ನವದೆಹಲಿ, (www.bengaluruwire.com) : ದೇಶದಲ್ಲಿನ ಐದು ಕೋಟಿಗೂ ಹೆಚ್ಚಿನ ಭವಿಷ್ಯ ನಿಧಿ ಚಂದಾದಾರರಿಗೆ (EPF) ನೌಕರರ ಭವಿಷ್ಯ ನಿಧಿ ಸಂಘಟನೆ (EPFO) 2021-22ನೇ ಸಾಲಿಗೆ ನೀಡುವ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಕೆ ಮಾಡಲು ನಿರ್ಧರಿಸಿದೆ.
ಇದರಿಂದಾಗಿ ಕಳೆದ ಎರಡು ಹಣಕಾಸು ವರ್ಷಗಳಿಂದ (2019-20 ಮತ್ತು 2020-21) ಪಿಎಫ್ ನಿಂದ ಸಿಗುತ್ತಿದ್ದ ಬಡ್ಡಿ ದರವು ಇಳಿಕೆಯಾದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ಹಂತದಲ್ಲಿ ಬಡ್ಡಿ ದರ ಶೇ.8.8ರವರೆಗೂ ಇತ್ತು. 1977-78ರಲ್ಲಿ ಶೇ.8ರಷ್ಟು ಪಿಎಫ್ ಬಡ್ಡಿದರ ನಿಗದಿಪಡಿಸಲಾಗಿತ್ತು. ಆದರೀಗ ಇಪಿಎಫ್ ಒ ಸಂಘಟನೆ ನಿಗದಿ ಮಾಡಿರುವ ದರವು ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಒಂದೆಡೆ ಬ್ಯಾಂಕ್ ನಲ್ಲಿ ಅತ್ಯಂತ ಕಡಿಮೆ ಮಟ್ಟದ ಬಡ್ಡಿದರ, ಮತ್ತೊಂದೆಡೆ ಈಗ ಪಿಎಫ್ ದರವು ಇಳಿಕೆಯಾಗಿರುವುದು ಐದು ಕೋಟಿಗೂ ಹೆಚ್ಚಿನ ಪಿಎಫ್ ಚಂದಾರರಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಕೇಂದ್ರೀಯ ಟ್ರಸ್ಟಿಗಳ (CBT) ಸಭೆಯಲ್ಲಿ ಶನಿವಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಳೆದ ದಶಕದಲ್ಲಿ ಪಿಎಫ್ ಮೇಲಿನ ಬಡ್ಡಿ ದರ ಇಷ್ಟು ಕಡಿಮೆ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಲಕ್ಷಾಂತರ ಪಿಎಫ್ ಖಾತೆದಾರರು ಕನಿಷ್ಠ ಹೆಚ್ಚಳಕ್ಕಾಗಿ ಕಾಯುತ್ತಿರುವ ಹೊತ್ತಿನಲ್ಲೇ ಸಿಬಿಟಿ ನಿರ್ಧಾರ ಸಾಮಾನ್ಯ ಚಂದಾದಾರರನ್ನು ನಿರಾಸೆಗೊಳಿಸಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ಗುವಾಹಟಿಯಲ್ಲಿ ನಡೆದ ಇಪಿಎಫ್ ಒನ ಟ್ರಸ್ಟಿ ಮಂಡಳಿಯ ಸಭೆಯಲ್ಲಿ ಬಡ್ಡಿದರವನ್ನು ನಿರ್ಧರಿಸಿ ಪ್ರಕಟಿಸಲಾಯಿತು. ಅಂತರರಾಷ್ಟ್ರೀಯ ಪ್ರಸಕ್ತ ಪರಿಸ್ಥಿತಿ ಹಾಗೂ ಷೇರುಪೇಟೆಯ ವಿದ್ಯಮಾನವನ್ನು ಗಮನಿಸಿ ಮಂಡಳಿ ಈ ತೀರ್ಮನ ಮಾಡಿದೆ ಎಂದು ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
EPFO ತನ್ನ ಗ್ರಾಹಕರಿಗೆ ಈ ಹಿಂದೆ ನೀಡಿದ ಬಡ್ಡಿದರಗಳು ಹೀಗಿತ್ತು :
2012-13ನೇ ಹಣಕಾಸು ವರ್ಷದಲ್ಲಿ ಶೇ.8.5, 2013-14ನೇ ಹಣಕಾಸು ವರ್ಷದಲ್ಲಿ ಶೇ.8.75, 2014-15ನೇ ಹಣಕಾಸು ವರ್ಷದಲ್ಲಿ ಶೇ.8.75, 2015-16ನೇ ಹಣಕಾಸು ವರ್ಷದಲ್ಲಿ ಶೇ.8.8 ರಷ್ಟಿತ್ತು. 2016-17 ಹಣಕಾಸು ವರ್ಷದಲ್ಲಿ ಶೇ.8.65 ವರ್ಷ, 2017-18 ಹಣಕಾಸು ವರ್ಷದಲ್ಲಿ ಶೇ.8.55 ಮತ್ತು 2018-19 ರಲ್ಲಿ ಶೇ.8.65 ಬಡ್ಡಿ ದರವನ್ನು, 2019-20 ಮತ್ತು 2020-21 ಹಣಕಾಸು ವರ್ಷಕ್ಕೆ ಶೇ 8.5 ರಷ್ಟು ನಿಗಧಿಮಾಡಿತ್ತು.
ಆಗಸ್ಟ್ 5, 2015 ರಿಂದ 31 ಮಾರ್ಚ್ 2021 ರವರೆಗೆ, ಇಪಿಎಫ್ಒ ಈಕ್ವಿಟಿ ಲಿಂಕ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ನಲ್ಲಿ 1,37,895.95 ಕೋಟಿ ರೂ. ಹೂಡಿಕೆ ಮಾಡಿದೆ. ಇದರಲ್ಲಿ 32,070 ಕೋಟಿ ರೂ.ಗಳನ್ನು 2020-21ನೇ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡಿದೆ. ಆ ಮೂಲಕ EPFO ಸಂಘಟನೆಯು 2020-21ರಲ್ಲಿ ಒಟ್ಟಾರೆ ರೂ.72,811 ಕೋಟಿಗಳ ಬಡ್ಡಿಯನ್ನು ಗಳಿಸಿದೆ.