ಬೆಂಗಳೂರು, (www.bengaluruwire.com) : “ರಾಜ್ಯ ಹೈಕೋರ್ಟ್, ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆಯ ಕುರಿತ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ. ಸಮವಸ್ತ್ರ ಖಡ್ಡಾಯ ಎಂಬ ಸರ್ಕಾರದ ಕಾನೂನನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ, “ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ನಾವೆಲ್ಲರೂ ಪಾಲಿಸಬೇಕು. ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಶಾಂತಿಯನ್ನು ಕಾಪಾಡಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ. ಜನತೆ, ಎಲ್ಲ ಸಮುದಾಯದ ನಾಯಕರು, ಮಕ್ಕಳ ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ರಾಜ್ಯದ ಜನತೆಯಲ್ಲಿ ವಿನಂತಿ ಮಾಡಿದರು.
ಪರೀಕ್ಷೆಗಳಿಂದ ಹೊರಗುಳಿಯದಿರಲು ವಿದ್ಯಾರ್ಥಿಗಳಿಗೆ ಕರೆ :
ಎಲ್ಲಾ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ನಿಮ್ಮ ಶಿಕ್ಷಣ ಬಹಳ ಮುಖ್ಯ. ಪರೀಕ್ಷೆಗಳಿಂದ ಹೊರಗುಳಿಯದೆ, ಎಲ್ಲರೂ ತರಗತಿಗಳಿಗೆ ಹಾಜರಾಗಬೇಕು. ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ನಾವು ನೀವೆಲ್ಲರೂ ಚಿಂತಿಸಬೇಕು ಎಂದು ಕರೆ ನೀಡಿದರು.
ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ :
ಕಾನೂನು ಸುವ್ಯವಸ್ಥೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಉಚ್ಚ ನ್ಯಾಯಾಲಯದ ತೀರ್ಪಿನಿಂದ ಪ್ರಕರಣ ಇತ್ಯರ್ಥವಾಗಿರುವುದರಿಂದ ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕಾನೂನನ್ನು ಕೈಗೆ ತೆಗೆದುಕೊಂಡರೆ ನಮ್ಮ ಗೃಹ ಇಲಾಖೆ ಕಠಿಣ ಕ್ರಮ ಜರುಗಿಸಲಿದೆ ಎಂದು ಸಿಎಂ ಹೇಳಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು ? :
‘ಸಮವಸ್ತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಎತ್ತಿಹಿಡಿದ ಹೈಕೋರ್ಟ್ ತೀರ್ಪನ್ನು ತಾವು ಸ್ವಾಗತಿಸುತ್ತೇವೆ. ಇದೊಂದು ಐತಿಹಾಸಿಕ ತೀರ್ಪು ಆಗಿದ್ದು, ಹೆಣ್ಣುಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಎತ್ತಿ ಹಿಡಿಯಲಾಗಿದೆ. ಉಚ್ಚ ನ್ಯಾಯಲಯದ ಅದೇಶನವನ್ನು ಎಲ್ಲರೂ ಪಾಲಿಸಬೇಕು, ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು. ತೀರ್ಪಿನ ಹಿನ್ನಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು , ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಗೊಂದಲ ಮುಂದಿನ ದಿನಗಳಲ್ಲಿ ನಿವಾರಣೆ : ಸಚಿವ ಬಿ.ಸಿ.ನಾಗೇಶ್
‘ಮುಂದಿನ ದಿನಗಳಲ್ಲಿ ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿನ ಕೆಲವು ಗೊಂದಲಗಳನ್ನು ಮುಂದಿನ ದಿನಗಳಲ್ಲಿ ಹೈಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ. ಸಮವಸ್ತ್ರ ಎನ್ನುವುದು ರಾಷ್ಟ್ರೀಯ ಮಾನಸಿಕತೆಯನ್ನು ತರುವಲ್ಲಿ ಸಹಕಾರಿ ಎಂಬುದನ್ನು ಹಲವು ವರ್ಷಗಳಿಂದ ನಮಗೆ ಗೊತ್ತಿರುವ ವಿಚಾರ. ರಾಷ್ಟ್ರೀಯ ಪ್ರಜೆಗಳು ಎಂಬ ಮಾನಸಿಕತೆ ಭಾವನೆ ಬರುವುದರಲ್ಲಿ ಸಹಕಾರಿ. ಹಾಗಾಗಿ ಅದನ್ನು ಮಾಡುತ್ತೇವೆ. ಯಾವ ಹೆಣ್ಣುಮಕ್ಕಳನ್ನು ತಪ್ಪುದಾರಿಗೆ ಎಳೆಯಲಾಗಿತ್ತು. ಅವರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತೇವೆ. ಆ ಹೆಣ್ಣುಮಕ್ಕಳು ಪುನಃ ಶಾಲೆ ಬರುವಂತೆ ಕೇಳಿಕೊಳ್ಳುತ್ತೇವೆ. ಅವರೆಲ್ಲ ನಾಳೆ ಬೆಳಗ್ಗೆ ಶಾಲೆಗೆ ಬಂದು ವಿಧ್ಯಾಭ್ಯಾಸ ಮುಂದುವರೆಸುತ್ತಾರೆಂಬ ವಿಶ್ವಾಸ ತಮಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿನಿಯರು ಕೂಡಲೇ ಶಾಲೆಗೆ ಮರಳಿ : ಕೆ.ಎಸ್.ಈಶ್ವರಪ್ಪ ಮನವಿ
ಕರ್ನಾಟಕ ಉಚ್ಚ ನ್ಯಾಯಲಯ ಹಿಜಾಬ್ ಕುರಿತು ನೀಡಿರುವ ತೀರ್ಪು ಸ್ವಾಗತಾರ್ಹ. ಹಿಜಾಬ್ ಸಮವಸ್ತ್ರದ ಭಾಗವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ತೀರ್ಪು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಹಿಜಾಬ್ ಧರಿಸಬೇಕು ಎಂದು ಶಾಲೆಯಿಂದ ದೂರ ಉಳಿದಿರುವ ವಿದ್ಯಾರ್ಥಿನಿಯರು ಕೂಡಲೇ ಶಾಲೆಗೆ ತೆರಳಬೇಕು ಎಂದು ಕೋರುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ :
‘ಮಕ್ಕಳು ಶಾಲೆಗಳಲ್ಲಿ ಶಿಕ್ಷಣದ ಕಡೆ ಗಮನ ನೀಡಬೇಕು. ಶಿಕ್ಷಣದಿಂದ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ದೇಶದ ಅಭಿವೃದ್ಧಿಯಲ್ಲೂ ಶಿಕ್ಷಣದ ಪಾತ್ರ ಬಹಳ ದೊಡ್ಡದಿದೆ. ಶಾಲೆಗಳು ದೇಗುಲಗಳಿಗೆ ಸಮಾನ. ಇಲ್ಲಿ ಜಾತಿ, ಮತ ಮತ್ತು ಧರ್ಮದ ಭೇದವಿಲ್ಲ. ಸಮವಸ್ತ್ರ ಅನ್ನುವುದು ಏಕತೆ ಮತ್ತು ಸಮಾನತೆಯನ್ನು ಬಿಂಬಿಸಲು ಇರುವ ಸಣ್ಣ ಮಾರ್ಗ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದರ ಜೊತೆಗೆ ಕಲಿಕೆ ಬಗ್ಗೆ ಹೆಚ್ಚು ಗಮನ ಕೊಡಬೇಕು. ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಮಕ್ಕಳು ಶಾಲೆಯಲ್ಲಿ ಅನ್ಯೋನ್ಯ ಭಾವನೆಯಿಂದ ಶಿಕ್ಷಣ ಪಡೆಯಬೇಕು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ :
‘ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಮವಸ್ತ್ರ ಕುರಿತು ಸರ್ಕಾರ ಮತ್ತು ಕಾಲೇಜು ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದನ್ನು ಎಲ್ಲರೂ ಪಾಲಿಸಬೇಕು. ಹಿಜಾಬ್ ಧಾರ್ಮಿಕ ಖಡ್ಡಾಯವಾದ ಕಾನೂನು ಅಲ್ಲ ಎಂದು ಕೋರ್ಟ್ ಹೇಳಿದೆ. ಸಂಕುಚಿತ ಮನೋಭಾವದರು ಧಾರ್ಮಿಕ ಹಕ್ಕು ಎಂದು ಬಿಂಬಿಸಲು ಹೊರಟಿದ್ದರು. ಹೈಕೋರ್ಟ್ ಎಲ್ಲರೂ ಸಮಾನರು ಎಂಬುದನ್ನು ಮತ್ತೊಮ್ಮೆ ಹೇಳಿದೆ’ ಎಂದು ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಕಾಂಗ್ರೆಸ್ ಗೆ ಕಪಾಳಮೋಕ್ಷ ಎಂದು ಹೇಳುವುದು ಸರಿಯಲ್ಲ : ಸಿದ್ದರಾಮಯ್ಯ
ಕಾಂಗ್ರೆಸ್ ಹಿಜಾಬ್ ವಿವಾದದ ಪರಿಸ್ಥಿತಿ ಲಾಭ ಪಡೆಯಲು ಹೋಗಿ ಕಪಾಳಮೋಕ್ಷವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಪ್ರತ್ರಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾನು ಹೈಕೋರ್ಟ್ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಕೋರ್ಟ್ ಆದೇಶದ ನಾನು ಪೂರ್ಣಪಾಠ ಓದಿಲ್ಲ. ಹಿಜಾಬ್ ನಿಂದ ಯಾರಿಗೂ ತೊಂದರೆ ಆಗಿಲ್ಲ. ಯಾರಿಗೂ ನಷ್ಟವಾಗಿಲ್ಲ. ಇದರಲ್ಲಿ ಕಾಂಗ್ರೆಸ್ ಗೆ ಕಪಾಳಮೋಕ್ಷ ಎಂಬುದು ಸರಿಯಲ್ಲ. ಹೈಕೋರ್ಟ್ ಆದೇಶ ಏನಿದೆ ಅದನ್ನು ಎಲ್ಲರೂ ಪಾಲಿಸಬೇಕು.’
ಹೈಕೋರ್ಟ್ ತೀರ್ಪಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ :
ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆ, ಕಂಗೆಟ್ಟಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸೋಮವಾರ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೆ. ಕಾಕತಾಳೀಯ ಎಂಬಂತೆ ಮಂಗಳವಾರ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಬಂದಿದೆ. ನ್ಯಾಯಾಲಯ ನೀಡಿರುವ ತೀರ್ಪನ್ನು ಎಲ್ಲರೂ ಪಾಲನೆ ಮಾಡಬೇಕಾದುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರವು ಮಕ್ಕಳದ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಹಳಿತಪ್ಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಿ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.