ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಇನ್ನುಮುಂದೆ ಕರ್ನಾಟಕ ನಾಗರೀಕ ಸೇವೆ ಹೊರತುಪಡಿಸಿದ ಅಧಿಕಾರಿಗಳಿಗೆ (Non –State Civil Service) ಭಾರತೀಯ ನಾಗರೀಕ ಸೇವಾವೃಂದ (Indian Civil Service)ಕ್ಕೆ ಪರಿಗಣಿಸಲು ಹಾಗೂ ಶಿಫಾರಸ್ಸು ಮಾಡಲು ಕರ್ನಾಟಕ ಲೋಕಸೇವಾ ಆಯೋಗ(KPSC)ದಿಂದ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದ ಮೇಲೆ ಕೇಂದ್ರ ಲೋಕಾಸೇವಾ ಆಯೋಗ (UPSC)ಕ್ಕೆ ಅರ್ಹ ಅಧಿಕಾರಿಗಳ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ತನ್ನ ನಿಯಮಾವಳಿಗಳಿಗೆ ಇತ್ತೀಚೆಗೆ ತಿದ್ದುಪಡಿ ತಂದಿದೆ.
ಕರ್ನಾಟಕದಲ್ಲಿ ಈತನಕ ರಾಜ್ಯೇತರ ನಾಗರೀಕ ಸೇವೆ (NON KAS) ಹುದ್ದೆಗಳಲ್ಲಿರುವ ಕೃಷಿ, ಆರ್ಥಿಕ ಇಲಾಖೆ, ಸಾರಿಗೆ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕೇವಲ ಆಯಾ ಇಲಾಖೆಗಳ ಜೇಷ್ಠತಾಪಟ್ಟಿ ಹಾಗೂ ಆಯಾ ವ್ಯಕ್ತಿಯು ಎಷ್ಟರ ಮಟ್ಟಿಗೆ ಪ್ರಭಾವಿ ಎಂಬುದರ ಆಧಾರದ ಮೇಲೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸುತ್ತಿದ್ದ ಶಿಫಾರಸ್ಸು ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದರು.
ಭಾರತೀಯ ನಾಗರೀಕ ಸೇವಾ ವೃಂದಕ್ಕೆ ಪರಿಗಣಿಸಲು ಹಾಗೂ ಶಿಫಾರಸ್ಸು ಮಾಡುವ ಪ್ರಕ್ರಿಯೆಯು ಇದರಿಂದಾಗಿ ಹೆಚ್ಚು ವ್ಯಕ್ತಿಗತವಾಗಿರುತ್ತಿತ್ತು. ಅಲ್ಲದೆ ಇದರ ಪರಿಣಾಮವಾಗಿ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿ, ಕೇಂದ್ರ ನಾಗರೀಕ ಸೇವಾ ವೃಂದಕ್ಕೆ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ವಿಳಂಬಗೊಳ್ಳುತ್ತಿತ್ತು. ಹೀಗಾಗಿ ಈ ನಿಟ್ಟಿನಲ್ಲಿ ಭಾರತೀಯ ನಾಗರೀಕ ಸೇವಾ (ಆಯ್ಕೆ ಮೂಲಕ ನೇಮಕಾತಿ) ನಿಯಮಾವಳಿ 1977ರ ನಿಯಮ 2(ಎ) ಪ್ರಕಾರ ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳನ್ನು (KAS) ಹೊರತುಪಡಿಸಿ ಉಳಿದಂತೆ ಸಿವಿಲ್ ಸೇವೆಯಲ್ಲಿರುವ ಅಧಿಕಾರಿಗಳಿಗೆ ಭಾರತೀಯ ಆಡಳಿತ ಸೇವೆ (IAS) ವೃಂದಕ್ಕೆ ನೇಮಿಸಲು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (DPAR) ಇಲಾಖೆ ಫೆ.10ರಂದು ಈ ಸಂಬಂಧ ಆದೇಶ ಹೊರಡಿಸಿದೆ.
ಗುಜರಾತ್, ಹರಿಯಾಣ ಸೇರಿದಂತೆ ಮುಂತಾದ ವಿವಿಧ ರಾಜ್ಯಗಳಲ್ಲಿ ಕೇಂದ್ರ ಲೋಕಸೇವಾ ಆಯೋಗಕ್ಕೆ ಅಧಿಕಾರಿಗಳ ಹೆಸರನ್ನು ಶಿಫಾರಸ್ಸು ಮಾಡಲು ಲಿಖಿತ ಪರೀಕ್ಷೆಗಳನ್ನು ಈಗಾಗಲೇ ಪರಿಚಯಿಸಿವೆ. ಇದರಿಂದ NON- SCS ವೃಂದ ಅಧಿಕಾರಿಗಳಿಗೆ IAS ವೃಂದಕ್ಕೆ ಆಯ್ಕೆ ಹೊಂದಲು ಸಮಾನಾಂತರ ಅವಕಾಶಗಳು ದೊರೆಯುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಹೇಗೆ ನಡೆಯಲಿದೆ ಐಎಎಸ್ ಆಯ್ಕೆಗೆ ರಾಜ್ಯ ಸರ್ಕಾರದ ಶಿಫಾರಸ್ಸು ಪ್ರಕ್ರಿಯೆ?
ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಹುದ್ದೆಗೆ ಅರ್ಹರಿರುವ ಕೆಎಎಎಸ್ ಸೇವೆ ಹೊರತುಪಡಿಸಿದ ರಾಜ್ಯೇತರ ನಾಗರೀಕ ಸೇವೆಯ ಅಭ್ಯರ್ಥಿಗಳು ಕೆಪಿಎಸ್ ಸ್ಸಿ ಅಧಿಸೂಚನೆ ಹೊರಡಿಸುವ ಲಿಖಿತ ಪರೀಕ್ಷೆಗೆ (Objective Type) ಅರ್ಜಿ ಸಲ್ಲಿಸಬಹುದು. ಈ ಲಿಖಿತ ಪರೀಕ್ಷೆಯಲ್ಲಿ ಎಲ್ಲಾ ಅಧಿಕಾರಿಗಳು ಪಡೆದ ಅಂಕಗಳೊಂದಿಗೆ ಶ್ರೇಣಿಪಟ್ಟಿಯನ್ನು ಕೆಪಿಎಸ್ ಸ್ಸಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಈ ಶ್ರೇಣಿಪಟ್ಟಿ ಹಾಗೂ ರಾಜ್ಯ ಸರ್ಕಾರವು ಅರ್ಹ ಅಧಿಕಾರಿಗಳ ಸಿಆರ್ ದಸ್ತಾವೇಜಿನ ಜೊತೆಗೆ ನಿಗಧಿತ ಫಾರ್ಮ್ ನಲ್ಲಿ ಆಯಾ ಇಲಾಖೆಗಳಿಂದ ಅಭ್ಯರ್ಥಿಗಳ ಸೇವಾ ಮಾಹಿತಿಗಳ ಸಾರಾಂಶವನ್ನು ಪಡೆದು, ಕೇಂದ್ರ ಸರ್ಕಾರ ಅಥವಾ ಕೇಂದ್ರ ಲೋಕಾಸೇವಾ ಆಯೋಗಕ್ಕೆ ಅರ್ಹತೆಯ ಆಧಾರದಲ್ಲಿ ಹೆಸರನ್ನು ಶಿಫಾರಸ್ಸು ಮಾಡಲಿದೆ.
ರಾಜ್ಯದಲ್ಲಿ ಸದ್ಯ 260 ಐಎಎಸ್ ಅಧಿಕಾರಿಗಳು, 170ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ಹಾಗೂ 360ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಐಎಎಸ್ ಆಯ್ಕೆ ಪ್ರಕ್ರಿಯೆಗೆ ಶಿಫಾರಸ್ಸು ಮಾಡಲು ಅಭ್ಯರ್ಥಿಗಳಿಗಾಗಿ ಈ ಕೆಳಕಂಡ ವಿಷಯಗಳನ್ನು ಪರೀಕ್ಷೆಯ ಪಠ್ಯಕ್ರಮವಾಗಿ ಪರಿಗಣಿಸಿದೆ :
ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಾಮುಖ್ಯತೆಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು, ಇತಿಹಾಸ ಮತ್ತು ಪರಂಪರೆಗಳು (ಭಾರತ ಹಾಗೂ ಕರ್ನಾಟಕ), ಪ್ರಚಲಿತ ಸನ್ನಿವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅರ್ಥಶಾಸ್ತ್ರದ ಪರಿಕಲ್ಪನೆ, ಭಾರತ ಸಂವಿಧಾನದ ಅವಲೋಕನ, ಪರಿಸರ ವಿಜ್ಞಾನ, ಜೀವವೈವಿಧ್ಯತೆ ಮತ್ತು ಹವಾಮಾನ ಬದಲಾವಣೆಯಲ್ಲಿನ ಸಾಮಾನ್ಯ ಜ್ಞಾನ, ಪ್ರಮುಖವಾದ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜನ್ಸೀಸ್ ಮತ್ತು ಅವುಗಳ ರಚನೆ, ಕರ್ತವ್ಯಗಳು, ಭಾರತದ ಅಂತರರಾಷ್ಟ್ರೀಯ ಸಂಬಂಧಗಳು, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂರ್ ಗಳು, ರೋಬೋಟಿಕ್ಸ್, ನ್ಯಾನೋ- ಟೆಕ್ನಾಲಜಿ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಾಮಾನ್ಯ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅದರ ಅನ್ವಯಿಸುವಿಕೆ, ಸಾಮಾನ್ಯ ವಿಜ್ಞಾನ, ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯ ವಿಷಯಗಳನ್ನು ಲಿಖಿತ ಪರೀಕ್ಷೆಗೆ ಪಠ್ಯಕ್ರಮವಾಗಿ ನಿಗಧಿಪಡಿಸಿದೆ.
ಖಾಲಿಯಿರುವ ಐಎಎಸ್ ವೃಂದದ ಹುದ್ದೆ ಹೇಗೆ ಭರ್ತಿಮಾಡಲಾಗುತ್ತಿತ್ತು?
ರಾಜ್ಯದಲ್ಲಿ ಐಎಎಸ್ ಹುದ್ದೆ ಖಾಲಿಯಾದಾಗ ಸಾಮಾನ್ಯವಾಗಿ 65:35 ಅನುಪಾತದ ಪೈಕಿ 65 ಅನುಪಾತದ ಖಾಲಿ ಹುದ್ದೆಯನ್ನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣದ ಅರ್ಹ ಅಭ್ಯರ್ಥಿಗಳನ್ನು ತುಂಬಲಾಗುತ್ತಿತ್ತು. ಉಳಿದ 35ರ ಅನುಪಾತದ ಭಾಗದ ಖಾಲಿ ಹುದ್ದೆಯಲ್ಲಿ ಶೇ.6ರಷ್ಟು ಹುದ್ದೆಯನ್ನು ಕೆಎಎಸ್ ಅಲ್ಲದ ನಾಗರೀಕ ಸೇವಾ ಅಧಿಕಾರಿಗಳನ್ನು ನೇಮಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುತ್ತಿತ್ತು. ಶೇ.94ರಷ್ಟು ಹುದ್ದೆಯನ್ನು ಕೆಎಎಎಸ್ ಅಧಿಕಾರಿಗಳಿಗೆ ಮೀಸಲಿಡಲಾಗುತ್ತಿತ್ತು. ಆಯ್ಕೆ ಪ್ರಕ್ರಿಯೆಗೆ ಕೆಎಎಸ್ ಅಥವಾ ರಾಜ್ಯೇತರ ನಾಗರೀಕ ಸೇವೆಯ ಅಧಿಕಾರಿಗಳು ಕನಿಷ್ಠ 8 ವರ್ಷ ಸೇವೆ ಸಲ್ಲಿಸಬೇಕಾಗಿರುತ್ತದೆ. ಎಷ್ಟೋ ವೇಳೆ ಪ್ರತಿ ವರ್ಷ ಖಾಲಿಯಿರುವ ಐಎಎಸ್ ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮೂಲಕ ಶಿಫಾರಸ್ಸು ಮಾಡುವಾಗ ಸೂಕ್ತ ಮಾನದಂಡಗಳಿಲ್ಲದೆ ಪ್ರಭಾವಿಗಳಷ್ಟೇ ಐಎಎಸ್ ಹುದ್ದೆಗಳನ್ನು ಪಡೆಯುವಂತಾಗುತ್ತಿತ್ತು.
ಇದೀಗ ಪರೀಕ್ಷೆಯ ಮೂಲಕ ರಾಜ್ಯ ನಾಗರೀಕ ಸೇವೆಯೇತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ಸೂಕ್ತ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ.