ಬೆಂಗಳೂರು, (www.bengaluruwire.com) : ಅಭಿಮಾನಿಗಳ ಪಾಲಿನ ಅಪ್ಪು, ನಟ ಪುನೀತ್ ರಾಜ್ ಕುಮಾರ್ (Actor Puneeth Rajkumar) ಇಲ್ಲದ ಬೇಸರದ ನಡುವೆ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ (‘James’) ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಗುರುವಾರ ತೆರೆ ಕಂಡಿದ್ದು, ಅಭಿಮಾನಿಗಳು ಅಪ್ಪು ಇಲ್ಲದ ಜನ್ಮದಿನ ಹಾಗೂ ಜೇಮ್ಸ್ ಚಿತ್ರದ ಸಂಭ್ರಮಾಚರಣೆ ಈ ಎರಡು ಕಾರ್ಯಕ್ರಮವನ್ನು ಜೇಮ್ಸ್ ಜಾತ್ರೆ ಹೆಸರಿನಲ್ಲಿ ಖುಷಿ ಹಾಗೂ ದುಖಃ ಮಿಶ್ರ ಭಾವಗಳ ಮಧ್ಯೆ ಆಚರಿಸಿದರು.
ಕನ್ನಡ ಚಿತ್ರೋದ್ಯಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಹಠಾತ್ ಅಗಲಿಕೆ ಶೂನ್ಯ ಸೃಷ್ಟಿಸಿದ್ದಂತೂ ಸತ್ಯ. ಇದೇ ಕೊರಗಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರವನ್ನು ಅವರ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿ, ಸಾಲುದ್ದ ಕ್ಯೂನಲ್ಲಿ ರಾತ್ರೋರಾತ್ರಿ ಸಾಲುಗಟ್ಟಿ ನಿಂತು ಟಿಕೆಟ್ ಪಡೆದು ನೋಡಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
12 ದೇಶಗಳ ನಾಲ್ಕು ಸಾವಿರ ಥಿಯೇಟರ್ ಗಳಲ್ಲಿ ರಿಲೀಸ್ :
ಜೇಮ್ಸ್ ಚಲನಚಿತ್ರ ಮಾ.17ರ ಮೊದಲದಿನದಂದೇ 4,000 ಥಿಯೇಟರ್ ಗಳಲ್ಲಿ (4000 screens) ಪ್ರದರ್ಶನಗೊಂಡಿದ್ದಲ್ಲದೆ ಕನ್ನಡ, ತಮಿಳು, ಮಲಯಾಳಿ, ತೆಲಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡು ಚಿತ್ರರಸಿಕರ ಮನತಣಿಸಿದೆ. ಒಂದೊಂಡೆ ಜೇಮ್ಸ್ ಚಿತ್ರ ನೋಡಿದ ಸಂಭ್ರಮವಾದರೆ, ಅಪ್ಪು ನೆನಪಿನಲ್ಲಿ ಲಕ್ಷಾಂತರ ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದಾರೆ. ಕರ್ನಾಟಕದ 400 ಸಿನಿಮಾ ಮಂದಿರದಲ್ಲಿ ಜೇಮ್ಸ್ ಚಿತ್ರ ಇಂದು ತೆರೆಕಂಡಿದೆ.
ಆಂಧ್ರ-ತೆಲಂಗಾಣದಲ್ಲಿ 300ಕ್ಕೂ ಹೆಚ್ಚು ಸ್ಕ್ರೀನ್, ಆಸ್ಟ್ರೇಲಿಯಾದಲ್ಲಿ 150ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿದೆ. ಅಮೆರಿಕದಲ್ಲಿ 160 ಸಿನಿಪರದೆ ಸೇರಿದಂತೆ 12 ದೇಶಗಳಲ್ಲಿ ಜೇಮ್ಸ್ ಚಿತ್ರ ಬಿಡುಗಡೆಗೊಂಡಿದೆ.
ಅಪ್ಪುವಿನ 46 ಕೆಜಿ ಕೇಕ್ ಕತ್ತರಿಸಿದ ರಾಘವೇಂದ್ರ ರಾಜ್ ಕುಮಾರ್ :
ಕಂಠೀರವ ಸ್ಟುಡಿಯೋದಲ್ಲಿ ಗುರುವಾರ ಬೆಳಗ್ಗೆ ನಟಿ ಪುನೀತ್ ಬರ್ತ್ ಡೇ ಪ್ರಯುಕ್ತ ನಟ ರಾಘವೇಂದ್ರ ರಾಜ್ ಕುಮಾರ್ 46 ಕೆಜಿ ತೂಕದ ಕೇಕ್ ಕಟ್ ಮಾಡಿದರು. ಇದೇ ವೇಳೆ ಅಪ್ಪುವನ್ನು ನೆನೆದು ದೊಡ್ಡಮನೆ ಕುಟುಂಬ ಬೇಸರದಲ್ಲಿತ್ತು.
ನಟ ಪುನೀತ್ ರಾಜ್ ಕುಮಾರ್ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸಾವನ್ನಪ್ಪಿದ ಬಳಿಕ ಅವರ ಅಭಿನಯದ ಈ ಚಿತ್ರಕ್ಕೆ ಅವರ ಹಿರಿಯ ಸಹೋದರ ನಟ ಶಿವರಾಜ್ ಕುಮಾರ್ 11 ಗಂಟೆಗಳ ಕಾಲ ಸಮಯ ಮೀಸಲಿಟ್ಟು ವಾಯ್ಸ್ ಡಬ್ ಮಾಡಿದ್ದಾರೆ. ಪುನೀತ್ ಇಬ್ಬರು ಸಹೋದರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವುದು ಮತ್ತೊಂದು ವಿಶೇಷ.
ಬಹದ್ದೂರು ಚಿತ್ರದ ಖ್ಯಾತಿ ಚೇತನ್ ಕುಮಾರ್ ಈ ಜೇಮ್ಸ್ ಚಿತ್ರವನ್ನು ನಿರ್ದೇಶಿಸಿದ್ದು, ಪ್ರಿಯಾ ಆನಂದ್, ಅನುಪ್ರಭಾಕರ್ ಮುಖರ್ಜಿ, ಶ್ರೀಕಾಂತ್ ಮೆಕಾ, ಶರತ್ ಕುಮಾರ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಕಿಶೋರ್ ಪತ್ತಿಕೊಂಡ ಈ ಚಿತ್ರದ ನಿರ್ಮಾಪಕರಾಗಿದ್ದರೆ, ಚೇತನ್ ರಾಜ್ ಸಂಗೀತ ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಅಂದರೆ ಮಾ.13ರಂದು ಜೇಮ್ಸ್ ಚಿತ್ರದ ಪ್ರೀಲಾಂಚ್ ಪ್ರದರ್ಶನದಲ್ಲಿ ಈ ಚಿತ್ರದ ತಂಡದೊಂದಿಗೆ, ಕನ್ನಡ ಚಿತ್ರೋದ್ಯಮದ ಹಲವು ಹಿರಿಯ ನಟ, ನಟಿಯರು, ಪುನೀತ್ ರಾಜ್ ಕುಮಾರ್ ಕುಟುಂಬಸ್ಥರು ಈ ಭಾವನಾತ್ಮಕ ಸಂದರ್ಭದಲ್ಲಿ ಹಾಜರಿದ್ದು, ಚಿತ್ರ ವೀಕ್ಷಣೆ ಮಾಡಿದ್ದರು. ಅಪ್ಪು ವಿದಾಯದ ಚಿತ್ರವೆಂದೇ ಹೇಳುತ್ತಿರುವ ಅಭಿಮಾನಿಗಳು ಈ ಹಿಂದಿನ ಚಲನಚಿತ್ರಗಳು ಬಿಡುಗಡೆಯಾಗಿದ್ದಾಗ ಮನಪೂರ್ವಕವಾಗಿ ಸಂಭ್ರಮಿಸಿ ಚಿತ್ರವನ್ನು ವೀಕ್ಷಿಸುತ್ತಿದ್ದರೆ, ಈ ಕೊನೆಯ ಚಿತ್ರವನ್ನು ಇನ್ನಿಲ್ಲದ ಬೇಸರದಲ್ಲಿ ನೋಡುತ್ತಿರುವುದು ದುರ್ದೈವವೇ ಸರಿ.
ಜೇಮ್ಸ್ ಚಿತ್ರದ ಬಗ್ಗೆ ಸಹೋದ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದೇನು?
ನಟ ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಜೇಮ್ಸ್ ಚಿತ್ರ ನೋಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಒಬ್ಬ ಅಣ್ಣನಾಗಿ ನನ್ನ ತಮ್ಮನ ಸಿನಿಮಾದ ಬಗ್ಗೆ ಮಾತನಾಡಬಾರದು. ಏಕಂದರೆ ನನ್ನ ತಮ್ಮನ ಸಿನಿಮಾ ಹೇಗಿದ್ದರೂ ಚೆನ್ನಾಗಿರುತ್ತೆ ಅಂತ ಹೇಳುತ್ತೇನೆ. ಜೇಮ್ಸ್ ಸಿನಿಮಾ ನನ್ನ ತಮ್ಮನ ಕೊನೆಯ ಚಿತ್ರ. ಜನರು ಈ ಚಿತ್ರದ ಬಗ್ಗೆ ಮಾತನಾಡಿದ್ದನ್ನು ನಾವು ಕೇಳಬೇಕು. ಅವನ ಹುಟ್ಟುಹಬ್ಬಕ್ಕೆ ಕೊನೆಯದಾಗಿ ಜನರಿಗೆ ಕೊಡುಗೆಯಾಗಿ ಕೊಟ್ಟಿದ್ದಾನೆ. ಜನರಿಗೆ ಈ ಚಿತ್ರ ಇಷ್ಟ ಆದರೆ ನನಗೂ ಇಷ್ಟ ಆದಂತೆ. ಅಪ್ಪುವಿನ ಕೊನೆಯ ನಾಲ್ಕು ಸಿನಿಮಾದಲ್ಲಿ ಏನು ಹೇಳೋಕೆ ಹೊರಟಿದ್ದ? ಒಂದು ರಾಜ್ ಕುಮಾರ ಮಾಡ್ತಿಯಾ, ಒಂದು ಕಡೆ ಯುವರತ್ನ ಮಾಡ್ತಿಯಾ, ಮತ್ತೊಂದು ಕಡೆ ಗಂಧದ ಗುಡಿ ಮಾಡ್ತಿಯಾ, ಮತ್ತೆ ಜೇಮ್ಸ್ ಮಾಡ್ತಿಯಾ? ಅಪ್ಪು ಏನ್ ಮಾಡೋಕೆ ಹೊರಟಿದ್ದಾ? ಅನಾಥ ಆಶ್ರಮದಲ್ಲಿನ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಅಂತ ಹೇಳ್ತೀಯ. ಗಂಧದ ಗುಡಿಯಲ್ಲಿ ಪರಿಸರ ಹೇಗೆ ಕಾಪಾಡಬೇಕು? ಕಾಡನ್ನು ಕಾಪಾಡಬೇಕು ಅಂತ ಹೇಳ್ತಿಯಾ. ಜೇಮ್ಸ್ ನಲ್ಲಿ ಯೋಧರ ಬಗ್ಗೆ ಮಾತಾಡ್ತಿಯಾ. ಆತ ಏನು ಹೇಳೋಕೆ ಬಂದಿದ್ದ ಅಂತ ಗೊತ್ತಾಗಲಿಲ್ಲ. ಇದ್ಯಾವುದನ್ನೂ ನಮಗೆ ಹೇಳಿಲ್ಲ. ಸಿನಿಮಾ ಮುಖಾಂತರ ಅಭಿಮಾನಿಗಳಿಗೆ ಹೇಳಿದ್ದೀಯ. ಅದನ್ನು ಎಲ್ಲರೂ ಪಾಲಿಸುತ್ತಾರೆ. ಅವರ ಜೊತೆ ನಾವೂನು ನೀನು ಹೇಳಿದ್ದನ್ನು ಪಾಲಿಸುತ್ತೇವೆ” ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಭಾವುಕರಾಗಿ ನುಡಿದರು.