ಮುಂಬೈ, (www.bengaluruwire.com) : ತಮ್ಮ ಮಧುರ ಕಂಠದ ಗಾಯನದಿಂದಲೇ ಏಳು ದಶಕಗಳ ಕಾಲ ದೇಶದ ಚಿತ್ರರಸಿಕರನ್ನು ರಂಜಿಸಿ, ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ವಾಗಿ ನೆಲೆಸಿದ ಭಾರತ ರತ್ನ ಲತಾ ಮಂಗೆಶ್ಕರ್ (92) ಭಾನುವಾರ ನಿಧನರಾಗಿದ್ದಾರೆ.
ಭಾರತದ ನೈಟೇಂಗಲ್, ಕ್ವೀನ್ ಆಫ್ ಮೆಲೊಡಿ ಎಂದು ಪ್ರಸಿದ್ಧರಾಗಿದ್ದ ಲತಾ, ತಮ್ಮ 13ನೇ ವಯಸ್ಸಿನಿಂದಲೇ ಸುಮಾರು ಏಳು ದಶಕಗಳ ಕಾಲ 36 ಭಾಷೆಗಳಲ್ಲಿ 30 ಸಾವಿರಕ್ಕೂ ಚಲನಚಿತ್ರ ಗೀತೆಗಳನ್ನು ಹಾಡಿ, ಸಿನಿಮಾ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು.
ಜನವರಿ 8ರಂದು ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಸಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕ (ICU)ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಜನವರಿ 3ರಂದು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ, ಶನಿವಾರ ಮತ್ತೆ ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿದ್ದರಿಂದ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲತಾ ಮಂಗೇಶ್ಕರ್ ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಲತಾ ಅವರು ಮೊದಲು 1948ರಲ್ಲಿ ಮಜಬೂರ್ ಎಂಬ ಚಿತ್ರದ ದಿಲ್‍ಮೆರಾ ಥೋಡಾ ಎಂಬ ಚಿತ್ರಗೀತೆಯಿಂದ ಪಾದಾರ್ಪಣೆ ಮಾಡಿದ್ದರೂ, 1949ರಲ್ಲಿ ಅವರು ಹಾಡಿದ “ಆಯೆಗಾ ಆನೆವಾಲಾ” ಎಂಬ ಮಹಲ್ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಗಳಿಸಿದರು.
ಸಂಗೀತಗಾರ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಪುತ್ರಿಯಾಗಿ 1929ರ ಸೆಪ್ಟೆಂಬರ್ 28ರಂದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಲತಾ ಮಂಗೇಶ್ಕರ್ ಜನಿಸಿದರು. ಇವರ ಮೊದಲ ಹೆಸರು ಹೇಮಾ. ಸಣ್ಣ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಲತಾ ಅವರಿಗೆ ಅವರ ತಂದೆಯೇ ಮೊದಲ ಗುರುವಾಗಿದ್ದರು. ಅವರಲ್ಲಿದ್ದ ಅಸಾಧಾರಣ ಪ್ರತಿಭೆಯನ್ನು ತಂದೆ ದೀನನಾಥ್ ಮಂಗೇಶ್ಕರ್ ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು.
ಗಾಯನ ಲೋಕದ ದಂತಕತೆ ಎನಿಸಿದ್ದ ಲತಾ
ಅಲ್ಲಿಂದ ಹಿಂದಿರುಗಿ ನೋಡದೆ ಭಾರತೀಯ ಸಿನಿಮಾ ರಂಗದಲ್ಲಿ ಅಪ್ರತಿಮೆ ಗಾಯಕಿಯಾಗಿ ಬೆಳೆದಿದ್ದು ಈಗ ಇತಿಹಾಸ. ಅವರ ನೂರಾರು ಹಾಡುಗಳು ಜನಪ್ರಿಯವಾಗಿ ಚಿತ್ರರಂಗದ ನಂದಾದೀಪದಂತೆ ಎಲ್ಲ ಚಿತ್ರರಸಿಕರ ಅಮರಗೀತೆಗಳಾಗಿ ಉಳಿದಿವೆ.
ಕೇವಲ ಹಿಂದಿ ಭಾಷೆಯೊಂದರಲ್ಲೇ ಒಂದು ಸಾವಿರಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರ ಗಾಯನ ಸಾಧನೆಗೆ ಗೌರವಗಳಿಗೆ ಲೆಕ್ಕವಿಲ್ಲ. ಅವುಗಳಲ್ಲಿ ಪ್ರಮುಖವಾದವೆಂದರೆ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಹಾಗೂ 2001ನೇ ಇಸವಿಯಲ್ಲಿ ದೇಶದ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿಗೆ ಭಾಜನರಾದರು. ಇದಲ್ಲದೆ, ನ್ಯಾಷನಲ್ ಫಿಲ್ಮ್‍ಫೇರ್ ಪ್ರಶಸ್ತಿ, ಜೀವಮಾನ ಸಾಧನೆ ಪುರಸ್ಕಾರದಂತಹ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಭಾರತ ರತ್ನ ಗಾಯಕಿ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ವಿವಿಧ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಲತಾ ಅವರ ಪೂರ್ಣ ರೂಪದ ಕೊನೆ ಆಲ್ಬಮ್ ಯಶ್ ಚೋಪ್ರಾ ಅವರು 2004ರಲ್ಲಿ ನಿರ್ಮಿಸಿದ ವೀರ್ ಜರಾ ಚಿತ್ರವಾಗಿತ್ತು. 2021 ರ ಮಾರ್ಚ್ 30 ರಂದು ಭಾರತೀಯ ಸೇನೆಗಾಗಿ “ಸೌಗಂಧ್ ಮುಜೆ ಇಸ್ ಮಿಟ್ಟೀ ಕಿ” ಎಂಬ ಹಾಡು ಹಾಡಿದ್ದರು. ಇದೇ ಅವರ ಜೀವನದಲ್ಲಿ ಹಾಡಿದ ಕೊನೆಯ ಹಾಡಾಗಿತ್ತು.