ಬೆಂಗಳೂರು, ಜ.29 (www.bengaluruwire.com) : ರಾಜ್ಯದಲ್ಲಿ ಕರೋನಾ ಅಟ್ಟಹಾಸ ಕಡಿಮೆಯಾಗಿದ್ದು ಈ ಹಿನ್ನಲೆಯಲ್ಲಿ ರಾತ್ರಿ ಕರ್ಫ್ಯೂ ಹಿಂಪಡೆಯುವುದು ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲು ರಾಜ್ಯಸರ್ಕಾರ ನಿರ್ಧರಿಸಿದೆ.
ನಗರದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಕೋವಿಡ್-19ರ ಸ್ಥಿತಿಗತಿ ಗೆ ಸಂಬಂಧಿಸಿದಂತೆ ತಜ್ಞರೊಂದಿಗೆ ನಡೆದ ಪರಿಶೀಲನಾ ಸಭೆ ನಡೆಸಿ ನಂತರ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಮಾಧ್ಯಮದವರಿಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿದರು.
ಕೋವಿಡ್ 19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು ಈ ರೀತಿಯಿದೆ :
- ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
- ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಯಿತು.
- ಜನವರಿ 31 ರಿಂದ ರಾತ್ರಿ ಕರ್ಫ್ಯೂ ರದ್ದು ಪಡಿಸಲು ನಿರ್ಧರಿಸಲಾಗಿದೆ.
- ಬೆಂಗಳೂರು ನಗರದಲ್ಲಿ ಜನವರಿ 31 ರಿಂದ ಶಾಲೆ, ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಲಾಯಿತು.
- ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು.
- ಪಬ್, ಕ್ಲಬ್, ರೆಸ್ಟೋರೆಂಟ್ ಗಳು, ಬಾರ್, ಹೋಟೆಲ್ ಗಳಲ್ಲಿ ಶೇ. 50 ಆಸನ ಸಾಮರ್ಥ್ಯದಡಿ ಕಾರ್ಯ ನಿರ್ವಹಿಸುವ ನಿರ್ಬಂಧವನ್ನು ಹಿಂಪಡೆಯಲಾಗುವುದು.
- ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇಂತರ ಸ್ಥಳಗಳಲ್ಲಿ ಶೇ. 50 ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.
- ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ.
- ಸರ್ಕಾರದ ಸಚಿವಾಲಯದಲ್ಲಿ ಶೇ. 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ರದ್ದು ಪಡಿಸಿ ಶೇ. ನೂರರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದು.
- ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು.
- ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಮೆರವಣಿಗೆ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ.
- ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
- ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
- ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸುವುದು.
- ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ. 25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಯಿತು.
- ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.