ಬೆಂಗಳೂರು, (www.bengaluruwire.com) : ನಮ್ಮ ಮೆಟ್ರೋದಲ್ಲಿ ಎರಡನೇ ಹಂತದ ಎಲಿವೇಡೆಟ್ ಮಾರ್ಗದ ರೀತಿಯಲ್ಲಿ ಸುರಂಗ ಮಾರ್ಗದ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಅತಿ ಉದ್ದದ ಸುರಂಗ ಮಾರ್ಗ ಕೊರೆಯುತ್ತಿರುವ ಟಿಬಿಎಂ (TBM) ಯಂತ್ರಗಳು ಒಂದರ ಹಿಂದೊಂದು ಸುರಂಗ ಕೊರೆದು ಭೂಮಿ ಅಡಿಯಿಂದ ಹೊರಬರುತ್ತಿದೆ. ಹೀಗಾಗಿ ಟನಲಿಂಗ್ ಕಾಮಗಾರಿ ಕೆಲಸ ವೇಗ ಪಡೆದುಕೊಂಡಿದೆ.
ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗವಾರದವರೆಗೂ ಒಟ್ಟು 21.40 ಕಿಲೋ ಮೀಟರ್ ಮೆಟ್ರೋ ಮಾರ್ಗವಿದೆ. ಈ ಪೈಕಿ 13.9 ಕಿಲೋಮೀಟರ್ ಸುರಂಗ ಮಾರ್ಗ ಬರಲಿದೆ. ಈ ಮಾರ್ಗದಲ್ಲಿ ಸುರಂಗ ಮಾರ್ಗ ಕೊರೆಯುವುದಕ್ಕೆ 9 ಟನಲ್ ಬೋರಿಂಗ್ ಮೆಷಿನ್ ಗಳು ಸಕ್ರಿಯವಾಗಿದೆ.
ಡೈರಿ ಸರ್ಕಲ್ ನಿಂದ ನಾಗವಾರದವರೆಗೂ ಸುರಂಗ ಮಾರ್ಗ ಕೆಲಸ ನಡೆಯುತ್ತಿದ್ದು ಈಗಾಗಲೇ ಆರೂವರೆ ಕಿಲೋ ಮೀಟರ್ ಟನಲಿಂಗ್ ಕೆಲಸ ಮುಗಿದಿದೆ. ಈ ಮಾರ್ಗದಲ್ಲಿ ಸುರಂಗವನ್ನ ಕೊರೆಯುತ್ತಿರುವ ಟಿಬಿಎಂಗಳು 26 ಭಾರಿ ಬ್ರೇಕ್ ಥ್ರೂ ಆಗಲಿವೆ. ಇಲ್ಲಿಯವರೆಗೂ 6 ಬ್ರೇಕ್ ಥ್ರೂ ಆಗಿದ್ದು ಇದೇ ತಿಂಗಳಿನಲ್ಲಿ ಅವನಿ, ವಮಿಕಾ, ವರದಾ ಸುರಂಗ ಕೊರೆದು ಆಚೆ ಬಂದಿವೆ. ಮೂರು ತಿಂಗಳ ಹಿಂದೆ ವರದಾ ಎಂಬ ಟಿಬಿಎಂ ಶಿವಾಜಿನಗರ ನಿಲ್ದಾಣದಿಂದ ಆಚೆ ಬಂದಿದ್ದು, ಪುನಃ ವೆಲ್ಲಾರ ಜಂಕ್ಷನ್ ನಿಂದ ಲ್ಯಾಂಡ್ ಫೋರ್ಡ್ ಟೌನ್ ಮಾರ್ಗದಲ್ಲಿ ಮತ್ತೆ ಕೆಲಸ ಆರಂಭಿಸಿದೆ.
ಮೆಟ್ರೋ ಕಾಮಗಾರಿಯಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸ ತುಂಬಾ ಸವಾಲಿನ ಕೆಲಸವಾಗಿದ್ದು, ಒಂದು ಟಿಬಿಎಂ ಒಂದು ದಿನಕ್ಕೆ ಒಂದೂವರೆ ಮೀಟರ್ ಸುರಂಗ ಕೊರೆಯುತ್ತವೆ. ನಾಗವಾರ ಗೊಟ್ಟಿಗೆರೆ ಮಾರ್ಗದ ಸುರಂಗ ಮಾರ್ಗ 2023 ಅಂತ್ಯಕ್ಕೆ ಸಂಪೂರ್ಣಗೊಳ್ಳಲಿದ್ದು, ನಂತರ ನೆಲದಡಿಯಲ್ಲಿ ಮೆಟ್ರೊ ನಿಲ್ದಾಣದ ಕೆಲಸ ಆರಂಭವಾಗಲಿದೆ.
“ಈಗಾಗಲೇ ಎರಡನೇ ಹಂತದಲ್ಲಿ ಸುರಂಗ ಮಾರ್ಗ ಕಾಮಗಾರಿ ಮುಗಿದಿರುವ ಮಾರ್ಗಗಳಲ್ಲಿ ಸ್ಟೇಷನ್ ವರ್ಕ್ ಕೆಲಸ ಆರಂಭವಾಗಿದ್ದು 2024 ಕ್ಕೆ ಈ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಮಾಡುವ ಉದ್ದೇಶ ಹೊಂದಿದೆ ಮೆಟ್ರೋ ನಿಗಮ.”
– ಅಂಜುಂ ಫರ್ವೇಜ್, ಎಂಡಿ. ಮೆಟ್ರೋ ನಿಗಮ
ಒಟ್ಟಿನಲ್ಲಿ ಕೊರೊನಾ ನಡುವೆ ಮೆಟ್ರೋ ನಿಗಮ, ಸುರಂಗ ಮಾರ್ಗದ ಕಾಮಾಗಾರಿ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಒತ್ತು ನೀಡಿದ್ದು ನಗರದ ಎಲ್ಲಾ ದಿಕ್ಕುಗಳಲ್ಲೂ ಆದಷ್ಟು ಬೇಗ ಮೆಟ್ರೋ ಸಂಚಾರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.