ವಿನ್ನಿಟ್ಸಿಯಾ/ ಖಾರ್ಕೀವ್ (ಉಕ್ರೇನ್), (www.bengaluruwire.com) : ಉಕ್ರೇನ್ ರಾಷ್ಟ್ರದ ಮೇಲೆ ಗುರುವಾರದಿಂದ ಯುದ್ಧ ಸಾರಿರುವ ರಷ್ಯಾ ಈಗಾಗಲೇ ಉಕ್ರೇನ್ ನ ಹಲವು ಕಡೆಗಳಲ್ಲಿ ಮಿಸೈಲ್, ಬಾಂಬ್ ದಾಳಿಯನ್ನು ಮುಂದುವರೆಸಿದೆ. ಈ ಸಂದರ್ಭದಲ್ಲಿ ಉಕ್ರೇನ್ ನಲ್ಲಿ ಪರಿಸ್ಥಿತಿಯ ಬಗ್ಗೆ ವಿನ್ನಿಟ್ಸಿಯಾ ನಗರ ಹಾಗೂ ಉಕ್ರೇನ್ ಪೂರ್ವಭಾಗದಲ್ಲಿರುವ ಖಾರ್ಕೀವ್ ನಗರದಲ್ಲಿನ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದುತ್ತಿರುವ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಅಲ್ಲಿಂದಲೇ “ಬೆಂಗಳೂರು ವೈರ್” ನೊಂದಿಗೆ ದೂರವಾಣಿ ಮುಖಾಂತರ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನಿಂದ 400 ಕಿ.ಮೀ ದೂರದಲ್ಲಿರುವ ಖಾರ್ಕೀವ್ ನಗರದಲ್ಲಿ ಬೆಂಗಳೂರಿನ ವಿದ್ಯಾಮಾನ್ಯ ನಗರದವರಾದ ಆರ್.ವಾರುಣಿ ಉಪಾಧ್ಯ ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಂಸ್ ವ್ಯಾಸಂಗ ಮಾಡುತ್ತಿದ್ದಾರೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿರುವ ಕಾರಣ ಹಾಗೂ ರಷ್ಯಾ ಬಾಂಬ್ ದಾಳಿ ಹಿನ್ನಲೆಯಲ್ಲಿ ಸದ್ಯ ಖಾರ್ಕೀವ್ ನಗರದಲ್ಲಿನ ತಮ್ಮ ಅಪಾರ್ಟ್ ಮೆಂಟ್ ಬಿಟ್ಟು ರೂಮ್ ಮೇಟ್ ಗಳ ಜೊತೆ ಹತ್ತಿರದಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಬಾಂಬ್ ಶೆಲ್ಟರ್ ನಂತಹ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ.
ಆಗಾಗ ಬಾಂಬ್ ದಾಳಿಯ ಸದ್ದು ಕೇಳುತ್ತಿರುತ್ತೆ :
ಅಲ್ಲಿನ ಪರಿಸ್ಥಿತಿ ಬಗ್ಗೆ ಅವರು “ಬೆಂಗಳೂರು ವೈರ್” ಜೊತೆ ಮಾತನಾಡಿದ್ದಾರೆ, “ಖಾರ್ಕೀವ್ ಸಿಟಿಯಲ್ಲಿ ಉಕ್ರೇನ್ ನಲ್ಲಿ ರಾಷ್ಟ್ರಾದ್ಯಂತ ತುರ್ತುಪರಿಸ್ಥಿತಿ ಹೇರಿದ ಮೇಲೆ ನಮ್ಮ ಕಾಲೇಜಿಗೆ ತಾತ್ಕಾಲಿಕ ರಜೆ ಘೋಷಿಸಿದ್ದಾರೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ಕರ್ಪ್ಯೂಯಿದೆ. ಹಾಗಾಗಿ ಆ ಸಂದರ್ಭದಲ್ಲಿ ಹೊರಗಡೆ ಓಡಾಡುವಂತಿಲ್ಲ. ನಾವಿರುವ ಖಾರ್ಕೀವ್ ನಗರ ಉಕ್ರೇನ್ ನ ಪೂರ್ವ ಭಾಗದಲ್ಲಿದ್ದು, ರಷ್ಯಾ ಗಡಿಯಿಂದ ಕೇವಲ 42 ಕಿ.ಮೀ ದೂರದಲ್ಲಿದೆ. ಹಾಗಾಗಿ ಆಗಾಗ ರಷ್ಯಾ ಕಡೆಯಿಂದ ಹಾರಿಬರುವ ಬಾಂಬ್ ಮತ್ತು ಕ್ಷಿಪಣಿಗಳ ಸದ್ದು ಕೇಳುತ್ತಲೇ ಇದೆ. ಖಾರ್ಕೀವ್ ನಗರದ ಮೇಲೆ ಅಷ್ಟಾಗಿ ದಾಳಿಯಾಗಿಲ್ಲ. ಆದರೆ ಯುದ್ಧಭೀತಿಯ ಜೊತೆಗೆ ಈಗ ಹಿಮ ಸುರಿಯಲು ಆರಂಭವಾಗಿದೆ.”
ತಾಯ್ನಾಡಿಗೆ ಬರಲು ಕಾತುರರಾಗಿದ್ದೇವೆ :
“ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಕರ್ನಾಟಕದ 100 ರಿಂದ 120 ಜನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೆಲವರು ಭಾರತಕ್ಕೆ ತೆರಳಲು ಗುರುವಾರಕ್ಕೆ ಮುಂಚೆಯೇ ಕೀವ್ ನಿಂದ ವಿಮಾನ ಬುಕಿಂಗ್ ಮಾಡಿದವರು ತಮ್ಮ ದೇಶಕ್ಕೆ ಮರಳಿದ್ದಾರೆ. ಆದರೆ ನಾವೀಗ ದೇಶಕ್ಕೆ ಬರಲು ಕಾತುರರಾಗಿದ್ದೇವೆ. ಆದರೆ ಬರಲು ಸಾಧ್ಯವಾಗುತ್ತಿಲ್ಲ. ವಿದೇಶಾಂಗ ಇಲಾಖೆಯ ಅಧಿಕಾರಿಗಳು ನಮಗೆ, ಉಕ್ರೇನ್ ನಲ್ಲಿರುವ ಹಂಗೇರಿ, ಸ್ಲೋವಾಕಿಯಾ, ರೊಮೇನಿಯಾ ಅಥವಾ ಪೊಲೆಂಡ್ ದೇಶಗಳ ಗಡಿಭಾಗದಲ್ಲಿರುವ ವಿದ್ಯಾರ್ಥಿಗಳು ಅಲ್ಲಿನ ಸ್ಥಳಕ್ಕೆ ಬಂದರೆ ಅಲ್ಲಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆದೊಯ್ಯುವುದಾಗಿ ವಾಟ್ಸಪ್ ಸಂದೇಶದ ಮೂಲಕ ತಿಳಿಸಿದ್ದಾರೆ.”
“ಆದರೆ ನಾವಿರುವ ಕಾರ್ಕೀವ್ ನಿಂದ ಆ ಉಕ್ರೇನ್ ಗಡಿಭಾಗದಲ್ಲಿನ ಆ ರಾಷ್ಟ್ರಗಳ ಬಳಿಗೆ ತೆರಳಲು ಕನಿಷ್ಠ ಒಂದು ಸಾವಿರ ಕಿ.ಮೀ ದೂರ ಹೋಗಬೇಕು. ಅದಕ್ಕಾಗಿ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಹಾಗಾಗಿ ಅಲ್ಲಿಗೆ ಹೋಗಿ ತೊಂದರೆ ಅನುಭವಿಸುವದಕ್ಕಿಂತ ಇದ್ದ ಜಾಗದಲ್ಲೇ ಕಾದು ಭಾರತದ ರಾಯಭಾರ ಕಚೇರಿ ಸಂದೇಶಕ್ಕಾಗಿ ಕಾಯುತ್ತೇವೆ.”
ಅಂಗಡಿ- ಮುಂಗಟ್ಟುಗಳೆಲ್ಲಾ ಖಾಲಿ ಖಾಲಿ- ಎಲ್ಲೆಲ್ಲೂ ಮಾರುದ್ದ ಕ್ಯೂ :
“ರಾಷ್ಟ್ರೀಯ ತುರ್ತುಪರಿಸ್ಥಿತಿ ಹಾಗೂ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ದಾಳಿ ಸಾಧ್ಯತೆಯಿದೆ. ಹಾಗಾಗಿ ಜನರು ಗುರುವಾರವೇ ಅಂಗಡಿಗಳಲ್ಲಿ ತಮಗೆ ಅಗತ್ಯವಾದ ಸಾಮಾನು- ಸರಂಜಾಮುಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ. ಇದರಿಂದಾಗಿ ಹಲವು ಅಂಗಡಿಗಳು ಖಾಲಿಯಾಗಿದೆ. ಈಗ ಕಾರ್ಕೀನ್ ನಾದ್ಯಂತ ಜನರು ಅಗತ್ಯ ಸಾಮಗ್ರಿಗಳ ಖರೀದಿಗೆ ಮಾರುದ್ದ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಎಟಿಎಮ್ ಯಂತ್ರದಿಂದ ಹಣ ಪಡೆದುಕೊಳ್ಳಲು ಬ್ಯಾಂಕ್ ಗಳು ನಿರ್ದಿಷ್ಟ ಮಿತಿ ಹೇರಿದೆ. ಹಲವು ಕಡೆಗಳ ಎಟಿಎಂಗಳಲ್ಲಿ ಹಣವೂ ಬರಿದಾಗಿದೆ.” ಎಂದು ಅಲ್ಲಿನ ಪರಿಸ್ಥಿತಿಯ ಕರಾಳ ಸತ್ಯವನ್ನು ನಮ್ಮ ಮುಂದೆ ತೆರದಿಟ್ಟಿದ್ದಾರೆ ಆರ್.ವಾರುಣಿ ಉಪಾಧ್ಯ.
ಬಾಂಬ್ ಶೆಲ್ಟರ್ ಗಳಲ್ಲೂ ಜನದಟ್ಟಣೆ :
“ನಾವು ನಮಗೆ ಎಷ್ಟು ಬೇಕೋ ಅಷ್ಟು ದಿನಸಿ ಮತ್ತಿತರ ವಸ್ತುಗಳನ್ನು ಖರೀದಿ ಮಾಡಿಟ್ಟುಕೊಂಡಿದ್ದೇವೆ. ಸದ್ಯ ಮೆಟ್ರೋ ಸ್ಟೇಷನ್ ನಲ್ಲಿರುವ ಬಾಂಬ್ ಶೆಲ್ಟರ್ ಸ್ಥಳದಲ್ಲಿ ತಂಗಿದ್ದೇವೆ. ಭಾರತೀಯ ವಿದ್ಯಾರ್ಥಿಗಳು ಉಳಿದುಕೊಂಡ ಹಾಸ್ಟೆಲ್ ಗಳಲ್ಲಿ ಅಲ್ಲಿನ ನೆಲಮಾಳಗಿಯಲ್ಲಿ ಬಾಂಬ್ ಶೆಲ್ಟರ್ ನಲ್ಲಿ ಉಳಿದುಕೊಂಡಿದ್ದಾರೆ. ಉಕ್ರೇನ್ ಕೆಲವು ನಾಗರೀಕರು ಮಾತ್ರ ತಮ್ಮ ತಮ್ಮ ಮನೆಗಳಲ್ಲಿ ಇರಲು ಇಚ್ಛೆಪಟ್ಟಿದ್ದಾರೆ. ಉಳಿದವರು ಬಾಂಬ್ ಶೆಲ್ಟರ್ ನಲ್ಲಿರೋದರಿಂದ ಇಲ್ಲಿ ಜನದಟ್ಟಣೆ ಉಂಟಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಸದಾನಂದಗೌಡರು ನನಗೆ ನಿನ್ನೆ ಕರೆ ಮಾಡಿ ಕ್ಷೇಮ ವಿಚಾರಿಸಿದರು. ಅಲ್ಲದೆ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳ ಫೋನ್ ನಂಬರ್ ಕೊಟ್ಟು, ಆ ಅಧಿಕಾರಿಗಳು ಸುರಕ್ಷಿತವಾಗಿ ನನ್ನನ್ನು ಭಾರತಕ್ಕೆ ಕರೆತರುವಂತೆ ಸೂಚಿಸಿದ್ದಾರೆ. ಅದಕ್ಕೆ ಅವರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ವಾರುಣಿ ಹೇಳಿದ್ದಾರೆ.
ವಿನ್ನಿಟ್ಸಿಯಾ ನಗರದಲ್ಲಿನ ಪರಿಸ್ಥಿತಿಯ ಬಗ್ಗೆ :
ಇನ್ನು ಉಕ್ರೇನ್ ನಲ್ಲಿನ ವಿನ್ನಿಟ್ಸಿಯಾ ನಗರದಲ್ಲಿನ ನ್ಯಾಷನಲ್ ಪರ್ಗು ಮೆಡಿಕಲ್ ಯೂನಿರ್ವಸಿಟಿಯಲ್ಲಿ ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿರುವ ಬೆಂಗಳೂರಿನ ಗಿರಿನಗರದ ವಿದ್ಯಾರ್ಥಿ ಅನಿಶ್ ಜಯಂತ್ ತಾವಿರುವ ಊರು ಹಾಗೂ ಆ ದೇಶದ ಪ್ರಸ್ತುತ ಪರಿಸ್ಥಿತಿ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ :
“ವಿನ್ನಿಟ್ಸಿಯಾ ನಗರದಲ್ಲೆಲ್ಲೊ ರಷ್ಯಾ ಕ್ಷಿಪಣಿ ದಾಳಿ ನಡೆಸಿದಂತಿದೆ. ಹಾಗಾಗಿ ಶುಕ್ರವಾರ ಬೆಳಗ್ಗೆಯಿಂದ ಒಂದೇ ಸಮನೆ ಎಚ್ಚರಿಕೆ ಸೈರನ್ ಹಾಗೂ ಮೈಕ್ ಮೂಲಕ ಸಾರ್ವಜನಿಕರು ಹೊರಗೆ ಓಡಾಡದಂತೆ ಎಚ್ಚರಿಕೆಯ ಸಂದೇಶಗಳು ಬರ್ತಾನೆ ಇದೆ. ವಿನ್ನಿಟ್ಸಿಯಾ ನಗರದಲ್ಲಿ ಬಾಂಬ್ ದಾಳಿಯಿಂದ ರಕ್ಷಣೆ ಪಡೆಯಲು 80 ರಿಂದ 90 ಬಾಂಬ್ ಶೆಲ್ಟರ್ ಗಳನ್ನು ತೆರೆದಿದ್ದಾರೆ. ಜಾಸ್ತಿ ಸೈರನ್ ಬಂದರೆ ಎಲ್ಲರೂ ಬಾಂಬ್ ಶೆಲ್ಟರ್ ಗೆ ಹೋಗುವಂತೆ ಸೂಚನೆ ನೀಡ್ತಿದ್ದಾರೆ. ಯೂನಿವರ್ಸಿಟಿ ಸಿಬ್ಬಂದಿ ನಮ್ಮ ಕಾಲೇಜಿನ ಹಾಸ್ಟೆಲ್ ನೆಲಮಹಡಿಯಲ್ಲೇ ಉಳಿಯೋಕೆ ಸಲಹೆ ನೀಡಿದ್ದಾರೆ.”
ನಾಲ್ಕು ಹಾಸ್ಟೇಲ್ ಗಳಲ್ಲಿ 1,200 ವೈದ್ಯ ವಿದ್ಯಾರ್ಥಿಗಳು ತಂಗಿದ್ದಾರೆ :
“ಉಕ್ರೇನ್ ರಾಜಧಾನಿ ಕೀವ್ ನಗರದಿಂದ ಗುರುವಾರ ಭಾರತ ಸರ್ಕಾರದಿಂದ ಏರ್ ಇಂಡಿಯಾ ವಿಮಾನದ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಮೊದಲು ಯೋಜಿಸಲಾಗಿತ್ತು. ಕೊನೆಹಂತದಲ್ಲಿ ಆ ಪ್ರಯತ್ನ ವಿಫಲವಾಯಿತು. ಕೀವ್ ಏರ್ ಪೋರ್ಟ್ ಗೆ ಅದಾಗಲೇ ಸ್ವದೇಶಕ್ಕೆ ತೆರಳಲು ಪ್ರಯತ್ನದಲ್ಲಿದ್ದ ವಿದ್ಯಾರ್ಥಿಗಳಿಗೆ ಮಾಹಿತಿಯಿಲ್ಲದೆ ಪರದಾಡಿದರು. ನಾವಂತೂ ವಿನ್ನಿಟ್ಸಿಯಾ ನಗರದಲ್ಲಿನ ನಮ್ಮ ಕಾಲೇಜಿನ ಹಾಸ್ಟೇಲ್ ನಲ್ಲಿದ್ದೇವೆ. ನಾವಿದ್ದ ಮೆಡಿಕಲ್ ಹಾಸ್ಟೇಲ್ ನಿಂದ 15 ಕಿ.ಮೀ ದೂರದಲ್ಲಿನ ಸೇನಾ ಕ್ಯಾಂಪ್ ಮೇಲೆ ಗುರುವಾರ ರಷ್ಯಾದ ಕ್ಷಿಪಣಿ ದಾಳಿಯಾಗಿತ್ತು. ಆ ಸದ್ದು ನಾವಿದ್ದ ಸ್ಥಳದ ತನಕ ಕೇಳಿ ಬಂದಿತ್ತು. ನಾನಿರುವ ಹಾಸ್ಟೇಲ್ ಸೇರಿದಂತೆ ನಾಲ್ಕು ಹಾಸ್ಟೆಲ್ ಗಳಲ್ಲಿ ಕನಿಷ್ಠ 1,200 ವೈದ್ಯ ವಿದ್ಯಾರ್ಥಿಗಳಿದ್ದೇವೆ. ಉಕ್ರೇನ್ ದೇಶದಲ್ಲಿ ಭಾರತದ ಅಂದಾಜು 20 ಸಾವಿರ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರೆಲ್ಲಾ ವೈದ್ಯಕೀಯ, ಡಿಪ್ಲೊಮೊ, ಏರೊನಾಟಿಕಲ್ ಎಂಜಿನಿಯರಿಂಗ್ ಇತ್ಯಾದಿ ಕೋರ್ಸ್ ಗಳಿಗೆ ಸೇರಿದ್ದಾರೆ.”
ಅಂಗಡಿ- ಮುಂಗಟ್ಟು ಬಂದ್, ಎಟಿಎಮ್ ನಲ್ಲಿ ಹಣ ಖಾಲಿ :
“ಗುರುವಾರ ಮಧ್ಯಾಹ್ನದಿಂದ ವಿನ್ನಿಟ್ಸಿಯಾ ನಗರದಲ್ಲಿ ಮೆಡಿಕಲ್ ಸ್ಟೋರ್, ಆಸ್ಪತ್ರೆ ಹೊರತುಪಡಿಸಿ ಹಲವು ಅಂಗಡಿ- ಮುಂಗಟ್ಟುಗಳು ಬಂದ್ ಆಗಿದೆ. ಡೆಬಿಟ್- ಕ್ರೆಡಿಟ್ ಕಾರ್ಡ್ ಗಳು ಬಳಸೋಕೆ ಆಗುತ್ತಿಲ್ಲ. ಬ್ಯಾಂಕಿನ ಎಟಿಎಮ್ ಗಳಲ್ಲಿ ಹಣವಿಲ್ಲ. ಎಲ್ಲೆಡೆ ಎಟಿಎಮ್ ಖಾಲಿಯಾಗಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ನಮ್ಮ ತಂದೆ ನನ್ನ ಬ್ಯಾಂಕ್ ಖಾತೆಗೆ ಹಾಕಿದ ಹಣವನ್ನು ಎಟಿಎಮ್ ನಿಂದ ಡ್ರಾ ಮಾಡಿಟ್ಟುಕೊಂಡಿದ್ದಕ್ಕೆ ಬಚಾವಾದೆ. ಈಗ ನನ್ನ ಕರ್ಚು- ವೆಚ್ಚಗಳಿಗೆ ಅದನ್ನೇ ಬಳಸುತ್ತಿದ್ದೇನೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಹೊರಗೆ ಎಲ್ಲೂ ಕರ್ಪ್ಯೂ ಹೇರಿರುವ ಕಾರಣ ಓಡಾಡುವಂತಿಲ್ಲ. ಹೊರಗೆ ಬಾಂಬ್ ದಾಳಿ, ಯುದ್ಧ ವಿಮಾನ ಹಾರಾಟವಾದಲ್ಲಿ ಪಬ್ಲಿಕ್ ಪ್ಲೇಸ್ ನಲ್ಲಿ ಜೋರಾಗಿ ಎಚ್ಚರಿಕೆಯ ಅಲಾರಾಮ್ ಮೊಳಗುತ್ತೆ. ಬೆಳಗ್ಗೆ ಹೊತ್ತು ಹೆಚ್ಚು ಜನರು ಮೊದಲಿನಂತೆ ಹೆಚ್ಚಾಗಿ ಓಡಾಡುತ್ತಿಲ್ಲ. ನಗರದ ಪಾದಚಾರಿ ಮಾರ್ಗಗಳು, ರಸ್ತೆಗಳಲ್ಲಿ ಮಿಲಿಟರಿ ಪಡೆಗಳು ನಿರಂತರವಾಗಿ ಗಸ್ತು ತಿರುಗುತ್ತಿವೆ.” ಎಂದು ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುತ್ತಾರೆ ಅನಿಶ್ ಜಯಂತ್.
ನಮ್ಮನ್ನೆಲ್ಲಾ ಭಾರತಕ್ಕೆ ಯಾವಾಗ ಕರೆದೊಯ್ತಾರೋ ?
“ನಮ್ಮ ವೈದ್ಯ ವಿದ್ಯಾರ್ಥಿಗಳಿಗೆಲ್ಲಾ ಭಾರತಕ್ಕೆ ಸುರಕ್ಷಿತವಾಗಿ ಬಂದರೆ ಸಾಕಾಗಿದೆ. ಈಗಾಗಲೇ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಉಕ್ರೇನ್ ಗಡಿಭಾಗಕ್ಕೆ ಹತ್ತಿರವಾಗಿರುವ ರುಮಾನಿಯಾ, ಹಂಗೇರಿ, ಸ್ಲೊವಾಕಿಯಾ ಹಾಗೂ ಬಲ್ಗೇರಿಯಾ ರಾಷ್ಟ್ರಗಳ ಬಳಿಗೆ ಬಂದಲ್ಲಿ ಭಾರತಕ್ಕೆ ಸುರಕ್ಷಿತವಾಗಿ ವಿಮಾನದಲ್ಲಿ ಕರೆದೊಯ್ಯುವುದಾಗಿ ಆಯಾ ದೇಶಗಳ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಸಂದೇಶ ಕಳುಹಿಸಿದ್ದಾರೆ. ನಮ್ಮನ್ನೆಲ್ಲಾ ಭಾರತಕ್ಕೆ ಯಾವಾಗ ಕರೆದುಕೊಂಡು ಹೋಗುತ್ತಾರೋ ಅಂತ ಕಾಯುತ್ತಿದ್ದೇವೆ.”
ಇದು ಸಂದರ್ಭದಲ್ಲಿ ಉಕ್ರೇನ್ ನಲ್ಲಿ ಪರಿಸ್ಥಿತಿಯ ಬಗ್ಗೆ ವಿನ್ನಿಟ್ಸಿಯಾ ನಗರ ಹಾಗೂ ಉಕ್ರೇನ್ ಪೂರ್ವಭಾಗದಲ್ಲಿರುವ ಖಾರ್ಕೀವ್ ನಗರದಲ್ಲಿನ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದುತ್ತಿರುವ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಅನುಭವ. ಉಕ್ರೇನ್ ನಲ್ಲಿರುವ ಭಾರತದ ವಿದ್ಯಾರ್ಥಿಗಳು ಸೇರಿದಂತೆ ಇಲ್ಲಿನ ನಾಗರೀರನ್ನು ಯಾವುದೇ ಅಪಾಯವಿಲ್ಲದೆ ಕರೆತರುವ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದ್ದಾರೆ.