ನವದೆಹಲಿ, (www.bengaluruwire.com) : ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ವಿದೇಶಿ ಮೂಲದ “ಪಂಜಾಬ್ ಪಾಲಿಟಿಕ್ಸ್ Tv” ಎಂಬ ಡಿಜಿಟಲ್ ಮಾಧ್ಯಮ, ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವ ಬಗ್ಗೆ ಗುಪ್ತಚರ ಮಾಹಿತಿ ಹಿನ್ನಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ (Ministry of Information & Broadcasting) ಆ ಮಾಧ್ಯಮದ ಆಪ್, ವೆಬ್ ಸೈಟ್ ಹಾಗೂ ಸಾಮಾಜಿಕ ಖಾತೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ 1967ರಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಸಿಖ್ ಫಾರ್ ಜಸ್ಟೀಸ್ (SFJ)ಅನ್ನು ನಿಷೇಧಿತ ಸಂಘಟನೆಯಾಗಿ ಘೋಷಿಸಲಾಗಿದೆ. ಇಂತಹ ಸಂಸ್ಥೆ ಜೊತೆ ನಿಕಟ ಸಂಪರ್ಕ ಹೊಂದಿರುವ ಗುರುತಿಸಿಕೊಂಡಿರುವ “ಪಂಜಾಬ್ ಪಾಲಿಟಿಕ್ಸ್ Tv” ಎಂಬ ಮಾಧ್ಯಮಕ್ಕೆ ಈ ನಿರ್ಬಂಧ ಹೇರಲಾಗಿದೆ ಎಂದು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ಪಂಜಾಬ್ ಪಾಲಿಟಿಕ್ಸ್ Tv” ತನ್ನ ಆನ್ ಲೈನ್ ಮಾಧ್ಯಮವನ್ನು ಬಳಸಿಕೊಂಡು ಆ ಮೂಲಕ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕದಡುವ ಸಾಧ್ಯತೆ ಬಗ್ಗೆ ಗುಪ್ತಚರ ಮೂಲಗಳ ಮಾಹಿತಿ ಆಧರಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಐಟಿ ಕಾಯ್ದೆಯಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
“ಪಂಜಾಬ್ ಪಾಲಿಟಿಕ್ಸ್ Tv” ಮಾಧ್ಯಮದ ಆಪ್, ವೆಬ್ ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ಖಾತೆಯಲ್ಲಿನ ಬ್ಲಾಕ್ ಮಾಡಿರುವ ಅಂಶಗಳು ದೇಶದ ಏಕತೆ, ಭದ್ರತೆ ಹಾಗೂ ಸಮಗ್ರತೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ಈ ಮಾಧ್ಯಮವನ್ನು ಬ್ಲಾಕ್ ಮಾಡಲಾಗಿದೆ. ಅಲ್ಲದೆ ಸಮಾಜದಲ್ಲಿ ಕೋಮು ಸೌಹಾರ್ದ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಸಾಧ್ಯತೆಯನ್ನು ಹೊಂದಿದ್ದವು ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.