ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ 2022-23ನೇ ಸಾಲಿನ ಪಾಲಿಕೆ ಬಜೆಟ್ ಅನ್ನು 2020-21ನೇ ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳುವ ಕೊನೆಯ ದಿನವಾದ ಮಾ.31ರ ತಡರಾತ್ರಿ ಪ್ರಕಟಿಸಲಾಗಿದೆ. ಇದೊಂದು ರೀತಿ ಮಿಡ್ ನೈಟ್ ಬಜೆಟ್ ಅನ್ನುವಂತಾಗಿದೆ. ಈ ಮೂಲಕ ಆಡಳಿತಾಧಿಕಾರಿಗಳ ನೇತೃತ್ವದ ಪಾಲಿಕೆಯಲ್ಲಿ ಎರಡನೇ ಅವಧಿಗೆ ಬಜೆಟ್ ಮಂಡಿಸಿದ ಹಣಕಾಸು ಇಲಾಖೆ ವಿಶೇಷ ಆಯುಕ್ತ ತುಳಸಿ ಮದ್ದಿನೇನಿ ಹೊಸ ಇತಿಹಾಸ ಹಾಗೂ ಸಂಪ್ರದಾಯಕ್ಕೆ ನಾಂದಿಹಾಡಿದ್ದಾರೆ.
ಪಾಲಿಕೆಯಲ್ಲಿ ಈ ಹಿಂದೆ ಕೋಟ್ಯಾಂತರ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ರಾತ್ರೋರಾತ್ರಿ ಟೆಂಡರ್ ಕರೆದು ಸಾಕಷ್ಟು ವಿವಾದ ಹಾಗೂ ಹಗರಣಗಳು ನಡೆಸಿದ ಆರೋಪಗಳು ಕೇಳಿಬಂದಿತ್ತು. ಆದರೀಗ ಸೆಪ್ಟೆಂಬರ್ 2020ರಿಂದ ಜನಪ್ರತಿನಿಧಿಗಳಿಲ್ಲದ ಪಾಲಿಕೆಯಲ್ಲಿ “ರಾತ್ರಿ ಬಜೆಟ್” ಮಂಡಿಸಿರುವುದು ಹಲವಾರು ಅನುಮಾನ ಹಾಗೂ ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾದರೆ ಬಿಬಿಎಂಪಿಯಲ್ಲಿ ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗುವ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನ ಸ್ಥಳೀಯಾಡಳಿತ ಬಿಬಿಎಂಪಿಯಲ್ಲಿ ಜನಪ್ರಿಯ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿತ್ತು. ಆದರೀಗ ಹಣಕಾಸು ಇಲಾಖೆ ತುಳಸಿ ಮದ್ದಿನೇನಿ 2022-23ನೇ ಸಾಲಿಗೆ 10,478.70 ಕೋಟಿ ರೂ. ಆದಾಯ ಹಾಗೂ 10,480.93 ಕೋಟಿ ರೂ. ವೆಚ್ಚ ಮಾಡುವ ಅಂದಾಜಿನ 3.34 ಕೋಟಿ ರೂ. ಮಿಗತೆ ಬಜೆಟ್ ಮಂಡಿಸಿ ಬಿಬಿಎಂಪಿಯ ವೆಬ್ ಸೈಟ್ ನಲ್ಲಿ https://site.bbmp.gov.in/indexenglish.html#cs ಅಪಲೋಡ್ ಮಾಡಿದ್ದಾರೆ.
ಕಳೆದ ಬಾರಿ (2021-22)ಯ ಬಜೆಟ್ ನಲ್ಲಿ ಒಟ್ಟು 10,299 ಕೋಟಿ ರೂ. ಬಜೆಟ್ ಮಂಡಿಸಲಾಗಿತ್ತು. ಆದರೆ ಆ ವರ್ಷದ ಪರಿಷ್ಕೃತ ಬಜೆಟ್ 8,804.86 ಕೋಟಿ ರೂ.ಗಳಾಗಿದೆ ಎಂದು ಆಯವ್ಯಯದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಈತನಕ ಪಾಲಿಕೆ ಬಜೆಟ್ ಜನಪ್ರತಿನಿಧಿಗಳ ಆಡಳಿತವಿದ್ದಾಗ ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಹಣಕಾಸು ಇಲಾಖೆ ಸ್ಥಾಯಿ ಸಮಿತಿ ಅಧ್ಯಕ್ಷರು ಆಯವ್ಯಯ ಮಂಡಿಸುತ್ತಿದ್ದರು. ಬಳಿಕ ಅವುಗಳ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಬಜೆಟ್ ಮುಖ್ಯಾಂಶಗಳ ಬಗ್ಗೆ ತಮ್ಮ ಸಮರ್ಥನೆ ನೀಡುತ್ತಿದ್ದರು. ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕಳೆದ ಬಾರಿ ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಬಜೆಟ್ ಮಂಡಿಸಲಾಗಿತ್ತು. ಆದರೆ ಈ ಬಾರಿ ಆರ್ಥಿಕ ವರ್ಷ ಅಂತ್ಯವಾಗುವ ಕೊನೆಯ ದಿನ ರಾತ್ರೋರಾತ್ರಿ ಬಜೆಟ್ ಮಂಡಿಸಲಾಗಿದೆ.
ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ :
ಈ ಮುಂಚೆ ಮಾ.30ಕ್ಕೆ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಬಜೆಟ್ ಮಂಡನೆ ಮಾಡಲು ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಮತ್ತು ಬೆಂಗಳೂರಿನ ಶಾಸಕರು ಮತ್ತು ಸಚಿವರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ದಿನಾಂಕ ಮುಂದೂಡಿಕೆಯಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಬಜೆಟ್ ಮಂಡನೆಯಾಗುವುದೆಂದು ಹೇಳಲಾಗುತ್ತಿತ್ತು. ಆದರೆ ಏಕಾಏಕಿ ರಾತ್ರಿ ಬಜೆಟ್ ಮಂಡಿಸಿರುವುದು ಈಗ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾದರೆ ಆಶ್ಚರ್ಯವಿಲ್ಲ.
ಶುಕ್ರವಾರ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಬೆಂಗಳೂರಿಗೆ ಕಾರ್ಯಕ್ರಮ ನಿಮಿತ್ತ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಗಮನವೆಲ್ಲ ಅವರನ್ನು ಬರಮಾಡಿಕೊಳ್ಳುವ, ಅಭಿನಂದನೆ ಸಲ್ಲಿಸುವ ಕಡೆಯಿರುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು ಹಿಂದಿನ ದಿನ ರಾತ್ರಿ ಬಜೆಟ್ ಮಂಡಿಸಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯರೊಬ್ಬರು ಹೇಳಿದ್ದಾರೆ.
2022-23ನೇ ಸಾಲಿನ ಬಜೆಟ್ ಮುಖ್ಯಾಂಶಗಳು :
- 2022-23 ಸಾಲಿನ ಬಜೆಟ್ ನಲ್ಲಿ ಕಂದಾಯ ವಿಭಾಗದಿಂದ ಈ ಬಾರಿ 5,507,13 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆ ಮಾಡಲಾಗಿದೆ. ಆ ಪೈಕಿ ಆಸ್ತಿತೆರಿಗೆಯಿಂದ 3,107 ಕೋಟಿ ರೂ. ಆದಾಯ ಸಂಗ್ರಹವಾಗುವುದೆಂದು ಅಂದಾಜು ಮಾಡಲಾಗಿದೆ. 2021-21ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ 3,500 ಕೋಟಿ ರೂ. ಗುರಿ ನಿಗಧಿಪಡಿಸಿದ್ದರೂ, ಪರಿಷ್ಕೃತ ಆಯವ್ಯಯದಲ್ಲಿ 2,350 ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ ಎಂದು ತೋರಿಸಲಾಗಿದೆ.
- 15ನೇ ಹಣಕಾಸು ಆಯೋಗದಿಂದ 436 ಕೋಟಿ ರೂ. ಹಾಗೂ ವಿಶೇಷ ಮೂಲಭೂತ ಸೌಕರ್ಯ ಯೋಜನೆಗೆ ರಾಜ್ಯ ಸರ್ಕಾರದಿಂದ 3,000 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 3,436 ಕೋಟಿ ರೂ. ಅನುದಾನ ಲಭ್ಯತೆಯನ್ನು ಅಂದಾಜಿಸಲಾಗಿದೆ.
- ಪಾಲಿಕೆ ವ್ಯಾಪ್ತಿಯಲ್ಲಿ ಖಾತೆಗಳನ್ನು ಕ್ರಮಬದ್ಧಗೊಳಿಸುವ ಯೋಜನೆಯನ್ನು ಘೋಷಿಸಲಾಗಿದ್ದು, 1,000 ಕೋಟಿ ರೂ. ಹಣ ಸಂಗ್ರಹಿಸುವುದಾಗಿ ಹಣಕಾಸು ವಿಶೇಷ ಆಯುಕ್ತೆ ತುಳಿಸಿ ಮದ್ದಿನೇನಿ ಬಜೆಟ್ ನಲ್ಲಿ ತಿಳಿಸಿದ್ದಾರೆ.
- 465.56 ಕೋಟಿ ರೂ. ಆದಾಯ ನಗರ ಯೋಜನೆ ವಿಭಾಗದಿಂದ ಸ್ವೀಕೃತವಾಗಲಿದೆಯಂದು ಬಜೆಟ್ ನಲ್ಲಿ ತಿಳಿಸಲಾಗಿದೆ.
- ಪಾಲಿಕೆ ಸಾಮಾನ್ಯ ಆಡಳಿತ ವೆಚ್ಚಕ್ಕಾಗಿ ಈ ವರ್ಷ 627.92 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
- ಸಾರ್ವಜನಿಕ ಕಾಮಗಾರಿಗಳಿಗಾಗಿ ಕಳೆದ ಸಾಲಿನಲ್ಲಿ 5,941 ಕೋಟಿ ರೂ. ಮೀಸಲಿಟ್ಟಿದ್ದರೆ, ಈ ಬಾರಿ 6,911.49 ಕೋಟಿ ರೂ. ಗಳನ್ನು ನೀಡಲಾಗಿದೆ.
- ನಗರದ ಸ್ವಚ್ಛತೆಯ ದೃಷ್ಟಿಯಿಂದ ಘನತ್ಯಾಜ್ಯ ನಿರ್ವಹಣೆ ಇಲಾಖೆಗೆ 1,469 ಕೋಟಿ ರೂ. ನಿಗಧಿಪಡಿಸಲಾಗಿದೆ. ಕಳೆದ ಬಾರಿ 1,622 ಕೋಟಿ ರೂ. ಹಣವನ್ನು ಇದಕ್ಕಾಗಿ ತೆಗೆದಿರಿಸಲಾಗಿತ್ತು.
- ಶಿಕ್ಷಣದ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಒಲವು ತೋರಲಾಗಿದೆ. ಕಳೆದ ಬಾರಿ ಕೇವಲ 83.89 ಕೋಟಿ ರೂ.ಗಳನ್ನು ಮಾತ್ರ ಮೀಸಲಿಟ್ಟಿದ್ದರೆ ಈ ಬಾರಿ 113.41 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
- ನಗರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಜಾತಿ ಮತ್ತಿತರರ ಕಲ್ಯಾಣಕ್ಕಾಗಿ ಸಮಾಜ ಕಲ್ಯಾಣ ವಿಭಾಗಕ್ಕೆ ಕಳೆದ ಬಾರಿಗಿಂತ ಕಡಿಮೆ ಹಣ ಮೀಸಲಿಡಲಾಗಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಕಳೆದ ಬಾರಿ 460.64 ಕೋಟಿ ರೂ. ನಿಗಧಿಪಡಿಸಿದ್ದರೆ ಈ ಬಾರಿ 374.34 ಕೋಟಿ ರೂ.ಗಳಿಗೆ ಸೀಮಿತಗೊಳಿಸಲಾಗಿದೆ.
- ಕಳೆದ ಬಜೆಟ್ ನಲ್ಲಿ ಕರೋನಾ ಸೋಂಕು ಹೆಚ್ಚಾದ ಕಾರಣ ಸಾರ್ವಜನಿಕ ಆರೋಗ್ಯಕ್ಕಾಗಿ 252 ಕೋಟಿ ರೂ. ಮೀಸಲಿಟ್ಟಿದ್ದರೂ, 474 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂದು ಪರಿಷ್ಕೃತ ಆಯವ್ಯಯದಲ್ಲಿ ತಿಳಿಸಲಾಗಿದೆ. ಆದರೆ ಈ ಬಾರಿ 210.63 ಕೋಟಿ ರೂ.ಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಕಳೆದ ಬಾರಿಗಿಂತ ಕಡಿಮೆ ಹಣ ಇಡಲಾಗಿದೆ.
- ತೋಟಗಾರಿಕೆಗೆ ಕಳೆದ ಬಾರಿ 213.84 ಕೋಟಿ ರೂ. ಇಟ್ಟಿದ್ದರೆ ಈ ಬಾರಿ 174 ಕೋಟಿ ರೂ.ಗಳಷ್ಟೆ ಸಿಕ್ಕಿದೆ.
- 2021-22 ಸಾಲಿನಲ್ಲಿ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಹಲವಾರು ಕಾರಣಗಳಿಗಾಗಿ ಒಂದೇ ಒಂದು ಸಸಿಯನ್ನು ನೆಟ್ಟಿರಲಿಲ್ಲ. ಈ ಬಾರಿಯ 800 ಚದರ ಕಿ.ಮೀಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗವನ್ನು ಮತ್ತೆ ನಿರ್ಲಕ್ಷಿಸಲಾಗಿದೆ. ಕಳೆದ ಬಾರಿ ನಗರ ಅರಣ್ಯ ಇಲಾಖೆಗೆ 38.93 ಕೋಟಿ ರೂ. ತೆಗೆದಿರಿಸಿದ್ದರೆ, 2022-23ನೇ ಸಾಲಿನ ಬಜೆಟ್ ನಲ್ಲಿ 3.63 ಕೋಟಿ ರೂ. ಕಡಿಮೆ ಮಾಡಿ ಕೇವಲ 35.30 ಕೋಟಿ ರೂ. ಕೊಡಲಾಗಿದೆ.
- ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಹಾಗೂ ಡಕ್ಟ್ ಅಳವಡಿಕೆಯಿಂದ ಪಾಲಿಕೆಗೆ 215 ಕೋಟಿ ರೂ.ಗಳನ್ನು ಆದಾಯ ಸಂಗ್ರಹಿಸುವ ಗುರಿ ನೀಡಲಾಗಿದೆ.
- ವ್ಯಾಪಾರ ಪರವಾನಗಿ ಶುಲ್ಕದಿಂದ ಒಟ್ಟಾರೆ 36.5 ಕೋಟಿ ರೂ. ಸಂಗ್ರಹಿಸಲು ಯೋಜಿಸಲಾಗಿದೆ.
- ಬಿಬಿಎಂಪಿಗೆ ಒಂದೊಮ್ಮೆ ಚುನಾವಣೆ ನಡೆದು ಹೊಸ ಮೇಯರ್- ಉಪಮೇಯರ್ ಆಯ್ಕೆ ಬಂದು ಅಧಿಕಾರ ನಡೆಸಿದರೆ 9.65 ಲಕ್ಷ ಗೌರವ ಧನವನ್ನು ಮಾತ್ರ ಮೀಸಲಿಡಲಾಗಿದೆ. ಪಾಲಿಕೆ ಸದಸ್ಯರುಗಳಿಗೆ 2.50 ಕೋಟಿ ರೂ. ಗೌರವ ಧನ ನೀಡಲು ಹಣ ಮೀಸಲಿಡಲಾಗಿದೆ.
- ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ವೆಚ್ಚಕ್ಕಾಗಿ 380.26 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ.
- ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ಮಳೆಗಾಲ ಬಂದ ಬಳಿಕ ರಸ್ತೆಗುಂಡಿ ಸೃಷ್ಟಿ, ಮನೆ ಕುಸಿತ, ಮನೆ- ಕಟ್ಟಡಗಳಿಗೆ ಪ್ರವಾಹದಿಂದ ನೀರು ನುಗ್ಗಿ ಸಾಕಷ್ಟು ಆಸ್ತಿಪಾಸ್ತಿಗಳು ಹಾನಿಯಂತಹ ಪ್ರಕರಣಗಳು ಘಟಿಸುತ್ತಲೇ ಇರುತ್ತದೆ. ಇದಕ್ಕಾಗಿ ನೈಸರ್ಗಿಕ ವಿಪತ್ತುಗಳು ಹಾಗೂ ಬೆಂಕಿ ಅಪಾಯಗಳ ಪರಿಹಾರಕ್ಕಾಗಿ ಕಳೆದ ಬಾರಿ 5 ಕೋಟಿ ರೂ. ತೆಗೆದಿರಿಸಿದ್ದರೆ ಈ ಬಾರಿ ಕೇವಲ 1 ಕೋಟಿ ರೂ. ಹಣ ಮೀಸಲಿಡಲಾಗಿದೆ. ಇಲ್ಲೂ 4 ಕೋಟಿ ರೂ. ಹಣ ಕಡಿತಗೊಳಿಸಲಾಗಿದೆ.
- ಪ್ರಕೃತಿ ವಿಕೋಪಗಳ ವೆಚ್ಚವನ್ನು ಹಿಂದಿನ ಆರ್ಥಿಕ ವರ್ಷದ 10 ಕೋಟಿ ರೂ.ಗಳಿಂದ ಈ ಬಾರಿ 2 ಕೋಟಿ ರೂ.ಗಳಿಗೆ ಕಡಿಮೆ ಮಾಡಲಾಗಿದೆ.
- ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ನೀಡುವ ಅನುದಾನವನ್ನು ಕಡಿತ ಮಾಡಲಾಗಿದೆ. ಕಳೆದ ಬಾರಿ 1.50 ಕೋಟಿ ರೂ. ಮೀಸಲಿಟ್ಟಿದ್ದರೆ ಈ ಬಾರಿ ಅದರಲ್ಲಿ 50 ಲಕ್ಷ ರೂ.ಗಳನ್ನು ಕಡಿಮೆ ಮಾಡಲಾಗಿದೆ.
ನಾಡಪ್ರಭು ಕೆಂಪೇಗೌಡ ದಿನಾಚರಣೆಗೆ ವೆಚ್ಚ ಮಾಡಲು ಹಿಂದಿನ ಸಾಲಿನಲ್ಲಿ 3 ಕೋಟಿ ರೂ. ಮೀಸಲಿಟ್ಟಿದ್ದರೆ ಈ ಬಾರಿ ಅದನ್ನು 1 ಕೋಟಿ ರೂ. ಗೆ ಕಡಿತಗೊಳಿಸಲಾಗಿದೆ.
ಬಜೆಟ್ ಗೆ ಪೂರ್ವಭಾವಿಯಾಗಿ ಮಾಜಿ ಮೇಯರ್, ನಗರದ ಸಚಿವರು, ಶಾಸಕರುಗಳಿಂದ ಅಭಿಪ್ರಾಯ, ಸಂಗ್ರಹಿಸುವ ವಿಚಾರದಲ್ಲಿ ಬಿಬಿಎಂಪಿ ಆಡಳಿತ ಸೂಕ್ತ ರೀತಿ ನಡೆದುಕೊಂಡಿಲ್ಲ ಎಂಬ ಟೀಕೆಗಳು ಕೇಳಿಬಂದಿತ್ತು. ಒಟ್ಟಾರೆ ಈ ಬಾರಿ ಮುಂಬರುವ ಸಾರ್ವತ್ರಿಕ ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಬಜೆಟ್ ಹಾಗೂ ಹೊಸ ಯೋಜನೆಗಳ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕೇವಲ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕ ಕಾಮಗಾರಿಗಳಿಗಾಗಿ ಬರೋಬ್ಬರಿ 6,911 ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದು, ಆಡಳಿತಾಧಿಕಾರಿಗಳ ಅವಧಿಯಲ್ಲಿ ನಗರದ ಶಾಸಕರುಗಳಿಗೆ ಹಬ್ಬದೂಟ ಕೊಟ್ಟಂತಾಗಿದೆ ಎನ್ನಲಾಗುತ್ತಿದೆ.
ಕಳೆದ ಬಾರಿಯ ಬಜೆಟ್ ನಲ್ಲಿ ಪಾಲಿಕೆಯ ವಿವಿಧ ಕಾಮಗಾರಿಗಳ ನಿರ್ವಹಣೆ, ದೈನಂದಿನ ಆಡಳಿತಕ್ಕೆ ಅವಶ್ಯ ಕಾರ್ಯಗಳನ್ನು ಹೊರತುಪಡಿಸಿ ಹೊಸ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿರಲಿಲ್ಲ. ಈ ವರ್ಷವೂ ಅದೇ ಸೂತ್ರವನ್ನು ಮುಂದುವರೆಸಿದ್ದಾರೆ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ.
22022-23 ಬಿಬಿಎಂಪಿ ಬಜೆಟ್ ಬಗ್ಗೆ ವ್ಯಕ್ತವಾದ ಅಭಿಪ್ರಾಯಗಳು :
“2022-23ನೇ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ರಾತ್ರೋರಾತ್ರಿ ಮಂಡಿಸಿದ್ದು ಸರಿಯಿಲ್ಲ. ನಗರದಲ್ಲಿ 198 ಮಾಜಿ ಕಾರ್ಪೊರೇಟರ್ ಗಳು, ಮಾಜಿ ಮೇಯರ್ ಗಳಿದ್ದರೂ ಒಬ್ಬರನ್ನು ಬಜೆಟ್ ತಯಾರಿ ಕುರಿತ ಚರ್ಚೆಗೆ ಆಹ್ವಾನಿಸಿ ಸಲಹೆ- ಸೂಚನೆ ಪಡೆದಿಲ್ಲ. ಕೇವಲ ಪ್ರಭಾವಿ ಸಚಿವರು, ಶಾಸಕರ ಅಣತಿ ಮೇರೆಗೆ ಬಜೆಟ್ ಮಂಡಿಸಿ ಅಧಿಕಾರಿಗಳು ಏಕಚಕ್ರಾಧಿಪತ್ಯ ಮೆರೆದಿದ್ದಾರೆ. ಸಾರ್ವಜನಿಕರು, ಸಂಘಸಂಸ್ಥೆಗಳ ಜೊತೆ ಚರ್ಚಿಸಿ, ಅವರ ಬೇಕು ಬೇಡಗಳನ್ನು ತಿಳಿದು ನಂತರ ಬಜೆಟ್ ಮಂಡಿಸಬೇಕಿತ್ತು.”
- ಜಿ.ಪದ್ಮಾವತಿ, ಬಿಬಿಎಂಪಿ ಮಾಜಿ ಮೇಯರ್
“ಮಾಜಿ ಮೇಯರ್ ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬೆಂಗಳೂರಿನ ವಿವಿಧ ವಾರ್ಡ್ ಗಳ ವಾಸ್ತವ ಪರಿಸ್ಥಿತಿ ತಿಳಿದಿರುವ ಮಾಜಿ ಕಾರ್ಪೊರೇಟರ್ ಗಳನ್ನು 2022-23ನೇ ಸಾಲಿನ ಬಜೆಟ್ ತಯಾರಿಗೆ ಮುನ್ನ ಕರೆದು ಚರ್ಚಿಸದೆ ಏಕಾ ಏಕಿ ರಾತ್ರಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಇಂದಿರಾ ಕ್ಯಾಂಟಿನ್ ನಂತಹ ಮಹತ್ವದ ಯೋಜನೆ ಕಾಯಕಲ್ಪ ಕಲ್ಪಿಸಿಲ್ಲ. ಪದೇ ಪದೇ ಬಿಬಿಎಂಪಿಯಲ್ಲೂ, ಸರ್ಕಾರದಿಂದಲೂ ಬೃಹತ್ ನೀರುಗಾಲುವೆಗಳಿಗೆ ನೂರಾರು ಕೋಟಿ ರೂ. ಮೀಸಲಿಟ್ಟರೂ ಈ ತನಕ ಕಾಮಗಾರಿ ಮುಗಿಸಿಲ್ಲ. ಜನರನ್ನು ಕತ್ತಲಲ್ಲಿಟ್ಟು ತಡರಾತ್ರಿಯಲ್ಲಿ ಅಧಿಕಾರಿಗಳು ಆಯವ್ಯಯ ಮಂಡಿಸಿದ ಬಗ್ಗೆ ಸಾರ್ವಜನಿಕರ ಚರ್ಚೆಯಾಗಬೇಕಿದೆ.”
- ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್
“ಮಾ.31ರ ಆರ್ಥಿಕ ವರ್ಷ ಮುಗಿಯುವ ಮುನ್ನ ಬಿಬಿಎಂಪಿ ಬಜೆಟ್ ಮಂಡಿಸಿದ್ದು ಸರಿಯಿದೆ. ಆದರೆ ರಾತ್ರಿ ವೇಳೆಯಲ್ಲಿ ಬಜೆಟ್ ಅನ್ನು ಪಾಲಿಕೆ ವೆಬ್ ಸೈಟ್ ನಲ್ಲಿ ಹಾಕಿದ್ದು ಯಾಕೆ ಅಂತ ತಿಳಿಯಲಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಿಯಂತ್ರಿತ ಬಿಬಿಎಂಪಿಯಲ್ಲಿನ ಬಜೆಟ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರವಾರು ಬಜೆಟ್ ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕರು, ಮಾಜಿ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ಮೂಡದೆ ಹಗ್ಗಜಗ್ಗಾಟದ ಕಾರಣ ರಾತ್ರಿ ಬಜೆಟ್ ಮಂಡನೆಯಾಗಿರಬಹುದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ. ನೆಪ ಮಾತ್ರಕ್ಕೆ ಕೆಲವು ಆಯ್ದ ನಗರದ ಸರ್ಕಾರೇತರ ಸಂಘ ಸಂಸ್ಥೆಗಳು, ನಾಗರೀಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಪಾಲಿಕೆ ಬಜೆಟ್ ನಲ್ಲಿ ಹೊಸತೇನು ಕಂಡಿಲ್ಲ. ಇರೋ ಯೋಜನೆಗಳನ್ನು ಪ್ರತಿ ಸಲವೂ ಪೂರ್ಣಗೊಳಿಸಲ್ಲ.”
- ಮುಕುಂದ್, ಸಂಸ್ಥಾಪಕ ಸದಸ್ಯರು, ಬೆಂಗಳೂರು ಪ್ರಜಾವೇದಿಕೆ