ಬೆಂಗಳೂರು, (www.bengaluruwire.com) : ಅಳಿವಿನಂಚಿನಲ್ಲಿರುವ ಮುನಿಯ ಹಕ್ಕಿ (Eastarildinae)ಗಳನ್ನು ಅಕ್ರಮವಾಗಿ ಮಾರುತ್ತಿದ್ದ ಇಬ್ಬರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಕೆ ಅಚ್ಚುಕಟ್ಟು) ಪೊಲೀಸರು ಬಂಧಿಸಿ ಆರೋಪಿಗಳಿಂದ 36 ಹಕ್ಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪವನ್ (27 ವರ್ಷ) ಹಾಗೂ ಪ್ರಕಾಶ್ (22) ಎಂಬುವರು ಬಶನಂಕರಿ ಮೂರನೇ ಹಂತದ ಭುವನೇಶ್ವರಿನಗರದಲ್ಲಿನ ಆಂಧ್ರ- ಚಿತ್ತೂರು ಬಸ್ ನಿಲ್ದಾಣದಲ್ಲಿ 18 ಜೊತೆ (ಒಟ್ಟು 36 ಹಕ್ಕಿಗಳು) ಅಳವಿನ ಅಂಚಿನಲ್ಲಿರುವ ನಿಷೇಧಿತ ಮುನಿಯ ಹಕ್ಕಿಗಳನ್ನು ಪಂಜರದಲ್ಲಿಟ್ಟುಕೊಂಡು ಬುಧವಾರದಂದು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು.
ಈ ವಿಷಯ ತಿಳಿದು ಕಪ್ಪುಬಣ್ಣದ ತಲೆಯಿರುವ ಮುನಿಯ ಹಕ್ಕಿಗಳನ್ನು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿ, ವನ್ಯಜೀವಿ ಕಾಯ್ದೆ 1972ರ ಅಡಿ ಒಟ್ಟು 11 ಸೆಕ್ಷನ್ ಗಳ ಅಡಿ ಪ್ರಕರಣಗಳನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ದಾಖಲಿಸಿದ್ದಾರೆ. ವಶಕ್ಕೆ ಪಡೆದ 36 ಮುನಿಯ ಹಕ್ಕಿಗಳನ್ನು ನ್ಯಾಯಾಲಯದ ಅನುಮತಿ ಪಡೆದು ಬನ್ನೇರುಘಟ್ಟದಲ್ಲಿರುವ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಪಾಲನೆ ಮತ್ತು ಪೋಷಣೆಗಾಗಿ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಆರೋಪಿಗಳು ಈ ಹಕ್ಕಿಗಳನ್ನು ತಮಿಳುನಾಡಿನ ತಿರುಚ್ಚಿಯಲ್ಲಿನ ಬುಡಕಟ್ಟು ಜನರಿಂದ ನಿರಂತರವಾಗಿ ವಾರದ ಸಂತೆಯಲ್ಲಿ ಖರೀದಿಸುತ್ತಿದ್ದರು. ಬೆಂಗಳೂರು ನಗರ ಪೊಲೀಸ್ ದಕ್ಷಿಣ ವಲಯದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸಾಮಾನ್ಯವಾಗಿ ಈ ಮುನಿಯ ಹಕ್ಕಿಗಳು ನೀರಾವರಿ ಜಮೀನುಗಳಲ್ಲಿ, ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುವ ಅಳವಿನಂಚಿನಲ್ಲಿರುವ ಪಕ್ಷಿಯಾಗಿದೆ.