ಬೆಂಗಳೂರು, (www.bengaluruwire.com) : ಪೋನ್ ಪೇ ಮೂಲಕ ಹೈಟೆಕ್ ರೀತಿಯಲ್ಲಿ ಲಂಚದ ಹಣ ಪಡೆದ ಓರ್ವ ವ್ಯಕ್ತಿ ಸೇರಿದಂತೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಮೂವರು ಸರ್ಕಾರಿ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹದಳ (ACB)ದ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಡ್ಯಜಿಲ್ಲೆ ಮಳವಳಿ ತಾಲೂಕು ತೊರೆಕಾಡನಹಳ್ಳಿ ಗ್ರಾಮದ ನಿವಾಸಿಯೋರ್ವರ ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಗೆ ದೂರುದಾರರ ತಾಯಿ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಆಗ ತೊರೆಕಾಡನಹಳ್ಳಿ ಗ್ರಾಮ ಲೆಕ್ಕಿಗನಾದ ಭಗವಂತರಾಯ ಎಂಬುವರು 5 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಆ ಪೈಕಿ 2,500 ರೂ. ಹಣವನ್ನು ಮುಂಗಡವಾಗಿ ಪಡೆಯುತ್ತಾನೆ.
ಅಲ್ಲದೆ ಕಂದಾಯ ಇನ್ಸ್ ಪೆಕ್ಟರ್ ಷಣ್ಮುಗಂ ಈ ಜಮೀನಿಗೆ ಜಂಟಿ ಖಾತೆ ಮಾಡಿಕೊಡಲು 5 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿ ಕೊನೆಗೆ 2,500 ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿರುತ್ತಾನೆ. ಈ ಬಗ್ಗೆ ಮಂಡ್ಯ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಫೆ.17ರ ಗುರುವಾರ ಕಾರ್ಯಾಚರಣೆ ನಡೆಸಿ ಜಂಟಿಖಾತೆ ಮಾಡಿಕೊಡಲು ದೂರದಾರರಿಂದ 1 ಸಾವಿರ ಹಣವನ್ನು ಫೋನ್ ಪೇ ಮೂಲಕ ಪಡೆದ ಭಗವಂತರಾಯನನ್ನು ಎಸಿಬಿ ಪೊಲೀಸರು ತಮ್ಮ ಬಲೆಗೆ ಕೆಡವಿದ್ದಾರೆ. ಇದರ ಜೊತೆಗೆ ಷಣ್ಮುಗಂ ದೂರುದಾರರಿಂದ 2,500 ರೂ. ಹಣ ಪಡೆಯುವಾಗ ಎಸಿಬಿ ಟ್ರ್ಯಾಪ್ ಸಿಕ್ಕಿಬಿದ್ದಿದ್ದಾನೆ. ಈ ಇಬ್ಬರು ಸರ್ಕಾರಿ ಅಧಿಕಾರಿಗಳು ಎಸಿಬಿ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದೆ ಇರಲು ಲಂಚಕ್ಕೆ ಬೇಡಿಕೆ : ಎಇಇ ಬಂಧನ
ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಚೆಲ್ಲಿಕೆರೆ ನಿವಾಸಿಯೊಬ್ಬರು ನಗರದ ಟೆಲಿಕಾಂ ಲೇಔಟ್ ನಲ್ಲಿ ನಿಯಮ ಉಲ್ಲಂಘಿಸಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದ ಕಟ್ಟಡಕ್ಕೆ ನೀಡಿರುವ ಬೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದೆ ಇರಲು 9 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಯಂತರರಾದ ಸುಂದರೇಶ್ ನಾಯ್ಕ್ ಅಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚದ ಹಣದ ಸಮೇತ ಬಂಧಿಸಿದ್ದಾರೆ.
ಬೆಸ್ಕಾಂ ನಾಗವಾರ ಇ-9 ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಂದರೇಶ್ ನಾಯ್ಕ್ ದೂರುದಾರರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಇರಲು 9 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ದೂರುದಾರರು ಎಸಿಬಿಗೆ ಕಂಪ್ಲೆಂಟ್ ನೀಡಿದ್ದರು. ಇದನ್ನು ಆಧರಿಸಿ ಎಸಿಬಿ ಪೊಲೀಸರು ಗುರುವಾರ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಾಗ, ಎಇಇ ಸುಂದರೇಶ್ ನಾಯ್ಕ್ 5 ಲಕ್ಷ ರೂ. ಲಂಚದ ಹಣ ಸ್ವೀಕರಿಸುವಾಗಲೇ ಸಿಕ್ಕಿಬಿದ್ದಿದ್ದಾರೆ. ಈ ಅಧಿಕಾರಿಯನ್ನು ಲಂಚದ ಹಣದ ಸಮೇತ ಬಂಧಿಸಿರುವ ಎಸಿಬಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.