ಬೆಂಗಳೂರು, (www.bengaluruwire.com) : ನಿಮ್ಮ ಜಮೀನಿನ ಹದ್ದುಬಸ್ತಿಗಾಗಿ ಕಂದಾಯ ಇಲಾಖೆಗೆ ಅರ್ಜಿ ಹಾಕ್ತಿದ್ದೀರಾ? ಭೂಮಾಪನ ಇಲಾಖೆಯು 45 ವರ್ಷಗಳ ಬಳಿಕ ರಾಜ್ಯದಾದ್ಯಂತ ಹದ್ದುಬಸ್ತು ಅರ್ಜಿ (Haddubasthu Fees) ಶುಲ್ಕವನ್ನು ಏಕಾಏಕಿ 43 ಪಟ್ಟು ಹೆಚ್ಚಳ ಮಾಡಿದೆ. ಫೆಬ್ರವರಿ 1ನೇ ತಾರೀಖಿನಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ 43 ಪಟ್ಟು ಹದ್ದುಬಸ್ತು ಶುಲ್ಕ (35 ರೂ. ನಿಂದ 1,500ರೂ.ಗೆ) ಏರಿಕೆಯಾಗಿದ್ದರೆ, ನಗರ ಪ್ರದೇಶದಲ್ಲಿ 57 ಪಟ್ಟು (35ರೂ. ನಿಂದ 2,000 ರೂ.ಗೆ) ಏರಿಕೆ ಮಾಡಿದೆ.
ಈ ಹಿಂದೆ 4 ಸರ್ವೇ ನಂಬರ್ ಅಥವಾ 4 ಹಿಸ್ಸೆವರೆಗೆ ಅರ್ಜಿ ಶುಲ್ಕ 35 ರೂ. ನಷ್ಟಿತ್ತು. ಆನಂತರ ಪ್ರತಿ ಹೆಚ್ಚುವರಿ ಸರ್ವೆ ನಂಬರ್ ಅಥವಾ ಹಿಸ್ಸೆ ನಂಬರ್ ಗಳಿಗೆ 10 ರೂ. ನಿಗಧಿಪಡಿಸಲಾಗಿತ್ತು. ಮೋಜಿಣಿ ವ್ಯವಸ್ಥೆಯಲ್ಲಿ ಹದ್ದುಬಸ್ತು ಪ್ರಕರಣಗಳ ಆಡಳಿತಾತ್ಮಕ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ 45 ವರ್ಷಗಳ ಬಳಿಕ ಅರ್ಜಿ ಶುಲ್ಕ ಏರಿಕೆ ಮಾಡುವಂತೆ ಭೂಮಾಪನಾ ಇಲಾಖೆ ಆಯುಕ್ತರು ಕಂದಾಯ ಇಲಾಖೆಯ ಭೂಮಾಪನಾ ವ್ಯವಸ್ಥೆ ವಿಭಾಗಕ್ಕೆ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

ಗ್ರಾಮೀಣ ಪ್ರದೇಶದಲ್ಲಿ 2 ಎಕರೆಯವರೆಗೆ ಅರ್ಜಿ ಶುಲ್ಕವನ್ನು 2,000 ರೂ. ತನಕ ಹಾಗೂ 2 ಎಕರೆ ನಂತರ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 400 ರೂ ನಂತೆ ಗರಿಷ್ಠ 4,000 ರೂ. ತನಕ ದರ ಮಿತಿಗೊಳಿಸಿ ಶುಲ್ಕ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ನಗರ ಪ್ರದೇಶದಲ್ಲಿ ಇದೇ ಶುಲ್ಕವನ್ನು ಎರಡು ಎಕರೆವರೆಗೆ 2,500 ರೂ. ಹಾಗೂ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 1,000 ರೂ. ನಂತೆ ಗರಿಷ್ಠ ಶುಲ್ಕ 5,000 ರೂ. ಗಳಿಗೆ ಮಿತಿಗೊಳಿಸಿ ಶುಲ್ಕ ದರ ಏರಿಸುವಂತೆ ಕೋರಿದ್ದರು.

ಆದರೆ ಇದರ ಇದೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಬಳಿಕ ಕಂದಾಯ ವ್ಯವಸ್ಥೆಯ ಭೂಮಾಪನಾ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗುರುಮೂರ್ತಿ ಗ್ರಾಮೀಣ ಪ್ರದೇಶದಲ್ಲಿ 2 ಎಕರೆಯವರೆಗೆ ಅರ್ಜಿ ಶುಲ್ಕವನ್ನು 1,500 ರೂ. ತನಕ ಹಾಗೂ 2 ಎಕರೆ ನಂತರ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 300 ರೂ ನಂತೆ ಗರಿಷ್ಠ 3,000 ರೂ. ತನಕ ದರ ಮಿತಿಗೊಳಿಸಿ ಶುಲ್ಕ ಪರಿಷ್ಕರಣೆ ಮಾಡಿ ಆದೇಶಿಸಿದ್ದಾರೆ.


ಇನ್ನು ನಗರ ಪ್ರದೇಶದಲ್ಲಿ ಇದೇ ಶುಲ್ಕವನ್ನು ಎರಡು ಎಕರೆವರೆಗೆ 2,000 ರೂ. ಹಾಗೂ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 400 ರೂ. ನಂತೆ ಗರಿಷ್ಠ ಶುಲ್ಕ 4,000 ರೂ. ಗಳಿಗೆ ಮಿತಿಗೊಳಿಸಿ ಶುಲ್ಕ ದರ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದ್ದಾರೆ.
ಆದರೆ ಈ ಹಿಂದಿನಂತೆ ಪ್ರತಿ ಬಾಜುದಾರರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ನೀಡಿಕೆ ವಿಧಿಸಿದ್ದ 25 ರೂ.ದರವನ್ನೇ ಬದಲಾಯಿಸದೇ, ಹಾಗೆಯೇ ಮುಂದುವರೆಸಲಾಗಿದೆ. ಈಗಾಗಲೇ ಹದ್ದುಬಸ್ತಿಗಾಗಿ ಅರ್ಜಿ ಸಲ್ಲಿಸಿ ಬಾಕಿ ಉಳಿದ ಪ್ರಕರಣಗಳಿಗೆ ಹೊಸ ಶುಲ್ಕ ಅನ್ವಯವಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ 31 ಜಿಲ್ಲೆಗಳಲ್ಲಿ 240 ತಾಲೂಕುಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಹದ್ದುಬಸ್ತಿಗಾಗಿ ಪ್ರತಿ ತಿಂಗಳು ಸರಾಸರಿ 50 ರಿಂದ 100 ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸದ್ಯ ಭೂಮಾಪನಾ ಇಲಾಖೆಯಲ್ಲಿ 3,500 ಸರ್ಕಾರಿ ಸೆರ್ವೇಯರ್ ಗಳು ಹಾಗೂ 3,000 ಖಾಸಗಿ ಸರ್ವೇಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

“ಭೂಮಾಪನಾ ಇಲಾಖೆಯಲ್ಲಿ 45 ವರ್ಷಗಳಿಂದ ಮೋಜಿಣಿ ವ್ಯವಸ್ಥೆಯಲ್ಲಿ ಹದ್ದುಬಸ್ತಿನ ಅರ್ಜಿ ಶುಲ್ಕ ಹೆಚ್ಚಳವಾಗಿರಲಿಲ್ಲ. ಆಡಳಿತಾತ್ಮಕ ಹಾಗೂ ನಿರ್ವಹಣೆ ವೆಚ್ಚ ಸಾಕಷ್ಟು ಹೆಚ್ಚಳವಾಗಿದೆ. ಈ ದೃಷ್ಟಿಯಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿತ್ತು. ಫೆ.1 ರಿಂದ ನೂತನ ದರ ಜಾರಿಗೆ ಬಂದಿದೆ.”
– ಮುನಿಷ್ ಮೌದ್ಗಿಲ್, ಆಯುಕ್ತರು, ಭೂಮಾಪನಾ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆ