ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಬಸ್ ಗಳಲ್ಲಿ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರೀಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ನಗರದ ಜನಸಾಮಾನ್ಯರ ಅಭಿಪ್ರಾಯವನ್ನು ಕ್ರೋಢೀಕರಿಸಿ ಹೇಳಿದೆ.
ನಗರದಲ್ಲಿ ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಸಿಂಥಿಯಾ ಸ್ಟೀಫನ್, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯು ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರ ವಿಚಾರಣೆ ನಡೆಸಿ, ಅವರ ಅಭಿಪ್ರಾಯಗಳ ಸಾರಾಂಶವನ್ನು ಪಡೆಯಲಾಗಿದೆ. ಅದರಂತೆ ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ಪ್ರಯಾಣಕ್ಕಾಗಿ ಉಚಿತ ಬಸ್ ಪ್ರಯಾಣ ಸೇವೆ ಒದಗಿಸುವಂತೆ ಜ್ಯೂರಿ ಶಿಫಾರಸ್ಸು ಮಾಡುತ್ತಿದೆ ಎಂದರು.
ಇದರಿಂದ ನಗರದ ಮಹಿಳೆಯರ ಆರೋಗ್ಯ ರಕ್ಷಣೆ, ಅವರ ಘನತೆಯ ಹಕ್ಕು ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಬಲಪಡಿಸಿದಂತಾಗುತ್ತದೆ. ಸಾಮಾನ್ಯ ಬಸ್ ಪ್ರಯಾಣಿಕರಿಗೆ ಹೆಚ್ಚಿನ ದರವನ್ನು ಪಾವತಿಸುವಂತೆ ಮಾಡುವ ಬದಲು ಅರ್ಧದಷ್ಟು ಪ್ರಯಾಣ ದರವನ್ನು ನಿಗಧಿ ಮಾಡಬೇಕು. ಬಿಎಂಟಿಸಿ ಬಸ್ ನಗರದ ಜೀವನಾಡಿಯಾಗಿದ್ದರೂ ಮೆಟ್ರೊ ರೈಲಿಗೆ ಸಿಗುವ ಮಹತ್ವವನ್ನು ಸರ್ಕಾರ ಬಿಎಂಟಿಸಿ ಸೇವೆಗೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (IISC) ಯ ಪ್ರಾಧ್ಯಾಪಕ ಪ್ರೊ.ಆಶಿಶ್ ಶರ್ಮ ಮಾತನಾಡಿ, ಸರ್ಕಾರ ಬಿಎಂಟಿಸಿ ಬಸ್ ಸೇವೆಯನ್ನು ಲಾಭ- ನಷ್ಟದ ದೃಷ್ಟಿಕೋನದಿಂದ ಪರಿಗಣಿಸುತ್ತಿದೆ. ಬಿಎಂಟಿಸಿಯು ಸಾರಿಗೆ ಸೇವೆ ಒದಗಿಸಲು ಸ್ವಂತ ಆದಾಯವನ್ನು ಬಳಸುವುದರಿಂದ ಹೆಚ್ಚಿನ ದರಗಳನ್ನು ನಿಗದಿಪಡಿಸುತ್ತಿದೆ. ಕೇವಲ ಲಾಭ ಸಿಗುವ ರೂಟ್ ಗಳಲ್ಲಿ ಮಾತ್ರವೇ ಬಸ್ ಸೇವೆ ಒದಗಿಸುತ್ತಿದೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಸಾಮಾನ್ಯ ಪ್ರಯಾಣಿಕ ಬಸ್ ಟಿಕೇಟ್ ದರವನ್ನು ಭರಿಸಲಾಗದೆ ಮತ್ತೊಂದೆಡೆ ಬಿಎಂಟಿಸಿ ಸೇವೆಯ ನಡುವಣ ಅಂತರ ಸೃಷ್ಟಿಯಾಗಲು ಕಾರಣವಾಗಿದೆ. ಇದರಿಂದಾಗಿ ಜನಸಾಮಾನ್ಯರು ಕೆಲಸಕ್ಕೆ ತಡವಾಗಿ ತಲುಪುವುದು, ವಿದ್ಯಾರ್ಥಿಗಳು ಸರಿಯಾದ ಬಸ್ ಸೇವೆಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ನಾನಾ ಸಾಮಾಜಿಕ, ಆರ್ಥಿಕ ಪರಿಣಾಮಗಳಿಗೆ ಕಾರಣವಾಗುವುದರಿಂದ ಬಿಎಂಟಿಸಿ ಬಸ್ ಸೇವೆಯನ್ನು ಸೇವೆಯ ರೀತಿಯಲ್ಲಿ ಪರಿಗಣಿಸಬೇಕೇ ವಿನಃ ಲಾಭ- ನಷ್ಟ ದೃಷ್ಟಿಕೋನದಿಂದಲ್ಲ. ಆದ ಕಾರಣ ಈ ನಿಟ್ಟಿನಲ್ಲಿ ಬಿಎಂಟಿಸಿಗೆ ಈ ಬಾರಿಯ ಬಜೆಟ್ ನಲ್ಲಿ 100 ಕೋಟಿ ರೂ. ನಷ್ಟು ಹಣ ಮೀಸಲಿಡಬೇಕು ಎಂದು ಪ್ರೊ.ಆಶಿಶ್ ಮಿಶ್ರಾ ಅವರು ಬಸ್ ಪ್ರಯಾಣಿಕರ ವೇದಿಕೆ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಸ್ ನಲ್ಲಿ ನಿತ್ಯ ಪ್ರಯಾಣಿಸುವ ಬಸ್ ಪ್ರಯಾಣಿಕರ ಕಷ್ಟ- ನಷ್ಟಗಳು, ಬಿಎಂಟಿಸಿಗೆ ಬಜೆಟ್ ಮೀಸಲಿಡುವ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರದ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಬಸ್ ಪ್ರಯಾಣಿಕರ ವೇದಿಕೆ ನಿರ್ಧರಿಸಿದೆ ಎಂದು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ತಿಳಿಸಿದ್ದಾರೆ.
ಬಸ್ ಸೇವೆ ನೀಡಿಕೆಯಲ್ಲಿನ ಅಸಮತೋಲನ ನಿವಾರಿಸಲು ಆಗ್ರಹ :
ಬಡವರು, ಶೋಷಿತ ಸಮುದಾಯಗಳು ನೆಲೆಸುವ ಪ್ರದೇಶಗಳಲ್ಲಿ ಕಳಪೆ ಗುಣಮಟ್ಟದ ಬಸ್ ಸೇವೆಯಿದೆ. ಆದರೆ ಶ್ರೀಮಂತರು ವಾಸಿಸುವ ಸುಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ಉತ್ತಮ ಸೇವೆಯಿದ್ದು, ಇಲ್ಲೆಲ್ಲಾ ಗುಣಮಟ್ಟದ ಬಸ್ಸುಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಈ ಅಸಮತೋಲನವನ್ನು ಸರ್ಕಾರ ನಿವಾರಿಸಬೇಕು. ಅಸಮರ್ಪಕ ಸೇವೆಗಳಿರುವ ಸ್ಥಳಗಳಲ್ಲಿ ಹೆಚ್ಚುವರಿ ಮಾರ್ಗಗಳು ಹಾಗೂ ಶೆಡ್ಯೂಲ್ ಗಳನ್ನು ನೀಡಬೇಕು ಎಂದು ಬಸ್ ಪ್ರಯಾಣಿಕರ ವೇದಿಕೆಯ ತೀರ್ಪುಗಾರರ ಮಂಡಳಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ತೀರ್ಪುಗಾರರ ಮಂಡಳಿಯಲ್ಲಿ ಸಾರಿಗೆ ತಜ್ಞರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡಿದ್ದು, ಹಲವಾರು ಜನಸಾಮಾನ್ಯರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ನಗರದ ಬಿಎಂಟಿಸಿ ಬಸ್ ಸೇವೆಯನ್ನು ಅವಲೋಕನಕ್ಕೆ ಒಳಪಡಿಸಿ, ಸರ್ಕಾರಕ್ಕೆ ಈ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಅದನ್ನು ಜಾರಿಗೆ ತರುವಂತೆ ತೀರ್ಪುಗಾರರು ಆಗ್ರಹಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ವಿಜಯಕುಮಾರಿ, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಬಾಬು, ಡಾ.ಮನು ಮಥಾಯ್ ಸೇರಿದಂತೆ ಮತ್ತಿತರರು ಮಾತನಾಡಿದರು.