ಬೆಂಗಳೂರು, (www.bengaluruwire.com) : ಡಾ. ರಾಜ್‌ಕುಮಾರ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ‘ನಮ್ಮ ದೃಷ್ಟಿ – ನಮ್ಮ ಕರ್ನಾಟಕ’ (Namma Drishti Namma Karnataka) ಅರಿವು ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ನಮ್ಮ ದೃಷ್ಟಿ – ನಮ್ಮ ಕರ್ನಾಟಕ ” ಅಭಿಯಾನಕ್ಕೆ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರನ್ನು ರಾಯಭಾರಿಯನ್ನಾಗಿಸಿದೆ. ಈ ಹಿನ್ನಲೆಯಲ್ಲಿ ಅವರು ಬದುಕಿದ್ದಾಗ ‘ಕಣ್ಣಿನ ದೃಷ್ಟಿ’ಯ ಪ್ರಾಮುಖ್ಯತೆ ಮತ್ತು ಕಣ್ಣು ಪರೀಕ್ಷೆ ಕುರಿತಂತೆ ಶೂಟಿಂಗ್ ಮಾಡಿದ್ದ ಸಂಕಲಿತ ವಿಡಿಯೋವನ್ನು ಅವರ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಟ್ವಿಟರ್ ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಡಾ.ಪುನೀತ್ ರಾಜ್ ಕುಮಾರ್ ‘ಸೂರ್ಯ ಮುಳುಗುವುದನ್ನು ನಾವೆಲ್ಲ ನೋಡಿದ್ದೇವೆ. ಸಂಜೆಯ ಸೂರ್ಯ ಹಂತ ಹಂತವಾಗಿ ಮುಳಗುತ್ತಾನೆ. ಹಾಗೆಯೇ ಕಣ್ಣಿನ ದೃಷ್ಟಿ ಕೆಲವೊಮ್ಮೆ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಕಣ್ಣಿನಲ್ಲಿ ನೀರು ಬರುವುದು, ಮಂಜಾಗುವುದನ್ನು ನಿರ್ಲಕ್ಷಿಸದೆ ಹತ್ತಿರದ ಅಧಿಕೃತ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಚಿಕಿತ್ಸೆ ಪಡೆದುಕೊಳ್ಳಿ. ಒಮ್ಮೆ ಕಣ್ಣಿನ ದೃಷ್ಟಿ ಹೋದರೆ ಪುನಃ ಬರುವುದಿಲ್ಲ.’ ಎಂಬ ಮಹತ್ವದ ಸಂದೇಶವನ್ನು ಆ ವಿಡಿಯೋದಲ್ಲಿ ಹೇಳಿದ್ದಾರೆ.
‘ಇದು ಡಾ.ಪುನೀತ್ ಅವರ ಸಾಮಾಜಿಕ ಕಳಕಳಿ, ಅವಕಾಶ ವಂಚಿತರಿಗೆ ದೃಷ್ಟಿಯನ್ನು ಕಲ್ಪಿಸುವ ಸಲುವಾಗಿ ಇದ್ದ ಬದ್ಧತೆ, ದೂರದೃಷ್ಠಿತ ಹಾಗೂ ನಿಷ್ಠೆಗೆ ನಾವು ಸಲ್ಲಿಸುವ ಭಾವಪೂರ್ಣ ಗೌರವ.’ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.