ಬೆಂಗಳೂರು, (www.bengaluruwire.com) : ಯುದ್ಧಪೀಡಿತ ಉಕ್ರೇನ್ ದೇಶದಲ್ಲಿ ಬೆಂಗಳೂರಿನ 28 ಮಂದಿ ಸೇರಿದಂತೆ ಕರ್ನಾಟಕದ 31 ಎಂಬಿಬಿಎಸ್ ವಿಧ್ಯಾರ್ಥಿಗಳು ಸಿಲುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ತಿಳಿಸಿದೆ.
ರಾಜ್ಯದ 22 ಜಿಲ್ಲೆಗಳಿಗೆ ಸೇರಿರುವ ಉಕ್ರೇನ್ ನಲ್ಲಿರುವ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ಆ ದೇಶದಿಂದ ಸುರಕ್ಷಿತವಾಗಿ ಕರೆತರಲು ವಿದೇಶಾಂಗ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಕೆಎಸ್ ಡಿಎಂಎ ನಿರಂತರ ಸಮನ್ವಯ ಸಾಧಿಸುತ್ತಾ ಅಲ್ಲಿಂದ ವಿದ್ಯಾರ್ಥಿಗಳನ್ನು ಕರೆತರುವ ಭರವಸೆ ನೀಡಿದ್ದಾರೆ.
ಉಕ್ರೇನ್ ರಾಷ್ಟ್ರದಲ್ಲಿ ಕರ್ನಾಟಕದ 91 ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚಿಸಿರುವ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ನಿಯಂತ್ರಣ ಕೇಂದ್ರದಿಂದ ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಉಕ್ರೇನ್ ನ ಕೀವ್ ರಾಜಧಾನಿಯಲ್ಲಿರುವ ಭಾರತದ ರಾಯಭಾರ ಕಚೇರಿಗೆ ರವಾನಿಸಲಾಗಿದೆ. ಅಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೆಎಸ್ ಡಿಎಂಎ ನೋಡಲ್ ಆಫೀಸರ್ ಡಾ.ಮನೋಜ್ ರಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಯಾವ ಜಿಲ್ಲೆಗಳ ಎಷ್ಟೆಷ್ಟು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ?
ಫೆ.25ರ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, ಬೆಂಗಳೂರಿನ 28, ಮೈಸೂರಿನ 10, ಬಳ್ಳಾರಿ ಮತ್ತು ಹಾಸನದ 5, ಬಾಗಲಕೋಟೆ, ಚಾಮರಾಜನಗರದ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾವೇರಿ, ಕೊಡಗು, ರಾಯಚೂರು ಜಿಲ್ಲೆಗಳ ತಲಾ 3 ವಿದ್ಯಾರ್ಥಿಗಳು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲ್ಬುರ್ಗಿ, ಮಂಡ್ಯ, ಉಡುಪಿ, ವಿಜಯಪುರ ಜಿಲ್ಲೆಗಳ ತಲಾ ಇಬ್ಬರು ವಿದ್ಯಾರ್ಥಿಗಳು, ಕೋಲಾರ, ಶಿವಮೊಗ್ಗ, ಉತ್ತರ ಕನ್ನಡದ ತಲಾ ಒಬ್ಬೊಬ್ಬ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದು, ಇದೀಗ ಉಕ್ರೇನ್ ನಲ್ಲಿ ಇರಲು ಆಗದೆ, ಭಾರತಕ್ಕೆ ಬರಲು ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ವಿದೇಶಾಂಗ ಇಲಾಖೆಯು ಉಕ್ರೇನ್ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಹಂಗೇರಿ, ಪೋಲಾಂಡ್, ಸ್ಲೋವಾಕಿಯಾ ಹಾಗೂ ರೊಮಾನಿಯಾ ದೇಶಗಳಿಗೆ ವಿದೇಶಾಂಗ ಇಲಾಖೆಯ ತಂಡಗಳನ್ನು ಫೆ.24ರಂದು ಕಳಿಸಿದ್ದು, ಉಕ್ರೇನ್ ಗೆ ಹತ್ತಿರವಿರುವ ರಾಷ್ಟ್ರಗಳಿಂದ ಅಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಪ್ರಯತ್ನಗಳ್ನು ನಡೆಸಿದ್ದಾರೆ ಎಂದು ಕೆಎಸ್ ಡಿಎಂಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಿದೇಶಾಂಗ ಇಲಾಖೆಯು ಈ ಕೆಳಕಂಡ ಸ್ಥಳಗಳಲ್ಲಿ ಸಹಾಯ ಕೇಂದ್ರ, ನಿಯಂತ್ರಣ ಕಚೇರಿ, ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ, ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಹಂಚಿಕೊಂಡಿದೆ. ಈ ಕುರಿತ ಮಾಹಿತಿ ಈ ಕೆಳಗಿನಂತಿದೆ :