ನವದೆಹಲಿ, (www.bengaluruwire.com) : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಯುಗಾದಿ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶುಭಸುದ್ದಿ ನೀಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (Dearness Allowance- DA) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿ.ಆರ್)ದ ಹೆಚ್ಚುವರಿ ಕಂತನ್ನು 01.01.2022 ರಿಂದ ಅನ್ವಯವಾಗುವಂತೆ ಹಾಲಿ ಇರುವ ಮೂಲ ವೇತನ ಮತ್ತು ಪಿಂಚಣಿಯ ಶೇ.31ರ ದರಕ್ಕೆ ಶೇ.3ರಷ್ಟು ಹೆಚ್ಚಳ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಲೆ ಏರಿಕೆಯನ್ನು ಸರಿದೂಗಿಸಲು ಶೇ.3ರ ತುಟ್ಟಿಭತ್ಯೆ ನೀಡಲು ಅನುಮೋದನೆ ನೀಡಿದೆ. ಇದರಿಂದ ದೇಶದಲ್ಲಿನ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಒಪ್ಪಿತ ಸೂತ್ರಕ್ಕೆ ಅನುಗುಣವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರಗಳೆರಡರಿಂದಲೂ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕ 9,544.50 ಕೋಟಿ ರೂ. ಒಟ್ಟಾರೆ ಹೊರೆಯಾಗಲಿದೆ.