ಬೆಂಗಳೂರು, (www.bengaluruwire.com) : ಭ್ರಷ್ಟ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಿಂದ ಕಂಗಾಲಾಗಿದ್ದಾರೆ. ಬೆಳಗ್ಗೆ ಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳ 18 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 77 ಕಡೆಗಳಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.
ಸುಮಾರು 300 ಸಿಬ್ಬಂದಿಯ ಜೊತೆ ಶೋಧ ಕಾರ್ಯದ ವೇಳೆ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಳಿ ಲಕ್ಷದಿಂದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ, ಒಡವೆ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು, ನಿವೇಶನ, ಕಟ್ಟಡ, ಕಾಂಪ್ಲೆಕ್ಸ್, ಮ್ಯೂಚೆಲ್ ಫಂಡ್ ಹೂಡಿಕೆ, ಕೃಷಿಭೂಮಿ ಸೇರಿದಂತೆ ವಿವಿಧ ರೀತಿ ಚರ-ಸ್ಥಿರಾಸ್ತಿಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೊತ್ತು ಹೋದಂತೆ ಆ ಲಂಚಬಾಕ ಅಧಿಕಾರಿಗಳ ಆಸ್ತಿ-ಪಾಸ್ತಿಗಳನ್ನು ಕಂಡು ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರೇ ದಂಗುಬಡಿದು ಹೋಗಿದ್ದಾರೆ.
ಎಸಿಬಿ ದಾಳಿಗೆ ಹೆದರಿ ಕಸದ ಡಬ್ಬಿಗೆ ಚಿನ್ನ- ಬೆಳ್ಳಿ ಆಭರಣ ಎಸೆದ ಭ್ರಷ್ಟ ಅಧಿಕಾರಿ :
ರಾಯಚೂರಿನ ಕೃಷ್ಣ ಜಲಭಾಗ್ಯ ನಿಗಮದ ಎಇಇ ಅಶೋಕ್ ರೆಡ್ಡಿ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಮನೆಯವರು ಬೆದರಿ, ತಮ್ಮ ಮನೆಯ ಕಸದ ಡಬ್ಬಕ್ಕೆ ನಗದು, ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬಿಸಾಡಿದ್ದರು. ಆದರೆ ಎಸಿಬಿ ದಳ ಪೊಲೀಸರು ಇದನ್ನು ಪತ್ತೆಹಚ್ಚಿ ಕವರ್ ಬಿಚ್ಚಿ ನೋಡಿದಾಗ ಅದರಲ್ಲಿ 7 ಲಕ್ಷ ನಗದು, 41 ತೊಲೆ ಚಿನ್ನ ಹಾಗೂ 60 ತೊಲೆ ಬೆಳ್ಳಿಯ ಆಭರಣಗಳು ಪತ್ತೆಯಾಯಿತು.
ಇನ್ನು ಬಾದಾಮಿಯ ಅರಣ್ಯ ಇಲಾಖೆಯ ಆರ್ ಎಫ್ ಒ ಪಿ.ಶಿವಾನಂದ ಅವರ ಮನೆಯಲ್ಲಿ ನೋಟನ್ನು ಎಣಿಸುವ ಯಂತ್ರ ಹಾಗೂ 3 ಕೆಜಿ ಗಂಧದ ತುಂಡುಗಳು ಪತ್ತೆಯಾಗಿದೆ. ವಿಜಯಪುರ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಗೋಪಿನಾಥ್ ಎನ್.ಮಾಳಗಿ ಅವರ ಬಳಿ ಬರೋಬ್ಬರಿ ಕೋಟ್ಯಾಂತರ ರೂಪಾಯಿ ಹಣವನನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.
ಎಇ ಅಧಿಕಾರಿ ಮನೆಯಲ್ಲಿ ಐಷಾರಾಮಿ ಹೋಮ್ ಥಿಯೇಟರ್ :
ಇನ್ನು ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಎಇ ಗವಿರಂಗಪ್ಪ ತಮ್ಮ ಐಷಾರಾಮಿ ಮನೆಯಲ್ಲಿ ಭಾರೀ ಮೌಲ್ಯ ಹೋಮ್ ಥಿಯೇಟರ್ ಸೌಲಭ್ಯ ಕಲ್ಪಿಸಿಕೊಂಡಿದ್ದನ್ನು ಕಂಡು ಎಸಿಬಿ ಅಧಿಕಾರಿಗಳು ಹುಬ್ಬೇರಿಸಿದ್ದರು.
ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು 1.64 ಗ್ರಾಮ್ ಚಿನ್ನಾಭರಣ, 13.73 ಕೆಜಿ ಬೆಳ್ಳಿಯ ಆಭರಣ ಹಾಗೂ 2.24 ಲಕ್ಷ ನಗದು ಹಣವಿರುವುದನ್ನು ಪತ್ತೆಹಚ್ಚಿದ್ದಾರೆ.
.ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ :
- ಬಿ.ಕೆ.ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಖನಿಜ ಭವನ ಬೆಂಗಳೂರು
- ಜೆ.ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತರು, ರಸ್ತೆ ಸುರಕ್ಷತೆ, ಸಾರಿಗೆ ಇಲಾಖೆ, ಟಿಟಿಎಂಸಿ ಬಿಲ್ಡಿಂಗ್, ಶಾಂತಿನಗರ, ಬೆಂಗಳೂರು
- ವಿ.ರಾಕೇಶ್ ಕುಮಾರ್, ಉಪನಿರ್ದೇಶಕ, ನಗರ ಯೋಜನೆ ವಿಭಾಗ, ಬಿಡಿಎ, ಬೆಂಗಳೂರು
- ರಮೇಶ್ ಕನಕಟ್ಟೆ, ಆರ್ ಎಫ್ ಒ, ಸಾಮಾಜಿಕ ಅರಣ್ಯ, ಯಾದಗಿರಿ
- ಬಸವರಾಜ ಶೇಖರ್ ರೆಡ್ಡಿ ಪಾಟಿಲ್, ಇಂಜಿನಿಯರ್, ಕೌಜಳಗಿ ವಿಭಾಗ ಗೋಕಾಕ್
- ಬಸವಕುಮಾರ್.ಎಸ್, ಶಿರಸ್ತೆದಾರ್,ಅಣ್ಣಿಗೇರಿ, ಜಿಲ್ಲಾಧಿಕಾರಿ ಕಚೇರಿ, ಗದಗ
- ಗೋಪಿನಾಥ್ ಎನ್.ಮಾಳಗಿ, ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ ವಿಜಯಪುರ
- ಶಿವಾನಂದ ಪಿ. ಶರಣಪ್ಪ, ಆರ್ ಎಫ್ ಒ, ಬಾದಾಮಿ,
- ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್, ರಾಮನಗರ
- ಶ್ರೀನಿವಾಸ್, ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ
- ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ
- ಕೃಷ್ಣನ್, ಎಇ, ಎಪಿಎಂಸಿ ಹಾವೇರಿ
- ಚೆಲುವರಾಜ್, ಅಬಕಾರಿ ನಿರೀಕ್ಷಕ, ಗುಂಡ್ಲುಪೇಟೆ
- ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ
- ಬಾಲಕೃಷ್ಣ, H.N., ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
- ಗವಿ ರಂಗಪ್ಪ, ಎಇ, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು
- ಅಶೋಕ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು
- ದಯಾ ಸುಂದರ್ ರಾಜು, ಎಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ
ಇನ್ನು, ಎಸಿಬಿ ಅಧಿಕಾರಿಗಳು ದಾಳಿ ವೇಳೆ ಏನೇನು ವಶಪಡಿಸಿಕೊಂಡಿದ್ದಾರೆ. ಎಷ್ಟು ಅಕ್ರಮ ಅಸ್ತಿ ಪತ್ತೆಯಾಗಿವೆ ಎಂಬುವುದರ ಸಂಪೂರ್ಣ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.