ಬೆಂಗಳೂರು, (www.bengaluruwire.com) : ಮಹಾಶಿವರಾತ್ರಿ ಶಿವಸ್ಮರಣೆಯ ಪವಿತ್ರರಾತ್ರಿಯಂದು ನಗರದ ಶೃಂಗೇರಿ ಶಾಖಾ ಮಠವಾದ ಶಂಕರಮಠದಲ್ಲಿ ಘನಪಾಠದ ಪಾರಾಯಣದ ಜೊತೆ ಚತುರ್ವೇದ ಸಹಿತ ಚತುರ್ಯಾಮ ಮಹಾಶಿವರಾತ್ರಿ ಪೂಜೆ ಬುಧವಾರದ ಸೂರ್ಯೋದಯವರೆಗೆ ನಡೆಯಲಿದೆ.
ಋಗ್ವೇದ, ಶುಕ್ಲಯಜುರ್ವೇದ, ಕೃಷ್ಣಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದದಲ್ಲಿನ ರುದ್ರಮಂತ್ರಗಳನ್ನು ವೇದ ವಿದ್ಮನ್ಮಣಿಗಳು ಪಠಿಸುತ್ತಾ ಶಿವಾರಾಧನೆ ಕೈಗೊಳ್ಳುತ್ತಿದ್ದಾರೆ. ಯಾಮಗಳ ಅಂತರದಲ್ಲಿ ನಾಮ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು.
ಶೃಂಗೇರಿ ಜಗದ್ಗುರು ಅನಂತ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಶಂಕರಮಠದಲ್ಲಿ ಮಹಾಶಿವರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಮಹಾಶಿವರಾತ್ರಿಯಂದು ಪರಮೇಶ್ವರನಿಗೆ ವೇದೋಕ್ತ ಕ್ರಮದಲ್ಲಿ ಪೂಜೆ ಸಲ್ಲಿಸುತ್ತಾರೆ. ವೇದ ವಿದ್ವಾಂಸರು ವೇದಗಳನ್ನು ಪಠಿಸುತ್ತಾ ಷೋಡಶೋಪಚಾರಗಳನ್ನು ಮಾಡುತ್ತಾರೆ. ವೇದಗಳು ನಮ್ಮ ಸನಾತನ ಧರ್ಮದ ಬುನಾದಿಯಾಗಿದೆ. ಇವು ಜ್ಞಾನವನ್ನು ಕೊಡುವ ಮೂಲಕ ಆತ್ಮೋನ್ನತಿಗೆ ಸಹಕಾರಿಯಾಗಿದೆ.
ಮಹಾಶಿವರಾತ್ರಿಯು ಶಿವಸ್ಮರಣೆಯ ಪವಿತ್ರರಾತ್ರಿಯಾಗಿದ್ದು, ಸನಾತನ ಧರ್ಮಾನುಯಾಯಿಗಳಲ್ಲಿ ಅತ್ಯಂತ ಪ್ರಮುಖವಾದ ವಾರ್ಷಿಕ ವ್ರತವಾಗಿದೆ. ಈ ವ್ರತವನ್ನು ಸಾಮಾನ್ಯವಾಗಿ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆಚರಿಸುವುದು ವಾಡಿಕೆ.