ನವದೆಹಲಿ, (www.bengaluruwire.com) : ರೈಲ್ವ ಪ್ರಯಾಣಿಕರಿಗೊಂದು ಸಂತಸದ ಸುದ್ದಿ, ಕೋವಿಡ್-19 ಸೋಂಕು ಮಾರ್ಗಸೂಚಿಯ ಕಾರಣಕ್ಕೆ ಸುಮಾರು ಎರಡು ವರ್ಷಗಳ ಹಿಂದೆ ರೈಲ್ವೆ ಬೋಗಿಗಳಲ್ಲಿ ಹೊದಿಕೆ, ಪರದೆಗಳ ಬಳಕೆಗೆ ಹೇರಲಾಗಿದ್ದ ನಿರ್ಬಂಧವನ್ನು ಭಾರತೀಯ ರೈಲ್ವೆ (Indian Railways) ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.
ಕೋವಿಡ್-19 ರ ಕಾರಣದಿಂದಾಗಿ ಸಾಂಕ್ರಾಮಿಕ ಮತ್ತು ಕೋವಿಡ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ರೈಲುಗಳಲ್ಲಿ ಪ್ರಯಾಣಿಕರ ಚಲನೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೋಕಾಲ್ (ಎಸ್‌ಒಪಿ) ಅನ್ನು ಹೊರಡಿಸಲಾಗಿತ್ತು. ಇದು ರೈಲುಗಳ ಒಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಮೇಲೆ ನಿರ್ಬಂಧವನ್ನು ವಿಧಿಸಲಾಗಿತ್ತು.
ಇದೀಗ ರೈಲಿನೊಳಗೆ ಲಿನಿನ್, ಹೊದಿಕೆಗಳು ಮತ್ತು ಪರದೆಗಳ ಪೂರೈಕೆಗೆ ಸಂಬಂಧಿಸಿದಂತೆ ಮೇಲಿನ ನಿರ್ಬಂಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಎಲ್ಲಾ ರೈಲ್ವೆ ವಲಯಗಳ ವ್ಯವಸ್ಥಾಪಕರಿಗೆ ಆದೇಶಿಸಿದೆ. ಹೀಗಾಗಿ ಇನ್ನು ಮುಂದೆ ರೈಲುಗಳಲ್ಲಿ ಲಿನಿನ್, ಹೊದಿಕೆಗಳನ್ನು ಪ್ರಯಾಣಿಕರಿಗೆ ಒದಗಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.