ಬೆಂಗಳೂರು, (www.bengaluruwire.com) : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದಿಂದ ಇನ್ನೂ ಕುಂಟುತ್ತಾ – ತೆವಳುತ್ತಾ ಸಾಗುತ್ತಿರುವ ಬೆಂಗಳೂರು ಕೇಂದ್ರಭಾಗದಲ್ಲಿರುವ ಮಲ್ಲೇಶ್ವರದ ಹೂವು-ಹಣ್ಣು ಮಾರುಕಟ್ಟೆ ಬಹುಮಹಡಿ ಕಟ್ಟಡ ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಲಹೆಯಂತೆ ಶನಿವಾರ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಎಸ್.ಆರ್ ವಿಶ್ವನಾಥ್, ಈಗಾಗಲೇ ಕಾಮಗಾರಿ ತುಂಬಾ ವಿಳಂಬವಾಗಿದೆ. ಇದರಿಂದಾಗಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಮತ್ತಷ್ಟು ವಿಳಂಬ ಮಾಡುವುದು ಬೇಡ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕಟ್ಟಡ ಕಾಮಗಾರಿ ಪರಿಶೀಲನೆ ನಂತರ ಮಾತನಾಡಿದ ಅವರು, ಈ ಕಟ್ಟಡ ಕಾಮಗಾರಿಗೆ ವೇಗ ನೀಡಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಹೂವು ಮತ್ತು ಹಣ್ಣು ವ್ಯಾಪಾರಿಗಳಿಗೆ ಮೀಸಲಿರುವ 181 ಮಳಿಗೆಗಳ ನಿರ್ಮಾಣ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ನಂತರ ನಿಯಮಾನುಸಾರ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಹುಮಹಡಿ ಕಟ್ಟಡದಲ್ಲಿ ಏನೇನಿರಲಿದೆ?
ಎರಡು ನೆಲಮಹಡಿಗಳಲ್ಲಿ ಸಾರ್ವಜನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ, ಮೊದಲ ಮಹಡಿಯಲ್ಲಿ ಹೂವು-ಹಣ್ಣು ವ್ಯಾಪಾರಿಗಳಿಗೆ 181 ಮಳಿಗೆಗಳು ಮತ್ತು 1 ರಿಂದ 4 ನೇ ಮಹಡಿವರೆಗೆ ಮಾಲ್ ರೀತಿಯಲ್ಲಿನ ವಾಣಿಜ್ಯ ಸಂಕೀರ್ಣಗಳು, ಐದು ಮತ್ತು ಟೆರೇಸ್ ನಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ವಿವರಣೆ ನೀಡಿದರು.
ಮೊದಲ ಮಹಡಿಯಿಂದ ನಾಲ್ಕನೇ ಮಹಡಿವರೆಗೆ ನಿರ್ಮಾಣವಾಗಲಿರುವ ಮಳಿಗೆಗಳು ಬಿಡಿಎಗೆ ಸೇರಿರುತ್ತವೆ. ಇವುಗಳನ್ನು ಬಾಡಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಮಾಲ್ ಗಳಿಗೆ ಅಥವಾ ಇನ್ನಿತರೆ ವಾಣಿಜ್ಯ ಚಟುವಟಿಕೆಗಳಿಗೆ ನೀಡಲಾಗುತ್ತದೆ. ಇದರಿಂದ ಬಿಡಿಎಗೆ ಆದಾಯ ಬರಲಿದೆ ಎಂದು ತಿಳಿಸಿದರು.
ಮಾರುಕಟ್ಟೆ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ :
ಮಾರುಕಟ್ಟೆ ನಿರ್ಮಾಣ ಕುಂಟುತ್ತಾ ತೆವಳುತ್ತಾ ಸಾಗುತ್ತಿದ್ದುದರಿಂದ ಹಲವು ಅನುಮಾನಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆಯನ್ನು ಅರಿಯಲೆಂದು ಕನ್ಸಲ್ಟೆನ್ಸಿಯಿಂದ ಕಾಮಗಾರಿಯನ್ನು ಪರಿಶೀಲಿಸಲಾಯಿತು. ಅದರ ವರದಿ ಬಂದಿದ್ದು ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ, ಯೋಜನೆಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಮಾರುಕಟ್ಟೆ ನಿರ್ಮಾಣಕ್ಕೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲ. ನೇಮಕಗೊಂಡಿದ್ದ ಸಲಹೆಗಾರರಿಂದ ಯೋಜನೆಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಸಲಹೆಗಾರ ಸಂಸ್ಥೆಯನ್ನು ಬದಲಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ, ಬಿಡಿಎ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್, ಗುತ್ತಿಗೆದಾರ ಸಂಸ್ಥೆ ಪಿವಿಕೆ ಗ್ರೂಪ್ ನ ವಿಜಯಕುಮಾರ್ ಸೇರಿದಂತೆ ಬಿಡಿಎ ಉನ್ನತಾಧಿಕಾರಿಗಳು ಇದ್ದರು.