ಬೆಂಗಳೂರು, (www.bengaluruwire.com) : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಶುಕ್ರವಾರ ಅಧಿಕೃತವಾಗಿ ಉದ್ಘಾಟನೆಯಾಗಿದೆ.
ನಗರದಲ್ಲಿ ಸಹಕಾರ ಇಲಾಖೆ ಇಂದು ಆಯೋಜಿಸಿದ್ದ ಸಹಕಾರ ಸಮ್ಮೇಳನ ಹಾಗೂ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಇಲಾಖೆ ಸಚಿವ ಅಮಿತ್ ಷಾ ಅವರೊಂದಿಗೆ ಪಾಲ್ಗೊಂಡು ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ”ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದರಿಂದ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ ಎಂದು ಬಣ್ಣಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಯ ವೃದ್ಧಿಗೆ ಸಹಕಾರಿ :
ಕ್ಷೀರಕ್ರಾಂತಿಯ ಎರಡನೇ ಹೆಜ್ಜೆಯಾಗಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಯಶಸ್ವಿಯಾಗಲಿದೆ. ಈ ಬ್ಯಾಂಕುಗಳಿಗೆ 100 ಕೋಟಿ ರೂ. ಶೇರು ಬಂಡವಾಳವಾಗಿ ಸರ್ಕಾರ ನೀಡಲಿದೆ. ಎಲ್ಲ ಹಾಲು ಒಕ್ಕೂಟ ಮತ್ತು ಸಹಕಾರ ಸಂಘಗಳಿಂದ 260 ಕೋಟಿ ರೂ. ಪಡೆದುಕೊಂಡು ದೊಡ್ಡ ಮಟ್ಟದ ಸಹಕಾರಿ ಆರ್ಥಿಕತೆಗೆ ಈ ಬ್ಯಾಂಕ್ ವೇದಿಕೆಯಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆ ವೃದ್ಧಿಸಲು ಇದು ಬಹಳ ದೊಡ್ಡ ಹೆಜ್ಜೆಯಾಗಲಿದೆ. ಪ್ರತಿ ತಾಲ್ಲೂಕಿನಲ್ಲಿ ಈ ಬ್ಯಾಂಕ್ ಇರಲಿದೆ ಎಂದರು.
ಸಹಕಾರಿ ರಂಗದ ಹಾಲು ಉತ್ಪಾದಕರ ಶಕ್ತಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸುಮಾರು 20 ಸಾವಿರ ಕೋಟಿಯಷ್ಟು ವ್ಯವಹಾರವನ್ನು ವಿವಿಧ ಬ್ಯಾಂಕುಗಳಲ್ಲಿ ಹಾಲು ಉತ್ಪಾದಕ ಸಂಘದವರು ಮಾಡುತ್ತಾರೆ. ಪ್ರತಿ ದಿನ ನಗದು ವ್ಯವಹಾರವಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ಅವರದ್ದೇ ಆದ ಬ್ಯಾಂಕ್ ಸ್ಥಾಪನೆಯಾಗಿ ಅವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿ ಎಲ್ಲಾ ರೀತಿಯ ಸಹಾಯ ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಒಂದೇ ವರ್ಷದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ :
ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಿ 5,775 ಕೃಷಿ ಪತ್ತಿನ ಸಹಕಾರ ಸಂಘಗಳ ಗಣ ಕೀಕರಣವನ್ನು ಒಂದೇ ವರ್ಷದಲ್ಲಿ ಮಾಡುವಂತಹ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೇ.60 ರಷ್ಟು ಹಾಗೂ ರಾಜ್ಯ ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳು ಶೇ.40ರಷ್ಟು ಹೂಡಿಕೆ ಮಾಡಿ ಮೂರು ವರ್ಷಗಳಲ್ಲಿ ಮಾಡುವುದನ್ನು ಒಂದೇ ವರ್ಷದಲ್ಲಿ ಸಾಧಿಸಲಾಗುವುದು ಎಂದರು.
ಅವರವರ ವ್ಯಾಪ್ತಿಯಲ್ಲಿ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕುಗಳು ಉತ್ತಮವಾಗಿ ಕೆಲಸ ಮಾಡಿ ಈ ವರ್ಷ 33 ಲಕ್ಷ ಜನರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಸಾಮರ್ಥ್ಯ ಸಹಕಾರಿ ರಂಗಕ್ಕೆ ಬಂದಿದೆ. ಸರ್ಕಾರ ಸಹಕಾರಿ ರಂಗ ಮತ್ತು ಸಹಕಾರ ಇಲಾಖೆಯ ಜೊತೆಗಿದೆ.
ಕೇಂದ್ರ ಸಹಕಾರ ಇಲಾಖೆ ರಚನೆ ಕ್ರಾಂತಿಕಾರಿ ಹೆಜ್ಜೆ:
ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರು ಸಹಕಾರಿ ರಂಗದ ಬುನಾದಿಯನ್ನು ಬಲ್ಲವರು. ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರಿ ಇಲಾಖೆಯನ್ನು ರಚಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಟ್ಟಿದ್ದಾರೆ. ಹೊಸ ಹೊಸ ಯೋಜನೆಗಳನ್ನು ಎಲ್ಲಾ ರಾಜ್ಯಗಳಿಗೆ ಸಮವಾಗಿ ನೀಡುವ ಚಿಂತನೆಯಲ್ಲಿ ಈ ಕಾರ್ಯವಾಗಿದೆ. ಕೇಂದ್ರ ಸಹಕಾರ ಸಚಿವರ ನೇತೃತ್ವದಲ್ಲಿ ಸಹಕಾರಿ ಕ್ರಾಂತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ರೈತ ಕುಟುಂಬಗಳಿಗೆ ಯಶಸ್ವಿನಿ ಯೋಜನೆ :
ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಉತ್ತಮ ಹಾಗೂ ಸರಳ ಆರೋಗ್ಯ ವ್ಯವಸ್ತೆ ನೀಡುವ ‘ಯಶಸ್ವಿನಿ’ ಯೋಜನೆ ಪುನ: ಪ್ರಾರಂಭಿಸಿ 300 ಕೋಟಿಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ.ಗಳ ಕೃಷಿ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ರೈತರ ಸಹಕಾರಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು. ಸರ್ಕಾರ ರೈತರನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿಯುತಗೊಳಿಸುವ ಗುರಿ ಹೊಂದಿದೆ ಎಂದರು.
ರಾಜ್ಯದ ಯೋಜನೆಗಳಿಗೆ ಅಮಿತ್ ಷಾ ಮೆಚ್ಚುಗೆ :
ಹಾಲು ಉತ್ಪಾದಕರಿಗಾಗಿ ಮೀಸಲಿರುವ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕನ್ನು ಸ್ಥಾಪಿಸಿರುವ ಏಕೈಕ ರಾಜ್ಯ ಕರ್ನಾಟಕ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಸಫಲ ಸಹಕಾರಿ ಆಂದೋಲನಗಳ ಪೈಕಿ ಕರ್ನಾಟಕದ ಸಹಕಾರಿ ಆಂದೋಲನವೂ ಒಂದು. ಸಹಕಾರಿ ರಂಗದಲ್ಲಿ ಯಶಸ್ಸು ಸಾಧಿಸಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ‘ಎ’ ಶ್ರೇಣಿಯಲ್ಲಿದೆ. ಕರ್ನಾಟಕದ ಸಹಕಾರ ಆಂದೋಲನವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಸಹಕಾರಿ ಆಂದೋಲನ ಎಲ್ಲ ಗ್ರಾಮಗಳಿಗೂ ತಲುಪುವ ವಿಶ್ವಾಸವಿದೆ ಎಂದರು.
ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪನೆಯ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಬಲಪಡಿಸುವ ಕೆಲಸವಾಗಿದೆ. ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ರೈತರನ್ನು ಆತ್ಮನಿರ್ಭರರನ್ನಾಗಿ ಮಾಡಲಾಗುತ್ತಿದೆ. ಕರ್ನಾಟಕದ ಪ್ರತಿ ಗ್ರಾಮದಲ್ಲಿಯೂ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹತೆಯನ್ನು ಬೆಳೆಸುವ ಮೂಲಕ ಗ್ರಾಮೀಣಾಭಿವೃದ್ಧಿ ಕ್ಷೇತ್ರವನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವರಾದ ಎಸ್.ಟಿ ಸೋಮಶೇಖರ್, ಆರ್.ಅಶೋಕ, ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಅರಗ ಜ್ಞಾನೇಂದ್ರ, ಆನಂದ ಸಿಂಗ್, ಬಿ.ಸಿ ಪಾಟೀಲ್, ಶಿವರಾಮ ಹೆಬ್ಬಾರ, ಕೆ.ಗೋಪಾಲಯ್ಯ, ಬೈರತಿ ಬಸವರಾಜ, ಮುರುಗೇಶ ನಿರಾಣಿ, ಪ್ರಭು ಚವಾಣ, ಶಶಿಕಲಾ ಜೊಲ್ಲೆ, ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.