ಬೆಂಗಳೂರು, (www.bengaluruwire.com) : ನಗರದ ಇಸ್ಕಾನ್ ಮಂದಿರದಲ್ಲಿ ಮಾ.18ರ ಗುರುಪೂರ್ಣಿಮೆ ಹಬ್ಬದಂದು, ಶ್ರೀ ನಿತಾಯ್-ಗೌರಾಂಗರ (ಶ್ರೀ ನಿತ್ಯಾನಂದ ಪ್ರಭು ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳು) ಪಲ್ಲಕ್ಕಿ ಉತ್ಸವದೊಂದಿಗೆ ಗುರು ಪೂರ್ಣಿಮೆ ಹಬ್ಬದ ಆಚರಣೆಯು ಆರಂಭವಾಗಲಿದೆ. ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ನಡೆಯಲಿದೆ.
ಇಸ್ಕಾನ್ ಮಂದಿರದಲ್ಲಿ ಸಂಜೆ 6 ಗಂಟೆಗೆ ಪಲ್ಲಕ್ಕಿ ಉತ್ಸವದ ನಂತರ ನಡೆಯುವ ಭವ್ಯವಾದ ಮಹಾಭಿಷೇಕದಲ್ಲಿ, ವಿಗ್ರಹಗಳಿಗೆ ಪಂಚಾಮೃತ, ಪಂಚಗವ್ಯ, ವಿವಿಧ ರೀತಿಯ ಫಲಗಳ ರಸಗಳು ಮತ್ತು 108 ನದಿಗಳ ಪವಿತ್ರ ಜಲದಿಂದ ಅಭಿಷೇಕ ನೆರವೇರಲಿದೆ. ತದನಂತರ ನಿತಾಯ್- ಗೌರಾಂಗರಿಗೆ ಭವ್ಯವಾದ ಆರತಿ ನೆರವೇರಿಸಲಾಗುವದು. ಈ ಸಂದರ್ಭದಲ್ಲಿ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರೂ ಆದ ಪದ್ಮಶ್ರೀ ಪುರಸ್ಕೃತ, ಶ್ರೀ ಮಧುಪಂಡಿತ ದಾಸ ಅವರು, ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದ ಮೂಲಕ ತಿಳಿಸಿಕೊಡಲಿದ್ದಾರೆ. ವೈಭವದ ಶಯನ ಆರತಿ ಮತ್ತು ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಗೌರ ಪೂರ್ಣಿಮೆ ಕಾರ್ಯಕ್ರಮವು ಸಮಾಪ್ತಗೊಳ್ಳಲಿದೆ ಎಂದು ಇಸ್ಕಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ಚೈತನ್ಯ ಮಹಾಪ್ರಭುಗಳ 536ನೇಯ ಜಯಂತಿ :
ಫಾಲ್ಗುಣ ಶುದ್ಧ ಪೂರ್ಣಿಮೆಯು (ಈ ವರ್ಷ ಮಾರ್ಚಿ 18ರಂದು) ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದ ದಿನ. ಮಾ.18ಕ್ಕೆ ಶ್ರೀ ಚೈತನ್ಯ ಮಹಾಪ್ರಭುಗಳ 536ನೇ ಜಯಂತಿಯನ್ನು ವಿಶ್ವದಾದ್ಯಂತ ಗೌಡೀಯ ವೈಷ್ಣವರು ‘ಗೌರ ಪೂರ್ಣಿಮೆ’ ಎಂದು ಆಚರಿಸಿ ಸಂಭ್ರಮಿಸುತ್ತಾರೆ. ಶ್ರೀ ಚೈತನ್ಯರು ಭಾರತದ ಭಕ್ತಿಪಂಥದ ಇತಿಹಾಸದಲ್ಲಿ ಮೇರುಶಿಖರ ಸದೃಶ ವ್ಯಕ್ತಿತ್ವದವರಾಗಿದ್ದಾರೆ. ಹದಿನೈದನೇ ಶತಮಾನದ ಅಂತ್ಯದ ಭಾಗದಲ್ಲಿ (ಕ್ರಿ.ಶ. 1489) ಬಂಗಾಳದ ನವದ್ವೀಪ ನಗರದ ಶ್ರೀಧಾಮ-ಮಾಯಾಪುರದಲ್ಲಿ ಜನಿಸಿದ ಶ್ರೀ ಚೈತನ್ಯರು, ಐದು ಶತಮಾನಗಳ ಹಿಂದೆಯೇ ಭಗವಂತನ ಭಕ್ತಿಗೆ ಜಾತಿ ಆಧಾರವೂ ಅಲ್ಲ, ಮಾನದಂಡವೂ ಅಲ್ಲ ಎನ್ನುವ ಪ್ರಜ್ಞಾಪೂರ್ವಕ ಚಿಂತನೆಯ ಮೂಲಕ ಭಗವಂತನ ಎದುರು ಎಲ್ಲರೂ ಸರ್ವ ಸಮಾನರು ಎನ್ನುವ ದರ್ಶನವನ್ನು ಲೋಕಕ್ಕೆ ತಿಳಿಸಿ, ಬೆಳೆಸಿದರು.
ಸಂಕೀರ್ತನೆ ಮೂಲಕ ಕೃಷ್ಣಭಕ್ತಿ ಪಸರಿಸಿದ ಶ್ರೀಗಳು :
ಕರ್ನಾಟಕದಲ್ಲಿ ದಾಸಪರಂಪರೆಯು ಕೃಷ್ಣಭಕ್ತಿಯನ್ನು ಪಸರಿಸುತ್ತಿದ್ದ ಕಾಲದಲ್ಲಿ ಅತ್ತ ಬಂಗಾಳದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಜನಮಾನಸದಲ್ಲಿ ಕೃಷ್ಣಭಕ್ತಿಯ ಬೀಜವನ್ನು ಬಿತ್ತುವುದರ ಮೂಲಕ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಜನಸಾಮಾನ್ಯರ ಬದುಕಿನಲ್ಲಿ ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದರು. ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯದಿಂದ ಭಾರತೀಯ ಸಮಾಜ ನಲುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಚೈತನ್ಯರು, ಜನಸಾಮಾನ್ಯರ ಬದುಕಿನಲ್ಲಿ ಕೃಷ್ಣಭಕ್ತಿಯನ್ನು ಸಂಕೀರ್ತನೆಯ ಮೂಲಕ ವಿತರಿಸಿದರು.
ಸಂಕೀರ್ತನಾ ಕಾರ್ಯಕ್ರಮದ ಮೂಲಕ ಬಡವ-ಬಲ್ಲಿದರು, ಶೋಷಿತ ವರ್ಗದವರು, ಅನ್ಯ ಧರ್ಮಿಯರು ಎಂಬ ಯಾವುದೇ ಭೇದವಿಲ್ಲದೇ, ಪ್ರತಿಯೊಬ್ಬರೂ ಹೃದಯವೆಂಬ ಕನ್ನಡಿಗೆ ಮೆತ್ತಿಕೊಂಡಿರುವ ಐಹಿಕ ಸಂಗವೆಂಬ ಧೂಳನ್ನು ನಿವಾರಿಸಿಕೊಳ್ಳಬಹುದು ಎಂದು ಸಾರಿದ ಸಾಧಕರೆಂದರೆ ಚೈತನ್ಯ ಮಹಾಪ್ರಭುಗಳು. ಅಲ್ಲದೇ, ಸಮಾಜದಲ್ಲಿ ಜಾತಿ ಪದ್ದತಿಯಿಂದ ಕಂಗಾಲಾಗಿದ್ದ ಜನರಿಗೆ ಪರಮಾತ್ಮನಲ್ಲಿ ಭಕ್ತಿನಿಷ್ಠೆಗೆ ಪ್ರಾಧ್ಯಾನ್ಯತೆ ಕೊಡುವ ಮೂಲಕ ಶಾಂತಿ ಸ್ಥಾಪಿಸಿದರು.