ಶೃಂಗೇರಿ/ಕಾಶ್ಮೀರ, (www.bengaluruwire.com) : ಕಾಶ್ಮೀರದ ಗಡಿ ನಿಯಂತ್ರಣ ರೇಖೆ (Kashmir LOC) ಬಳಿಯ ಕುಪ್ವಾರ ಜಿಲ್ಲೆಯ ತೀತ್ವಾಲ್ ನಲ್ಲಿ ಶಾರದಾ ದೇವಿಯ ನೂತನ ದೇವಸ್ಥಾನ ನಿರ್ಮಿಸಲು ಹೊರಟಿರುವ ಶಾರದ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿಗೆ ಅಗತ್ಯ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಶೃಂಗೇರಿ ಪೀಠ ತಿಳಿಸಿದೆ.
ಇತ್ತೀಚೆಗೆ ಶಾರದ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ (Save Sharadha Committee – SSC) ಸಂಸ್ಥಾಪಕ ಅಧ್ಯಕ್ಷರಾದ ರವೀಂದ್ರ ಪಂಡಿತ ನೇತೃತ್ವದ ನಿಯೋಗ ಶೃಂಗೇರಿ ಮಠ (Sringeri Mutt)ದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ (Sri Bharati Tirtha Mahaswamiji) ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ (Sri Vidhushekhara Bharati Swamiji)ಯವರನ್ನು ಭೇಟಿ ಮಾಡಿ ತೀತ್ವಾಲ್ ನಲ್ಲಿ ನೂತನ ಶಾರದಾ ದೇವಸ್ಥಾನ ಕಟ್ಟುತ್ತಿರುವ ವಿಷಯವನ್ನು ತಿಳಿಸಿ ಅವರ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದ ದೇವಿಯ ಪುರಾತನ ದೇವಸ್ಥಾನದ ಮೂಲ ಸರ್ವಜ್ಞ ಪೀಠದಲ್ಲಿನ ಎರಡು ಕಲ್ಲುಗಳನ್ನು ಹಾಗೂ ಅಲ್ಲಿನ ಪವಿತ್ರ ಮಣ್ಣನ್ನು ಶ್ರೀಗಳಿಗೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಒಂದು ಕಲ್ಲನ್ನು ರವೀಂದ್ರ ಪಂಡಿತರಿಗೆ ನೀಡಿ, ನೂತನ ಶಾರಾದಾ ದೇವಿಯ ದೇವಸ್ಥಾನದ ಕಾಮಗಾರಿಗಳು ಸಾಂಗವಾಗಿ ನೆರವೇರುವಂತೆ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶೃಂಗೇರಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಆರ್.ಗೌರಿಶಂಕರ ಅವರು, ರವೀಂದ್ರ ಪಂಡಿತ ನೇತೃತ್ವದ ನಿಯೋಗಕ್ಕೆ, ಶೃಂಗೇರಿ ಮಠದಿಂದ ತೀತ್ವಾಲ್ ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಶಾರದಾ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೆ ಮಠದ ವತಿಯಿಂದ ಅಲ್ಲಿನ ದೇವಸ್ಥಾನಕ್ಕೆ ಶಾರದಾ ದೇವಿಯ ಪಂಚಲೋಹ ವಿಗ್ರಹ ನೀಡುವುದಾಗಿ ಭರವಸೆ ನೀಡಿದರು.
ತೀತ್ವಾಲ್ ಎಂಬುದು ಕೃಷ್ಣಗಂಗಾ ನದಿ ತೀರ ಪ್ರದೇಶದ ಒಂದು ಯಾತ್ರಾಕೇಂದ್ರವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಸರ್ವಜ್ಞ ಪೀಠದಲ್ಲಿರುವ ಶಾರಾದ ದೇವಿಯ ವಾರ್ಷಿಕ ಯಾತ್ರೆಯ ಭಾಗವಾಗಿದೆ.
ತೀತ್ವಾಲ್ ನಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸರ್ವಜ್ಞ ಪೀಠದಲ್ಲಿರುವ ಶಾರದ ದೇವಿ ಮೂಲ ದೇವಸ್ಥಾನದ ರೀತಿ ದೇವಸ್ಥಾನ ಕಟ್ಟಲು ಪುರಾತನ ಶಾರದ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ನಿರ್ಧರಿಸಿ, ಅಲ್ಲಿನ ಕೆಲ ಜಾಗವನ್ನು ಬಿಡಿಸಿಕೊಂಡು, ಕೆಲವು ಜಾಗಗಳನ್ನು ದೇವಸ್ಥಾನ ನಿರ್ಮಾಣಕ್ಕಾಗಿ ಖರೀದಿಸಿದೆ. ಅಲ್ಲಿ ಡಿಸೆಂಬರ್ 3ರಂದು ಸಮಿತಿಯು ಭೂಮಿಪೂಜೆ ನಡೆಸಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದೆ. ಈ ಕಾಮಗಾರಿಗಳಿಗೆ ಭಾರತ – ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿರುವ ಭಾರತೀಯ ಸೇನೆ ಕೂಡ ಸಂಪೂರ್ಣ ಸಹಕಾರ ನೀಡಿದೆ. ಇದೇ ಸ್ಥಳದಲ್ಲಿ ಈ ಹಿಂದೆ ನಾಶವಾದ ಗುರುದ್ವಾರದ ಮರು ನಿರ್ಮಾಣಕ್ಕೂ ನಿರ್ಧರಿಸಲಾಗಿದೆ. ಹಿಂದೂ ಪಂಡಿತ ಸಮಾಜ ಸತತ ಮೂರು ಪೀಳಿಗೆಗಳಿಂದ ಅಂದರೆ 1948 ರಿಂದ ಶಾರದಾ ಪೀಠ ಮರು ಸ್ಥಾಪನೆಗೆ ಪ್ರಯತ್ನ ನಡೆಸುತ್ತಲೇ ಬಂದಿದ್ದು, ಇಂದು ಒಂದು ಹಂತದವರೆಗೆ ಯಶಸ್ಸು ಪಡೆದಿದೆ.
ಶಾರದಾ ಸರ್ವಜ್ಞ ಪೀಠದ ಇತಿಹಾಸ ಹೀಗಿದೆ :
ಪಾಕ್ ಆಕ್ರಮಿತ ಕಾಶ್ಮೀರದ ಗಣೇಶ್ ಘಾಟಿ, ಶಾರದ ನೀಲಮ್ ಕಣಿವೆಯಲ್ಲಿ ಶಾರದಾ ನಗರಿ ಹಾಗೂ ಸರ್ವಜ್ಞ ಪೀಠವಿದೆ. ಶಾರದಾ ಪೀಠ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನಿಂದ 150 ಕಿ.ಮೀ ಹಾಗೂ ಭಾರತದ ಶ್ರೀನಗರದಿಂದ 130 ಕಿ.ಮೀ ದೂರದಲ್ಲಿದೆ. ಅಲ್ಲದೆ ರಾಜರ ಆಳ್ವಿಕೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವ ಗಡಿನಿಯಂತ್ರಣ ರೇಖೆಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ನೀಲಮ್ ನದಿ ತೀರದ ಶಾರದ ಗ್ರಾಮದಲ್ಲಿ ಸಮುದ್ರ ಮಟ್ಟದಿಂದ 6,499 ಅಡಿ ಮೇಲ್ಭಾಗದಲ್ಲಿ ಶಾರದಾ ಸರ್ವಜ್ಞ ಪೀಠವಿದೆ.
ಈ ಸರ್ವಜ್ಞ ಪೀಠವು ವಿಶ್ವವಿದ್ಯಾಲಯ ನಳಂದ ಮತ್ತು ತಕ್ಷಶಿಲಾ ಗಿಂತಲೂ ಪುರಾತನ ವಿಶ್ವ ವಿದ್ಯಾಲಯ. ಕೇರನ್ ಎಂಬ ಸಣ್ಣ ಪಟ್ಟಣದಿಂದ 60 ಕಿ.ಮೀ ದೂರದಲ್ಲಿ ಈ ಸರ್ವಜ್ಞ ಪೀಠ ಹಾಗೂ ಶಾರದಾ ದೇವಸ್ಥಾನದ ಪಳಿಯುಳಿಕೆ ಇದೆ. ಭಾರತ – ಪಾಕಿಸ್ತಾನದ ವಿಭಜನೆಗೆ ಮುಂಚೆ ಹಿಂದೂಗಳು ಈಗಿನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೇ ಸ್ಥಳಕ್ಕೆ ಬಂದು ಪೂಜೆ ಮಾಡುತ್ತಿದ್ದರು.
1850 ಇಸವಿ ನಂತರ ಆ ಸರ್ವಜ್ಞ ಪೀಠದ ಸ್ಥಳಕ್ಕೆ ಹೋಗುವುದನ್ನೇ ಹಿಂದೂಗಳು ಕಡಿಮೆ ಮಾಡುತ್ತಾರೆ. ಆಗ ಅಲ್ಲಿ ಸ್ವಾಮೀಜಿ ಹಾಗೂ ಅರ್ಚಕರು ಮಾತ್ರ ನೆಲೆಸಿರುತ್ತಾರೆ. 1947 ರ ತನಕ ಆ ದೇವಸ್ಥಾನದ ಪಕ್ಕ ಆಶ್ರಮವಿದ್ದು, ಪ್ರಕಾಶ್ ಭಟ್ ಎಂಬ ಪೂಜಾರಿ ಹಾಗೂ ನಂದಲಾಲ್ ಜಿ ಎಂಬ ಒಬ್ಬರು ಸ್ವಾಮಿಜಿ ನೆಲೆಸಿದ್ದರು. ಕೊನೆಗೆ ದೇಶ ವಿಭಜನೆ ಸುದ್ದಿ ಕೇಳಿ ಈ ಇಬ್ಬರೂ ಭಾರತದ ಕುಪ್ವಾರಾ ಕ್ಕೆ ಬಂದು ನೆಲೆಸುತ್ತಾರೆ. ಈ ಸ್ವಾಮೀಜಿ ಶಂಕರಾಚಾರ್ಯ ಪರಂಪರೆಯವರಾಗಿದ್ದು, ಅವರ ಅನುಯಾಯಿಗಳಾಗಿದ್ದರು. ಇವರೇ ಇಲ್ಲಿಯ ಕಡೆಯ ಸ್ವಾಮೀಜಿಯಾಗಿದ್ದರು. ವಿಭಜನೆ ಬಳಿಕ ಮತ್ತೆ ಆ ದೇವಸ್ಥಾನ ಪ್ರದೇಶಕ್ಕೆ ಆಗಮಿಸಿ ಪೂಜೆಗೆ ಅವಕಾಶವನ್ನು ಪಾಕಿಸ್ತಾನ ನಿರಾಕರಿಸುತ್ತೆ.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಸ್ಥಳದಲ್ಲಿ ಇಸ್ಲಾಮಿಕ್, ಬುಡಕಟ್ಟು ಜನರಿಂದ ದಾಳಿಯಾಗಿ ಆ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಹಿಂದು ಕುಟುಂಬಗಳು ಭಾರತದ ಕಾಶ್ಮೀರಕ್ಕೆ ವಲಸೆ ಬರ್ತಾರೆ. ಹಂತ ಹಂತವಾಗಿ ದೇವಸ್ಥಾನ ಹಾಗೂ ಸಂಬಂಧಿಸಿದ ಪ್ರದೇಶ, ಅತಿಕ್ರಮಣಕ್ಕೆ ಒಳಗಾಗುತ್ತೆ. ನಿರ್ವಹಣೆ ಇಲ್ಲದೆ ದೇವಸ್ಥಾನದ ಕಟ್ಟಡ ಪೂರ್ತಿಯಾಗಿ ಶಿಥಿಲವಾಗುತ್ತದೆ. ಸಮಯ ಸರಿದಂತೆ ದೇವಸ್ಥಾನದ ವಸ್ತುಗಳು, ಸ್ವತ್ತು ಕಳುವಾಗುತ್ತೆ. ಹಾಗೂ ದೇವಸ್ಥಾನದ ಆಸ್ತಿ ಒತ್ತುವರಿಯಾಗಿ ಮನೆ, ಮಳಿಗೆ ಇತ್ಯಾದಿ ಕಟ್ಟಡ ನಿರ್ಮಾಣ ಮಾಡುತ್ತಾರೆ. ಅಲ್ಲಿದ್ದ ಈಶ್ವರನ ಲಿಂಗ, ಪಾರ್ವತಿ ಹಾಗೂ ಗಣಪತಿ ವಿಗ್ರಹ ಕಾಣೆಯಾಗುತ್ತೆ.
ಕಾಷ್ಠ ರೂಪದಲ್ಲಿ ಶಾರದಾ ದೇವಿಯ ಪ್ರತಿಷ್ಠಾಪನೆಯಾಗಿತ್ತು :
1500 ನೇ ಇಸವಿಗೆ ಮುಂಚೆ ಶಂಕರಾಚಾರ್ಯರು ಇಲ್ಲಿ ಕಾಷ್ಠದ ಶಾರದಾ ವಿಗ್ರಹವನ್ನು ಸ್ಥಾಪಿಸಿರುತ್ತಾರೆ. ಇದಕ್ಕೂ ಮುನ್ನ ನಾರದ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆ ಬ್ರಹ್ಮ ದೇವನ ಅನುಗ್ರಹ ಪಡೆದು ಕಾಷ್ಠ ರೂಪದ ತಾಯಿ ಶಾರದಾ ಮಾತೆ ವಿಗ್ರಹವನ್ನು ಪ್ರತಿಷ್ಠೆ ಮಾಡಿ ಆರಾಧಿಸುತ್ತಾರೆ. ಅವರಿಂದಾಗಿ ಜಗತ್ತಿಗೆ ಶಾರದಾ ಪೀಠವು ಶಾರದಾ ದೇವಿಯ ತವರು ಮನೆ ಅನ್ನೋದು ತಿಳಿಯುತ್ತೆ. ಶಾರದಾ ದೇವಿ ತಾಯಿಯ ತವರುಮನೆ ಕಾಶ್ಮೀರ ಆಗಿದ್ದರಿಂದ ನಾರದ ಮಹರ್ಷಿಗಳು ತಮ್ಮ ನಾರದ ಪುರಾಣದಲ್ಲಿ “ಕಾಶ್ಮೀರ ಪುರವಾಸಿನಿ” ಅಂತ ವರ್ಣಿಸುತ್ತಾರೆ. . ಅಲ್ಲಿಂದ ಸ್ತೋತ್ರ, ಪುರಾಣಗಳಲ್ಲಿ “ಕಾಶ್ಮಿರ ಪುರವಾಸಿನಿ” ಎಂಬ ಉಲ್ಲೇಖ ಬರುತ್ತೆ.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶದ ಮೇಲೆ ಪ್ರಾರಂಭವಾದ ಇಸ್ಲಾಮಿಕ್ ದಾಳಿ ಸ್ವಾತಂತ್ರ್ಯ ನಂತರ ಇನ್ನೂ ಜಾಸ್ತಿಯಾಗಿ ದೇವಸ್ಥಾನ ಹಾಗೂ ಅದರ ಪ್ರದೇಶ ಸಂಪೂರ್ಣ ನಾಶವಾಗುತ್ತದೆ. ಈ ದೇವಸ್ಥಾನ ಸುಸ್ಥಿತಿಯಲ್ಲಿದ್ದಾಗ ಹೋಮ- ಹವನ, ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮದಿಂದ ಹಿಂದು ಸಂಸ್ಕೃತಿ ಉತ್ತುಂಗದಲ್ಲಿರುತ್ತದೆ. ಕಾಶಿ ಪಂಡಿತರು ಹಿಂದಿನ ಕಾಲದಲ್ಲಿ ಸರ್ವಜ್ಞ ಪೀಠದಲ್ಲಿ 64 ವಿದ್ಯೆಗಳನ್ನು ಕಲಿಯಲು ಹೋಗುತ್ತಿದ್ದರು.
ಕಾಲಾನಂತರ ಭಾರತದ ಕಾಶ್ಮೀರವನ್ನು ಕಾಶ್ಮೀರಿ ಪಂಡಿತರು ಕೇಂದ್ರಸ್ಥಾನ ಮಾಡಿಕೊಳ್ಳುತ್ತಾರೆ. 1947 ರ ನಂತರ ಶಾರದಾ ದೇವಸ್ಥಾನಕ್ಕೆ ತರೆಳಲು ಅವಕಾಶ ಸಿಗಲ್ಲ. ಅಲ್ಲಿಂದ ಇಲ್ಲಿಯ ತನಕ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕೆಂಬ ಹಲವರ ಪ್ರಯತ್ನ ಫಲ ನೀಡಿಲ್ಲ. ಪಾಕಿಸ್ತಾನದಲ್ಲಿ ಹಿಂದುಗಳಿದ್ದರೂ ಅವರಿಗೂ ಶಾರದಾ ಪೀಠಕ್ಕೆ ತೆರಳಲು ಅವಕಾಶ ಕೊಟ್ಟಿರಲಿಲ್ಲ. ಭಾರತ- ಪಾಕ್ ಉಭಯ ದೇಶಗಳ ಹಿಂದುಗಳಿಗೆ ಅಲ್ಲಿಗೆ ತೆರಳಲು ಗಡಿನಿಯಂತ್ರಣ ರೇಖೆಯ ಕಾರಣ ಅನುಮತಿ ಇರಲ್ಲ. ಕ್ರಮೇಣ ಪಾಕ್ ನಲ್ಲಿದ್ದ ಹಿಂದೂಗಳು ಈ ದೇವಸ್ಥಾನವನ್ನು ಮರೆಯುತ್ತಾರೆ. ಅಲ್ಲಿನ ಸಿಂಧ್ ಪ್ರಾಂತ್ಯದಲ್ಲೇ ನೆಲೆಸುತ್ತಾರೆ.
ಪುರಾತನ ಕಾಲದಿಂದಲೂ ನಡೆದಿತ್ತು ಶಾರದಾ ಯಾತ್ರೆ :
1948 ಇಸವಿ ಮುಂಚೆಯಿಂದಲೂ ಭಾರತದ ಮೂಲೆ ಮೂಲೆಗಳಿಂದ ಭಕ್ತರು, ಪಂಡಿತರು ಭಾರತದ ಗಡಿಯಲ್ಲಿರುವ ತೀತ್ವಾಲ್ ಪಟ್ಟಣದಲ್ಲಿ ಯಾತ್ರಾ ಕೇಂದ್ರಕ್ಕೆ ಬಂದು, ಅಲ್ಲಿಂದ 26 ಕಿ.ಮೀ ದೂರದ ಶಾರದಾ ಪೀಠಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಯಾತ್ರೆ ಸಂದರ್ಭದಲ್ಲಿ ಸರಸ್ವತಿ ಕುಂಡ, ಸರಸ್ವತಿ – ಸಿಂಧೂನದಿ ಸಂಗಮದಲ್ಲಿ ಸ್ನಾನ ಮಾಡಿ, ನದಿಗೆ ಪೂಜೆ ಸಲ್ಲಿಸಿ, ಪಿತೃ ತರ್ಪಣ ಕೊಟ್ಟು ಶಾರದಾ ಪೀಠದಲ್ಲಿ ದೇವರ ದರ್ಶನ ಮಾಡಿ ವಾಪಸ್ ತಮ್ಮ ಊರುಗಳಿಗೆ ಬರುತ್ತಿದ್ದರು.
ಈಗ ಶಾರದಾ ದೇವಸ್ಥಾನ ಇರದ ಕಾರಣ ತಕ್ಷಣಕ್ಕೆ ತೀತ್ವಾಲ್ ಯಾತ್ರಾ ಕೇಂದ್ರದ ಆಕ್ರಮಿತ ಸ್ಥಳವನ್ನು ವಶಪಡಿಸಿಕೊಂಡು ಅಲ್ಲಿ ಶಾರದಾ ದೇವಸ್ಥಾನದ ಮೂಲ ರೂಪದಂತೆ ನಿರ್ಮಾಣ ಮಾಡಲು “ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ” 2010ರಲ್ಲಿ ಅಸ್ತಿತ್ವಕ್ಕೆ ಬರುತ್ತೆ. ಅಲ್ಲಿಂದ ಸತತ ಹೋರಾಟದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೂಲ ಪೀಠದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಪಾಕಿಸ್ತಾನದ ಸರ್ವೋಚ್ಛ ನ್ಯಾಯಲಯಕ್ಕೆ ಪ್ರಕರಣ ದಾಖಲಿಸುತ್ತಾರೆ. ಆಗ ನ್ಯಾಯಾಲಯ ಸಂರಕ್ಷಣಾ ಸಮಿತಿ ಪರ ತೀರ್ಪು ಕೊಡುತ್ತೆ. ಶಾರದಾ ಪೀಠದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಪಾಕ್ ಆಕ್ರಮಿತ ಕಾಶ್ಮೀರದ ಮುಸ್ಲೀಮರು ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ದೇವಸ್ಥಾನ ವಿಚಾರ ನ್ಯಾಯಾಲಯದಲ್ಲಿದ್ದಾಗ ಈ ಹಿಂದೆ ಸರ್ವಜ್ಞ ಪೀಠ ಹಾಗೂ ಶಾರದಾ ದೇವಸ್ಥಾನ ಅದೇ ಸ್ಥಳದಲ್ಲಿರುವ ಬಗ್ಗೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಇದೇ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿಗೆ ನೀಡಿದ್ದರು.
ಈಗ ಶಾರದಾ ಪೀಠ ಪ್ರದೇಶವನ್ನು ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಪಾಕ್ ಆಕ್ರಮಿತ ಪ್ರದೇಶದಲ್ಲಿನ ಪುರಾತತ್ವ ಇಲಾಖೆ ವಶಕ್ಕೆ ನೀಡಲಾಗಿದೆ. ಅಲ್ಲಿರುವ ಭಾರತದ ಜೊತೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳುತ್ತಿರುವ ಸಿವಿಲ್‌ಸೊಸೈಟಿ ಸಂಸ್ಥೆಯ ಕಣ್ಗಾವಲಿನಲ್ಲಿ 2015ರಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿಂದ ಹಂತ ಹಂತವಾಗಿ ಆತಿಕ್ರಮವಿಸಿರುವ ಪ್ರದೇಶವನ್ನು ಸ್ಥಳೀಯ ಸರ್ಕಾರ ವಶಕ್ಕೆ ಪಡೆದು, ಕಿಶನ್ ಗಂಗಾ – ಸಿಂಧು ನದಿ, ಸರಸ್ವತಿ ಕುಂಡ ಹಾಗೂ ಪುರಾತನ ಶಾರದಾ ಸರ್ವಜ್ಞ ಪೀಠವನ್ನು ಅಧಿಸೂಚಿತ ಪ್ರದೇಶವೆಂದು ಘೋಷಿಸಿದೆ.
ಶಾರದಾ ಪೀಠದಲ್ಲಿನ ಹಿಂದಿನ ಹೆಸರುಗಳ ಮರುನಾಮಕರಣ :
ಪಾಕ್ ಆಕ್ರಮಿತ ಕಾಶ್ಮೀರದ ಸರ್ಕಾರ ಆ ಭಾಗದಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಮತ್ತಿತರ ಮೂಲ ಸೌಕರ್ಯ ಕಲ್ಪಿಸುತ್ತಿದೆ. ಈ ಹಿಂದೆ ಇಸ್ಲಾಮಿಕ್ ದಾಳಿಯ ಬಳಿಕ ಶಾರಾದ ಪೀಠ ಪ್ರದೇಶದಲ್ಲಿನ ಸಾಕಷ್ಟು ಹೆಸರುಗಳನ್ನು ಬದಲಾಯಿಸಲಾಗಿತ್ತು. ಇದೀಗ ಸಿವಿಲ್ ಸೊಸೈಟಿ ಮನವಿ ಮೇರೆಗೆ 1500 ಇಸವಿಯಲ್ಲಿ ಈ ಪ್ರದೇಶದಲ್ಲಿ ಕರೆಯಲಾಗುತ್ತಿದ್ದ ಶಾರದಾ ನಗರಿ, ಗಣೇಶ ಘಾಟಿ, ಶರದಿಪುರಿ, ಶಾರದಾ ಬಜಾರ್ ಎಂದು ಮರು ನಾಮಕರಣ ಮಾಡಿ ಪುನಃ ಸರ್ಕಾರಿ ದಾಖಲೆಗಳಲ್ಲಿ ಕಾಣಿಸಿಕೊಳ್ಳುವ ರೀತಿ ಮಾಡಿದ್ದಾರೆ. ಹಾಗೆಯೇ ಸೂಚನಾ ಫಲಕಗಳನ್ನು ಅದೇ ಹೆಸರಿನಲ್ಲಿ ಹಾಕಿದ್ದಾರೆ.
ಇಸ್ಲಾಮಿಕ್ ಶೈಲಿಯ ಕಟ್ಟಡ ಮರುನಿರ್ಮಾಣಕ್ಕೆ ಆಕ್ಷೇಪ :
ಈಗ ಪುನಃ ಶಾರದಾ ಪೀಠ ಪುನರ್ ನಿರ್ಮಾಣ ಆಗಬೇಕಿರುವುದರಿಂದ ಅಲ್ಲಿನ ಸರ್ಕಾರ ಮೊದಲ ಹಂತದಲ್ಲಿ ವಿವಿಧ ಇಲಾಖೆಗಳಿಗೆ 32 ಕೋಟಿ ರೂ. ಹಣ ಇತ್ತೀಚೆಗೆ ಬಿಡುಗಡೆ ಮಾಡಿದೆ. ಆಗ ಅಲ್ಲಿ ನಿರ್ಮಾಣ ಮಾಡಲಾಗುತ್ತಿರುವ ದೇವಸ್ಥಾನ ಇಸ್ಲಾಮಿಕ್ ಶೈಲಿಯಲ್ಲಿದೆ ಎಂಬ ವಿಷಯ ತಿಳಿದು, ಭಾರತೀಯ ಸಂಸ್ಕೃತಿ ಶೈಲಿಯ ದೇವಸ್ಥಾನ ನಿರ್ಮಾಣ ಮಾಡುವಂತೆ ಭಾರತದಲ್ಲಿನ ಹಿಂದೂಗಳು ಒತ್ತಾಯಿಸಿದ್ದಾರೆ. ಹೀಗಾಗಿ 2020 ರಿಂದ ದೇವಸ್ಥಾನ ನಿರ್ಮಾಣ ನಕ್ಷೆ ಅನುಮೋದನೆಯಾಗದೆ ಬಾಕಿ ಉಳಿದಿದೆ.