ಖಾತಾ ವಿಭಜನೆ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು.
ಪ್ರಕರಣ-2 : ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಹರಳಕುಂಟೆ ಗ್ರಾಮದ ಸರ್ವೆ ನಂ.31/7 ರಲ್ಲಿನ 1.27 ಎಕರೆ ವಿಸ್ತೀರ್ಣದ ಜಮೀನಿಗೆ ಅರ್ಜಿದಾರರಿಂದ ಖಾತೆ ನೋಂದಣಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಮುನ್ನವೇ ಸುಧಾರಣಾ ವೆಚ್ಚ ಸಂಗ್ರಹಿಸಿರುವುದು.
ಪ್ರಕರಣ-3 : ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಎಳ್ಳಕುಂಟೆ ಗ್ರಾಮದ ಸರ್ವೆ ನಂ.15/1ಎ ರಲ್ಲಿ 2.14 ಎಕರೆ ವಿಸ್ತೀರ್ಣವುಳ್ಳ ಜಮೀನಿಗೆ ಖಾತೆ ವಿಭಜಿಸಿರುವುದು.
ಪ್ರಕರಣ-4 : ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಹರಳಕುಂಟೆ ಗ್ರಾಮದ ಸರ್ವೆ ನಂ.2421/32/14ರಲ್ಲಿನ 5 ಗುಂಟೆ ವಿಸ್ತೀರ್ಣವುಳ್ಳ ಜಮೀನು ಸೋಮಶೇಖರ್ ಅವರ ಹೆಸರಲ್ಲಿ ದಾಖಲಾಗಿದ್ದು, ಭೂಪರಿವರ್ತನೆ ಆದೇಶದ ಪ್ರತಿ ಲಭ್ಯವಿರುವುದಿಲ್ಲ. ಆದರೆ ಈತ 5 ಗುಂಟೆ ವಿಸ್ತೀರ್ಣದ ಪೈಕೆ 1,485 ಚ.ಅಡಿಗಳನ್ನು ಕೆ.ಸಾವಿತ್ರಮ್ಮ ಹಾಗೂ 1,200 ಚ.ಅಡಿಗಳನ್ನು ವಿ.ಜಿತೇಂದ್ರ ಹೆಸರಿಗೆ ಕ್ರಯಕ್ಕೆ ನೀಡಿದ್ದಾರೆ. ಈ ಸ್ವತ್ತಿನ ವಿಸ್ತೀರ್ಣಗಳಿಗೆ ಪ್ರತ್ಯೇಕ ಉಪ ಮುನಿಸಿಪಲ್ ಸಂಖ್ಯೆಗಳನ್ನು ನೀಡಿ, ಉಳಿಕೆ 2,760 ಚ.ಅಡಿಗಳಿಗೆ ಖಾತಾ ವಿಭಜಿಸಿ ನೋಂದಾಯಿಸಲಾಗಿದೆ.
20-10-2014ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೊಂಡ ಏಕ ನಿವೇಶನಗಳಿಗೆ ಮಾತ್ರ ಖಾತೆ ನೋಂದಾಯಿಸಲು ಅವಕಾಶವಿದೆ. ಆದರೆ ವಿಭಜನೆಗೆ ಒಳಗಾದ ಸ್ವತ್ತುಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಖಾತೆ ನೋಂದಾಯಿಸಬಾರದು. ಒಂದೊಮ್ಮೆ ಆ ಆದೇಶ ಉಲ್ಲಂಘಿಸಿ ಖಾತೆ ವಿಭಜಿಸಿದರೆ ಅಂತಹ ಅಧಿಕಾರಿ ಅಥವಾ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದೆಂದು ತಿಳಸಲಾಗಿದೆ. ಆದರೆ ವಲಯ ಮಟ್ಟದ ಅಧಿಕಾರಿಗಳು ಮುಖ್ಯ ಆಯುಕ್ತರ ಆದೇಶವನ್ನು ಉಲ್ಲಂಘಿಸಿ ಖಾತಾ ವಿಭಜಿಸಿ ಕಂಡುಬಂದಿದೆ. ಹೀಗಾಗಿ ಎಂ.ರಾಮಕೃಷ್ಣ ಅವರ ಸೇವೆ ಪಾಲಿಕೆಗೆ ಅವಶ್ಯಕತೆಯಿಲ್ಲ. ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಿ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳ ತನಕ ಈ ಪ್ರಕರಣ ಮುಟ್ಟಿದ್ದು ಹೇಗೆ ?
ಹರಳಕುಂಟೆ ಗ್ರಾಮದ ಎಸ್.ಎನ್.ರಾಜು ಸ್ವತ್ತಿನ ಪ್ರಕರಣ ಕುರಿತಂತೆ ಬೊಮ್ಮನಹಳ್ಳಿ ಕಂದಾಯ ವಿಭಾಗದ, ಸಹಾಯಕ ಕಂದಾಯ ಅಧಿಕಾರಿ ಲಕ್ಷ್ಮಿ ಹಾಗೂ ಕಂದಾಯ ಪರಿವೀಕ್ಷಕರಾದ ಸೋಮಶೇಖರ್ ವಿರುದ್ಧ ಬಿಬಿಎಂಪಿ ಆಡಳಿತ ವಿಭಾಗ ನೆಪಮಾತ್ರಕ್ಕೆ ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ, ಅಮಾನತು ಮಾಡಿ, ಎರಡು- ಮೂರು ದಿನಕ್ಕೆ ವಾಪಸ್ ಅವರನ್ನು ಕೆಲಸಕ್ಕೆ ಮರು ನೇಮಕ ಮಾಡಿದ್ದಾರೆ. ಈ ಪ್ರಕರಣದಲ್ಲಿ ಜಂಟಿ ಆಯುಕ್ತರು, ಉಪ ಆಯುಕ್ತರು ಇತರ ಅಧಿಕಾರಿಗಳ ಸಹಾಯವಿಲ್ಲದೆ ಖಾತಾ ವಿಭಾಗ ಅಥವಾ ಖಾತಾ ವರ್ಗಾವಣೆ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟ ಸಂಸ್ಥೆಯು 2022ರ ಜನವರಿ 20ರಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದಿತ್ತು.
ದೂರುದಾರರು ಏನಂತಾರೆ ?
“ಬಿಬಿಎಂಪಿ ಆಡಳಿತ ವಿಭಾಗ ಪಾಲಿಕೆ ಕಂದಾಯ ಇಲಾಖೆ ವಿಶೇಷ ಆಯುಕ್ತರು, ಜಂಟಿ ಆಯುಕ್ತರ ವರದಿ ಆಧರಿಸಿ, ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಅವರನ್ನು ಸೇವೆಯಿಂದ ಹಿಂಪಡೆಯುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಾಗ ಮುಖ್ಯಮಂತ್ರಿಗಳ ವರೆಗೂ ಈ ವಿಷಯ ತಲುಪಿದೆ. ಆದರೆ ಈತನಕವೂ ಪ್ರಕರಣ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಆದೇಶ ಜಾರಿಗೆ ತರುವಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯವರು, ಈ ತಿಂಗಳಲ್ಲಿ ನಿವೃತ್ತಿಯಾಗುತ್ತಿರುವ ಗಂಭೀರ ಆರೋಪ ಹೊತ್ತ ರಾಮಕೃಷ್ಣ ಪರವಹಿಸಿಕೊಂಡಿರುವುದು ತಲೆತಗ್ಗಿಸುವ ವಿಚಾರ. ತಪ್ಪಿತಸ್ಥರ ವಿರುದ್ಧ ಮುಖ್ಯಮಂತ್ರಿಗಳ ಆದೇಶದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ತನಿಖೆ ಮತ್ತು ವಿಚಾರಣೆ ಕೈಗೊಳ್ಳುವಂತೆ ಈಗಾಗಲೇ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ನೀಡಲಾಗಿದೆ.”
- ಮೋಹನ್ ರಾಜ್ ಒಡೆಯರ್, ಸಂಚಾಲಕ, ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟ
ಈ ಪ್ರಕರಣದ ಕುರಿತಂತೆ ಈಗಾಗಲೇ ಫೈಲ್ ಮುಖ್ಯಮಂತ್ರಿಗಳ ಕಚೇರಿಯಿಂದ ನಗರಾಭಿವೃದ್ಧಿ ಇಲಾಖೆಗೆ ಮಾ.28ರಂದು ರವಾನೆಯಾಗಿರುವುದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹೀಗಿದ್ದರೂ, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಲಕ್ಷ್ಮೀಸಾಗರ್, ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ದೂರವಾಣಿ ಕರೆ ಮಾಡಿ ಅವರನ್ನು ಕೇಳಿದ್ರೆ, “ರಾಮಕೃಷ್ಣ ಅವರ ಕುರಿತ ಫೈಲ್ ಇನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲೇ ಇದೆ. ಇನ್ನೂ ಬಂದಿಲ್ಲ. ನಾನು ಈಗ ಮೀಟಿಂಗ್ ನಲ್ಲಿದಿನಿ.” ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ವಿರುದ್ಧದ ಗುರುತರ ಆರೋಪದ ಬಗ್ಗೆ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಬೆಂಗಳೂರು ವೈರ್ ಗೆ ಹೇಳಿದ್ದು ಹೀಗೆ, “ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಗಳ ಬಗ್ಗೆ ಮುಖ್ಯಮಂತ್ರಿ ಕಚೇರಿ ಹಾಗೂ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸೂಕ್ತ ರೀತಿಯ ಉತ್ತರ ಕೊಟ್ಟಿದ್ದೇನೆ. ತಮ್ಮ ಮೇಲೆ ಬಂದಿರುವುದೆಲ್ಲ ಸುಳ್ಳು ಆರೋಪಗಳು, ಎಸಿಎಸ್ ಕಚೇರಿಯಿಂದ ತಮ್ಮನ್ನು ಅಮಾನತು ಮಾಡುವ ಆದೇಶ ಆಗಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಲಿಕೆಯ ಕಂದಾಯ ಇಲಾಖೆಯ ಗರ್ಭದಲ್ಲಿದೆ ದೊಡ್ಡ ದೊಡ್ಡ ಹಗರಣಗಳು – ಖಾತಾ ಅಕ್ರಮ ಕೇವಲ ಸ್ಯಾಂಪಲ್ ಅಷ್ಟೆ :
ಬೆಂಗಳೂರಿನ ಮಹದೇವಪುರ, ಬೊಮ್ಮನಹಳ್ಳಿ ವಲಯಗಳು ಬಿಬಿಎಂಪಿಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಹಣದ ಮೂಟೆ ಇರುವ ಸಂಪನ್ಮೂಲ ಭರಿತ ವಲಯಗಳೇ. ಹೀಗಾಗಿ ಈ ವಲಯಗಳಿಗೆ ಇತರ ವಲಯಗಳಗಿಂತ ಸಾವಿರಾರು ಕೋಟಿ ರೂ. ಹಣವು ರಸ್ತೆ ಮತ್ತು ಮೂಲಭೂತಸೌಕರ್ಯ ಕಲ್ಪಿಸಲು ಹಣ ಸುರಿಯುತ್ತಲೇ ಇರುತ್ತೆ ಬಿಬಿಎಂಪಿ. ಅದೇ ರೀತಿ ಸಾಕಷ್ಟು ಅಕ್ರಮ- ಅವ್ಯವಹಾರ ನಡೆಯುವ ಸ್ಥಳಗಳು ಇದೇ ಎರಡು ವಲಯಗಳಲ್ಲಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಯಿಂದ ಮುಖ್ಯಮಂತ್ರಿಗಳವರೆಗೆ ಖಾತೆ ವಿಭಜನೆ ಮಾಡಿಕೊಡುವ ನಾಲ್ಕು ಪ್ರಕರಣಗಳ ಅಕ್ರಮಗಳು ಕೇವಲ ಸ್ಯಾಂಪಲ್ ಅಷ್ಟೆ. 19 ಲಕ್ಷಕ್ಕೂ ಅಧಿಕ ಸ್ವತ್ತುಗಳಿರುವ ಪಾಲಿಕೆಯಲ್ಲಿ ಬಹುದೊಡ್ಡ ಹಗರಣಗಳು ಪಾಲಿಕೆಯ ಕಂದಾಯ ಇಲಾಖೆಯ ಗರ್ಭದಲ್ಲಿ ಬೆಚ್ಚಗೆ ಮಲಗಿದೆ. ಅಲ್ಲಿನ ಭ್ರಷ್ಟಾಚಾರವನ್ನು ಮುಲಾಜಿಲ್ಲದೆ ಬಯಲಿಗೆಳೆಯುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.