ಎರಡು ವರ್ಷಗಳ ದಾಖಲೆ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರಕ್ಕೆ ಇಂದು ಚಿನ್ನದ ಹಬ್ಬದ ಸಂಭ್ರಮ. ಇಂದಿಗೆ ಐವತ್ತು ವರ್ಷಗಳ ಹಿಂದೆ 1972ರ ಮಾರ್ಚ್ 31ರಂದು ಬೆಂಗಳೂರಿನಲ್ಲಿ ನವೀಕೃತಗೊಂಡು ಉದ್ಘಾಟನೆಯಾದ ‘ಸ್ಟೇಟ್ಸ್’ ಹಾಗೂ ಇನ್ನಿತರ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿತು.
ಶ್ರೀನಿಧಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗೋಪಾಲ್ ಮತ್ತು ಆರ್.ಲಕ್ಷ್ಮಣ್ ನಿರ್ಮಾಣ ಮಾಡಿದ ಈ ವರ್ಣಚಿತ್ರ ಟಿ.ಕೆ.ರಾಮರಾವ್ ಅವರ ‘ಬಂಗಾರದ ಮನುಷ್ಯ ಕಾದಂಬರಿ ಆಧರಿಸಿತ್ತು. ಸಿದ್ಧಲಿಂಗಯ್ಯ ನಿರ್ದೇಶನ ಮಾಡಿದ ಚಿತ್ರಕ್ಕೆ ಭಾರ್ಗವ ಸಹಾಯಕ ನಿರ್ದೇಶಕರಾಗಿದ್ದರು.
ತಾರಾಗಣದಲ್ಲಿ ಡಾ.ರಾಜಕುಮಾರ್, ಭಾರತಿ, ಬಾಲಕೃಷ್ಣ, ಎಂ.ಪಿ.ಶಂಕರ್, ಶ್ರೀನಾಥ್, ಜೋಕರ್ ಶ್ಯಾಂ, ದ್ವಾರಕೀಶ್, ವಜ್ರಮುನಿ, ಲೋಕನಾಥ್, ನಾಗರಾಜ್, ಬೆಂ.ನಾಗೇಶ್, ಹೆಚ್.ಆರ್.ಶಾಸ್ತ್ರಿ, ಶನಿಮಹದೇವಪ್ಪ, ಗಣಪತಿಭಟ್, ಬಿ.ಹನುಮಂತಾಚಾರ್, ಆರತಿ, ಬಿ.ವಿ.ರಾಧ, ಆದವಾನಿ ಲಕ್ಷ್ಮೀದೇವಿ, ಕಲಾ, ಎಂ.ಎನ್.ಲಕ್ಷ್ಮೀದೇವಿ, ಜಾರ್ಜ್ ಇಂದಿರಾ, ಸುಶೀಲಾ, ಜಿ.ಶಾಂತಾ ಅಭಿನಯಿಸಿದ್ದರು.
ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ಸತತ ಎರಡು ವರ್ಷಗಳ ಕಾಲ ಪ್ರದರ್ಶನಗೊಂಡು ದಾಖಲೆ ಸೃಷ್ಟಿಸಿತು. ಚಲನಚಿತ್ರ ಬಿಡುಗಡೆಗೊಂಡ ಸಮಯದಲ್ಲಿ ಸಾವಿರಾರು ನಿರುದ್ಯೋಗಿ ಯುವಕರು ಚಿತ್ರದಿಂದ ಸ್ಫೂರ್ತಿಗೊಂಡು ವ್ಯವಸಾಯ, ಉದ್ದಿಮೆಗಳಲ್ಲಿ ತೊಡಗಿಕೊಂಡರು. ಚಲನಚಿತ್ರವೊಂದು ಗ್ರಾಮೀಣ ಯುಕರ ಜೀವನ ರೂಪಿಸಿಕೊಳ್ಳುವ ಮಾಧ್ಯಮವಾಗಿ ಪರಿಣಮಿಸಿದ್ದು ರಾಜಕುಮಾರ್ ಅವರ ಬದ್ಧತಾಪೂರ್ಣ ಅಭಿನಯದಿಂದ ಸಾಧ್ಯವಾಯಿತು.
ಹೃದಯ ಸ್ಪರ್ಶಿ ಕಥೆ ಹೊಂದಿದ್ದ ಸಿನಿಮಾ :
ಜಾನಪದ ಕಲೆಗಳಾದ ಹುಲಿವೇಷ ಮತ್ತು ಕೀಲುಕುದುರೆ ನೃತ್ಯವನ್ನು ಚಿತ್ರದಲ್ಲಿ ಅಳವಡಿಸಲಾಗಿತ್ತು. ರಾಜ್ಯ ಸರ್ಕಾರದಿಂದ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಬಾಲಕೃಷ್ಣ ಅವರಿಗೆ ಅತ್ಯುತ್ತಮ ಪೋಷಕ ನಟ, ಸಿದ್ಧಲಿಂಗಯ್ಯ ಅವರಿಗೆ ಅತ್ಯುತ್ತಮ ಚಿತ್ರನಾಟಕ ಕರ್ತೃ, ಡಿ.ವಿ.ರಾಜಾರಾಂ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ, ಪಿ.ಭಕ್ತವತ್ಸಲಂ ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿಗಳನ್ನು ನೀಡಲಾಯಿತು. ಅಕ್ಕನ ಮನೆ ಹಾಗೂ ಆ ಮನೆಯ ಮಕ್ಕಳನ್ನು ಕಾಪಾಡಲು ತನ್ನ ಸುಖಸಂತೋಷಗಳನ್ನೇ ಬಲಿಕೊಟ್ಟ ತ್ಯಾಗ ಜೀವಿಯ ಬದುಕಿನ ಸಂಘರ್ಷವನ್ನು ಚಿತ್ರಿಸುವ ಹೃದಯ ಸ್ಪರ್ಶಿ ಕಥೆಯನ್ನು ಚಿತ್ರ ಹೊಂದಿತ್ತು.
ಸಿದ್ದಲಿಂಗಯ್ಯ ಚಿತ್ರಕಥೆ ಬರೆದಿದ್ದು, ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ ರಚಿಸಿದ್ದರು. ಹುಣಸೂರು ಕೃಷ್ಣಮೂರ್ತಿ, ವಿಜಯನಾರಸಿಂಹ, ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್ ಗೀತೆಗಳನ್ನು ರಚನೆ ಮಾಡಿದ್ದರು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಚಿತ್ರದಲ್ಲಿ ಅಳವಡಿಸಿರುವ ಐದು ಗೀತೆಗಳನ್ನು ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮೋತಿ ಮತ್ತು ಪಿ.ಸುಶೀಲ ಹಾಡಿದ್ದರು. ಮೊದಲ ಬಾರಿಗೆ ಚಿತ್ರದ ಎಲ್ಲಾ ಹಾಡುಗಳು ತಲಾ ಎಂಟು ನಿಮಿಷಗಳ ಅವಧಿಯದ್ದಾಗಿತ್ತು.
ಪಿ.ಭಕ್ತವತ್ಸಲಂ ಸಂಕಲನ, ಡಿ.ವಿ.ರಾಜಾರಾಂ ಛಾಯಾಗ್ರಹಣ. ಉಡುಪಿ ಬಿ.ಜಯರಾಂ ಮತ್ತು ದೇವಿ ನೃತ್ಯ ನಿರ್ದೇಶನ, ವೈ.ಶಿವಯ್ಯ ಸಾಹಸ ಚಿತ್ರಕ್ಕಿತ್ತು. ಚಿತ್ರವನ್ನು ಯಥೇಚ್ಛವಾಗಿ ಹೊರಾಂಗಣದಲ್ಲಿ ಚಿತ್ರಿಕರಣ ಮಾಡಲಾಯಿತು. ಉಳಿದಂತೆ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಚಿತ್ರಿಸಲಾಗಿತ್ತು.
ನಗುನಗುತಾ ನಲಿ ನಲಿ (ಹುಣಸೂರು), ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು (ಹುಣಸೂರು ಕೃಷ್ಣಮೂರ್ತಿ), ಆಗದು ಎಂದು ಕೈಲಾಗದು ಎಂದು (ಆರ್.ಎನ್.ಜಯಗೋಪಾಲ್), ಆಹಾ ಮೈಸೂರು ಮಲ್ಲಿಗೆ (ಚಿ.ಉದಯಶಂಕರ್) ಮತ್ತು ಹನಿ ಹನಿ ಗೂಡಿದ್ರೆ ಹಳ್ಳ (ವಿಜಯನಾರಸಿಂಹ) ಗೀತೆಗಳು ಈ ಚಿತ್ರದಲ್ಲಿವೆ.
ಚಿತ್ರ ಬಿಡುಗಡೆ ನಂತರ ಶತದಿನೋತ್ಸವ ಸಮಾರಂಭದ ಸಮಯದಲ್ಲಿ ‘ಬಂಗಾರದ ಮನುಷ್ಯ’ ರೂಪಿಸಿದ ಸಂಭ್ರಮ, ಕಲಾವಿದರು, ತಂತ್ರಜ್ಞರ ಅನಿಸಿಕೆಗಳನ್ನು ಒಳಗೊಂಡ ಕಿರುಹೊತ್ತಿಗೆಯೊಂದನ್ನು ಬಿಡುಗಡೆ ಮಾಡಲಾಗಿತ್ತು.
ಮನಸ್ಸಿನಂತೆ ಮಹದೇವ: ಡಾ.ರಾಜಕುಮಾರ್
ಈ ಹೊತ್ತಿಗೆಯಲ್ಲಿ ದಾಖಲೆಯಾಗಿರುವ ಡಾ.ರಾಜಕುಮಾರ್ ಅವರ ಅನಿಸಿಕೆ: “ನನ್ನ ಕೆಲಸದಲ್ಲಿ ಸದಾ ಅತೃಪ್ತಿ ನನಗೆ. ಎಷ್ಟೇ ಶ್ರಮ ವಹಿಸಿ ಅಭಿನಯಿಸಿದರೂ, ಚಿತ್ರ ನೋಡಿದಾಗ ಇನ್ನೂ ಚೆನ್ನಾಗಿ ಮಾಡಬೇಕಾಗಿತ್ತು ಎಂಬ ಭಾವನೆ. ಇದ್ದಿದ್ದರಲ್ಲಿ ‘ಮಂತ್ರಾಲಯ ಮಹಾತ್ಮೆ’ ಚಿತ್ರವೊಂದೇ ನನಗೆ ಸ್ವಲ್ಪಮಟ್ಟಿಗೆ ತೃಪ್ತಿ ಕೊಟ್ಟಿದ್ದು; ಮನಸ್ಸು ಶುದ್ಧಿ ಮಾಡಿದ್ದು.
ಇಂದು ಶತದಿನೋತ್ಸವದು ನಡೆದಿರುವ ‘ಬಂಗಾರದ ಮನುಷ್ಯ’ನನ್ನು ಕಂಡಾಗ ನನಗನ್ನಿಸಿದ್ದು ಇಷ್ಟೇ: “ನಿರ್ಮಾಪಕರ, ಕಲಾವಿದರ, ತಂತ್ರಜ್ಞರ ಸಂಪೂರ್ಣ ಶ್ರದ್ಧೆ, ಶ್ರಮ, ಸಹಕಾರಗಳ ಬಲದಿಂದ ದಿಟ್ಟತನದಿಂದ ಮೂರ್ತಿವೆತ್ತ!” ಎಂದು.
ಚಿತ್ರದ ಪ್ರತಿ ಹಂತದಲ್ಲಿಯೂ, ಎಷ್ಟೇ ವೆಚ್ಚವಾದರೂ ಸರಿ, ಚಿತ್ರ ಚೆನ್ನಾಗಿರಬೇಕು ಎಂಬ ಒಂದೇ ಹಟದಿಂದ, ಧಾರಾಳವಾಗಿ ಹಣ ಸುರಿದರು ನಿರ್ಮಾಪಕರು. ಅವರ ಆಸೆ ಎಷ್ಟರ ಮಟ್ಟಿಗೆ ನೆರವೇರಿದೆ ಎನ್ನುವುದು ಪ್ರೇಕ್ಷಕರಾದ ನಿಮಗೇ ಗೊತ್ತಿದೆ. ಅದಕ್ಕೆ ಹಿರಿಯರು ಹೇಳಿದರು” ಮನಸ್ಸಿನಂತೆ ಮಹದೇವ ಎಂದು.
ನಿರ್ವಂಚನೆಯಿಂದ ಸಮಸ್ತವನ್ನೂ ತ್ಯಾಗ ಮಾಡಿದ ನಾಯಕ :
ಇದೇ ನೆನಪಿನ ಸಂಚಿಕೆಯಲ್ಲಿ ; ಬಂಗಾರದ ಮನುಷ್ಯ’ ಕಾದಂಬರಿಕಾರ ಟಿ.ಕೆ.ರಾಮರಾವ್ ಅಭಿಪ್ರಾಯ ಹೀಗಿದೆ:
“ನಟಸಾರ್ವಭೌಮ ರಾಜಕುಮಾರ್ ಹೊರತು ಮತ್ತಾರು ರಾಜೀವನ ಪಾತ್ರ ವಹಿಸಲು ಸಾಧ್ಯ? ಚಿತ್ರವು ಸುಖಾಂತ್ಯವಾದರೆ ಕಾದಂಬರಿಗೆ ಅಪಚಾರ! ರಾಜಕುಮಾರ್ ಅವರ ದುಃಖಾಂತ ಚಿತ್ರವನ್ನು ಪ್ರೇಕ್ಷಕರು ಸಹಿಸುವರೇ ? ಚಿತ್ರೀಕರಣದ ಈ ಜಿಜ್ಞಾಸೆಯ ಮಾತುಗಳು ಬಿಸಿಯಲ್ಲಿರುವಾಗಲೇ ನನ್ನ ಆತ್ಮೀಯ ಗೆಳೆಯ ರಾದ ಪತ್ರಕರ್ತರೊಬ್ಬರು ರಾಜಕಮಲ್ ಆರ್ಟ್ಸ್ ಮತ್ತು ಶ್ರೀನಿಧಿ ಪ್ರೊಡಕ್ಷನ್ಸ್ ಅವರಿಗೆ ನನ್ನ ಪರಿಚಯ ಮಾಡಿಸಿದರು.
ನಿರ್ಮಾಪಕರಾದ ಗೋಪಾಲ್ ಲಕ್ಷ್ಮಣ್ ಹಾಗೂ ಕೆ.ಸಿ.ಎನ್. ಗೌಡರು ನನ್ನ ಭೇಟಿಗೆ ಎಷ್ಟೋ ತಿಂಗಳ ಮೊದಲೆ ಬಂಗಾರದ ಮನುಷ್ಯನ ಪಾತ್ರಕ್ಕೆ ರಾಜಕುಮಾರ್‌ರನ್ನು ಹೊಂದಿಸಿದ್ದರೆಂಬುದು ನಂತರ ತಿಳಿಯಿತು. ದೊಡ್ಡತನ, ದೊಡ್ಡ ಉದ್ದೇಶ ಮೇಲಾಗಿ ದೊಡ್ಡ ಹೃದಯ ಹೊಂದಿದ ಈ ಮೂವರಿಂದಾಗಿ ಬಂಗಾರದ ಮನುಷ್ಯ ಅದ್ದೂರಿಯಿಂದ, ಭವ್ಯವಾಗಿ ಸೆಟ್ ಏರಿತು. ಅಪಾರ ವೆಚ್ಚದ ಹೊರಾಂಗಣ ಚಿತ್ರೀಕರಣ, ಕಣ್ಮನ ತಣಿಸುವ ದೃಶ್ಯ ಪ್ರಸಂಗಗಳೊಂದಿಗೆ ಈಸ್ಟಮನ್ ವರ್ಣದಲ್ಲಿ ನಿರ್ಮಾಣ ಸಾಗಿತು.
ಮುಹೂರ್ತದಂದು ಮೇಕಪ್ ಕೋಣೆಯಲ್ಲಿದ್ದ ರಾಜಕುಮಾರ್ ಅವರಿಗೆ ಗೋಪಾಲ್ ನನ್ನ ಪರಿಚಯ ಮಾಡಿಸಿದರು. “ಬಹಳ ಸೊಗಸಾಗಿ ಕಾದಂಬರಿ ಬರೆದಿದ್ದೀರಿ. ನಾನೇ ಓದಿ ಮೆಚ್ಚಿದ್ದು. ಬಹಳ ಸಂತೋಷ” ಎಂದಿದ್ದರು. ವರನಟನಿಗೆ ಅಂದು ಇಪ್ಪತ್ತರ ಹರೆಯ ಉಮ್ಮಳಿಸುವ ಉತ್ಸಾಹ. ರಾಜೀವನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ನಿಲುವು, ಮುಖಮಂಡಲ.
“ಲಕ್ಷ್ಮಿ ಬಾ ಇಲ್ಲಿ”ಎಂದು ಹಳ್ಳಿಯ ಭವ್ಯ ಮನೆಯ ಮುಂದೆ ನಿಂತು ಪ್ರಥಮವಾಗಿ ಕ್ಯಾಮರಾಕ್ಕೆ ನಿಂತ ರಾಜಕುಮಾರ್, ನಾನು ಕಲ್ಪಿಸಿಕೊಂಡ ರಾಜೀವನನ್ನೂ ಮೀರಿಸಿದ್ದರು. ಪಾತ್ರವನ್ನು ಆಳವಾಗಿ ಅರಿತು ನಿರಂತರ ವಾಗಿ ಅಭಿನಯಿಸಿದರು. ಕಥಾ ನಾಯಕಿ ಲಕ್ಷ್ಮಿ ಸತ್ತು ಅವಳ ದೇಹ ಮನೆಯ ಮುಂದೇ ಇರಿಸಿದ್ದ ಅಂದಿನ ಚಿತ್ರೀಕರಣ ದೃಶ್ಯ ಇನ್ನೂ ನೆನಪಿಂದ ಸರಿದಿಲ್ಲ. ಗೋಪಾಲ್ ಆ ದೃಶ್ಯದ ನೈಜತೆಗೆ ಮಾರು ಹೋಗಿ ದುಃಖ ತಡೆಯಲಾಗದೆ ಸೆಟ್‌ನಿಂದ ಹೊರಬಂದರು. ಅಂತೆಯೇ ಇನ್ನೊಂದು ಪ್ರಸಂಗ. ರಾಜೀವ ಸಮಸ್ತವನ್ನೂ ತ್ಯಾಗ ಮಾಡಿ ಮನೆ ಬಿಟ್ಟು ಹೊರಡುವ ಮೊದಲು ಪ್ರದರ್ಶಿಸುವ ಮುಖಭಾವ. ನನ್ನ ನೆನಪಿನ ಪಟಲದ ಮೇಲೆ ಇನ್ನೂ ಅಚ್ಚಳಿಯದೆ ನಿಂತಿದೆ. ಉಮ್ಮಳಿಸಿದ ದುಃಖ, ನಿರಾಶೆಯನ್ನು ವರನಟ ರಾಜಕುಮಾರ್ ಮುಖದಲ್ಲಿ ಪ್ರಕಟಿಸುವಾಗ ಒಂದೇ ಟೇಕ್‌ನಲ್ಲಿ ಗ್ಲಿಸರಿನ್ ನೆರವಿಲ್ಲದೆ ಕಣ್ಣುಗಳಲ್ಲಿ ನಿರೂರಿಸಿದುದನ್ನು ಕಂಡು ಅವಾಕ್ಕಾಗಿ ನಿಂತಿದ್ದೆ.
ಅವ್ಯಾಹತವಾಗಿ ಆರು ತಿಂಗಳು ಸಾಗಿದ ಚಿತ್ರೀಕರಣ ಒಂದು ದೀರ್ಘ ಹಬ್ಬ, ಸಮಾರಂಭಗಳ ಸರಣಿಯಂತಿತ್ತು. ನಿರ್ಮಾಪಕ ಆರ್.ಲಕ್ಷ್ಮಣ್ ಅವರದು ಅವಿಶ್ರಾ೦ತ ದುಡಿಮೆ. ಸಣ್ಣ ಅಂಶವನ್ನೂ ಕಣ್ಣಲ್ಲಿ ಕಣ್ಣಿರಿಸಿ ಅಸಡ್ಡೆ ನುಸುಳದಂತೆ ಗಮನಿಸಿ ನಿರ್ವಹಿಸಿದರು. ನಿರ್ಮಾಪಕ, ನಿರ್ದೇಶಕ, ಕ್ಯಾಮರಾಮನ್, ಮೇಕಪ್’ಮನ್, ಲೈಟ್’ಬಾಯ್ ಎಲ್ಲರದೂ ಉತ್ಸಾಹಭರಿತ ಸಹಕಾರ, ದುಂಬಿಗಳ ದುಡಿತ.
ನಿರ್ಮಾಪಕರು, ನಿರ್ದೇಶಕರು ಕಾದಂಬರಿಗೆ ಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಓದುಗರ ರಾಜೀವನಿಗೂ, ಪ್ರೇಕ್ಷಕರ ರಾಜೀವನಿಗೂ ಶಕ್ತಿ ಮೀರಿ ಸಾಮರಸ್ಯ ಕಲ್ಪಿಸಿ, ಅಗತ್ಯ ಬದಲಾವಣೆಗಳಿಗೆ ನನ್ನೊಡನೆ ಸಮಾಲೋಚನೆ ನಡೆಸಿ, ಕಾದಂಬರಿಯ ಕಥಾವಸ್ತುವಿನ ಸತ್ವವನ್ನು ಕಾಪಾಡುವ ಸೌಜನ್ಯ ತೋರಿದ್ದಾರೆ. ಕಾದಂಬರಿಯಲ್ಲಿ ಕಾಣುವ ಒಂದೊಂದು ಅಂಶಕ್ಕೂ ಆಸಕ್ತಿಯಿಂದ ಶ್ರಮಿಸಿದ್ದಾರೆ. ನೇರಳೆಗುಡ್ಡದ ಬುಡದ ಕಗ್ಗಲ್ಲು ಜಮೀನನ್ನು ಹದಗೊಳಿಸುವುದು, ಹಳ್ಳಿಯ ಭವ್ಯ ಮನೆಯಲ್ಲಿನ ವಸ್ತುಗಳು, ಜಾತ್ರೆಗಾಗಿ ಹೊರಡುವ ಬಣ್ಣದ ಗಾಡಿ, ಲಕ್ಷ್ಮಿ ಉಡುವ ಕೆಂಪು ಸೀರೆ, ಹೋರಿಯ ಪ್ರಕರಣ……..ಒಂದೊಂದು ಸಣ್ಣ ಅಂಶವನ್ನೂ ನಿರ್ಲಕ್ಷಿ ಸದೆ ಚಿತ್ರದಲ್ಲಿ ಅಳವಡಿಸಿ, ಚಿತ್ರವನ್ನು ದಿಟ್ಟೆದೆಯಿಂದ ದುಃಖಾಂತಗೊಳಿಸಿ ಕೃತಿಯ ಸತ್ವವನ್ನು ಹಿಡಿದಿಟ್ಟ ನಿರ್ಮಾಪಕರಿಗೆ ನಾನು ಆಭಾರಿ, ಲೇಖಕನಿಗೆ ಇದಕ್ಕೂ ಮಿಗಿಲಾದ ಪುರಸ್ಕಾರವೇನಿದೆ ?
ಬಂಗಾರದ ಮನುಷ್ಯ” ಸಾಕಷ್ಟು ಬಂಗಾರದ ಗಟ್ಟಿ ಗಳನ್ನೇ ಕರಗಿಸಿಕೊಂಡು ಹೊರಬಂದಿದ್ದಾನೆ. ಹದಿಮೂರು ಲಕ್ಷ ರೂ. ವೆಚ್ಚದಲ್ಲಿ. ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆಗಳನ್ನು ಸ್ಥಾಪಿಸಿರುವ ಈ ಭವ್ಯ ಚಿತ್ರಕ್ಕೆ ಮುಕ್ಕೋಟಿ ಕನ್ನಡಿಗರ ನಾಯಕ ರಾಜಕುಮಾರ್ ಜೀವನಾಡಿ. ಕಾದಂಬರಿಯ ರಾಜೀವ ನನ್ನು ಮೀರಿಸುವಂತೆ ಕಾಣುವ ಅವರ ಅಭಿನಯ ಚಿರಸ್ಮರಣೀಯ. ಅನ್ಯಾಭಾಷಾ ನಟರಿಗೂ ಅದು ಅನುಕರಣೀಯ. ಚಿತ್ರದ ಕಡೆಯ ಹದಿನೈದು ನಿಮಿಷ ಗಳಂತೂ ವರ್ಣನಾತೀತ. ತಾನೇ ಕಾಪಿಟ್ಟ ಪರಿಸರದ ದೃಷ್ಟಿ ದೋಷಕ್ಕೆ ತುತ್ತಾಗಿ, ಸಮಸ್ತವನ್ನೂ ನಿರ್ವಂಚನೆಯಿಂದ ತ್ಯಾಗಮಾಡಿ, ಆದರ್ಶದ ಸಾಕಾರ ವಾಗಿ ಪ್ರೇಕ್ಷಕರ ಕಲ್ಲೆದೆ ಕರಗಿಸಿ ಕಣ್ಣು ತೋಯಿಸಿ ದಿಗಂತದ ದಿಶೆಗೆ ರಾಜೀವ ಹೆಜ್ಜೆ ಇರಿಸುವುದು ನಿಜಕ್ಕೂ ಅಪೂರ್ವ ದೃಶ್ಯ. ನಟಸಾರ್ವಭೌಮನ ಅಭಿನಯ ವೈಖರಿಯ ಗರಿಷ್ಠ ಮಟ್ಟದ ಪ್ರದರ್ಶನ, ಮೈನವಿರೇಳಿ ಸುವ ಆ ದೃಶ್ಯ ಚಿರನೂತನ”
- ಅ.ನಾ.ಪ್ರಹ್ಲಾದರಾವ್, ಹಿರಿಯ ಚಲನಚಿತ್ರ ಲೇಖಕರು ಹಾಗೂ ಕನ್ನಡ ಪದಬಂಧ ಲೇಖಕರು