ಬೆಂಗಳೂರು, (www.bengaluruwire.com) : ಉಕ್ರೇನ್ ನ ಖಾರ್ಕೀವ್ ಮೇಲೆ ರಷ್ಯಾ ಒಂದೇ ಸಮನೆ ದಾಳಿ ನಡೆಸುತ್ತಿದೆ. ಮಂಗಳವಾರ ಬೆಳಗ್ಗೆ ಖಾರ್ಕೀವ್ ಸೂಪರ್ ಮಾರ್ಕೆಟ್ ಮುಂಭಾಗ ನಡೆದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕ ಮೂಲದ ನವೀನ್ ಗ್ಯಾನಗೌಡರ್ (21) ಎಂಬ ವಿದ್ಯಾರ್ಥಿ ಬಲಿಯಾಗಿದ್ದಾನೆ ಎಂದು ವಿದೇಶಾಂಗ ಇಲಾಖೆ ದೃಢಪಡಿಸಿದೆ.
ಭಾರತ ಸರ್ಕಾರ ಉಕ್ರೇನ್ ನಲ್ಲಿರುವ ಭಾರತೀಯರನ್ನು ಉಕ್ರೇನ್ ಗಡಿಭಾಗದ ರಾಷ್ಟ್ರಗಳಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಕರತರಲು ನಿರಂತರ ಪ್ರಯತ್ನ ಮುಂದುವರೆಸುತ್ತಿರುವ ಹೊತ್ತಿನಲ್ಲಿಯೇ ಇಂತಹ ದುಖಃಕರ ವಿಚಾರ ಹೊರಬಿದ್ದಿದೆ. ಉಕ್ರೇನ್ ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿರುವ ರಷ್ಯಾದ ಮಿಲಿಟರಿ ಪಡೆಗಳು ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲು ನಾಗರೀಕರ ಮೇಲೆ ದಾಳಿಯನ್ನು ನಡೆಸುತ್ತಿದೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಇದನ್ನು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಖಚಿತಪಡಿಸಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೂ ದಾಳಿಯನ್ನು ಪ್ರಾರಂಭಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಉಕ್ರೇನ್ ನ ಖಾರ್ಕೀವ್ ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ. ಈ ಕುರಿತು ನವೀನ್ ಅವರ ತಂದೆ ಶೇಖರ್ ಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವಾನ ಹೇಳಿದ್ದೇನೆ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರುವ ಎಲ್ಲಾ ಪ್ರಯತ್ನ ನಡೆಸಲಾಗುವುದು. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ.” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ನವೀನ್ ಗ್ಯಾನಗೌಡರ್ ಮೃತದೇಹವನ್ನು ಖಾರ್ಕಿವ್ ನಗರದ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೃತ ನವೀನ್ ಸ್ನೇಹಿತರು ಆತನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಚಳಗೇರಿಯಲ್ಲಿರುವ ನವೀನ್ ಕುಟುಂಬಸ್ಥರು ಈ ವಿಷಯದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದು, ಗ್ರಾಮಸ್ಥರು, ಸ್ನೇಹಿತರು, ಸಂಬಂಧಿಕರು ಗ್ರಾಮದ ಅವರ ಮನೆ ಮುಂದೆ ನೆರೆದಿದ್ದಾರೆ.
ಇಂದೇ ಉಕ್ರೇನ್ ರಾಜಧಾನಿ ಕೀವ್ ತೊರೆಯಲು ಭಾರತೀಯರಿಗೆ ಕರೆ :
ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ಮೇಲೆ ನಡೆಸುತ್ತಿರುವ ದಾಳಿಯ ತೀವ್ರತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯರು ಅದರಲ್ಲೂ ವಿದ್ಯಾರ್ಥಿಗಳು ಈ ಕೂಡಲೇ ರೈಲು ಅಥವಾ ಇನ್ನಾವುದೇ ರೀತಿಯ ವಿಧಾನವನ್ನು ಬಳಸಿ ಕೀವ್ ನಗರವನ್ನು ತೊರೆದು ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುವಂತೆ ಉಕ್ರೇನ್ನಲ್ಲಿರುವ ಭಾರತದ ರಾಯಭಾರಿ ಸೂಚನೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ ಕಚೇರಿ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರು ಮಂಗಳವಾರವೇ ತುರ್ತಾಗಿ ಕೀವ್ ತೊರೆಯಬೇಕು ಎಂದು ತಿಳಿಸಿದೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಕ್ಕೆ ಮನೋಜ್ ರಾಜನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನಲ್ಲಿರುವ ಕರ್ನಾಟಕದ ನಾಗರೀಕರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಉಕ್ರೇನ್ ಮತ್ತಿತರ ಗಡಿಭಾಗದ ದೇಶದಲ್ಲಿರುವ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.