ಬೆಂಗಳೂರು, (www.bengaluruwire.com) : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಿಜೆಪಿ ಅಧಿಕಾರ ಅವಧಿಯ ಕೊನೆಯ ಹಾಗೂ ತಮ್ಮ ಚೊಚ್ಚಲ ಬಜೆಟ್ನಲ್ಲಿ 2,04,586.68 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದರು.
ಆ ಪೈಕಿ 2022-23ನೇ ಸಾಲಿನ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿ ನುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು 8,409 ಕೋಟಿ ರೂ. ಅನುದಾನ ಒದಗಿಸಿ, ನಗರಕ್ಕೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. 6,000 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಿಎಂ ಬಜೆಟ್ನಲ್ಲಿ ತಿಳಿಸಿದ್ದಾರೆ.
ನಮ್ಮ ಮೆಟ್ರೋ ಗೆ ಬಜೆಟ್ ನಲ್ಲಿ ಪ್ರಕಟಿಸಿರುವ ಅಂಶಗಳು :
2021-22ನೇ ಸಾಲಿನಲ್ಲಿ ನಮ್ಮ ಮೆಟ್ರೊ 2ನೇ ಹಂತದಲ್ಲಿ 7.53 ಕಿ.ಮೀಗಳ ಹೆಚ್ಚುವರಿ ಮಾರ್ಗ ಕಾರ್ಯರಂಭ ಮಾಡಿದೆ. 2022-23ನೇ ಸಾಲಿನಲ್ಲಿ 33 ಕಿ.ಮೀ ಮಾರ್ಗವನ್ನು ಸೇರಿಸಲಾಗುವುದು. ಇದರಿಂದ ಒಟ್ಟಾರೆ 89 ಕಿ.ಮೀಗಳ ಉದ್ದದ ಮೆಟ್ರೋ ಮಾರ್ಗವನ್ನು ಹೊಂದಿದಂತಾಗುತ್ತದೆ.
ಮಾರ್ಚ್ 2025ರ ಒಳಗೆ ಸೆಂಟ್ರಲ್ ಸಿಲ್ಕ್ಸ್ ಬೋರ್ಡ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58.19 ಕಿ.ಮೀ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
11,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ನಮ್ಮ ಮೆಟ್ರೋ ಹಂತ-3 ಯೋಜನೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಲ್ಲಿಕೆ ಮಾಡಲಾಗುವುದು. ಇದು ಹೆಬ್ಬಾಳದಿಂದ ಜೆಪಿನಗರದ ತನಕ 32 ಕಿ.ಮೀ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 13 ಕಿ.ಮೀ.ಗಳ ಮಾರ್ಗವನ್ನು ಒಳಗೊಂಡಿದೆ.
2022-23ನೇ ಸಾಲಿನಲ್ಲಿ 15,000 ಕೋಟಿ ರೂ. ವೆಚ್ಚದಲ್ಲಿ 37 ಕಿ.ಮೀ. ಉದ್ದದ ಹೊಸ ಮೆಟ್ರೋ ಮಾರ್ಗಕ್ಕೆ ಡಿಪಿಆರ್ ತಯಾರಿಸಲು ಕ್ರಮವಹಿಸಲಾಗುವುದು.
ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಯನ್ನು ಹಾದು ಹೋಗಿ ಹೊಸೂರು ರಸ್ತೆ ಸೇರುವ 73 ಕಿಮೀ. ಉದ್ದ ಮತ್ತು 100 ಮೀ ಅಗಲದ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಹಾಗೂ ಭೂಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರೂ. ಯೋಜನೆಯನ್ನು ಪ್ರಸಕ್ತ ವರ್ಷದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಗುತ್ತಿಗೆದಾರರೇ ಭೂಸ್ವಾಧೀನ ಮಾಡಿಕೊಂಡು, ಯೋಜನಾ ನಿರ್ಮಾಣ ವೆಚ್ಚ ಭರಿಸುವ ಡಿಬಿಎಫ್ ಒಟಿ (DBFOT) ಮಾದರಿಯಲ್ಲಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು.
ಗುರುಗುಂಟೆಪಾಳ್ಯ ವಾಹನ ದಟ್ಟಣೆಗೆ ಜಂಟಿಕ್ರಮ :
ಗೊರಗುಂಟೆಪಾಳ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಗ್ರೇಡ್ ಸೆಪರೇಟರ್ ನಿರ್ಮಾಣ, ಕೇಂಪೆಗೌಡ ಬಡಾವಣೆಯಲ್ಲಿ 1297 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಆಧುನಿಕ ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ. ಎನ್ ಜಿಇಎಫ್ (NGEF) ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ ಮಾದರಿಯಲ್ಲಿ ಗ್ರೀನ್ ಎಕ್ಸ್ ಪೋ ನಿರ್ಮಾಣ ಮಾಡಲು ಸರ್ಕಾರ ಘೋಷಿಸಿದೆ.
ಮೆಗಾ ಜ್ಯುವೆಲ್ಲರಿ ಪಾರ್ಕ್:
ಇನ್ನು ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆಗೆ ಮಾಡಲು ಸರ್ಕಾರ ಉದ್ದೇಶಿಸಿದ್ದು, ಇದರಿಂದ 10 ಸಾವಿರ ಜನರಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ ಬೆಂಗಳೂರು ನಗರ ಅಭಿವೃದ್ಧಿಗೆ 8,409 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ.
ರಾಜಧಾನಿ ಬೆಂಗಳೂರಿಗೆ ಏನೆಲ್ಲ ಸಿಕ್ತು ?
ಬಿಬಿಎಂಪಿ ಚುನಾವಣಾ ದೃಷ್ಟಿಯಿಂದ ಬೆಂಗಳೂರಿಗೆ ಸಿಎಂ ಬೊಮ್ಮಾಯಿ ಏನೆಲ್ಲ ಕೊಟ್ರು ಅಂತ ನೋಡೊಣ :
ಬೆಂಗಳೂರು ಯಲಹಂಕದಲ್ಲಿ 350 ಎಕರೆ ವಿಸ್ತೀರ್ಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ(ಲಾಲ್ ಬಾಗ್, ಕಬ್ಬನ್ ಪಾರ್ಕ್ ಮಾದರಿ).
ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ, 10 ಸಾವಿರ ಜನರಿಗೆ ಉದ್ಯೋಗಾವಕಾಶ.
ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಟ್ಟು 498 “ನಮ್ಮ ಕ್ಲಿನಿಕ್ಗಳ ಸ್ಥಾಪನೆ
ಚೆನ್ನೈ- ಬೆಂಗಳೂರು- ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ, ಕೇಂದ್ರದೊಂದಿಗೆ ಸಹಯೋಗ.
15,267 ಕೋಟಿ ರೂ. ವೆಚ್ಚದ ಬೆಂಗಳೂರು ಉಪನಗರ ರೈಲ್ವೇ ಯೋಜನೆ ಜಾರಿಗೆ ಕ್ರಮ. 2026 ಇಸವಿ ವೇಳೆಗೆ ಯೋಜನೆ ಪೂರ್ಣ. ಚಿಕ್ಕಬಾಣಾವರ- ಬೈಯಪ್ಪನಹಳ್ಳಿ ಕಾರಿಡಾರ್ ಕಾಮಗಾರಿ ಶೀಘ್ರ ಆರಂಭ.
6 ಲಕ್ಷ ಬಿ ವಹಿ ಖಾತೆ – ಎ ಖಾತೆಗೆ ಬದಲಾಯಿಸಲು ಕ್ರಮ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿರುವ ದಾಖಲಿಸಿರುವ 6 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು ಎ- ವಹಿಗೆ ದಾಖಲಿಸಲು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮಗಳಡಿ ಸೂಕ್ತ ಕಾನೂನು ಕ್ರಮ.
ಬೆಂಗಳೂರಿನ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ನಗರದ ಆಯ್ದ 20 ಶಾಲೆಗಳನ್ನು 89 ಕೋಟಿ ರೂ.ಗಳಲ್ಲಿ ಉನ್ನತೀಕರಿಸಿ, ಬೆಂಗಳೂರು ಪಬ್ಲಿಕ್ ಶಾಲೆಗಳ ಅಭಿವೃದ್ಧಿ.
ನಾಗರಿಕ ಸೌಲಭ್ಯಗಳು :
ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 2,671 ಎಕರೆ ಜಮೀನಿನ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬಾಕಿ ಇರುವ 1,297 ಎಕರೆ ಭೂಸ್ವಾಧೀನ ಪೂರ್ಣಗೊಳಿಸಿ, ಆಧುನಿಕ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಕ್ರಮ. ಸರ್.ಎಂ.ವಿಶ್ವೇರಯ್ಯ, ಬನಶಂಕರಿ 6ನೇ ಹಂತ, ಅಂಜನಾಪುರ ಬಿಡಿಎ ಬಡಾವಣೆಗಳಲ್ಲಿ 404 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (BDA) ಬಾಕಿಯಿರುವ ಮೂಲಸೌಕರ್ಯ ಕಲ್ಪಿಸಿ ಬಿಬಿಎಂಪಿಗೆ ಹಸ್ತಾಂತರ.
ಬೆಂಗಳೂರಿಗೆ ಕಾವೇರಿ ನೀರು 5ನೇ ಹಂತ 2024-25 ಇಸವಿಗೆ ಪೂರ್ಣ :
ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ದಶಲಕ್ಷ ಲೀ. ಕಾವೇರಿ ನೀರನ್ನು ತರಲು 5,550 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತ ಜಾರಿಯಲ್ಲಿದ್ದು, ಈತನಕ 1,556 ಕೋಟಿ ರೂ. ವೆಚ್ಚವಾಗಿದೆ. ಯೋಜನೆ ಪೂರ್ಣ ಪ್ರಮಾಣದಲ್ಲಿ ಪ್ರಗತಿಯಲ್ಲಿದ್ದು, 2024-25ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.
1,500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿರುವ ಹಳೆಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ಉನ್ನತೀಕರಣ. ಮೆಗಾಸಿಟಿ ರಿವಾಲ್ವಿಂಗ್ ನಿಧಿ ಅಡಿಯಲ್ಲಿ ಅರ್ಕಾವತಿ ನೀರಿನ ಮೂಲವನ್ನು ಪುನರುಜ್ಜೀವನಗೊಳಿಸುವ ಜೊತೆಗೆ ಎತ್ತಿನಹೊಳೆ ಯೋಜನೆಯಿಂದ 1.7 ಟಿಎಂಸಿ ನೀರನ್ನು ಯೋಜನಾಬದ್ಧವಾಗಿ ಬಳಸಲು 312 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿಯನ್ನು 2022-23 ನೇ ಸಾಲಿನಲ್ಲಿ ಮುಕ್ತಾಯಗೊಳಿಸುವುದು.
ರಾಜಕಾಲುವೆ ಕೊಳಚೆ ನೀರು ಬೇರ್ಪಡಿಸಿ ವಿಹಾರ ತಾಣ ಅಭಿವೃದ್ಧಿ :
ಕೋರಮಂಗಲ ರಾಜಕಾಲುವೆಯನ್ನು 195 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೆ.ಆರ್.ಮಾರುಕಟ್ಟೆ ಜಂಕ್ಷನ್ ನಿಂದ ಬೆಳ್ಳಂದೂರು ಕೆರೆವರೆಗೆ ಕೆ-100 ಸಿಟಿಜನ್ ವಾಟರ್ ಯೋಜನೆಯಡಿ ಕೊಳಚೆ ನೀರನ್ನು ಬೇರ್ಪಡಿಸಿ ನಾಗರೀಕರಿಗೆ ವಿಹಾರ ತಾಣವಾಗಿ ಅಭಿವೃದ್ಧಿ. ನಗರದಲ್ಲಿನ ಮಳೆ ನೀರು ಹರಿವಿಗೆ ಮಳೆ ನೀರು ನೀರುಗಾಲುವೆ, ಪ್ರವಾಹ ಉಂಟಾಗದಂತೆ ತಡೆಯಲು ರಾಜಕಾಲುವೆ ಅಭಿವೃದ್ಧಿಗೆ 1,500 ಕೋಟಿ ರೂ. ಯೋಜನೆ ರೂಪಿಸಲಾಗುತ್ತೆ.
ಮಿನಿ ಕೈಗಾರಿಕಾ ಪಾರ್ಕ್ :
ಪೀಣ್ಯಾ ಕೈಗಾರಿಕಾ ಪ್ರದೇಶದ ಮಾದರಿಯಲ್ಲಿ ಅತಿ ಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.
ಮೆಟ್ರೋ ರೈಲ್ವೆ ಜೊತೆ ಭಾರತೀಯ ರೈಲ್ವೆ ಸಂಪರ್ಕ ಕಾಮಗಾರಿ :
ವೈಟ್ಫೀಲ್ಡ್, ಕೆ.ಆರ್. ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ನಿಲ್ದಾಣದ ಸಂಪರ್ಕ ಕಾಮಗಾರಿ ಅನುಷ್ಠಾನ
ಬನಶಂಕರಿ ಜಂಕ್ಷನ್ನಲ್ಲಿ ರೂ. 45 ಕೋಟಿ ವೆಚ್ಚದಲ್ಲಿ ಸ್ಕೈವಾಕ್. ಮಡಿವಾಳ, ಎಲೆಮಲ್ಲಪ್ಪಶೆಟ್ಟಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಬಿಬಿಎಂಪಿಯಿಂದ ರೂಪುರೇಷೆ ಸಿದ್ದಪಡಿಸಲಾಗುವುದು.