ಬೆಂಗಳೂರು, (www.bengaluruwire.com) : ನಿವೇಶನವೊಂದಕ್ಕೆ ಎ- ಖಾತೆ ಮಾಡಿಕೊಡಲು ಬಿಬಿಎಂಪಿಯಲ್ಲಿ ಹಾಗೂ ಅಕ್ರಮ ವಿದ್ಯುತ್ ಸಂಪರ್ಕದ ದಂಡದ ಮೊತ್ತ ಕಡಿಮೆ ಮಾಡಿ, ಯಾವುದೇ ಕ್ರಮ ಜರುಗಿಸದೇ ಇರಲು ಬೆಸ್ಕಾಂ ವಿಜಿಲೆನ್ಸ್ ವಿಭಾಗದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ನಗರ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಮಂಗಳವಾರ ಕಾರ್ಯಾಚರಣೆ ನಡೆಸಿ ಲಂಚದ ಹಣದ ಸಮೇತ ಐವರನ್ನು ಬಂಧಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೀವನ ಭೀಮಾನಗರ ಉಪವಿಭಾಗದ ಎಆರ್ ಒ ಮೂರ್ತಿ, ರವೆನ್ಯೂ ಇನ್ಸ್ ಪೆಕ್ಟರ್ ಮೊಹಮ್ಮದ್ ಇದ್ರೀಸ್ ಅವರ ಖಾಸಗಿ ವ್ಯಕ್ತಿ ಶ್ರೀನಿವಾಸ್, ಮಲ್ಲೇಶ್ವರದ ಬೆಸ್ಕಾಂ ವಿಜಿಲೆನ್ಸ್ ಕಚೇರಿಯ ಎಇಇ ನಾಗೇಶ್ ಹಾಗೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ರಾಜೇಶ್ ಬಂಧಿತರು.
ಮುರುಗೇಶ್ ಪಾಳ್ಯದಲ್ಲಿನ ನಿವೇಶನಕ್ಕೆ ಎ ಖಾತೆ ಮಾಡಿಸಿಕೊಳ್ಳಲು ವ್ಯಕ್ತಿಯೊಬ್ಬರು ಕೊನೇನ ಅಗ್ರಹಾರದ ಬಿಬಿಎಂಪಿ ವಾರ್ಡ್ 113ರಲ್ಲಿ ರವೆನ್ಯೂ ಕಚೇರಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಎ-ಖಾತೆ ಮಾಡಿಕೊಡಲು ಜೀವನ ಭೀಮಾನಗರ ಉಪವಿಭಾಗದ ಎಆರ್ ಒ ಮೂರ್ತಿ, ರವೆನ್ಯೂ ಇನ್ಸ್ ಪೆಕ್ಟರ್ ಮೊಹಮ್ಮದ್ ಇದ್ರೀಸ್ 1.10 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದನ್ನು ಶ್ರೀನಿವಾಸ್ ಎಂಬ ಖಾಸಗಿ ವ್ಯಕ್ತಿಯ ಮೂಲಕ ಮಾತುಕತೆ ನಡೆಸಿದ್ದರು. ಈ ಬಗ್ಗೆ ದೂರುದಾರರು ಎಸಿಬಿಗೆ ದೂರು ನೀಡಿದ್ದರು.
ಮಂಗಳವಾರ ಎಸಿಬಿ ಪೊಲೀಸರು ಶ್ರೀನಿವಾಸ್ ಎಂಬ ಖಾಸಗಿ ವ್ಯಕ್ತಿಯ ಮೂಲಕ 1.10 ಲಕ್ಷ ರೂ. ಲಂಚದ ಹಣ ಪಡೆಯುವ ಸಂದರ್ಭದಲ್ಲಿ ಎಆರ್ ಒ ಮೂರ್ತಿ, ರವೆನ್ಯೂ ಇನ್ಸ್ ಪೆಕ್ಟರ್ ಮೊಹಮ್ಮದ್ ಇದ್ರೀಸ್ ನಗದು ಹಣದ ಸಮೇತ ಎಸಿಬಿ ಹಣೆದ ಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ನಗದು ಸಮೇತ ಮೂವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ 113 ವಾರ್ಡ್ ನ ಬಿಲ್ ಕಲೆಕ್ಟರ್ ಆನಂದ್ ತಲೆಮರೆಸಿಕೊಂಡಿದ್ದಾನೆ.
ಮಲ್ಲೇಶ್ವರದ ಬೆಸ್ಕಾಂ ವಿಜಿಲೆನ್ಸ್ ಕಚೇರಿಯಲ್ಲೂ ಲಂಚಾವತಾರ :
ಭುವನೇಶ್ವರ ನಗರದಲ್ಲಿ ಹೈ ಟೆನ್ಶನ್ ವೈರ್ ಕೆಳಗೆ ಕಟ್ಟಿದ್ದ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದವರ ವಿರುದ್ಧ ಕ್ರಮ ಜರುಗಿಸದೇ ಇರಲು ಹಾಗೂ ದಂಡದ ಮೊತ್ತ ಕಡಿಮೆ ಮಾಡಲು ಮಲ್ಲೇಶ್ವರದ ಬೆಸ್ಕಾಂ ವಿಜಿಲೆನ್ಸ್ ಕಚೇರಿಯ ಎಇಇ ನಾಗೇಶ್ ಹಾಗೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ರಾಜೇಶ್ 1.10 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು ಆ ಪೈಕಿ 45,000 ರೂ. ಹಣವನ್ನು ಪಡೆದುಕೊಂಡು ಉಳಿದ ಹಣಕ್ಕೆ ಸತಾಯಿಸಿದ್ದರು.
ಈ ಬಗ್ಗೆ ದೂರುದಾರರು ಎಸಿಬಿಗೆ ಕಂಪ್ಲೆಂಟ್ ನೀಡಿದ್ದರು. ಮಂಗಳವಾರ ದೂರುದಾರರಿಂದ ಮೊಹಿದ್ದೀನ್ ಆರೀಫ್ ಎಂಬ ಖಾಸಗಿ ವ್ಯಕ್ತಿಯ ಮೂಲಕ ಎಇಇ ನಾಗೇಶ್ ಹಾಗೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ರಾಜೇಶ್ 1.10 ಲಕ್ಷ ರೂ. ಲಂಚದ ಹಣ ಪಡೆಯುವಾಗ ಎಸಿಬಿ ಪೊಲೀಸರು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾರೆ. ಈ ಎರಡು ಪ್ರತ್ಯೇಕ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.