ಬೆಂಗಳೂರು, (www.bengaluruwire.com) : ನಗರದಲ್ಲಿ ನಡೆಯುತ್ತಿರುವ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಾಲ್ಕನೇ ದಿನವಾದ ಇಂದು ಒರಾಯನ್ ಮಾಲ್ ನಲ್ಲಿ ಕನ್ನಡ ಮತ್ತು ಕನ್ನಡೇತರ ಚಲನಚಿತ್ರ ನಿರ್ದೇಶಕರಿಂದ ಎರಡು ಪ್ರತ್ಯೇಕ ಪತ್ರಿಕಾಗೋಷ್ಠಿ ಹಾಗೂ ಚಲನಚಿತ್ರೋತ್ಸವದ “ಬೆಳ್ಳಿರೇಖೆ” ಬುಲಿಟಿನ್ ಬಿಡುಗಡೆಯಾದವು.
ಕನ್ನಡ, ಏಷ್ಯನ್ ಹಾಗೂ ಚಿತ್ರಭಾರತಿ ವಿಭಾಗಗಳ ಸ್ಪರ್ಧೆಯಲ್ಲಿ ಉಳಿದ ಚಿತ್ರಗಳ ಎದುರು ಅತಿಹೆಚ್ಚು ಪ್ರವೇಶ ಪಡೆದ ಚಿತ್ರಗಳಾದ “ಗಿಳಿಯು ಪಂಜರದೊಳಗಿಲ್ಲ”, “ಭುಗಿಲು”, “ಸ್ಟಾಕರ್”, “ಜಗನ್ನಥದಾಸರು” ಚಿತ್ರ ನಿರ್ದೇಶಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಇದೇ ವೇಳೆ ಮಾತನಾಡಿದ “ಮೈ ಚಿಲ್ಡ್ರನ್ ಇಂಡಿಯಾ ಡಾಟ್ ಕಾಮ್” ಮಕ್ಕಳ ಸಿನಿಮಾ ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ಚಿತ್ರೋತ್ಸವಗಳಲ್ಲಿ ಚಿತ್ರಗಳನ್ನು ಆನ್ ಲೈನ್, ಒಟಿಟಿ ಅಥವಾ ಹೈಬ್ರೀಡ್ ನಂತಹ ವರ್ಚುವಲ್ ಮಾದರಿಯಲ್ಲಿ ನೋಡುವುದು, ಪ್ರದರ್ಶಿಸುವುದು ಸರಿಯಲ್ಲ. ಪ್ರೇಕ್ಷಕರು ಚಿತ್ರೋತ್ಸವಕ್ಕೆ ಬಂದು ಖುದ್ದಾಗಿ ಭೇಟಿ ಮಾಡಿ ನೋಡಿದಾಗ ಮಾತ್ರ ಆ ಚಿತ್ರೋತ್ಸವ ಯಶಸ್ವಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ಕರೋನಾ ಮೂರನೇ ಅಲೆಯ ಬಳಿಕ ಒತ್ತಡದಲ್ಲಿ ಆರಂಭವಾದಾಂತೆ ಕಂಡರೂ, ಅದರ ಯಶಸ್ವಿಗೆ ಚಲನಚಿತ್ರೋತ್ಸವ ತಂಡ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ದೇಶ ವಿದೇಶಗಳ ಚಲನಚಿತ್ರ ಪ್ರದರ್ಶನದ ಶೆಡ್ಯೂಲ್ ಮಾಡುವ ತ್ರಾಸದಾಯಕ ಕೆಲಸವನ್ನು ಚಿತ್ರೋತ್ಸವ ತಂಡ ಉತ್ತಮವಾಗಿ ನಿರ್ವಹಿಸಿದೆ. ಸಿನಿಮಾ ಪ್ರದರ್ಶನದ ಶೆಡ್ಯೂಲ್ ಮಾಡುವುದು ಒಂದು ಕಲೆ ಎಂದರು.
ಕರೋನಾ ಸಂಕಷ್ಟ ಕಾಲದಲ್ಲಿ ಕಳೆದ ಎರಡು ವರ್ಷಗಳಲ್ಲಿ ಆನ್ ಲೈನ್ ಮೂಲಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಾವು ಪಾಲ್ಗೊಂಡಿದ್ದರೂ, ಭೌತಿಕವಾಗಿ ಚಿತ್ರೋತ್ಸವದಲ್ಲಿ ಪಾಲ್ಗೊಂಡಾಗ ಆಗುವ ಅನುಭವ ಆಗಿಲ್ಲ. ಆನ್ ಲೈನ್ ಮೂಲಕ ಚಲನಚಿತ್ರೋತ್ಸವ ನಡೆಸುವುದಾದರೆ, ಅದಿಕ್ಕೆ ಬೇರೆ ರೀತಿಯಲ್ಲಿ ಹೆಸರಿಡಬೇಕಾಗುತ್ತದೆ ಎಂದು ಅವರು ಚಲನಚಿತ್ರೋತ್ಸವ ಕುರಿತಂತೆ ವಿಶ್ಲೇಷಿಸಿದರು.
“ಜಗನ್ನಥದಾಸರು” ಚಿತ್ರದ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ, ದಾಸ ಪರಂಪರೆಯ ಜಗನ್ನಥದಾಸರ ಬಗ್ಗೆ ಇರುವ ಐತಿಹ್ಯಗಳು ಹಾಗೂ ಕಥೆಗಳನ್ನು ಇಟ್ಟುಕೊಂಡು ಸಂಶೋಧನೆ ನಡೆಸಿ ಈ ಸಿನಿಮಾ ನಿರ್ಮಿಸಿದೆವು. ಈ ಪ್ರಯೋಗ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಮುಂದೆಯೂ ದಾಸ ಪರಂಪರೆಯ ಚಿತ್ರ ನಿರ್ಮಾಣವನ್ನು ನಿರ್ಮಿಸಲಿದ್ದೇವೆ ಎಂದು ಹೇಳಿದರು.
ಮೂಢನಂಬಿಕೆ, ಮೌಢ್ಯ, ಜ್ಯೋತಿಷ್ಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ, “ಗಿಳಿಯು ಪಂಜರದೊಳಗಿಲ್ಲ” ಎಂಬ ಸಿನಿಮಾ ನಿರ್ಮಿಸಿದ್ದಾಗಿ ನಿರ್ದೇಶಕ ರಾಮದಾಸ ನಾಯ್ಡು ಹೇಳಿದರು.
ಕುಂದಾಪುರ ಕಡೆಯ ದಲಿತನೊಬ್ಬನ ಸ್ವಾತಂತ್ರ್ಯ ಹೋರಾಟ ಕಥೆಯನ್ನು ಪತ್ರಕರ್ತ ಚಾಂದ್ ಅವರ ಕಥೆ ಆಧರಿಸಿ ನಿರ್ದೇಶಕ ಚಂದ್ರಕಾಂತ ಕೋಡ್ಪಾಡಿ ತಾವು ನಿರ್ಮಿಸಿದ “ಭುಗಿಲು” ಚಿತ್ರದ ಬಗ್ಗೆ ಮಾತನಾಡಿದರು.
“ಸ್ಟಾಕರ್” ಚಿತ್ರ ನಿರ್ದೇಶಕ ಕಿಶೋರ್ ಭಾರ್ಗವ್ ಮಾತನಾಡಿ, ಹದಿಹರೆಯದ ಹೆಣ್ಣಮಗಳೊಬ್ಬಳು ಸಿನಿಮಾ ಮಂದಿರಕ್ಕೆ ಹೋದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿ ತಂದೆಯ ಸಂಪರ್ಕಕ್ಕೆ ಸಾಧ್ಯವಾಗದಿದ್ದಾಗ ಉಂಟಾದ ಆತಂಕ ಹಾಗೂ ಅನಂತರ ನಡೆಯುವ ತಿರುವುಗಳನ್ನು ಆಧರಿಸಿ ಚಿತ್ರ ನಿರ್ಮಿಸಿದ್ದಾಗಿ ಹೇಳಿದರು.
ಈ ಪತ್ರಿಕಾಗೋಷ್ಠಿ ಬಳಿಕ ಕೇರಳ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಮಾಯಾ ಅನಿಲ್‌ಕುಮಾರ್, ಬಂಗಾಳಿ ಮತ್ತು ಮಲಯಾಳಂ ಭಾಷೆಯ “ನಿಷಿದ್ದೊ” ಚಿತ್ರ ನಿರ್ದೇಶಕ ತಾರಾ ರಾಮಾನುಜಮ್, “ಅವನೊವಿಲೋನ” ಮಲಯಾಳಂ ಚಿತ್ರದ ನಿರ್ದೇಶಕರಾದ ಟಿ.ದೀಪೇಶ್, ಟಿ.ಗೋವಿಂದನ್ ಪತ್ರಿಕಾಗೋಷ್ಠಿ ನಡೆಸಿ ಚಿತ್ರೋದ್ಯಮದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪತ್ರಿಕಾಗೋಷ್ಠಿ ಬಳಿಕ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ “ಬೆಳ್ಳಿರೇಖೆ” ಬುಲಿಟಿನ್ ಅನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ವಾರ್ತಾ ಇಲಾಖೆಯ ಹಿಮಂತ್, ಹಿರಿಯ ಪತ್ರಕರ್ತರಾದ ಗಂಗಾಧರ ಮುದಲಿಯಾರ್, ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಆರ್.ಜೆ.ಹಳ್ಳಿ ನಾಗರಾಜ್ ಮತ್ತಿತರರು ಹಾಜರಿದ್ದರು.
ನಾಲ್ಕನೇ ದಿನದ ಚಲನಚಿತ್ರೋತ್ಸವ ಭಾನುವಾರದ ಕಾರಣ ಒರಾಯನ್ ಮಾಲ್ ನಲ್ಲಿ ದೇಶ- ವಿದೇಶಗಳ ಚಿತ್ರಪ್ರದರ್ಶನ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು, ಚಲನಚಿತ್ರರಂಗದವರು, ಸಿನಿಮಾ ವಿದ್ಯಾರ್ಥಿಗಳು, ಪತ್ರಕರ್ತರು ಆಗಮಿಸಿದ್ದರು.