ಬೆಂಗಳೂರು, ಫೆ.4 (www.bengaluruwire.com) : ರಾಜ್ಯದ ಎಲ್ಲಾ ಪ್ರಾದೇಶಿಕ ವಲಯಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ (Cancer Treatment) ಕೇಂದ್ರವನ್ನು ಪ್ರಾರಂಭಿಸಲಾಗುವುದು ಹಾಗೂ ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಸುಲಭ ದರದಲ್ಲಿ ದೊರಕಿಸಿಕೊಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಶುಕ್ರವಾರ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ಔಷಧಿಗಳು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಲಭ್ಯವಾಗಿಸಲು ಸಂಬಂಧಪಟ್ಟ ತಯಾರಿಕಾ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿಗಳು ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ದೊರಕಿಸಲು ಚಿಂತನೆ ನಡೆದಿದೆ. ಇಡೀ ರಾಜ್ಯದಲ್ಲಿ ಅಗ್ಗ ದರದಲ್ಲಿ ಕ್ಯಾನ್ಸರ್ ಔಷಧಿಗಳನ್ನು ಪೂರೈಸುವ ಸೊಸೈಟಿಯನ್ನು ಸ್ಥಾಪಿಸುವ ಯೋಜನೆಯಿದೆ. ಕ್ಯಾನ್ಸರ್ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳೂ ಸೇರಿದಂತೆ ಆರೋಗ್ಯ ಮೂಲಸೌಕರ್ಯವನ್ನು ತಾಲ್ಲೂಕು ಮಟ್ಟದಿಂದ ಅಭಿವೃದ್ಧಿ ಮಾಡುವ ಮೂಲಕ ಆರೋಗ್ಯ ಕರ್ನಾಟಕದ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ಆರೈಕೆಯ ಅಂತರವನ್ನು ಕಡಿತಗೊಳಿಸಿ’ ಎಂಬ ಘೋಷ ವಾಕ್ಯವನ್ನು ಬಿಡುಗಡೆ ಮಾಡಿದರು.
ಸುಲಭ ದರದಲ್ಲಿ ಪೆಟ್ ಸ್ಕ್ಯಾನ್ ಪರೀಕ್ಷೆ :
ಕಿದ್ವಾಯಿ ಸಂಸ್ಥೆಯ ಆಧುನೀಕರಣಕ್ಕಾಗಿ ಎರಡು ಪೆಟ್ ಸ್ಕ್ಯಾನ್ ಮೆಷಿನ್ (PET SCAN MECHINE) ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚುವ ಪೆಟ್ ಸ್ಕ್ಯಾನ್ ಪರೀಕ್ಷೆ ಖಾಸಗಿ ಆಸ್ಪತ್ರೆಯಲ್ಲಿ 25,000 ರೂ.ಗಳವರೆಗೆ ವೆಚ್ಚವಾಗುತ್ತದೆ. ಬಡರೋಗಿಗಳಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಈ ದುಬಾರಿ ಸ್ಕ್ಯಾನ್ ಸೌಲಭ್ಯವನ್ನು ಕೇವಲ 8 ರಿಂದ 10 ಸಾವಿರದೊಳಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಅಭಿಯಾನ :
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ (BREAST CANCER) ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್ ಗೆ ಚಿಕಿತ್ಸೆ ಇದ್ದು, ಯಾರೂ ಧೃತಿಗೆಡಬೇಕಾಗಿಲ್ಲ. ಚಿಕಿತ್ಸೆಯ ನಂತರ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ತಾಲ್ಲೂಕು ಮಟ್ಟದ ಆಸ್ಪತ್ರೆಯಿಂದ ಹಿಡಿದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯವರಗೆಗೂ ಒಂದು ವರ್ಷಗಳ ಕಾಲ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ನಿವಾರಣೆಯ ಬಗ್ಗೆ ಜಾಗೃತಿ ಅಭಿಯಾನ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕ್ಯಾನ್ಸರ್ ಗೆದ್ದ ಮಹಿಳೆಯ ಆತ್ಮಸ್ಥೈರ್ಯವನ್ನು ಪ್ರಶಂಸಿದ ಸಿಎಂ :
ಕಳೆದ 10-12 ವರ್ಷಗಳಿಂದ ಧ್ವನಿಪಟಲದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಯ ನಂತರ ಮಾತನಾಡಬಲ್ಲವರಾಗಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿದ್ದ ಮಹಿಳೆ, ತಮ್ಮ ಕ್ಯಾನ್ಸರ್ ನ ಅನುಭವಗಳನ್ನು, ಮನೋಬಲವನ್ನು ಹಾಗೂ ಧೂಮಪಾನದ ಅಪಾಯಗಳು ಹಾಗೂ ಕ್ಯಾನ್ಸರ್ ತಡೆಗಟ್ಟಬಹುದಾದ ಬಗೆಯ ಕುರಿತು ಆತ್ಮಸ್ಥೈರ್ಯದಿಂದ ಕಾರ್ಯಕ್ರಮದಲ್ಲಿ ಮಾತನಾಡಿದ್ದನ್ನು ಮುಖ್ಯಮಂತ್ರಿಗಳು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.