ಬೆಂಗಳೂರು, (www.bengaluruwire.com) : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ 12 ಕಿ.ಮೀ ಉದ್ದದ ವರ್ತುಲ ರಸ್ತೆಗೆ “ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡಲು ಪಾಲಿಕೆ ಕೌನ್ಸಿಲ್ ನಿರ್ಣಯ ಮಾಡಿದೆ.
ಬಿಬಿಎಂಪಿಯ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ ” ಪುನೀತ್ ರಾಜ್‍ಕುಮಾರ್ ರಸ್ತೆ”ಎಂದು ನಾಮಕರಣ ಮಾಡಲು ಅಧಿಕೃತ ಅನುಮೋದನೆ ನೀಡಿದ್ದಾರೆ.
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ
ಹೊಸಕೆರೆ ಹಳ್ಳಿ- ದೇವೇಗೌಡ ಪೆಟ್ರೋಲ್ ಬಂಕ್ – ಕದಿರೇನ ಹಳ್ಳಿ ಪಾರ್ಕ್ – ಸಾರಕ್ಕಿ ಸಿಗ್ನಲ್ – ಜೆ.ಪಿ.ನಗರ ಮಾರ್ಗದ ಮೂಲಕ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ತನಕ ಒಟ್ಟು ರಸ್ತೆ ಮಾರ್ಗವು ಎರಡು ಲೋಕಸಭಾ ಕ್ಷೇತ್ರಗಳು, ಆರು ವಿಧಾನಸಭಾ ಕ್ಷೇತ್ರ ಮತ್ತು 14 ಬಿಬಿಎಂಪಿ ವಾರ್ಡ್ ಗಳನ್ನು ಹಾದುಹೋಗುತ್ತಿರುವುದು ವಿಶೇಷ.
ಈ 12 ಕಿ.ಮೀ ಉದ್ದದ ರಸ್ತೆ ಅಪ್ಪು ಹೆಸರಿಡುವ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಈ ಹಿಂದೆ ಮನವಿ ಮಾಡಿದ್ದರು.
ಈ ಬಗ್ಗೆ ನಿಯಮಾನುಸಾರ ಪಾಲಿಕೆ ಕಂದಾಯ ಇಲಾಖೆಯ ಜಂಟಿ ಆಯುಕ್ತರು ಸಂಬಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳಿಗೆ ಕೂಡಲೇ ಕ್ರಮ ತೆಗೆದುಕೊಂಡು ಕಡತವನ್ನು ಮಂಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.
ಅದರಂತೆ, ಈ ಮಾರ್ಗದ ರಸ್ತೆಯ ನಕ್ಷೆಯನ್ನು ತಯಾರಿಸಿ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗಿತ್ತು. ಅಲ್ಲದೆ ಸುಮಾರು 700 ಕ್ಕೂ ಹೆಚ್ಚು ಮಂದಿ ಹಾಗೂ ಈ ರಸ್ತೆಗೆ ಹೊಂದಿಕೊಂಡಂತಿರುವ 9 ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಈ ರಸ್ತೆಗೆ ಅಪ್ಪು ಅವರ ಹೆಸರಿಡುವ ಪರವಾಗಿ ಸಹಿ ಮಾಡಿದ್ದರು. ಮತ್ತು ಯಾರೊಬ್ಬರೂ ಈ ನಿರ್ಣಯದ ವಿರುದ್ಧವಾಗಿ ಸಹಿ ಮಾಡದೇ ಇದ್ದ ಕಾರಣ – ಮುಖ್ಯ ಆಯುಕ್ತರ ಟಿಪ್ಪಣಿಯಂತೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಫೆ.16ರಂದು 12 ಕಿ.ಮೀ. ಉದ್ದದ ವರ್ತುಲ ರಸ್ತೆಗೆ “ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕಾರಣ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಅಧಿಕೃತ ಅನುಮೋದನೆ ನೀಡಿದ್ದಾರೆ.
ಅಣ್ಣಾವ್ರು – ಅಪ್ಪು ಹೆಸರು ವರ್ತುಲ ರಸ್ತೆಯಲ್ಲಿ ಸಮಾಗಮ :
ವಿಶೇಷವೆಂದರೆ, ಗೊರಗುಂಟೆ ಪಾಳ್ಯದಿಂದ (ಡಾ.ರಾಜ್ ಕುಮಾರ್ , ಪಾರ್ವತಮ್ಮ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗಳು ಇರುವ ರಸ್ತೆ) ಮೈಸೂರು ರಸ್ತೆಯ ನಾಯಂಡ ಹಳ್ಳಿ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ 2015 ರ ಏಪ್ರಿಲ್ 08 ರಂದು ” ಡಾ.ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ” ಎಂದು ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಅಧಿಕೃತವಾಗಿ ರಸ್ತೆಯ ನಾಮಕರಣ ಸಮಾರಂಭವನ್ನು ಮಾಡಲಾಗಿತ್ತು.
ಈಗ ಇದರ ಮುಂದುವರೆದ ಭಾಗವಾಗಿ ನಾಯಂಡ ಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ ವರ್ತುಲ ರಸ್ತೆಗೆ ” ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮಕರಣ ಮಾಡಲಾಗುತ್ತಿದೆ.
“ಆದಷ್ಟು ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳಿಂದ “ಶ್ರೀ ಪುನೀತ್ ರಾಜ್‍ಕುಮಾರ್ ರಸ್ತೆ” ಯ ನಾಮಕರಣ ಸಮಾರಂಭವನ್ನು ಅಣ್ಣಾವ್ರ ಕುಟುಂಬದ ಎಲ್ಲಾ ಸದಸ್ಯರ ಹಾಜರಾತಿಯಲ್ಲಿ ಏರ್ಪಡಿಸಲಾಗುವುದು.”
– ರಮೇಶ್ ಎನ್.ಆರ್, ಅಧ್ಯಕ್ಷರು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ