ನವದೆಹಲಿ, (www.bengaluruwire.com) : ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಫೆಬ್ರವರಿ 1ರಂದು 2022-23ನೇ ಸಾಲಿನ ಕೇಂದ್ರ ಆಯವ್ಯಯವನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ.
ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸುವ ಸಲುವಾಗಿ ಪ್ರತಿಬಾರಿ ಬಜೆಟ್ ತಯಾರಿಯಲ್ಲಿ ಭಾಗಿಯಾದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ “ಹಲ್ವಾ ಸಮಾರಂಭ” ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಆರೋಗ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವ ಅಗತ್ಯದ ಹಿನ್ನೆಲೆಯಲ್ಲಿ ತಮ್ಮ ಕೆಲಸದ ಸ್ಥಳಗಳಲ್ಲಿ “ಬಂಧಿ”ಯಾಗಿರುವ ಪ್ರಮುಖ ಸಿಬ್ಬಂದಿಗೆ ಸಿಹಿತಿಂಡಿಗಳನ್ನು ನೀಡಿದರು.
ಆಯವ್ಯಯದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸಲುವಾಗಿ, ಆಯವ್ಯಯ ತಯಾರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು “ನಿರ್ಬಂಧ”ಕ್ಕೆ ಒಳಗಾಗುತ್ತಾರೆ. ಕೇಂದ್ರ ಬಜೆಟ್ ಮಂಡನೆವರೆಗೆ ಉತ್ತರ ಬ್ಲಾಕ್‌ನಲ್ಲಿರುವ ಬಜೆಟ್ ಮುದ್ರಣಾಲಯದಲ್ಲೇ ಎಲ್ಲಾ ಅಧಿಕಾರಿಗಳು ತಂಗುತ್ತಾರೆ. ಅವರು ಸಂಸತ್ ಹೊರಗೆ ಈ ಅವಧಿಯಲ್ಲಿ ಯಾವುದೇ ಸಂಪರ್ಕ ಹೊಂದಲು ಅವಕಾಶವಿರುವುದಿಲ್ಲ. ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರವೇ ಈ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಂಪರ್ಕಕ್ಕೆ ಬರುತ್ತಾರೆ.
ಈ ಐತಿಹಾಸಿಕ ಕ್ರಮದ ಭಾಗವಾಗಿ, 2021-22ನೇ ಸಾಲಿನ ಕೇಂದ್ರ ಆಯವ್ಯಯವನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ಮಂಡಿಸಲಾಯಿತು. ಬಜೆಟ್ ದಾಖಲೆಗಳನ್ನು ಸಂಸತ್ ಸದಸ್ಯರು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಾಗಲು “ಕೇಂದ್ರ ಬಜೆಟ್ ಮೊಬೈಲ್ ಆ್ಯಪ್” ಅನ್ನು ಸಹ ಪ್ರಾರಂಭಿಸಲಾಗಿದೆ. 2022ರ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ 2022-23ನೇ ಸಾಲಿನ ಕೇಂದ್ರ ಆಯವ್ಯಯವು ಮೊಬೈಲ್ ಆ್ಯಪ್‌ನಲ್ಲಿಯೂ ಲಭ್ಯವಿರಲಿದೆ.
ಬಜೆಟ್ ಭಾಷಣ, ವಾರ್ಷಿಕ ಹಣಕಾಸು ತಃಖ್ತೆ(ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನಗಳ ಬೇಡಿಕೆ (ಡಿಜಿ), ಹಣಕಾಸು ವಿಧೇಯಕ ಸೇರಿದಂತೆ ಕೇಂದ್ರ ಬಜೆಟ್‌ಗೆ ಸಂಬಂಧಿಸಿದ 14 ದಾಖಲೆಗಳಿಗೆ ಸಂವಿಧಾನದ ಪ್ರಕಾರ ಸಂಪೂರ್ಣ ಪ್ರವೇಶಾವಕಾಶವನ್ನು ಮೊಬೈಲ್ ಆ್ಯಪ್ ಮೂಲಕ ಅನುಮತಿಸಲಾಗುತ್ತದೆ. ಈ ಮೊಬೈಲ್ ತಂತ್ರಾಂಶವು ದ್ವಿಭಾಷೆ (ಇಂಗ್ಲಿಷ್ ಮತ್ತು ಹಿಂದಿ) ಸೌಲಭ್ಯ ಹೊಂದಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಲಭ್ಯವಿದೆ.
ಈ ಆ್ಯಪ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್(www.indiabudget.gov.in) ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಜೆಟ್ ದಾಖಲೆಗಳು ಜನಸಾಮಾನ್ಯರಿಗೆ ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಲ್ಲೂ (www.indiabudget.gov.in) ಸಹ ಡೌನ್‌ಲೋಡ್ ಮಾಡಲು ಲಭ್ಯವಿರುತ್ತವೆ.