ಬೆಂಗಳೂರು, (www.bengaluruwire.com) : ಬಹುರೂಪಿ ಪ್ರಕಾಶನದ ‘ಅಕ್ಕಯ್’ ಕೃತಿಗೆ ‘ಪ್ರಕಟಣೆಯ ಉತ್ಕೃಷ್ಟತೆ’ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.
ಪ್ರಕಟಣಾ ಪ್ರಪಂಚದ ದೊಡ್ಡ ಸಂಸ್ಥೆಯಾದ ‘ಪಬ್ಲಿಷಿಂಗ್ ನೆಕ್ಸ್ಟ್’ ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ ‘ಬಹುರೂಪಿ ಪ್ರಕಾಶನ’ದ ‘ಅಕ್ಕಯ್’ ಕೃತಿ ಪ್ರಕಟಣೆಯ ಉತ್ಕೃಷ್ಟತೆಗೆ ಹಾಗೂ ‘ಕುಪ್ಪಳಿ ಡೈರಿ’ ಮುಖಪುಟ ವಿನ್ಯಾಸಕ್ಕಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ದೇಶ ವಿದೇಶದ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಅಂತಿಮವಾಗಿ ‘ಅಕ್ಕಯ್’ ಕೃತಿ ಪ್ರಕಟಣೆಯ ಉತ್ಕೃಷ್ಟತೆ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನವನ್ನು ಗಳಿಸಿತು.
ದೇಶದ ಸಾರ್ವಜನಿಕ ಸಂಪರ್ಕ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆ ‘ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ’ (ಪಿ ಆರ್ ಸಿ ಐ) ನಡೆಸುವ ಸಾರ್ವಜನಿಕ ರಂಗದ ವಾರ್ಷಿಕ ಪ್ರಶಸ್ತಿ ಸ್ಪರ್ಧೆಯಲ್ಲಿ ಪುಸ್ತಕ ಪ್ರಕಟಣಾ ವಿಭಾಗದಲ್ಲಿ ‘ಅಕ್ಕಯ್’ ಕೃತಿ ಪ್ರಕಟಣೆಯಲ್ಲಿನ ಉತ್ಕೃಷ್ಟತೆಗಾಗಿ ಬೆಳ್ಳಿ ಪದಕ ಗಳಿಸಿದೆ.
ನಾಡಿನ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ‘ಬಹುರೂಪಿ’ ಪ್ರಕಾಶನವನ್ನು ಮುನ್ನಡೆಸುತ್ತಿದ್ದು, ಸಂಸ್ಥೆಗೆ ಎರಡು ರಾಷ್ಟ್ರೀಯ ಪ್ರಶಸ್ತಿ ಬಂದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ‘ಈ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಓದುಗರಿಗೆ ಗುಣಮಟ್ಟದ ಸಾಹಿತ್ಯ ಒಳಗೊಂಡ ಉತ್ತಮ ಪುಸ್ತಕಗಳನ್ನು ನೀಡಬೇಕೆನ್ನುವುದೇ ನಮ್ಮ ಉದ್ದೇಶ’ ಎಂದಿದ್ದಾರೆ.
ಈ ಕೃತಿಯ ವಿನ್ಯಾಸಕ್ಕೆ ಎಸ್.ಎಂ ಸಾಗರ್, ಅರುಣ್ ಕುಮಾರ್.ಜಿ, ಛಾಯಾಗ್ರಾಹಕ ಮನುಕುಮಾರ್, ರೀಗಲ್ ಪ್ರಿಂಟರ್ಸ್ ವೆಂಕಟೇಶ್ ಅವರ ಕೊಡುಗೆಯಿದೆ.
‘ಅಕ್ಕಯ್’ ಕೃತಿ ಮೂಲತಃ ಸಾಮಾಜಿಕ ಹೋರಾಟಗಾರರೂ, ಲೈಂಗಿಕ ಅಲ್ಪಸಂಖ್ಯಾತರಾದ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥೆಯಾಗಿದ್ದು ಪ್ರೊ.ಡಿ.ಡೊಮಿನಿಕ್ ಅವರು ಇದನ್ನು ನಿರೂಪಿಸಿದ್ದಾರೆ.