ಬೆಂಗಳೂರು, (www.bengaluruwire.com) : ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ನೀಡಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿಯನ್ನು ರಾಜ್ಯವು ಡಿಸೆಂಬರ್ ತಿಂಗಳಿನಲ್ಲಿಯೇ ಪೂರ್ಣಗೊಳಿಸಲು ಮಹಿಳೆಯರ ಕೊಡುಗೆ ಮಹತ್ವ ಕೊಡುಗೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನಡಿ ಅತ್ಯುತ್ತಮ ಮಹಿಳಾ ಕಾಯಕ ಬಂಧುಗಳಿಗೆ ಗುರುವಾರ ಏರ್ಪಡಿಸಿದ್ದ ಗೌರವ ಸಮಾರಂಭದಲ್ಲಿ ಮಹಿಳೆಯರನ್ನು ಸನ್ಮಾಸಿದ ಬಳಿಕ ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ ನರೇಗಾದಿಂದ ಉದ್ಯೋಗ ಹಾಗೂ ದೇಶದ ಆಸ್ತಿ ಜಾಸ್ತಿಯಾಗುತ್ತಿದೆ. ರೈತರ ಭೂಮಿ ಫಲವತ್ತತ್ತೆಯಾಗುವ ನಿಟ್ಟಿನಲ್ಲಿ, ಕೃಷಿ ಅಭಿವೃದ್ಧಿಪಡಿಸಿ, ಉತ್ಪಾದಕ ವ್ಯವಸ್ಥೆ ತರುವ ಮಾರ್ಗದಲ್ಲಿ ಇಡೀ ದೇಶದಲ್ಲಿ ಕ್ರಾಂತಿಯಾಗುತ್ತಿದೆ. ಈ ಕಾರ್ಯದಲ್ಲಿ ಮಹಿಳೆಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನಲ್ಲಿ ಅವಕಾಶ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳು ಮಹಿಳೆಯರಿಗೆ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸುತ್ತಿವೆ ಎಂದರು.
ಈ ವರ್ಷ ಒಟ್ಟಾರೆ ಪರಿಷ್ಕೃತ 16 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿಯಲ್ಲಿ ಈತನಕ 15.27 ಕೋಟಿ ಮಾನವ ಉದ್ಯೋಗ ಸೃಜನೆ ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 30.81 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿ 2,400ಕ್ಕೂ ಹೆಚ್ಚು ಗ್ರಾಮಪಂಚಾಯ್ತಿಗಳಿಗೆ ಪೂರ್ಣ ಪ್ರಮಾಣದಲ್ಲಿ “ಗ್ರಾಮ ಕಾಯಕ ಮಿತ್ರ” ರೆಂದು ನೇಮಕ ಮಾಡಲಾಗಿದೆ. ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿಶೇಷ “ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಇಲಾಖೆಯ ಪ್ರಗತಿ ಹಾಗೂ ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು.
ರಾಜ್ಯದಲ್ಲಿ 40 ಸಾವಿರ ಮಹಿಳಾ ಮೇಟಿಗಳಿದ್ದಾರೆ. 2022-23 ರಲ್ಲಿ ನರೇಗಾದಲ್ಲಿ ಪಾಲ್ಗೊಳ್ಳುವಿಕೆಯ ಮಹಿಳೆಯರ ಸಂಖ್ಯೆಯನ್ನು ಶೇ.60 ರಷ್ಟು ಏರಿಕೆ ಮಾಡುವ ಗುರಿಯಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಹೇಳಿದರು.
ಇದೇ ವೇಳೆ ಸನ್ಮಾನ ಸ್ವೀಕರಿಸಿದ ಬಳ್ಳಾರಿಯ ಮೇಟಿ ಈರಮ್ಮ ಮಾತನಾಡಿ, ನಾನು ಮೇಟಿಯಾಗಿ ಕೆಲಸ ಮಾಡುತ್ತಿದ್ದೆ. ಇದಿಕ್ಕೆ ಮುಂಚೆ ಗ್ರಾಮಪಂಚಾಯ್ತಿಯಲ್ಲಿ ಕಾಯಕಬಂಧುವಾಗಿ ಕೆಲಸ ಮಾಡುತ್ತಾ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಗ್ರಾಮಪಂಚಾಯ್ತಿ ಪ್ರೋತ್ಸಾಹದಿಂದ ನರೇಗಾದಲ್ಲಿ ಕೆಲಸ ಮಾಡುತ್ತಾ, 10 ವರ್ಷದ ಬಳಿಕ ನಾನು ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬಾಗಲಕೋಟೆ ಜಿಲ್ಲೆಯ ವಿಶೇಷ ಚೇತನ ಲಕ್ಷಿ ಮಾತನಾಡಿ, ನಾನು ವಿಶೇಷಚೇತನ ವ್ಯಕ್ತಿ ಅಂತ ಎಲ್ಲೂ ಕೆಲಸ ಕೊಡುತ್ತಿರಲಿಲ್ಲ. ಈಗ ನರೇಗಾದಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಹಮ್ಮೆಯಾಗುತ್ತಿದೆ. ಮೊದಲೆಲ್ಲ ಕೆಲಸ ಹುಡುಕುತ್ತಾ ನಮ್ಮೂರಿನವರು ಮಂಗಳೂರು ಮತ್ತಿತರ ಕಡೆ ಗುಳೇ ಹೋಗುತ್ತಿದ್ದರು. ಈಗ ಆ ಸಮಸ್ಯೆ ಪರಿಹಾರವಾಗಿದೆ.
ನರೇಗಾದಲ್ಲಿ ಪ್ರತಿದಿನ ಈಗ 289 ರೂ. ಕೂಲಿ ಕೊಡುತ್ತಿದ್ದಾರೆ. ಎಲ್ಲಾ ಕಡೆ ಬೆಲೆ ಏರಿಕೆಯಿಂದ ದಿನನಿತ್ಯದ ಜೀವನ ನಡೆಸಲು ಕಷ್ಟವಾಗುತ್ತಿದೆ. ಆ ಕೂಲಿ ಹಣವನ್ನು 300 ರೂ. ಏರಿಕೆ ಮಾಡಿ ಎಂದು ಚಾಮನಗರ ಜಿಲ್ಲೆ ಕೊಳ್ಳೆಗಾಲದ ರಾಣಿ ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿನ 48 ಅತ್ಯುತ್ತಮ ಮಹಿಳಾ ಕಾಯಕ ಬಂಧುಗಳಿಗೆ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು.
ನರೇಗಾ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹಾಗೂ ಇಲಾಖೆಯ ನಿರ್ದೇಶಕರಾದ ಪ್ರಾಣೇಶ್ ರಾವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.