ಬೆಂಗಳೂರು, (www.bengaluruwire.com) : ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನ ಒಂಭತ್ತು ಮಂದಿ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ACB) ದಾಳಿ ಮಾಡಿದೆ. ಬಿಡಿಎ ಅಧಿಕಾರಿಗಳೊಂದಿಗೆ ಸೇರಿ ಭ್ರಷ್ಟಾಚಾರ, ಅಕ್ರಮ- ಅವ್ಯವಹಾರದಲ್ಲಿ ತೊಡಗಿದ್ದ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಏಕಕಾಲದಲ್ಲಿ ಎಸಿಬಿ ಎಸ್ ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ.
ಚಾಮರಾಜಪೇಟೆಯ ಬಿ.ಎನ್.ರಘು, ಆರ್’ಟಿ ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್ನ ಲಕ್ಷ್ಮಣ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಈ ಹಿಂದೆ ಬಿಡಿಎ ಕಚೇರಿಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಹಲವು ಅಕ್ರಮಗಳನ್ನು ಪತ್ತೆಮಾಡಿದ್ದರು. ಅಧಿಕಾರಿಗಳ ಮನೆಯಲ್ಲಿ, ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಖಾಸಗಿ ಬ್ರೋಕರ್ ಗಳ ಪಾತ್ರದ ಕುರಿತು ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ತನಿಖಾ ಸಂಸ್ಥೆ, ಕಾರ್ಯಾಚರಣೆ ಕೈಗೊಂಡಿದೆ. ಮದ್ಯವರ್ತಿಗಳ ಮನೆಗಳಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನ, ಬೆಳ್ಳಿ, ವಜ್ರಾಭರಣ, ಆಸ್ತಿ ದಾಖಲೆಗಳು ಪತ್ತೆಯಾಗಿದೆ.
ಮಂಗಳವಾರದ ಎಸಬಿ ದಾಳಿಗೆ ಕಾರಣ ಇದು :
ದಾಳಿಗೆ ಮುಖ್ಯ ಕಾರಣ ಕೆಂಪೇಗೌಡ ಲೇಔಟ್ನಲ್ಲಿ ಬದಲಿನಿವೇಶನ ಹಂಚಿಕೆ ಎಂದು ತಿಳಿದುಬಂದಿದೆ. ರೈತರ ಹೆಸರಲ್ಲಿ ಅಧಿಕಾರಿಗಳ ಜೊತೆಗೂಡಿ ಬದಲಿ ನಿವೇಶನ ಪಡೆದಿರುವ ಆರೋಪ ಕೇಳಿಬಂದಿದೆ. ರೈತರಿಗೆ ಬದಲಿ ನಿವೇಶನ ನೀಡುವ ಹೆಸರಲ್ಲಿ ಮಧ್ಯವರ್ತಿಗಳಿಂದ ಭ್ರಷ್ಟಾಚಾರ ಎಸಗಲಾಗಿದೆ. ಗೋಮಾಳ ಭೂಮಿಯನ್ನ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿ, ಗೋಮಾಳ ಜಾಗಕ್ಕೆ ಮಧ್ಯವರ್ತಿಗಳು ಪರಿಹಾರ ಪಡೆದಿದ್ದಾರೆ.
ಬೆಂಗಳೂರಿನ ಉಳ್ಳಾಲ ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ (RTO) ಕಚೇರಿ ಬಳಿಯಿರುವ ಬಿಡಿಎ ಮಧ್ಯವರ್ತಿ ಚಿಕ್ಕಹನುಮಯ್ಯನ ಎರಡು ಅಂತಸ್ತಿನ ಮನೆ ಮೇಲೆ ಬೆಳಗಿನಜಾವ 5 ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಸೇರಿ 7 ಸಿಬ್ಬಂದಿಯಿಂದ ಶೋಧಕಾರ್ಯ ನಡೆದಿದ್ದು, ಅಧಿಕಾರಿಗಳಿಂದ ಮನೆ ಮುಂದೆ ನಿಲ್ಲಿಸಿರುವ ಕಾರುಗಳ ಪರಿಶೀಲನೆ ಮಾಡಲಾಗಿದೆ. ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಪೆಟ್ರೋಲ್ ಬಂಕ್ ಕೂಡ ಹೊಂದಿರುವ ಚಿಕ್ಕಹನುಮಯ್ಯ, ಸಾಕಷ್ಟು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ.
ಆರ್.ಟಿ ನಗರದ ಸೆಕೆಂಡ್ ಬ್ಲಾಕ್ನಲ್ಲಿರುವ ಬಿಡಿಎ ಬ್ರೋಕರ್ ಮೋಹನ್ ಐಶಾರಾಮಿ ಮನೆ ಮೇಲೆ ಕೂಡ 9 ಜನ ಅಧಿಕಾರಗಳಿಂದ ದಾಳಿ ಮಾಡಲಾಗಿದೆ. ಡಿವೈಎಸ್ ಪಿ ಪ್ರಕಾಶ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ ಸೇರಿ ಒಟ್ಟು 9 ಮಂದಿ ಅಧಿಕಾರ ತಂಡದಿಂದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮೋಹನ್ ಮನೆಯಲ್ಲಿ 4.90 ಕೆಜಿ ಚಿನ್ನಾಭರಣ, 15.02 ಕೆಜಿ ಬೆಳ್ಳಿ ಹಾಗೂ 61.9 ಗ್ರಾಮ್ ವಜ್ರಾಭರಣ (600 ಸೆಂಟ್ಸ್) ಪತ್ತೆಯಾಗಿದೆ.
ಭವ್ಯ ಬಂಗಲೆಯೊಳಗೆ ಸ್ವಿಮ್ಮಿಂಗ್ ಪೂಲ್, ಜಿಮ್ :
ಮಧ್ಯವರ್ತಿ ತೇಜು ಅಲಿಯಾಸ್ ತೇಜಸ್ ಮನೆ ಮೇಲೆ ದಾಳಿ ಮಾಡಲಾಗಿದೆ. ಆರ್ ಆರ್ ನಗರದಲ್ಲಿ ತೇಜು ಭವ್ಯ ಬಂಗಲೆ ಹಾಗೂ ಮನೆಯೊಳಗೆ ಈಜುಕೊಳ ಹೊಂದಿದ್ದಾನೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಮನೆ ಪಕ್ಕದಲ್ಲೇ ತೇಜು ಮನೆಯನ್ನು ಹೊಂದಿದ್ದಾನೆ.
ಬ್ರೋಕರ್ ಮುನಿರತ್ನ ಅಲಿಯಾಸ್ ರತ್ನವೇಲುಗೆ ಸೇರಿದ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ.
ಮುನಿರತ್ನನ ಐಷಾರಾಮಿ ಮನೆ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಈ ಮನೆಯಲ್ಲಿ ಈಜುಕೊಳ, ಜಿಮ್ ಕೂಡ ಇದೆ. ಎಸಿಬಿ ಅಧಿಕಾರಿಗಳು ಆತನ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ.
ದೊಮ್ಮಲೂರಿನ ಬಿಡಿಎ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ- ವಿದೇಶಗಳ ಪ್ರತಿಷ್ಠಿತ ಬ್ರಾಂಡ್ನ 19 ಸನ್ ಗ್ಲಾಸ್ ಹಾಗೂ 22 ಗಡಿಯಾರಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಎಸಿಬಿ ಅಧಿಕಾರಿಗಳು ಬಿಡಿಎ ಏಜಂಟ್, ಬ್ರೋಕರ್ ಗಳ ಮನೆಯಲ್ಲಿ ತನಿಖೆ ಮುಂದುವರೆಸಿದ್ದಾರೆ.