ನವದೆಹಲಿ, (www.bengaluruwire.com) : ಕೇಂದ್ರ ಸರ್ಕಾರವು ಒಂದೆಡೆ ಜಿಎಸ್ ಟಿ ಕನಿಷ್ಠ ಹಂತದ ತೆರಿಗೆ ದರ ಏರಿಕೆಗೆ ಒಲವು ತೋರಿಸುತ್ತಿರುವ ಮಧ್ಯೆಯೇ, ಏ.1 ರಿಂದ ಜಾರಿಗೆ ಬರುವಂತೆ ದ್ವಿಚಕ್ರ ವಾಹನ, ಕಾರು ಹಾಗೂ ಸಾರಿಗೆ ವಾಹನಗಳ ಥರ್ಡ್ ಪಾರ್ಟಿ (TP) ವಿಮೆಯ ಕಂತಿನ ದರವನ್ನು ಏರಿಕೆ ಮಾಡಲು ಪ್ರಸ್ತಾವನೆ ಇರಿಸಿದೆ.
ಇದರಿಂದಾಗಿ ವಾಹನಗಳ ಇನ್ಶುರೆನ್ಸ್ ಪ್ರಿಮಿಯಂ ಮೊತ್ತವು ಏರಿಕೆಯಾಗುವ ನಿರೀಕ್ಷೆಯಿದೆ. ಪರಿಷ್ಕೃತ ಪ್ರಿಮಿಯಂ ದರ ಏರಿಕೆ ಕುರಿತಂತೆ ಕರಡು ಅಧಿಸೂಚನೆ ಹೊರಡಿಸಿದ್ದು ಮಾರ್ಚ್ ಅಂತ್ಯದವರೆಗೆ ಸಂಬಂಧಿಸಿದವರಿಂದ ಅನಿಸಿಕೆ- ಅಭಿಪ್ರಾಯಗಳನ್ನು ನೀಡಲು ಕಾಲಾವಕಾಶ ನೀಡಿದೆ.
ಇದೇ ಪ್ರಥಮ ಬಾರಿಗೆ ರಸ್ತೆ ಸಾರಿಗೆ ಸಚಿವಾಲಯವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ (IRDA) ಜೊತೆ ಸಮಾಲೋಚನೆ ನಡೆಸಿ ಥರ್ಡ್ ಪಾರ್ಟಿ ವಿಮಾ ಮೊತ್ತವನ್ನು ಏರಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಪ್ರಸ್ತುತ ದೇಶದಲ್ಲಿ ವಿಮಾ ಕಂತು ಹೆಚ್ಚಳದ ತೀರ್ಮಾನವನ್ನು ಐಆರ್ ಡಿಎ ಕೈಗೊಳ್ಳುತ್ತಿದೆ.
ರಸ್ತೆ ಸಾರಿಗೆ ಸಚಿವಾಲಯವು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ 1,000 ಸಿಸಿ (Cubic Capacity – CC) ಕಾರಿನ ಥರ್ಡ್ ಪಾರ್ಟಿ ವಿಮಾ ಮೊತ್ತ 2019 ರಲ್ಲಿ 20,72 ರೂ. ನಷ್ಟಿತ್ತು. ಅದನ್ನು 20,94 ರೂ.ನಷ್ಟು ಹೆಚ್ಚಳವಾಗಲಿದೆ. 1,000 ಸಿಸಿಯಿಂದ 1,500 ಸಿಸಿ ಒಳಗಿರುವ ಕಾರುಗಳ ವಿಮಾ ಮೊತ್ತ ದರ 3,221₹ ನಿಂದ 3,416ಕ್ಕೆ ಏರಿಕೆಯಾಗಲಿದೆ.
ಇದೇ ರೀತಿ 150 ಸಿಸಿಗೂ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮೊತ್ತವು 1,366 ರೂ.ನಷ್ಟು ಮತ್ತು 350 ಸಿಸಿಗೂ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಪ್ರಿಮಿಯಮ್ 2,804ರಷ್ಟು ಏರಿಕೆಯಾಗಲಿದೆ.
ಆದರೆ ಎಲೆಕ್ಟ್ರಿಕ್ ಕಾರು, ಟೂವೀಲರ್, ಸರಕು ಹಾಗೂ ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಶೇ.15ರಷ್ಟು ರಿಯಾಯಿತಿ ನೀಡಲು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಥರ್ಡ್ ಪಾರ್ಟಿ ಪ್ರಿಮಿಯಮ್ ಮೊತ್ತಕ್ಕೆ ಶೇ.7.5 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
30ಕಿಲೋ ವಾಟ್ ಒಳಗಿನ ವಿದ್ಯುತ್ ಚಾಲಿತ ಕಾರಿನ ವಿಮಾ ಮೊತ್ತವು 1,780ರಷ್ಟು ಹಾಗೂ 30 ಕಿಲೋ ವಾಟ್ ಗಿಂತ ಹೆಚ್ಚು ಮತ್ತು 60 ಕೋ ವಾಟ್ ಗಿಂತ ಕಡಿಮೆಯಿರುವ ವಿದ್ಯುತ್ ಚಾಲಿತ ವಾಹನಗಳ ಇನ್ಶುರೆನ್ಸ್ ಪ್ರಿಮಿಯಮ್ ಅನ್ನು 2,904/₹ ನಿಗಧಿ ಮಾಡಲಾಗಿದೆ.