ನೋಯ್ಡಾ, ಉತ್ತರಪ್ರದೇಶ (www.bengaluruwire.com) : ಕಾಲಿಗೆ ಚಕ್ರ ಕಟ್ಟಿಕೊಂಡು ಜಿಂಕೆಯಂತೆ ಪ್ರತಿ ದಿನ ಕೆಲಸದಿಂದ ಮನೆಗೆ ಓಡುತ್ತಿರುವ ಈ ಯುವಕನ ಕಣ್ಣಲ್ಲಿ ದೊಡ್ಡ ಕನಸಿದೆ. ಈ ಕನಸು ನನಸಾಗಲು ಪ್ರತಿ ದಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮುಗಿಸಿ ಮನೆಗೆ ಓಡಿಕೊಂಡೇ ಹೋಗುತ್ತಿದ್ದಾನೆ. ಈ ಯುವಕನ ಹೆಸರು ಪ್ರದೀಪ್ ಮೆಹ್ರಾ #PradeepMehra.
ಸೋಶಿಯಲ್ ಮೀಡಿಯಾದಲ್ಲಿ ಈತನ ಓಟದ ವಿಡಿಯೋ ತುಂಬಾ ವೈರಲ್ ಆಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಶೇರ್ ಆಗುತ್ತಿದೆ.
ಉತ್ತರಾಖಂಡ, ಅಲ್ಮೊರಾದ ಈ ಯುವಕ ಪ್ರತಿದಿನ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸ ಮುಗಿಸಿ ರಾತ್ರಿ 10 ಕಿ.ಮೀ. ಓಡಿಕೊಂಡೇ ಮನೆಗೆ ತಲುಪುತ್ತಾನೆ. ಚಿತ್ರ ನಿರ್ಮಾಪಕ ವಿನೋದ್ ಕಾಪ್ರಿ (#VinodKapri) ಕಾರಿನಲ್ಲಿ ರಾತ್ರಿ ರಸ್ತೆಯಲ್ಲಿ ಸಾಗುವಾಗ ಈತ ಹೀಗೆ ಓಡುತ್ತಿದ್ದನ್ನು ಕಂಡು ಡ್ರಾಪ್ ಕೊಡುತ್ತೇನೆ ಎಂದಾಗ, ಪ್ರದೀಪ್ ಮೆಹ್ರಾ ಕೊಟ್ಟ ಕಾರಣ ವಿನೋದ್ ಕಾಪ್ರಿ ಅವರ ಕುತೂಹಲ ಹಾಗೂ ಆ ಯುವಕನ ಮೇಲಿನ ಗೌರವ ಹೆಚ್ಚುವಂತೆ ಮಾಡಿತು.
ಯಾಕೆ ಗೊತ್ತಾ? 19 ವರ್ಷದ ಪ್ರದೀಪ್ ಮೆಹ್ರಾ, ಭಾರತೀಯ ಸೇನೆ ( #IndianArmy ) ಸೇರಲೆಂದು ಓಡುವುದನ್ನು ಅಭ್ಯಾಸ ಮಾಡಲು ಈ ರೀತಿ ದಾರಿ ಕಂಡುಕೊಂಡಿದ್ದ. ಊರಿನಲ್ಲಿ ಆಸ್ಪತ್ರೆ ಸೇರಿರುವ ತಾಯಿ ಒಂದು ಕಡೆ, ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಅಣ್ಣನೊಂದಿಗೆ ನೋಯ್ಡಾದಲ್ಲಿ ನೆಲೆಸಿರುವ ಈ #PradeepMehra ಬೆಳಗ್ಗೆ ಬೇಗ ಮನೆಯಲ್ಲಿ ಅಡುಗೆ ಮಾಡಿ ಮ್ಯಾಕ್ ಡೊನಾಲ್ಡ್ ನಲ್ಲಿ ಕೆಲಸಕ್ಕೆ ಹೋಗಿ, ತಡರಾತ್ರಿ ಮನೆಗೆ 10 ಕಿ.ಮೀ ಓಡುತ್ತಲೇ ಮನೆ ಸೇರುತ್ತಾನೆ.
ಚಿತ್ರ ನಿರ್ಮಾಪಕ ವಿನೋದ್ ಕಾಪ್ರಿ ಕಾರಿನಲ್ಲಿ ಸಾಗುತ್ತಲೇ ಪ್ರದೀಪ್ ಮೆಹ್ರಾ ಓಟದ ವಿಡಿಯೋವನ್ನು ಮಾಡಿದ್ದಾರೆ. ಈ ಸ್ಪೂರ್ತಿದಾಯಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ದೇಶಾದ್ಯಂತ ಈಗ ವೈರಲ್ ಆಗಿದೆ.