ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನಲ್ಲಿ ಮಾ.3ರಿಂದ 10ರವರೆಗೆ ಎಂಟು ದಿನಗಳ ಕಾಲ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಚಲನಚಿತ್ರ ಪ್ರದರ್ಶನವೂ ಕೂಡ ನಡೆಯಲಿದೆ.
ಮಾರ್ಚ್ 3ನೆಯ ತಾರೀಖಿನ ಸಂಜೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜಿಕೆವಿಕೆ ಸಭಾಂಗಣದಲ್ಲಿ ನಡೆಯಲಿರುವ 13ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಕೋವಿಡ್ ಸೋಂಕು ಇರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗೊಳಂದಿಗೆ ಈ ಸಿನಿಮಾ ಹಬ್ಬವನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ. ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಪ್ರೊಡ್ಯೂಸರ್ ಅಸೋಸಿಯೇಷನ್ (FIAPF) ಮಾನ್ಯತೆ ಪಡೆದ ನಂತರ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಚಿತ್ರೋತ್ಸವವಾಗಿದೆ ಇದಾಗಿದೆ. ಈ ಚಲನಚಿತ್ರೋತ್ಸವದಲ್ಲಿ 2020 ಹಾಗೂ 2021ನೇ ಸಾಲಿನಲ್ಲಿ ನಿರ್ಮಾಣವಾದ 55 ರಾಷ್ಟ್ರಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಜಗತ್ತಿನಲ್ಲಿ ನಡೆಯಲಿರುವ 5,000 ಚಲನ ಚಿತ್ರೋತ್ಸವಗಳ ಪೈಕಿ ಫಿಯಾಫಿ ಮಾನ್ಯತೆ ಪಡೆದಿರುವುದು 45 ಚಿತ್ರೋತ್ಸವಗಳಿಗೆ ಮಾತ್ರ. ಈಗ ಬೆಂಗಳೂರು ಚಲನಚಿತ್ರೋತ್ಸವ ಆ ಸಾಲಿಗೆ ಸೇರಿರುವ 46ನೇ ಚಲನಚಿತ್ರೋತ್ಸವ ಎಂಬುದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ಎಲ್ಲೆಲ್ಲಿ ನಡೆಯಲಿದೆ ಚಿತ್ರ ಪ್ರದರ್ಶನ? :
ಮಾರ್ಚ್ 4ರಿಂದ ರಾಜಾಜಿನಗರದ ಒರಾಯನ್ ಮಾಲ್ ನಲ್ಲಿರುವ ಪಿವಿಆರ್ ಸಿನಿಮಾದಲ್ಲಿನ 11 ಪರದೆಗಳಲ್ಲಿ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿ ಅಕಾಡೆಮಿಯಲ್ಲಿ ಈ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಮಾರೋಪ ಸಮಾರಂಭ ಮಾರ್ಚ್ 10 ರಂದು ಸಂಜೆ ನಡೆಯಲಿದ್ದು ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸುನಿಲ್ ಪುರಾಣಿಕ್ ಹೇಳಿದ್ದಾರೆ.
ಚಲನಚಿತ್ರೋತ್ಸವ ಸ್ಪರ್ಧಾ ವಿಭಾಗ ಹೇಗಿರುತ್ತೆ? :
ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರಗಳ ವಿಭಾಗ ಚಿತ್ರಭಾರತಿ, ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅದೇ ರೀತಿ ಸಮಕಾಲೀನ ವಿಶ್ವ ಸಿನಿಮಾ, ವಿದೇಶವೊಂದರ ವಿಶೇಷ ನೋಟ (ಫ್ರಾನ್ಸ್ ಸಿನಿಮಾ ಕ್ಷೇತ್ರ), ಈಶಾನ್ಯ ರಾಜ್ಯಗಳ ವಿಶೇಷ ನೋಟ, ಆಸ್ಕರ್ ಪ್ರಶಸ್ತಿಗೆ ಅರ್ಹ ಸಿನಿಮಾಗಳ ಆಸ್ಕರ್ ವಿಭಾಗ ಇರಲಿದೆ. ಜೊತೆಗೆ ವಿಮರ್ಶಕರ ಸಪ್ತಾಹವೂ ಇರಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದ್ದಾರೆ.
ಹೈಬ್ರಿಡ್ ಮಾದರಿಯ ಚಲನಚಿತ್ರೋತ್ಸವ :
ಈ ಬಾರಿಯ ಚಲನಚಿತ್ರೋತ್ಸವವು ಆಫ್ ಲೈನ್ ಮತ್ತು ಆನ್ ಲೈನ್ (ಹೈಬ್ರಿಡ್) ಎರಡೂ ಮಾದರಿಗಳಲ್ಲಿ ನಡೆಯಲಿದೆ. ಜರ್ಮನಿಯ ವೋಲ್ಕರ್ ಸ್ಕೋಂಡ್ರಫ್, ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ ಅವರ ಸಿನಿಮಾ ಬದುಕಿನ ಪುನರಾವಲೋಕನ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ 5 ಚಲನಚಿತ್ರಗಳ ವಿಶೇಷ ಪ್ರದರ್ಶನ ನಡೆಯಲಿದೆ. ತುಳು ಚಿತ್ರರಂಗದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ತುಳು ಚಿತ್ರರಂಗದ ಅವಲೋಕನ, ವಿಚಾರ ಸಂಕಿರಣ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟಾರ್ ಹಿಮಂತ್ ರಾಜ್, ಚಲನಚಿತ್ರೋತ್ಸವದ ಮುಖ್ಯ ಸಂಯೋಜನಾಧಿಕಾರಿ ಹಾಗೂ ನಿರ್ದೇಶಕ ಪಿ.ಶೇಷಾದ್ರಿ, ಕಲಾತ್ಮಕ ನಿರ್ದೇಶಕ ಎಚ್.ಎನ್.ನರಹರಿರಾವ್ ಉಪಸ್ಥಿತರಿದ್ದರು.