ಬೆಂಗಳೂರು, (www.bengaluruwire.com) : ಕನ್ನಡದ ಹಿರಿಯ ಸೃಜನಶೀಲ ಸಾಹಿತಿ, ಸೋನೆ ಮಳೆ ಖ್ಯಾತಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ (93) ಬುಧವಾರ ಬೆಳಗ್ಗೆ ಚಿರನಿದ್ರೆಗೆ ಜಾರಿದ್ದಾರೆ. ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಉಸಿರಾಟ ತೊಂದರೆಯಿಂದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನವೀರ ಕಣವಿಯವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟು ಇಂದು ಚಿಕಿತ್ಸೆ ಫಲಿಸದೇ ಹಿರಿಯ ಕಣವಿಯವರು ನಿಧನರಾಗಿದ್ದು, ಕನ್ನಡದ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾದಂತಾಗಿದೆ. ಕಣವಿಯರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ, ಸರ್ಕಾರದ ಕೋವಿಡ್-19 ಮಾರ್ಗಸೂಚಿ ಪಾಲಿಸಿ ನೆರವೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜನತೆಗೆ ಕವಿತೆ ತಲುಪುವ ಅಗತ್ಯತೆ ಬಗ್ಗೆ ಸಮರ್ಥನೆ ಮಾಡಿದ್ದ ಕಣವಿ :
ತಮ್ಮ ಕವನಗಳು, ಸಾಹಿತ್ಯ ಗ್ರಂಥಗಳು ಮೂಲಕ ನಾಡಿನ ಜನರನನ್ನು ತಲುಪಿದ್ದರು. ಕವಿತೆ ಜನತೆಗೆ ತಲುಪುವುದು ಅಗತ್ಯ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಅವರೂ ಒಬ್ಬರು. ಅವರು ರಚಿಸಿರುವ ಗೀತೆಗಳನ್ನು ಈ ದೃಷ್ಟಿಯಿಂದ ನೋಡಬೇಕು. ಇಲ್ಲಿ ಅವರ ಗಂಭೀರ ಕಾವ್ಯದ ಆಸಕ್ತಿಗಳೇ ಸರಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಕಾವ್ಯಬಂಧದಲ್ಲಿ ಅರ್ಥಪುಷ್ಟಿಗಿಂತ ನಾದ ಮಾಧುರ್ಯಕ್ಕೆ ಹೆಚ್ಚು ಒತ್ತು ಬೀಳುತ್ತದೆ. ಗೀತೆಗಳ ಸ್ವರೂಪವೇ ಅದು. ಭಾವ ಮತ್ತು ನಾದಗಳಲ್ಲಿ ರಮಿಸಲಾಗದ ಮನಸ್ಸು ಪಾಯಶಃ ಗೀತೆಗಳ ರಚನೆಗೆ ಸಮರ್ಥವಾಗುವುದಿಲ್ಲ.
ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡು ಬರುತ್ತವೆ. “ವಿಶ್ವಭಾರತಿಗೆ ಕನ್ನಡದಾರತಿ”, “ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ”, “ಹೂವು ಹೊರಳುವುವು ಸೂರ್ಯನ ಕಡೆಗೆ”, “ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ” ಮೊದಲಾದ ಅವರ ಜನಪ್ರಿಯ ಗೀತೆಗಳನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಅವರು ರಚಿಸಿ ಈ ಕವನಗಳು ನಾಡಿನ ಉದ್ದಗಲಕ್ಕೆ ವ್ಯಾಪಿಸಿ ಕನ್ನಡಿಗರ ಮನ ಮನಸ್ಸಿನಲ್ಲಿ ಅಚ್ಚಳಿಯದ ನೆನಪು ಮೂಡಿಸಿದ್ದರು.
1928ರಲ್ಲಿ ಹೊಂಬಳ ಗ್ರಾಮದಲ್ಲಿ ಜನಿಸಿದ ಕಣವಿ :
ಚೆನ್ನವೀರ ಕಣವಿಯರ ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 28 ಜೂನ್ 1928ರಲ್ಲಿ ಹುಟ್ಟಿದ ಕಣವಿಯವರು ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿದ ಕಣವಿಯವರು, 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದರು. ತಂದೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 1956ರಿಂದ ಪ್ರಸಾರಾಂಗದ ನಿರ್ದೇಶಕರಾಗಿ 27 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಚೆನ್ನವೀರ ಕಣವಿಯವರು ತಮ್ಮ ಆಡಳಿತಾವಧಿಯಲ್ಲಿ ಪ್ರಕಟಣಾ ವಿಭಾಗದಿಂದ ನೂರಾರು ಉತ್ತಮ ಪುಸ್ತಕಗಳನ್ನು ಹೊರತಂದ ಕೀರ್ತಿಗೆ ಭಾಜನರಾಗಿದ್ದಾರೆ.
ಚೆನ್ನವೀರ ಕಣವಿಯವರಿಗೆ ಬಾಲ್ಯದಿಂದಲೂ ಸಾಹಿತ್ಯದ ಮೇಲೆ ಅಪಾರ ಆಸಕ್ತಿಯಿತ್ತು. ಜೊತೆಗೆ ತಂದೆ ಶಿಕ್ಷಕರಾಗಿರುವ ಕಾರಣಕ್ಕೆ ಮನೆಯಲ್ಲಿಯೇ ಕಣವಿಯರು ಓದು ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಕಾವ್ಯ, ವಚನಗಳಲ್ಲಿ ಅವರಿಗೆ ಅತೀವ ಆಸಕ್ತಿಯಿತ್ತು.
36ಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳ ಕೊಡುಗೆ :
ಚೆನ್ನವೀರ ಕಣವಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಸುಮಾರು 36ಕ್ಕೂ ಹೆಚ್ಚು ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 16 ಕವನ ಸಂಕಲನ, 5 ವಿಮರ್ಶನಾ ಗ್ರಂಥಗಳು, ಹಕ್ಕಿ ಪುಕ್ಕ ಹಾಗೂ ಚಿಣ್ಣರ ಲೋಕವ ತೆರೆಯೋಣ ಎಂಬ ಎರಡು ಮಕ್ಕಳ ಪುಸ್ತಕ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ರಚಿಸಿ, ಕನ್ನಡ ಸಾಹಿತ್ಯ ಪ್ರೇಮಿಗಳು, ಸಾಹಿತ್ಯಾಸಕ್ತರನ್ನು ರಂಚಿಸಿದ್ದಾರೆ.
ಚೆನ್ನವೀರ ಕಣವಿಯವರ ಪ್ರಮುಖ ಕೃತಿಗಳು ಹೀಗಿವೆ :
‘ಭಾವಜೀವಿ’, ‘ಆಕಾಶಬುಟ್ಟಿ’, ‘ದೀಪಧಾರಿ’, ‘ಜೀವಧ್ವನಿ’, ‘ಮಧುಚಂದ್ರ’, ‘ನೆಲಮುಗಿಲು’, ‘ಎರಡು ದಡ’ ಮೊದಲಾದವು ಪ್ರಮುಖ ಕವನ ಸಂಕಲನಗಳು. ‘ಹೊಂಬೆಳಕು’ ಸಮಗ್ರ ಕಾವ್ಯ ಸಂಪುಟ ಪ್ರಕಟಣೆ, ‘ಮಲ್ಲಿಗೆ ದಂಡೆ’ ಕಣವಿಯವರ ಭಾವಗೀತೆಗಳ ಧ್ವನಿ ಸುರುಳಿ, ‘ಸಾಹಿತ್ಯ ಚಿಂತನೆ’, ‘ಕಾವ್ಯಾನುಸಂಧಾನ’, ‘ಸಮಾಹಿತ’ ಮತ್ತು ‘ಮಧುರ ಚೆನ್ನ’ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೇ ಚೆನ್ನವೀರ ಕಣವಿಯವರು ಸಾನೆಟ್ ಕಾವ್ಯಬಂಧದಲ್ಲಿ ಸುಮಾರು 120ಕ್ಕೂ ಹೆಚ್ಚಿನ ಸಾನೆಟ್ಗಳನ್ನು ರಚಿಸಿದ್ದಾರೆ.
ಕಣವಿಯವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು ಹಲವು :
1967ರಲ್ಲಿ ನಿಡುಮಾಮಿಡಿ ಜಗದ್ಗುರುಗಳಿಂದ ‘ಕವನ ಕಲಾರವಿ’ ಹಾಗೂ 1990 ಹಾಗೂ 1996ರಲ್ಲಿ ಚಿತ್ರದುರ್ಗದ ಬೃಹನ್ಮಠದಿಂದ ಕ್ರಮವಾಗಿ ‘ಕವಿರತ್ನ’ ಮತ್ತು ‘ಸಾಹಿತ್ಯ ಭಾಸ್ಕರ’ ಬಿರುದುಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.
ತಮ್ಮ ಮೃದು ಮಾತು ಹಾಗೂ ಮಾನವೀಯ ಗುಣಗಳಿಂದ ಎಲ್ಲ ಮನಸ್ಸು ಗೆಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಚೆನ್ನವೀರ ಕಣವಿಯವರ ನಿಧನಕ್ಕೆ ನಾಡಿನ ಹಲವು ಗಣ್ಯರು, ಸಾಹಿತಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಸಂತಾಪ :
ಚೆನ್ನವೀರ ಕಣವಿಯವರ ನಿಧನದಿಂದ ಈ ನಾಡಿನ ಒಬ್ಬ ಧೀಮಂತ ಮಾರ್ಗದರ್ಶಕರು ಇಲ್ಲದಂತಾಗಿದೆ. ಸಾತ್ವಿಕ ಚಿಂತಕರು ಇಲ್ಲದ ಈ ಕಾಲದಲ್ಲಿ ಚನ್ನವೀರ ಕಣವಿಯವರ ಇರುವಿಕೆ ಪ್ರಸ್ತುತವಾಗಿತ್ತು. ಹಿರಿಯ ಸಾಹಿತಿಗಳಾದ ಚಂಪಾ, ಪ್ರೊ.ಸಿದ್ದಲಿಂಗಯ್ಯ ಅವರು ಕೂಡ ನಮ್ಮನೆಲ್ಲ ಅಗಲಿದ್ದಾರೆ. ಹೀಗೆ ಒಬ್ಬೊಬ್ಬರಾಗಿ ಸಾಹಿತ್ಯ ಲೋಕದ ದಿಗ್ಗಜರನ್ನು ಕಳೆದುಕೊಳ್ಳುತ್ತಿದ್ದೇವೆ. ಚೆನ್ನವೀರ ಕಣವಿ ಅವರನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ ಸಿಸಿ ಪಾಟೀಲರ ಮಾತುಗಳು :
ಮೆಲುದನಿಯ ಕವಿ, ಹಿರಿ-ಕಿರಿಯ ತಲೆಮಾರುಗಳ ಸಾಹಿತಿಗಳ ನಡುವಿನ ಮಾರ್ಗದರ್ಶನದ ಕೊಂಡಿಯಾಗಿ, ನಮ್ಮ ಉತ್ತರ ಕರ್ನಾಟಕದ ಸಾರಸ್ವತ ಲೋಕದ ಘನತೆಯನ್ನು ಮತ್ತಷ್ಟು ಹೆಚ್ಚಿಸಿ, ಕನ್ನಡದ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಚೆನ್ನವೀರ ಕಣವಿಯವರು ಇಂದು ನಿಧನರಾಗಿರುವುದು ಕನ್ನಡ ನಾಡು- ನುಡಿಗೆ ದೊಡ್ಡ ಆಘಾತವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ :
“ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ//” ಇಂತಹ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ :
ಕನ್ನಡ ಸಾಹಿತ್ಯಲೋಕದ ಹಿರಿಯ ಕವಿ, ನಾಡೋಜ ಶ್ರೀ ಚನ್ನವೀರ ಕಣವಿ ಅವರ ನಿಧನ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಸಾಹಿತ್ಯಸೇವೆಯ ಮೂಲಕ ಅಕ್ಷರಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೀಯುತರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ಸಾಂತ್ವನ ಕೋರುತ್ತೇನೆ.
ಮಾಜಿ ಡಾ.ಜಿ.ಪರಮೇಶ್ವರ್ :
ನಮ್ಮ ನಾಡಿನ ಹೆಮ್ಮೆಯ ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನದ ಸುದ್ದಿ ತೀವ್ರ ನೋವನ್ನುಂಟುಮಾಡಿದೆ. ಅವರ ಕನ್ನಡ ಸೇವೆಗೆ ಶರಣು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುವೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ :
ನಾಡೋಜ ಚನ್ನವೀರ ಕಣವಿಯವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ, ಸಾರಸ್ವತ ಲೋಕದ ಅವರ ಅಭಿಮಾನಿಗಳಿಗೆ, ಹಿತೈಷಿಗಳಿಗೆ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಮಾಜಿ ಸಚಿವ ಎಂ.ಬಿ.ಪಾಟೀಲ್ :
ಕನ್ನಡದ ಸಮನ್ವಯ ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರು ನಿಧನದ ಸುದ್ದಿ ಆಘಾತ ತಂದಿದೆ. ಅವರ ಅಗಲಿಕೆಯಿಂದಾಗಿ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲಿ.